ಕಿಞ್ಞಣ್ಣ ರೈ ವಿಚಾರಧಾರೆಗಳು ಪಸರಿಸಬೇಕು

ಶುಕ್ರವಾರ, ಜೂಲೈ 19, 2019
28 °C

ಕಿಞ್ಞಣ್ಣ ರೈ ವಿಚಾರಧಾರೆಗಳು ಪಸರಿಸಬೇಕು

Published:
Updated:

ಬೆಂಗಳೂರು: `ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ವಿಚಾರಧಾರೆಗಳು ಕೇವಲ ದಕ್ಷಿಣ ಕನ್ನಡ ಮತ್ತು ಕಾಸರಗೋಡಿಗೆ ಸೀಮಿತಗೊಳ್ಳದೇ ರಾಜ್ಯದ ಉದ್ದಗಲಕ್ಕೂ ಪಸರಿಸಬೇಕಿದೆ~ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಹೇಳಿದರು.ಪಯಸ್ವಿನಿ ಗೆಳೆಯರ ಬಳಗವು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ 97ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ಯಾವುದೇ ಕೃತಿಯು ಸಾಹಿತಿಯ ಹಿನ್ನೆಲೆಯನ್ನು ಅವಲಂಬಿಸಿರುವಂತೆ ಕಯ್ಯಾರ ಅವರ ಕೃತಿಗಳಲ್ಲಿ ವನ, ಪರಿಸರ ಮತ್ತು ದೇಶಭಕ್ತಿಯ ಕುರಿತು ಅಪಾರ ಕಾಳಜಿಯಿದ್ದು, ಇದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು~ ಎಂದು ಅಭಿಪ್ರಾಯಪಟ್ಟರು.ವಿಮರ್ಶಕ ಎಸ್.ಆರ್.ವಿಜಯಶಂಕರ, `ರಾಷ್ಟ್ರ ಅಭಿಮಾನವು ಉತ್ತುಂಗದಲ್ಲಿದ್ದ ಸಂದರ್ಭದಲ್ಲೂ ಕಯ್ಯಾರ ಅವರು ಸ್ಥಳೀಯ ವಿದ್ಯಮಾನಗಳ ಕುರಿತು ಆಸಕ್ತಿ ಉಳಿಸಿಕೊಂಡಿದ್ದರು. ವಿವಿಧ ಭಾಷೆಗಳಲ್ಲಿ ಪರಿಣತಿ ಸಾಧಿಸಿದ ಕಯ್ಯಾರ ಅವರಿಗೆ ತುಳು ಮಾತೃ ಭಾಷೆಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿರುವುದು ವಿಶೇಷ~ ಎಂದರು.`ಸ್ಥಳೀಯ ಸಂಸ್ಕೃತಿ ಮತ್ತು ತತ್ವವನ್ನು ಕಾವ್ಯದ ಮೂಲಕ ಕಟ್ಟುವ ಕಲೆಯನ್ನು ಸಿದ್ಧಿಸಿಕೊಂಡ ಕಯ್ಯಾರ ಅವರ ಕೃತಿಗಳು ಪ್ರಸ್ತುತ ಸಂದರ್ಭದಲ್ಲಿ ಆಳವಾದ ಅಧ್ಯಯನಕ್ಕೆ ಒಳಪಡಬೇಕು. ಈ ಕುರಿತು  ಸಾಹಿತ್ಯಾಸಕ್ತರು ಚಿಂತಿಸಬೇಕು~ ಎಂದರು.`ಪ್ರಾದೇಶಿಕ ಸಂಸ್ಕೃತಿ ಜೊತೆಯಲ್ಲಿಯೇ ದೇಶ ಭಕ್ತಿಯನ್ನು ಪ್ರತಿನಿಧಿಸುವ ಕಯ್ಯಾರ ಅವರಿಗೆ `ರಾಷ್ಟ್ರಕವಿ~ ಪದವಿ ನೀಡದಿರುವುದು ಸರ್ಕಾರದ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುತ್ತದೆ~ ಎಂಬ ಸಾಹಿತಿ ಶಿವರಾಮ ಕಾರಂತರ ನುಡಿಗಳನ್ನು ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಪುನರುಚ್ಚರಿಸಿದರು.ಸಾಹಿತಿ ಡಾ.ಡಿ.ಕೆ.ಚೌಟ ಮಾತನಾಡಿ, `ಕಯ್ಯಾರ ಅವರು ಹುಟ್ಟು ಹೋರಾಟಗಾರ. ಸ್ವಾತಂತ್ರ್ಯಕ್ಕಾಗಿ, ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಮತ್ತು ಕಾಸರಗೋಡು-ಕರ್ನಾಟಕ ಚಳವಳಿಯಲ್ಲಿ ಕ್ರಿಯಾಶೀಲರಾಗಿದ್ದು, ನಾಡು ನುಡಿಗೆ ಮಿಡಿದ ಶ್ರೇಷ್ಠ ಕವಿ~ ಎಂದು ಬಣ್ಣಿಸಿದರು.`ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಕಯ್ಯಾರ ಅವರ ನಿಲುವಿನಲ್ಲಿ ಇಂದಿಗೂ ಯಾವುದೇ ಬದಲಾವಣೆ ಕಾಣಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಅಂತರಿಕ ಭಿನ್ನತೆಯನ್ನು ತಮ್ಮ ಕೃತಿಗಳಲ್ಲಿ ವಿಭಿನ್ನವಾಗಿ ಬಿಂಬಿಸಿದ್ದಾರೆ~ ಎಂದು ಹೇಳಿದರು.ಸಮಾರಂಭದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ ಸಂಪಾದಿತ ಕೃತಿ `ಕನ್ನಡ ಸಿರಿ~ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಯ್ಯಾರ ಅವರ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಬಳಗದ ಅಧ್ಯಕ್ಷ ಎಂ.ಸ್ವಯಂಪ್ರಕಾಶ್, ಕಾರ್ಯದರ್ಶಿ ಬಿ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry