ಕಿಂಗ್‌ಫಿಷರ್‌ಗೆ ನೋಟಿಸ್ ಜಾರಿ

7

ಕಿಂಗ್‌ಫಿಷರ್‌ಗೆ ನೋಟಿಸ್ ಜಾರಿ

Published:
Updated:

ನವದೆಹಲಿ/ಮುಂಬೈ (ಪಿಟಿಐ): ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆಯು ಮತ್ತೆ ತನ್ನ ವಿಮಾನಗಳ ಹಾರಾಟಕ್ಕೆ ಅನುಮತಿ ಪಡೆಯುವ ಮುನ್ನ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ಕ್ಕೆ ಸುರಕ್ಷತಾ ಮಾನದಂಡಗಳನ್ನು ದೃಢಪಡಿಸಬೇಕಾಗುತ್ತದೆ ಎಂದು ವಿಮಾನಯಾನ ಸಚಿವ ಅಜಿತ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.ಸುರಕ್ಷತೆಯ ದೃಷ್ಟಿಯಿಂದ ವಿಮಾನ ಹಾರಾಟವನ್ನು ಕಿಂಗ್‌ಫಿಷರ್ ರದ್ದುಗೊಳಿಸಿರುವುದಾಗಿ ಹೇಳಿದೆ. ಏರ್‌ಲೈನ್ಸ್ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದಿಂದ ಉಂಟಾಗುವ ಪರಿಣಾಮದ ಬಗ್ಗೆ ವಿಮಾನಯಾನ ಪ್ರಾಧಿಕಾರ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.`ಕೆಲವು ಕಂಪೆನಿಗಳು ಬೆಳೆಯುತ್ತಿವೆ, ಇನ್ನು ಕೆಲವು ವಿಫಲಗೊಂಡಿವೆ. ಸರ್ಕಾರ ಅವುಗಳನ್ನು ಮುಚ್ಚಲಿದೆ ಅಥವಾ ನೆರವು ನೀಡಲಿದೆ~ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.ಈ ಮಧ್ಯೆ, ವಿಮಾನ ಹಾರಾಟ ಪರವಾನಗಿಯನ್ನು ಏಕೆ ರದ್ದುಗೊಳಿಸಬಾರದು ಎಂದು ಡಿಜಿಸಿಎಯು ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, 15 ದಿನಗಳೊಳಗೆ ಇದಕ್ಕೆ ಉತ್ತರಿಸುವಂತೆ ಸೂಚಿಸಿದೆ. ಇದರಿಂದ ಕಿಂಗ್‌ಫಿಷರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಏಳು ತಿಂಗಳ ಬಾಕಿ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ಎಂಜಿನಿಯರ್‌ಗಳು ಮತ್ತು ಪೈಲಟ್‌ಗಳು ಮುಷ್ಕರ ನಡೆಸುತ್ತಿದ್ದರೂ ಪರಿಹಾರ ಕಂಡುಕೊಳ್ಳುವಲ್ಲಿ ಕಿಂಗ್‌ಫಿಷರ್ ಆಡಳಿತ ಮಂಡಳಿ ಯಶಸ್ವಿಯಾಗಿಲ್ಲ. ಎಲ್ಲ ವಿಮಾನ ಹಾರಾಟವನ್ನು ಅಕ್ಟೋಬರ್ 12ರವರೆಗೆ ರದ್ದುಪಡಿಸಿರುವುದಾಗಿ ಕಿಂಗ್‌ಫಿಷರ್ ಘೋಷಿಸಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಈ ನೋಟಿಸ್ ನೀಡಿದೆ.`ಕಳೆದ 10 ತಿಂಗಳ ಅವಧಿಯಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸೇರಿದ ವಿಮಾನಗಳು ಸಮಯಕ್ಕೆ ಸರಿಯಾಗಿ ಹಾರಾಟ ನಡೆಸುತ್ತಿಲ್ಲ. ಪದೇ ಪದೇ ವಿಮಾನ ಹಾರಾಟ ರದ್ದುಪಡಿಸುತ್ತಿರುವುದರಿಂದ ನಾಗರಿಕರಿಗೆ ಬಹಳ ಅನಾನುಕೂಲವಾಗಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೋಟಿಸ್ ನೀಡಲಾಗಿದೆ~ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಮಿಶ್ರಾ ತಿಳಿಸಿದ್ದಾರೆ.1937ರ ಕಾಯ್ದೆಯಲ್ಲಿರುವ ನಿಯಾಮವಳಿಗೆ ತಕ್ಕಂತೆ ಕಿಂಗ್‌ಫಿಷರ್ ಏರ್‌ಲೈನ್ಸ್ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿಲ್ಲ. ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಏಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.ಈ ನಡುವೆ, ಬಾಕಿ ವೇತನ ಕೂಡಲೇ ಪಾವತಿಸುವಂತೆ ಒತ್ತಾಯಿಸಿ ಮದ್ಯದ ದೊರೆ ವಿಜಯ ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್ ಸಿಬ್ಬಂದಿ ದೆಹಲಿ ಮತ್ತು ಮುಂಬೈನಲ್ಲಿ ಕಪ್ಪು ಪಟ್ಟಿ ಧರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕಿಂಗ್‌ಫಿಷರ್ ಉದ್ಯೋಗಿಯೊಬ್ಬರ ಪತ್ನಿ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry