ಗುರುವಾರ , ಮೇ 13, 2021
16 °C

ಕಿಂಗ್‌ಫಿಷರ್: ವೇತನ ಪಾವತಿ ಭರವಸೆಗೆ ಮಣಿಯದ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ/ನವದೆಹಲಿ (ಪಿಟಿಐ):  ಬುಧವಾರದಿಂದ ಬಾಕಿ ಸಂಬಳವನ್ನು ವಿತರಿಸಲಾಗುತ್ತದೆ ಎಂದು ಮಾಲೀಕ ವಿಜಯ ಮಲ್ಯ ಅವರು ಲಿಖಿತ ಭರವಸೆ ನೀಡಿದರೂ ಕೆಲವು ಪೈಲಟ್‌ಗಳು ಮತ್ತು ಸಿಬ್ಬಂದಿ ಸೋಮವಾರ ಕೆಲಸಕ್ಕೆ ಹಾಜರಾಗದ ಕಾರಣ ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆಯು ಹಠಾತ್ತಾಗಿ 10 ವಿಮಾನಗಳ ಸಂಚಾರವನ್ನು ರದ್ದುಪಡಿಸಿತು.

ಆರ್ಥಿಕ ಸಂಕಷ್ಟದಲ್ಲಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆಯ ಸಿಬ್ಬಂದಿಗೆ ಕಳೆದ ಡಿಸೆಂಬರ್‌ನಿಂದ ವೇತನ ಪಾವತಿಯಾಗಿಲ್ಲ. ಮಂಗಳವಾರ ರಾತ್ರಿ 8 ಗಂಟೆಯೊಳಗೆ ಎರಡು ತಿಂಗಳ ವೇತನ ಪಾವತಿಸಬೇಕು ಮತ್ತು ಬಾಕಿ ಮೊತ್ತವನ್ನು ಏಪ್ರಿಲ್ 20ರ ಒಳಗೆ ನೀಡಬೇಕು ಎಂದು ಗಡುವು ನೀಡಿ ನೌಕರರು ಸೂಚನಾ ಫಲಕದಲ್ಲಿ ಪತ್ರ ಅಂಟಿಸಿದ್ದಾರೆ.

ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ನೌಕರರ ಮಧ್ಯೆ ಮುಂಬೈ ಹೋಟೆಲ್‌ವೊಂದರಲ್ಲಿ ದಿನವಿಡೀ ನಡೆದ ಮಾತುಕತೆ ಫಲಪ್ರದವಾಗದಿದ್ದರಿಂದ ನೌಕರರು ಅಂತಿಮ ಗಡುವು ನೀಡಿದ್ದಾರೆ.

ಏತನ್ಮಧ್ಯೆ ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ 4ರಂದು ಬುಧವಾರ ಮತ್ತು ಪೈಲಟ್ ಹಾಗೂ ಎಂಜಿನಿಯರ್‌ಗಳಿಗೆ ಈ ತಿಂಗಳ 9 ಮತ್ತು 10ರಂದು ವೇತನ ಪಾವತಿಸಲಾಗುವುದು ಎಂದು ಕಿಂಗ್‌ಫಿಷರ್ ಏರ್‌ಲೈನ್ ಸಂಸ್ಥೆಯ ಮಾಲೀಕ ವಿಜಯ್ ಮಲ್ಯ ಅವರು  ಸಿಬ್ಬಂದಿಗೆ ಪತ್ರ ಬರೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬ್ಯಾಂಕ್ ಖಾತೆಗಳ ಸ್ಥಗಿತ, ಐಎಟಿಎ ಸ್ಥಗಿತ, ಪ್ಲಾಟ್‌ಫಾರಂ ಬುಕಿಂಗ್ ನಷ್ಟ, ಮಾಧ್ಯಮಗಳ ವ್ಯತಿರಿಕ್ತ ಪ್ರಚಾರ ಮತ್ತು ಗ್ರಾಹಕರ ವಿಶ್ವಾಸಾರ್ಹತೆಯ ನಷ್ಟ ಹೀಗೆ ಸಂಸ್ಥೆಯು ಎಲ್ಲಾ ದಿಕ್ಕಿನಿಂದಲೂ ತೊಂದರೆ ಅನುಭವಿಸುತ್ತಿದ್ದು, ಸಿಬ್ಬಂದಿ ಸ್ವಲ್ಪ ದಿನಗಳವರೆಗೆ ಸಹಕರಿಸಬೇಕು ಎಂದು ಮಲ್ಯ ಪತ್ರದಲ್ಲಿ ಕೋರಿದ್ದಾರೆ ಎನ್ನಲಾಗಿದೆ.

