ಬುಧವಾರ, ನವೆಂಬರ್ 13, 2019
21 °C
ಇಂದು ಮಹೇಂದ್ರ ಸಿಂಗ್ ದೋನಿ-ಗಿಲ್‌ಕ್ರಿಸ್ಟ್ ಬಳಗದ ನಡುವಿನ ಹಣಾಹಣಿ

ಕಿಂಗ್ಸ್ ಇಲೆವೆನ್‌ಗೆ ಸೂಪರ್ ಕಿಂಗ್ಸ್ ಸವಾಲು

Published:
Updated:

ಮೊಹಾಲಿ (ಪಿಟಿಐ): ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಆರನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ. ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ಜಯ ಗಳಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿನ ಹಾದಿಯಲ್ಲಿ ಮುನ್ನಡೆಯಲು ಯೋಜನೆ ರೂಪಿಸುತ್ತಿದೆ.ಬುಧವಾರ ರಾತ್ರಿ ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಟ್ವೆಂಟಿ-20 ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿವೆ. ದಿಗ್ಗಜ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳಾದ ಮಹೇಂದ್ರ ಸಿಂಗ್ ದೋನಿ ಹಾಗೂ ಆ್ಯಡಮ್ ಗಿಲ್‌ಕ್ರಿಸ್ಟ್ ನಡುವಿನ ಹೋರಾಟವಿದು.ಸೂಪರ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಆಘಾತ ಅನುಭವಿಸಿತ್ತು. ನಾಯಕ ದೋನಿ ನಡೆಸಿದ ಹೋರಾಟ ವ್ಯರ್ಥವಾಗಿತ್ತು. ಅವರು 26 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಿದ್ದರು. ಹಾಗಾಗಿ ಈ ತಂಡದವರು ಆ ಪಂದ್ಯದಲ್ಲಿ ಎಸಗಿದ ತಪ್ಪುಗಳನ್ನು ಸರಿದೂಗಿಸುವ ಪ್ರಯತ್ನದಲ್ಲಿದ್ದಾರೆ.ಪ್ರಮುಖವಾಗಿ ಈ ತಂಡದ ಬ್ಯಾಟಿಂಗ್ ಸುರೇಶ್ ರೈನಾ, ಎಸ್.ಬದರೀನಾಥ್ ಹಾಗೂ ರವೀಂದ್ರ ಜಡೇಜ ಅವರ ಮೇಲೆ ಅವಲಂಬಿತವಾಗಿದೆ. ಹಾಗೇ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮೆಕ್ ಹಸ್ಸಿ ಹಾಗೂ ಶಿಖರ್ ಧವನ್ ಅವರಿಂದ ಭರ್ಜರಿ ಆರಂಭದ ನಿರೀಕ್ಷೆಯಲ್ಲಿದೆ. ಈ ತಂಡಕ್ಕೆ ಒಂದು ಸಂತೋಷದ ವಿಚಾರವೆಂದರೆ ಆಲ್ಬಿ ಮಾರ್ಕೆಲ್ ಆಗಮಿಸಿದ್ದಾರೆ. ಆದರೆ ಅವರು ಕಿಂಗ್ಸ್ ಇಲೆವೆನ್ ಎದುರು ಆಡುವುದು ಅನುಮಾನ.ಬೌಲಿಂಗ್‌ನಲ್ಲಿ ಈ ತಂಡ ಆರ್.ಸ್ಪಿನ್ನರ್ ಆರ್.ಅಶ್ವಿನ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೊತೆಗೆ ಸಮರ್ಥ ವೇಗಿಗಳ ಕೊರತೆಯನ್ನು ಎದುರಿಸುತ್ತಿದೆ.ಕಿಂಗ್ಸ್ ಇಲೆವೆನ್ ತನ್ನ ಮೊದಲ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಭರ್ಜರಿ ಗೆಲುವು ಸಾಧಿಸಿತ್ತು. ಈ ತಂಡದ ಬೌಲಿಂಗ್ ವಿಭಾಗ ಶಕ್ತಿಯುತವಾಗಿದೆ. ಪ್ರವೀಣ್ ಕುಮಾರ್, ರ‌್ಯಾನ್ ಹ್ಯಾರಿಸ್, ಪರ್ವಿಂದರ್ ಅವಾನಾ ಹಾಗೂ ಪಿಯೂಷ್ ಚಾವ್ಲಾ ಅವರಂಥ ಬೌಲರ್‌ಗಳಿದ್ದಾರೆ.ಬ್ಯಾಟಿಂಗ್‌ನಲ್ಲಿ ಆಲ್‌ರೌಂಡರ್ ಅಜರ್ ಮಹಮ್ಮೂದ್, ಡೇವಿಡ್ ಹಸ್ಸಿ, ಮನ್‌ದೀಪ್ ಸಿಂಗ್ ಅವರ ಮೇಲೆ ಭರವಸೆ ಇಟ್ಟುಕೊಂಡಿದೆ. ಹಾಗಾಗಿ ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ತವರಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವುದರಿಂದ ನಿರೀಕ್ಷೆಗಳು ಗರಿಗೆದರಿವೆ.ಕಿಂಗ್ಸ್ ಇಲೆವೆನ್ ಪಂಜಾಬ್-       ಚೆನ್ನೈ ಸೂಪರ್ ಕಿಂಗ್ಸ್

ಪಂದ್ಯ ಆರಂಭ: ರಾತ್ರಿ 8 ಗಂಟೆ

ಸ್ಥಳ: ಮೊಹಾಲಿ

ನೇರ ಪ್ರಸಾರ: ಸೆಟ್‌ಮ್ಯಾಕ್ಸ್

ಪ್ರತಿಕ್ರಿಯಿಸಿ (+)