ಕಿಂಗ್‌ಫಿಷರ್‌ಗೆ ಸಮನ್ಸ್: ನೆರವಿಗೆ ಸರ್ಕಾರ ನಕಾರ

7

ಕಿಂಗ್‌ಫಿಷರ್‌ಗೆ ಸಮನ್ಸ್: ನೆರವಿಗೆ ಸರ್ಕಾರ ನಕಾರ

Published:
Updated:

ನವದೆಹಲಿ (ಪಿಟಿಐ): ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಕಿಂಗ್‌ಫಿಷರ್ ಕಂಪೆನಿಗೆ ಸಮನ್ಸ್ ನೀಡಿದ್ದು, ದೊಡ್ಡ ಪ್ರಮಾಣದಲ್ಲಿ ವಿಮಾನ ಸಂಚಾರ ವ್ಯತ್ಯಯವಾಗಿರುವುದಕ್ಕೆ ವಿವರಣೆ ನೀಡುವಂತೆ ಸೂಚಿಸಿದೆ. ಜೊತೆಗೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಈ ಕಂಪೆನಿಗೆ ನೆರವು ನೀಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.ಕಿಂಗ್‌ಫಿಷರ್ ಕಂಪೆನಿ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಂಜಯ್ ಅಗರ್‌ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ನೀಡಿರುವ ಡಿಜಿಸಿಎ, ಸಿಇಒ ಅವರಿಗೆ ಮಂಗಳವಾರ ಖುದ್ದು ಹಾಜರಾಗಿ ಸ್ಪಷ್ಟೀಕರಣ ಕೊಡುವಂತೆ ತಿಳಿಸಿದೆ.ಕಳೆದ ಶುಕ್ರವಾರದಿಂದೀಚೆಗೆ ಸಂಚಾರ ರದ್ದುಗೊಂಡಿರುವ ವಿಮಾನಗಳ ಸಂಖ್ಯೆಯನ್ನು ಕಿಂಗ್‌ಫಿಷರ್ ಕಂಪೆನಿ ಭಾನುವಾರ ಸಂಜೆಯವರೆಗೂ ಡಿಜಿಸಿಎಗೆ ನೀಡಲು ವಿಫಲವಾಯಿತು. ಆದ್ದರಿಂದ ಡಿಜಿಸಿಎ ಈ ಸಮನ್ಸ್ ನೀಡಿದೆ.ಸೋಮವಾರ ಕೂಡ ಕಿಂಗ್‌ಫಿಷರ್ ತನ್ನ 30ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ಇದರಲ್ಲಿ ದೇಶದೊಳಗೆ ಮತ್ತು ಅಂತರರಾಷ್ಟ್ರೀಯ ವಿಮಾನಗಳು ಸೇರಿವೆ.  ಈ ಕಂಪೆನಿಯ ಸುಮಾರು 80 ವಿಮಾನಗಳು ಭಾನುವಾರ ಹಾರಾಟ ನಡೆಸಲಿಲ್ಲ. ಇದರಿಂದ ನೂರಾರು ಪ್ರಯಾಣಿಕರು ಪರಿತಪಿಸಿದರು.`ಕಿಂಗ್‌ಫಿಷರ್ ಕಂಪೆನಿಯು ದೊಡ್ಡ ಪ್ರಮಾಣದಲ್ಲಿ ತನ್ನ ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ಪಡೆದಿದೆ ಎಂಬ ವರದಿಗಳು ಬಂದಿವೆ. ಸಂಚಾರ ರದ್ದು ಮಾಡುವ ಮುನ್ನ ಆ ಬಗ್ಗೆ ನಮಗೆ ಮಾಹಿತಿ ನೀಡುವುದು ಕಡ್ಡಾಯ. ಆದರೆ, ಆ ಕಂಪೆನಿ ಮಾಹಿತಿ ನೀಡಲು ವಿಫಲವಾಗಿದೆ~ ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ. ಭರತ್ ಭೂಷಣ್ ಹೇಳಿದ್ದಾರೆ.`ರದ್ದುಗೊಂಡ ಕಿಂಗ್‌ಫಿಷರ್ ವಿಮಾನಗಳ ಪ್ರಯಾಣಿಕರಿಗೆ ಬೇರೆ ಕಂಪೆನಿಗಳ ವಿಮಾನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ~ ಎಂದು ಅವರು  ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮಧ್ಯೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಆರ್ಥಿಕ ಸಂಕಷ್ಟದಲ್ಲಿರುವ ಕಿಂಗ್‌ಫಿಷರ್‌ಗೆ ನೆರವು ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. `ಆ ಕಂಪೆನಿಗೆ ಸರ್ಕಾರ ನೆರವು ನೀಡುವುದಿಲ್ಲ ಮತ್ತು ಸಹಾಯಹಸ್ತ ಚಾಚುವಂತೆ ಯಾವುದೇ ಬ್ಯಾಂಕ್ ಅಥವಾ ಖಾಸಗಿ ಸಂಸ್ಥೆಗಳಿಗೂ ಹೇಳುವುದಿಲ್ಲ~ ಎಂದರು.`ಕಿಂಗ್‌ಫಿಷರ್‌ನ ವಿಮಾನ ಸಂಚಾರ ಮತ್ತು ಅದನ್ನು ನೆಚ್ಚಿಕೊಂಡಿರುವ ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಈ ವಿಚಾರದಲ್ಲಿ ನಾವು ಯಾವುದೇ ರಾಜಿಗೆ ಸಿದ್ಧರಿಲ್ಲ. ಡಿಜಿಸಿಎ ನೀಡಿರುವ ಸಮನ್ಸ್‌ಗೆ ಆ ಕಂಪೆನಿ ಏನು ಉತ್ತರ ನೀಡುತ್ತದೆಯೋ ನೋಡೋಣ~ ಎಂದರು.

ತೆರಿಗೆ ಇಲಾಖೆ ದೂಷಣೆ

ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿಮಾನಗಳ ಸಂಚಾರವನ್ನು ರದ್ದು ಮಾಡಬೇಕಾಯಿತು ಎಂದು ಕಿಂಗ್‌ಫಿಷರ್ ಕಂಪೆನಿಯು ಆದಾಯ ತೆರಿಗೆ ಇಲಾಖೆಯನ್ನು ಸೋಮವಾರ ದೂಷಿಸಿದೆ.ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆ ಸ್ಥಗಿತ ಮಾಡಿದ್ದರಿಂದ ನಿಗದಿಯಂತೆ ಹಣ ನೀಡಬೇಕಾದವರಿಗೆ ಅದನ್ನು ನೀಡಲು ಆಗಲಿಲ್ಲ ಮತ್ತು ವೇತನ ಬಟವಾಡೆ ಮಾಡಲೂ ಆಗಲಿಲ್ಲ. ಇದರಿಂದಾಗಿಯೇ ವಿಮಾನಯಾನಗಳನ್ನು ರದ್ದು ಮಾಡಬೇಕಾಯಿತು ಎಂದು ಕಿಂಗ್‌ಫಿಷರ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ನಾಲ್ಕು ದಿನ ಇದೇ ಸ್ಥಿತಿ ಮುಂದುವರಿಯಲಿದೆ. ನಂತರ ಎಂದಿನಂತೆ ವಿಮಾನಗಳು ಸಂಚಾರ ನಡೆಯಲಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry