ಗುರುವಾರ , ನವೆಂಬರ್ 21, 2019
21 °C
70 ಸಾವಿರ ಹೊಸ ಮತದಾರರು ಸೇರ್ಪಡೆ

`ಕಾಸಿಗಾಗಿ ಸುದ್ದಿ: ಐವರು ಅಭ್ಯರ್ಥಿಗಳಿಗೆ ನೋಟಿಸ್'

Published:
Updated:

ಮೈಸೂರು: ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ.

`ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ 70 ಸಾವಿರ ಹೊಸ ಮತದಾರರು ಸೇರ್ಪಡೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 21,71,915 ಮತದಾರರಿದ್ದು, ಈ ಪೈಕಿ 11,01,671 ಪುರುಷರು ಹಾಗೂ 10,70,141 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಮತದಾರರ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಶೇ 99.72ರಷ್ಟು ಪೂರ್ಣಗೊಂಡಿದೆ' ಎಂದು ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆದ ಸಿ.ಶಿಖಾ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.`ಪಿರಿಯಾಪಟ್ಟಣ-1,62,397, ಕೆ.ಆರ್.ನಗರ-1,88,151, ಹುಣಸೂರು- 2,03,474, ಎಚ್.ಡಿ.ಕೋಟೆ- 1,92,763, ನಂಜನಗೂಡು-  1,85,087, ಚಾಮುಂಡೇಶ್ವರಿ- 2,39,367, ಕೃಷ್ಣ ರಾಜ-2,15,995, ಚಾಮರಾಜ- 1,98,386, ನರಸಿಂಹರಾಜ-2,11,557,  ವರುಣಾ-1,94,893, ತಿ.ನರಸೀಪುರ-1,79,845 ಮತದಾರರು ಇದ್ದಾರೆ' ಎಂದು ತಿಳಿಸಿದರು.`ಜಿಲ್ಲೆಯಲ್ಲಿ 897 ಸೂಕ್ಷ್ಮ ಹಾಗೂ 413 ಅತೀ ಸೂಕ್ಷ್ಮ ಮತಗಟ್ಟೆಗಳು ಇವೆ. ನರಸಿಂಹರಾಜ ಕ್ಷೇತ್ರದಲ್ಲಿ 95 ಸೂಕ್ಷ್ಮ, 81 ಅತೀ ಸೂಕ್ಷ್ಮ, ಚಾಮರಾಜ ಕ್ಷೇತ್ರದಲ್ಲಿ 60 ಸೂಕ್ಷ್ಮ, 52 ಅತೀ ಸೂಕ್ಷ್ಮ, ಕೃಷ್ಣರಾಜ ಕ್ಷೇತ್ರದಲ್ಲಿ 77 ಸೂಕ್ಷ್ಮ, 18 ಅತೀ ಸೂಕ್ಷ್ಮ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 100 ಸೂಕ್ಷ್ಮ, 39 ಅತೀ ಸೂಕ್ಷ್ಮ ಮತಗಟ್ಟೆಗಳು ಇವೆ. 261 ವಲ್ನರಬಲ್ (ಮನನೋಯಿಸುವ, ಗಾಯಗೊಳಿಸುವ) ಮತಗಟ್ಟೆಗಳಿದ್ದು, ಈ ಸ್ಥಳಗಳಲ್ಲಿ  ಅರೆ ಸೇನಾಪಡೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ' ಎಂದರು.`ಶನಿವಾರ ನಾಮಪತ್ರ ವಾಪಸು ಪಡೆಯುವ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಂತಿಮವಾಗಿ 160 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ ನರಸಿಂಹರಾಜ ಕ್ಷೇತ್ರದಿಂದ ಸ್ಪರ್ಧಿಸಿರುವ ಮಂಗಳಮುಖಿ ಚಾಂದಿನಿ ಅವರನ್ನು ಪುರುಷ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಬಿಎಸ್‌ಪಿ 6, ಇತರೆ ಪಕ್ಷಗಳು 55 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. 66 ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ' ಎಂದು ಹೇಳಿದರು.ನೀತಿ ಸಂಹಿತೆ ಕಟ್ಟುನಿಟ್ಟು: `ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ಇದುವರೆಗೆ 136 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ 24 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಏ. 20ರ ವರೆಗೆ ಒಟ್ಟು ರೂ. 14,14,840 ಹಣ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆಯಡಿ 167 ಪ್ರಕರಣಗಳು ದಾಖಲಾಗಿದ್ದು, 622.46 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ ದಾಖಲಾಗಿವೆ' ಎಂದು ತಿಳಿಸಿದರು.ಕಾಸಿಗಾಗಿ ಸುದ್ದಿ: ನೋಟಿಸ್

`ಕಾಸಿಗಾಗಿ ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಎರಡು ಸ್ಥಳೀಯ ಪತ್ರಿಕೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಪತ್ರಿಕೆಗಳಲ್ಲಿ ಎಸ್.ಎ. ರಾಮದಾಸ್, ಎಚ್.ಎಸ್.ಶಂಕರಲಿಂಗೇಗೌಡ, ವಾಸು ಹಾಗೂ ಎಂ.ಪ್ರದೀಪ್‌ಕುಮಾರ್ ಅವರ ಸಂದರ್ಶನ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಅಭ್ಯರ್ಥಿಗಳಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ರಾಮದಾಸ್, ಶಂಕರ ಲಿಂಗೇಗೌಡ, ಪ್ರದೀಪ್‌ಕುಮಾರ್ ಉತ್ತರ ನೀಡಿದ್ದಾರೆ.ಸಂದರ್ಶನವನ್ನು ಜಾಹೀರಾತು ಎಂದು ಪರಿಗಣಿಸಲಾಗಿದ್ದು, ರೂ. 1,13,876 ವೆಚ್ಚವನ್ನು ಆಯಾ ಅಭ್ಯರ್ಥಿಗಳ ಚುನಾವಣಾ ಖರ್ಚಿಗೆ ಜಮಾ ಮಾಡಲಾಗುವುದು' ಎಂದರು.ನಗರ ಪೊಲೀಸ್ ಕಮಿಷನರ್ ಕೆ.ಎಲ್. ಸುಧೀರ್, ಜಿಲ್ಲಾ ಎಸ್ಪಿ ಆರ್.ದಿಲೀಪ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್ ಇದ್ದರು.

ಪ್ರತಿಕ್ರಿಯಿಸಿ (+)