ಶನಿವಾರ, ಆಗಸ್ಟ್ 24, 2019
27 °C

`ಕಾಸಿಯಾ' ಸಲಹೆ

Published:
Updated:

* ಕರ್ನಾಟಕ ಸರ್ಕಾರ ಕೆ.ಎಸ್.ಐ.ಡಿ.ಸಿ, ಕೆ.ಐ.ಎ.ಡಿ.ಬಿ ಮೂಲಕ   ಅಭಿವೃದ್ಧಿಪಡಿಸಿದ ಕೈಗಾರಿಕಾ ವಲಯ ನಿರ್ವಹಣೆ ಸರಿಪಡಿಸಿ.

* ವಿದೇಶಿ ಹೂಡಿಕೆದಾರರಿಗೆ ರಾಜ್ಯದ ಮೂಲಸೌಕರ್ಯ ವ್ಯವಸ್ಥೆ ಬಗ್ಗೆ ಇರುವ ಅಸಮಾಧಾನ ನಿವಾರಿಸಿ.

* ಮೂರು, ನಾಲ್ಕು ವರ್ಷಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಿದರೆ ಸಣ್ಣ ಕೈಗಾರಿಗಳು ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದಬಹುದು.

* ಜಿಲ್ಲಾ ಮಟ್ಟದಲ್ಲಿ ಎಸ್‌ಎಂಇ ಅಭಿವೃದ್ಧಿ ಘಟಕಗಳು ಬೇಕು.

* ಗ್ರಾಮೀಣ ಮಟ್ಟದ್ಲ್ಲಲಿ ಕೌಶಲ ತರಬೇತಿ ಬೇಕು.ಕೃಷಿ ಹೊರತುಪಡಿಸಿದರೆ ರಾಜ್ಯದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿರುವ ಕ್ಷೇತ್ರ ಸಣ್ಣ ಕೈಗಾರಿಕೆ. ಸದ್ಯ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ರಾಜ್ಯದಲ್ಲಿ ಅಂದಾಜು 6.5 ಲಕ್ಷ ಸಣ್ಣ ಕೈಗಾರಿಕೆಗಳಿವೆ. ಇವು 35 ಲಕ್ಷ ಜನರಿಗೆ ನೇರ ಉದ್ಯೋಗ ಒದಗಿಸಿವೆ. ಬೆಂಗಳೂರಿನಲ್ಲಿ ಶೇ 17ರಷ್ಟು, ಬೆಳಗಾವಿ,   ಹುಬ್ಬಳ್ಳಿ-ಧಾರವಾಡದಲ್ಲಿ ಶೇ 12ರಷ್ಟು ಮತ್ತು ಮೈಸೂರು, ತುಮಕೂರಿನಲ್ಲಿ  ಶೇ 6ರಷ್ಟು ಸಣ್ಣ ಕೈಗಾರಿಕಾ ಘಟಕಗಳಿವೆ. ಪ್ರತಿ ವರ್ಷ ಸರಾಸರಿ 12 ಸಾವಿರ ಸಣ್ಣ ಕೈಗಾರಿಕೆಗಳು ರಾಜ್ಯದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿವೆ.ಆದರೆ, ತೆರಿಗೆ ಶ್ರೇಣಿಯಲ್ಲಿನ ವ್ಯತ್ಯಾಸ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಕೊರತೆಯಿಂದ ತಮಿಳುನಾಡು ಮತ್ತು ಗುಜರಾತ್‌ಗೆ ಹೋಲಿಸಿದರೆ ರಾಜ್ಯದ ಎಸ್‌ಎಂಇ ಪ್ರಗತಿ ಮಂದಗತಿಯಲ್ಲಿದೆ. ಈ ವಲಯದ  ಪ್ರಗತಿಗೆ ಇರುವ ತೊಡಕುಗಳೇನು? ಸರ್ಕಾರದಿಂದ ಬೇಕಿರುವ ಉತ್ತೇಜನಗಳೇನು ಎನ್ನುವುದನ್ನು `ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ' (ಕಾಸಿಯಾ) ಪಟ್ಟಿ ಮಾಡಿದೆ.ಖರೀದಿಯಲ್ಲಿ ಆದ್ಯತೆ

