ಬುಧವಾರ, ಜೂನ್ 16, 2021
23 °C

ಕಾಸು ಬಿಚ್ಚದ ರೈಲ್ವೆ ಇಲಾಖೆ

ಬಿ.ಎನ್.ಶ್ರೀಧರ Updated:

ಅಕ್ಷರ ಗಾತ್ರ : | |

ಕಾಸು ಬಿಚ್ಚದ ರೈಲ್ವೆ ಇಲಾಖೆ

ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಯೋಜನಾ ವೆಚ್ಚವನ್ನು ರಾಜ್ಯವೂ ಹಂಚಿಕೊಳ್ಳುವ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ಮೊದಲು ಒಪ್ಪಿಕೊಂಡದ್ದು ಕರ್ನಾಟಕ ಸರ್ಕಾರ.ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರೈಲ್ವೆ ಜತೆ ವೆಚ್ಚ ಹಂಚಿಕೆ ಒಪ್ಪಂದವನ್ನು ಅವರು ಮಾಡಿಕೊಂಡಿದ್ದರು. ಇದನ್ನು ನಂತರದ ಸರ್ಕಾರಗಳು ಮುಂದುವರಿಸಿಕೊಂಡು ಹೋದರೂ ನಿರೀಕ್ಷಿತ ಫಲ ಮಾತ್ರ ಸಿಕ್ಕಿಲ್ಲ. ಈ ಒಪ್ಪಂದದ ಫಲವಾಗಿ ಇವತ್ತು ಒಟ್ಟು 14 ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರವೂ ಬಂಡವಾಳ ಹೂಡಿದೆ. ಈ ಪಟ್ಟಿಯಲ್ಲಿನ ಸೊಲ್ಲಾಪುರ- ಗದಗ ಹಾಗೂ ಶಿವಮೊಗ್ಗ- ತಾಳಗುಪ್ಪ ಮಾರ್ಗ ಮಾತ್ರ ಪೂರ್ಣಗೊಂಡಿವೆ.ಉಳಿದ 12ರಲ್ಲಿ ರಾಮನಗರ- ಮೈಸೂರು ಜೋಡಿ ಮಾರ್ಗ ಹಾಗೂ ಕೊಟ್ಟೂರು- ಹರಿಹರ ರೈಲು ಮಾರ್ಗದ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅತಿ ಹೆಚ್ಚು ಅಂದರೆ, ಶೇ 67ರಷ್ಟು ಹಣ ನೀಡಲು ಒಪ್ಪಿದೆ.ವಿಳಂಬ ಏಕೆ?ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ರೈಲ್ವೆ ಯೋಜನೆಗಳಿಗೆ ಹಣ ನೀಡಲು ರಾಜ್ಯ ಸರ್ಕಾರ ತುದಿಗಾಲ ಮೇಲೆ ನಿಂತಿದ್ದರೂ ಅದನ್ನು ಉಪಯೋಗಿಸಿಕೊಂಡು, ತನ್ನ ಪಾಲಿನ ಬಂಡವಾಳ ಹೂಡಲು ರೈಲ್ವೆ ತಿಣುಕಾಡುತ್ತಿದೆ. ಪ್ರತಿ ಬಾರಿಯೂ ರಾಜ್ಯ ಸರ್ಕಾರಕ್ಕೇ ಬಂಡವಾಳ ಹೂಡುವಂತೆ ಸೂಚಿಸುವ ರೈಲ್ವೆ ತನ್ನ ಪಾಲಿನ ಎಷ್ಟು ಹಣವನ್ನು ಯೋಜನೆಗಳ ಅನುಷ್ಠಾನಕ್ಕೆ ಹೂಡಿಕೆ ಮಾಡಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿಲ್ಲ.ಇದರಿಂದಾಗಿ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. 2002ರಿಂದಲೂ ಬಜೆಟ್‌ನಲ್ಲಿ ಮಂಜೂರಾದ ಪೂರ್ಣ ಪ್ರಮಾಣದ ಹಣವನ್ನು ಖರ್ಚು ಮಾಡಲು ಸಾಧ್ಯವಾಗಿಲ್ಲ. 2011-12ರ ಸಾಲಿನ ಬಜೆಟ್‌ನಲ್ಲಿ 487 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಮೀಸಲಿಟ್ಟರೆ, ರೈಲ್ವೆ ಕೇವಲ ರೂ 231.41 ಕೋಟಿ ಮೀಸಲಿಟ್ಟಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣದಲ್ಲಿ 300 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.ಇನ್ನೂ ಸುಮಾರು 100 ಕೋಟಿ ರೂಪಾಯಿ ಈ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ, ರೈಲ್ವೆ ಕಡೆಯಿಂದ ಕನಿಷ್ಠ ನಿಗದಿತ ಹಣವಾದರೂ ಬಿಡುಗಡೆಯಾಗಿದೆಯೇ? ಈ ಬಗ್ಗೆ ಮಾಹಿತಿ ಕೇಳಿದರೆ ಸರ್ಕಾರದ ಕಡೆಯಿಂದಲೂ `ಇಲ್ಲ~ ಎನ್ನುವ ಉತ್ತರ ಸಿಗುತ್ತದೆ.ಈ ಯೋಜನೆಗಳನ್ನು ಹೊರತುಪಡಿಸಿದರೆ ಬಾಕಿ ಇರುವ 10 ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಶೇ 50ರಷ್ಟು ಹಣ ನೀಡಿದರೂ ಅವು ಕುಂಟುತ್ತಾ ಸಾಗಿವೆ. 2002ರಿಂದ ಈಚೆಗೆ ರಾಜ್ಯ ಸರ್ಕಾರ ವೆಚ್ಚ ಹಂಚಿಕೆ ಯೋಜನೆಗಳ ಸಲುವಾಗಿಯೇ ಒಟ್ಟು 1200 ಕೋಟಿ ರೂಪಾಯಿ ನೀಡಿದೆ.ರಾಜ್ಯದಲ್ಲಿ ಬಾಕಿ ಇದ್ದ ಎಲ್ಲ ಯೋಜನೆಗಳು ನಿಗದಿತ ಅವಧಿಯಲ್ಲೇ ಪೂರ್ಣಗೊಂಡಿದ್ದರೆ ಈ ಮೊತ್ತದ ಹಣ ಇಡೀ ಯೋಜನೆಗೆ ಸಾಕಾಗುತ್ತಿತ್ತು.