`ಕಂಪೆನಿ ಮತ್ತು ಗ್ರಾಹಕರ ಹಿತ ಕಾಪಾಡುವ ಉದ್ದೇಶದಿಂದ ವೈಯಕ್ತಿಕವಾಗಿ ತ್ಯಾಗ ಮಾಡಿರುವ ನಿಮಗೆ (ಸಿಬ್ಬಂದಿ) ನಾನು ಕೃತಜ್ಞನಾಗಿದ್ದೇನೆ~ ಎಂದೂ ತಿಳಿಸಿದ್ದಾರೆ.

ಎಷ್ಟೇ ಕೆಲಸದ ಒತ್ತಡವಿದ್ದರೂ ಈ ವಾರದಿಂದ ಪ್ರತಿಯೊಂದು ಪ್ರಮುಖ ನಿಲ್ದಾಣದಲ್ಲಿ ವಾರದಲ್ಲಿ ಒಂದು ದಿನ ವೈಯಕ್ತಿಕವಾಗಿ ಸಿಬ್ಬಂದಿಯನ್ನು ಭೇಟಿ ಮಾಡುತ್ತೇನೆ ಎಂದು ಅವರು ಪತ್ರದಲ್ಲಿ ಭರವಸೆ ನೀಡಿದ್ದಾರೆ.

`ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಬಾಯಿಗೆ ಆಹಾರವಾಗದೆ ಮತ್ತು ಪೈಪೋಟಿಗೆ ಹೆದರದೆ ಮುಂದುವರಿಯಲು ನೀವು ನನ್ನ ಜತೆ ಇರಬೇಕು~ ಎಂದು ಮಲ್ಯ ತಮ್ಮ ಸಿಬ್ಬಂದಿಗೆ ಮನವಿ ಮಾಡಿದ್ದಾರೆ.

ತೆರಿಗೆ ಮತ್ತು ಇತರ ಸೇವಾ ಶುಲ್ಕಗಳನ್ನು ಬಾಕಿ ಇಟ್ಟುಕೊಂಡ ಕಾರಣಕ್ಕೆ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿತ್ತು. ನಂತರ 64 ಕೋಟಿ ರೂಪಾಯಿ ಬಾಕಿ ಪಾವತಿಸಿದ ನಂತರ ಭಾನುವಾರ ಪುನಃ ಬ್ಯಾಂಕ್ ಖಾತೆಗಳ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿದೆ.

ಸಾಲದ ಸುಳಿಯಲ್ಲಿ ಸಿಲುಕಿರುವ ಕಿಂಗ್‌ಫಿಷರ್ ಸಂಸ್ಥೆಯು 56 ಮಾರ್ಗಗಳ ಪೈಕಿ 28 ಮಾರ್ಗಗಳಲ್ಲಿ ಈಗಾಗಲೇ ವಿಮಾನ ಸಂಚಾರವನ್ನು ರದ್ದುಪಡಿಸಿದೆ ಹಾಗೂ ಶೇಕಡಾ 40ರಿಂದ 50ರಷ್ಟು ಸಿಬ್ಬಂದಿಗೆ ಮನೆಯಲ್ಲೇ ಇರುವಂತೆ ಸೂಚಿಸಿದೆ.

ಕೊರತೆಯಾಗಿರುವ ಬಂಡವಾಳದ ವ್ಯವಸ್ಥೆಯಾಗುವವರೆಗೆ ಈ ಪರಿಸ್ಥಿತಿ ಮುಂದುವರಿಯಲಿದ್ದು, ಅಗತ್ಯ ಬಂಡವಾಳ ದೊರಕಿದ ಕೂಡಲೇ ಎಲ್ಲಾ ಸಿಬ್ಬಂದಿಗೂ ಕೆಲಸ ನೀಡಲಾಗುವುದು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.