ರಾಜ್ಯದ ಸಣ್ಣ ಕೈಗಾರಿಕೆಗಳು ಗುಂಡುಸೂಜಿಯಿಂದ ವಿಮಾನಗಳ ಬಿಡಿಭಾಗಗಳವರೆಗೆ ಸರಕುಗಳನ್ನು ತಯಾರಿಸುತ್ತವೆ. ಇವೆಲ್ಲವೂ ಜಾಗತಿಕ ಗುಣಮಟ್ಟದ ಸರಕುಗಳು. ಈ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳು ಸಣ್ಣ ಕೈಗಾರಿಕೆಗಳಿಗೆ, ಖರೀದಿಯಲ್ಲಿ ಶೇ 25ರಿಂದ 30ರಷ್ಟು ಆದ್ಯತೆ ನೀಡಬೇಕು. ಮೊದಲು ಈ ವ್ಯವಸ್ಥೆ ಜಾರಿಯಲ್ಲಿತ್ತು. ಇತ್ತೀಚೆಗೆ ಕಡಿತ ಮಾಡಲಾಗಿದೆ. ತೆರಿಗೆ ಶ್ರೇಣಿಯಲ್ಲಿನ ವ್ಯತ್ಯಾಸ ಮತ್ತು ಅಗ್ಗದ ದರದಿಂದ ಸರ್ಕಾರಿ ಸ್ವಾಮ್ಯದ ಹಲವು ಕಂಪೆನಿಗಳು ಬೇರೆ ರಾಜ್ಯಗಳಿಂದ ಸರಕುಗಳನ್ನು ಖರೀದಿಸುತ್ತವೆ. ಇದು ಎಸ್‌ಎಂಇಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.ಮೂಲಸೌಕರ್ಯ ವೃದ್ಧಿ

ಕರ್ನಾಟಕ ಸರ್ಕಾರ ಕೆ.ಎಸ್.ಐ.ಡಿ.ಸಿ, ಕೆ.ಐ.ಎ.ಡಿ.ಬಿ ಮೂಲಕ ಅಭಿವೃದ್ಧಿಪಡಿಸಿದ ಕೈಗಾರಿಕಾ ವಲಯಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಇದನ್ನು ವರ್ಗಾವಣೆ ಮಾಡಿದ ನಂತರ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವಿದೇಶಿ ಹೂಡಿಕೆದಾರರು ರಾಜ್ಯದ ಮೂಲಸೌಕರ್ಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರುವ ಮೂರು ನಾಲ್ಕು ವರ್ಷಗಳಲ್ಲಿ ಇದನ್ನು ಅಭಿವೃದ್ಧಿಪಡಿಸಿದರೆ ಸಣ್ಣ ಕೈಗಾರಿಗಳೂ ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದುತ್ತವೆ. ಜತೆಗೆ ಮಾರುಕಟ್ಟೆ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ (ಎಸ್‌ಎಂಇ) ಅಭಿವೃದ್ಧಿ ಘಟಕಗಳನ್ನು ತೆರೆಯಬೇಕು. ಜಾಗತಿಕ ಮಾರುಕಟ್ಟೆ ಜತೆ ಸ್ಪರ್ಧಿಸಲು ಪೂರೈಕೆ ಜಾಲವನ್ನೂ ಸುಧಾರಿಸಬೇಕು.ಸಕಾಲದಲ್ಲಿ ಸಾಲ

ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಣ್ಣ ಕೈಗಾರಿಕೆಗಳಿಗೆ ಸರಿಯಾದ ಸಮಯಕ್ಕೆ ಸಾಲ ಲಭಿಸುತ್ತಿಲ್ಲ. ಇಂದಿನ ಜಾಗತೀಕರಣ, ಉದಾರೀಕರಣ ನೀತಿಯಲ್ಲಿ ಸಾಲ ಸಿಗುವುದು ತಿಂಗಳು ವಿಳಂಬವಾದರೆ ಇಡೀ ಯೋಜನೆ ಕೈತಪ್ಪಿ ಹೋಗುತ್ತದೆ.  ಎಸ್‌ಎಂಇಗಳಿಗೆ ಕೊಲ್ಯಾಟ್ರಲ್ ಸೆಕ್ಯುರಿಟಿ ಇಲ್ಲದೆ ಸಾಲ ನೀಡಬೇಕು ಎಂದು ರಿಸರ್ವ್ ಬ್ಯಾಂಕ್ ಸೂಚನೆ ಇದೆ.

ಆದರೂ, ಸಾಲ ನೀಡಿಕೆ ವಿಳಂಬವಾಗುತ್ತಿದೆ. ಬ್ಯಾಂಕುಗಳು ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು. ಲಾಭವನ್ನಷ್ಟೇ ನಿರೀಕ್ಷಿಸದೆ ಸಾಮಾಜಿಕ ಸಮತೋಲನವನ್ನೂ ಗಮನಿಸಬೇಕು ಎನ್ನುತ್ತಾರೆ ಕಾಸಿಯಾ ಅಧ್ಯಕ್ಷ ಬಿ.ಪಿ. ಶಶಿಧರ್.ಸದ್ಯ ಶೇ 30ರಿಂದ ಶೇ 40ರಷ್ಟು  ಎಸ್‌ಎಂಇಗಳಿಗೆ ಸಕಾಲದಲ್ಲಿ ಸಾಲ ಲಭಿಸುತ್ತಿಲ್ಲ ಎನ್ನುತ್ತದೆ ಕಾಸಿಯಾ ಅಧ್ಯಯನ.  ಎಸ್‌ಎಂಇ ಗಳಿಂದ ಸರಕುಗಳನ್ನು ಖರೀದಿಸುವ ಸಂಸ್ಥೆಗಳು  ಹಣ ಪಾವತಿಸಲು 7ರಿಂದ 8 ತಿಂಗಳು ಸಮಯ ತೆಗೆದುಕೊಳ್ಳುತ್ತಿವೆ. ಇದರಿಂದ  ಬ್ಯಾಂಕ್‌ಗಳು ಶೇ 12.5 ರಷ್ಟು ಬಡ್ಡಿದರದಲ್ಲಿ ಸಾಲ ನೀಡಿದರೂ ಎಸ್‌ಎಂಇ ಗಳಿಗೆ ಇದು ಶೇ 20ರಿಂದ 22ರಷ್ಟು ತುಟ್ಟಿಯಾಗುತ್ತಿದೆ. ಇದು ಒಟ್ಟಾರೆ ಹೂಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.`ಇ-ಸುಗಮ' ನಿರ್ಬಂಧ ಬೇಡ

ಶೇ 14.5ರಷ್ಟಿರುವ ಮಾರಾಟ ತೆರಿಗೆಯನ್ನು ಸಕಾಲದಲ್ಲಿ ಪಾವತಿಸದಿದ್ದರೆ `ಇ-ಸುಗಮ' ವಹಿವಾಟು ನಿಷೇಧಿಸಲಾಗುತ್ತದೆ. ಇದರಿಂದ ಸಣ್ಣ ಕೈಗಾರಿಕೆಗಳ ಯಾವುದೇ ರೀತಿಯ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಇಡೀ ಘಟಕವೇ ಸ್ಥಗಿತಗೊಳ್ಳುತ್ತದೆ. ಇದರಿಂದ ಬ್ಯಾಂಕ್ ಸಾಲ ಮರು ಪಾವತಿಗೆ ಸಮಸ್ಯೆಯಾಗುತ್ತದೆ. 

ನೆರೆ ರಾಜ್ಯಗಳಲ್ಲಿ ಈ ರೀತಿಯ ಸಮಸ್ಯೆ ಇಲ್ಲ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಸಂಬಂಧಿಸಿದಂತೆ 2006ರ ವಿಳಂಬ ಪಾವತಿ ನೀತಿಯಲ್ಲಿ ಇದಕ್ಕೆ ವಿನಾಯ್ತಿ ನೀಡಲಾಗಿದೆ. 40 ದಿನಗಳವರೆಗೂ ತೆರಿಗೆ ಪಾವತಿಗೆ ಕಾಲಾವಧಿ ನೀಡಲಾಗಿದೆ. ಇದನ್ನು ಜಾರಿಗೆ ತರಬೇಕು. ತೆರಿಗೆ ಪಾವತಿಸಲು ವಿಳಂಬವಾದರೆ `ಇ-ಸುಗಮ' ವಹಿವಾಟು ನಿಷೇಧಿಸಬಾರದು ಎನ್ನುವುದು ಕಾಸಿಯಾ ಆಗ್ರಹ.ಕೌಶಲ ತರಬೇತಿ