 

ಆದರೆ, ನಿಧಾನಗತಿಯಿಂದಾಗಿ ಯೋಜನೆಗಳ ಅಂದಾಜು ವೆಚ್ಚದಲ್ಲಿ ಬಾರಿ ಏರುಪೇರಾಗಿದೆ. ಹೀಗಾಗಿ ಪ್ರತಿ ವರ್ಷ ರಾಜ್ಯ ಸರ್ಕಾರ ಎಷ್ಟೇ ಹಣ ನೀಡಿದರೂ ಅದು ಆನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತಾಗಿದೆ.ಅಂದಾಜು ವೆಚ್ಚ ಹೆಚ್ಚಳ: ಉದಾಹರಣೆಗೆ ಚಿಕ್ಕಬಳ್ಳಾಪುರ- ಕೋಲಾರ ನಡುವಿನ 90 ಕಿ.ಮೀ ಉದ್ದದ ಗೇಜ್ ಪರಿವರ್ತನೆ ಯೋಜನೆಗೆ ಚಾಲನೆ ಸಿಕ್ಕಿದ್ದು 2006-07ರಲ್ಲಿ. ಆಗ ಅದರ ಅಂದಾಜು ವೆಚ್ಚ ಕೇವಲ 98 ಕೋಟಿ ರೂಪಾಯಿ. 2010-11ರಲ್ಲಿ ಈ ವೆಚ್ಚವನ್ನು 333 ಕೋಟಿ ರೂಪಾಯಿಗೆ ಏರಿಸಲಾಯಿತು. ಈಗ ಮತ್ತೆ ರೈಲ್ವೆ ತಗಾದೆ ತೆಗೆದು ಅದರ ಅಂದಾಜು ವೆಚ್ಚ 428 ಕೋಟಿ ರೂಪಾಯಿ ಆಗಲಿದೆ ಎಂದು ಹೇಳುತ್ತಿದೆ.ಮೂಲ ಅಂದಾಜಿಗೂ ಈಗಿನ ಅಂದಾಜಿಗೂ ಶೇ 334ರಷ್ಟು ವ್ಯತ್ಯಾಸ ಇದೆ. ರಾಮನಗರ- ಮೈಸೂರು ಜೋಡಿ ರೈಲು ಮಾರ್ಗದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಇದು ಕೂಡ 2007-08ನೇ ಸಾಲಿನ ಬಜೆಟ್‌ನಲ್ಲಿ ಮಂಜೂರಾಗಿದ್ದು. ಆ ಸಂದರ್ಭದಲ್ಲಿ ಅದರ ಅಂದಾಜು ವೆಚ್ಚ 124 ಕೋಟಿ ರೂಪಾಯಿ ಇತ್ತು. ಈಗ ಅದು 526 ಕೋಟಿ ರೂಪಾಯಿಗೆ ತಲುಪಿದೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.