ಗುರುವಾರ , ನವೆಂಬರ್ 21, 2019
27 °C

ಕಿಂಗ್‌ಫಿಷರ್ ಗೋದಾಮಿಗೆ ಬೆಂಕಿ

Published:
Updated:

ಬೆಂಗಳೂರು: ದೇವನಹಳ್ಳಿ ಸಮೀಪದ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದ ಬಿಡಿಭಾಗಗಳ ಗೋದಾಮಿನಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ಬೆಳಿಗ್ಗೆ 11 ಗಂಟೆ ಸುಮಾರಿಗೆ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಆಸನಗಳು, ಪ್ಯಾರಾಚೂಟ್‌ಗಳು ಹಾಗೂ ದಾಖಲೆ ಪತ್ರಗಳಿದ್ದ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಗೋದಾಮಿನ ಇತರ ಭಾಗಕ್ಕೂ ವ್ಯಾಪಿಸಿದೆ. ಕೂಡಲೇ ಗೋದಾಮಿನ ಸಿಬ್ಬಂದಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 15 ವಾಹನಗಳೊಂದಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.`ಸುಮಾರು 80 ಮಂದಿ ಅಗ್ನಿಶಾಮಕ ಸಿಬ್ಬಂದಿಯ ತಂಡ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತು. ಘಟನೆ ನಡೆದ ಸಂದರ್ಭದಲ್ಲಿ ಗೋದಾಮಿನಲ್ಲಿ ಎಂಟು ಮಂದಿ ಕಾರ್ಮಿಕರಿದ್ದರು. ಗೋದಾಮಿನ ಕಾರ್ಮಿಕರು ನೀರೆರೆಚಿ ಬೆಂಕಿ ನಂದಿಸಲು ನಡೆಸಿರುವ ಪ್ರಯತ್ನ ವಿಫಲವಾಗಿದೆ' ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರವೀಂದ್ರ ತಿಳಿಸಿದರು.`ಗೋದಾಮಿನಲ್ಲಿ ಅಗ್ನಿನಂದಕ ಸಲಕರಣೆಗಳಿದ್ದರೂ ಅವುಗಳಿಂದ ಪ್ರಯೋಜನವಾಗಿಲ್ಲ. ಅಗ್ನಿನಂದಕ ಸಲಕರಣೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿರಲಿಲ್ಲ. ಅಲ್ಲದೇ ಅಗ್ನಿನಂದಕ ಸಲಕರಣೆಗಳ ಬಳಕೆಯ ಬಗ್ಗೆ ಗೋದಾಮಿನ ಸಿಬ್ಬಂದಿಗೆ ತರಬೇತಿಯನ್ನೂ ನೀಡಿರಲಿಲ್ಲ' ಎಂದು ಅವರು ಮಾಹಿತಿ ನೀಡಿದರು.`ಮುನೇಗೌಡ ಎಂಬುವರಿಗೆ ಸೇರಿದ ಜಮೀನನ್ನು ಎಂಟು ವರ್ಷಗಳ ಹಿಂದಿನಿಂದ ಗೋದಾಮಿಗಾಗಿ ಬಾಡಿಗೆಗೆ ನೀಡಲಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಘಟನೆಯಲ್ಲಿ ಆಗಿರುವ ನಷ್ಟದ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ' ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದರು.ಆತಂಕದ ವಾತಾವರಣ : ಅಗ್ನಿ ಆಕಸ್ಮಿಕದಿಂದ ಗೋದಾಮಿನ ಅಕ್ಕಪಕ್ಕದ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನಾ ಸ್ಥಳದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಗೋದಾಮಿನಿಂದ ಹೊರಟ ದಟ್ಟ ಹೊಗೆ ಬಹುದೂರದವರೆಗೆ ವ್ಯಾಪಿಸಿತ್ತು.

ಪ್ರತಿಕ್ರಿಯಿಸಿ (+)