ಹಿಂದೆ ಜಿಲ್ಲಾ ಮಟ್ಟದಲ್ಲಿ ಕೌಶಲ ತರಬೇತಿಗಾಗಿ ಐ.ಟಿ.ಐ ಸಂಸ್ಥೆಗಳಿದ್ದವು. ಆದರೆ, ಈ ಘಟಕಗಳು ತಾಂತ್ರಿಕವಾಗಿ ಇನ್ನೂ ಪರಿಷ್ಕರಣೆಗೊಂಡಿಲ್ಲ. ಅಲ್ಲಿ ಹಳೆಯ ಯಂತ್ರಗಳೇ ಇವೆ. ಆದ್ದರಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಸರಿಯಾದ ತರಬೇತಿ ಲಭಿಸುತ್ತಿಲ್ಲ.  ನಗರದಲ್ಲಿರುವ ಸಣ್ಣ ಕೈಗಾರಿಕೆಗಳೇ ಇವರಿಗೆ ಕೌಶಲ ತರಬೇತಿ ಕೇಂದ್ರಗಳಾಗಿವೆ.

ತರಬೇತಿ ಮುಗಿಸಿದವರು ಸಣ್ಣ ಕೈಗಾರಿಕೆಗಳಿಂದ ದೊಡ್ಡ ಕೈಗಾರಿಕೆಗಳಿಗೆ ವಲಸೆ ಹೋಗುತ್ತಾರೆ. ಇದನ್ನು ತಪ್ಪಿಸಲು ಗ್ರಾಮೀಣ ಮಟ್ಟದಲ್ಲೇ ತರಬೇತಿ ಮತ್ತು ಉದ್ಯೋಗಾವಕಾಶ ಕಲ್ಪಿಸಬೇಕು. ನಗರಗಳಲ್ಲಿ ಖಾಸಗಿ ಕೌಶಲ ತರಬೇತಿ ಕೇಂದ್ರಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಆದರೆ, ಇದರಿಂದ ಕೌಶಲ ಅಭಿವೃದ್ಧಿಯಾಗುತ್ತಿಲ್ಲ. ಸರ್ಕಾರವೇ ಉದ್ಯಮ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೌಶಲ ತರಬೇತಿ ಕೇಂದ್ರ ತೆರೆಯಬೇಕು.ಕೈಗಾರಿಕಾ ವಲಯ ಅಭಿವೃದ್ಧಿ

ಸದ್ಯ ಶೇ 97ರಷ್ಟು ಎಸ್‌ಎಂಇ ಗಳು ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರವೇ ಹೊಸ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸಿ ಇದರಲ್ಲಿ ಶೇ 20ರಷ್ಟು ಪಾಲನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲಿಡಬೇಕು. ಕೈಗಾರಿಕಾ ವಲಯಗಳ ಅಭಿವೃದ್ಧಿ ನಿರ್ವಹಣೆಗೆ ಪ್ರತ್ಯೇಕ ನಿಧಿ ಮತ್ತು ಸಮಿತಿ ರಚಿಸಬೇಕು.ತೆರಿಗೆ ಕಡಿತ

ಮಧ್ಯಪ್ರದೇಶ ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ಪ್ರವೇಶ ತೆರಿಗೆ ರದ್ದುಪಡಿಸಿದೆ. ರಾಜ್ಯದಲ್ಲೂ ಇದನ್ನು ಜಾರಿಗೆ ತರಬೇಕು. ಹೂಡಿಕೆ ಮತ್ತು ಹೊಸ ತಂತ್ರಜ್ಞಾನ ಅಳವಡಿಕೆಗೆ ಇದು ನೆರವಾಗುತ್ತದೆ. ಕೈಗಾರಿಕಾ ಆಸ್ತಿ ತೆರಿಗೆ ಕೂಡ ಕಡಿತ ಮಾಡಬೇಕು. ಟ್ರೇಡ್ ಲೈಸೆನ್ಸ್ ರದ್ದುಪಡಿಸಬೇಕು. ಶೇ 14.5ರಷ್ಟಿರುವ ವ್ಯಾಟ್ ತಗ್ಗಿಸಬೇಕು. ಕಳೆದ ನಾಲ್ಕು ವರ್ಷಗಳಿಂದ ಈ ಸರಾಸರಿ ಇದೆ. ಇದರ ಜತೆಗೆ ಶೇ 7ರಿಂದ 8ರ ಬಡ್ಡಿ ದರದಲ್ಲಿ ಸಾಲ ಲಭಿಸಿದರೆ ಉದ್ಯಮ ಚೇತರಿಕೆ ಕಾಣಲಿದೆ.

-ಜೋಮನ್ ವರ್ಗೀಸ್ .

Post Comments (+)