ಕಿಟ್ಟಿ ಕತೆ

7

ಕಿಟ್ಟಿ ಕತೆ

Published:
Updated:
ಕಿಟ್ಟಿ ಕತೆ

ಗಟ್ಟಿಮುಟ್ಟು ಮೈಕಟ್ಟಿನ ಬಗ್ಗೆ ಆಸಕ್ತಿ ತಾಳಿದ ಪಾನಿಪುರಿ ವ್ಯಾಪಾರಿಯೊಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕತೆ ಇದು. ಕನ್ನಡದ ಸ್ಟಾರ್‌ಗಳಿಗೆ ತರಬೇತು ನೀಡಿ ಸಿಕ್ಸ್ ಪ್ಯಾಕ್, ಏಯ್ಟ ಪ್ಯಾಕ್ ತೆರೆಯ ಮೇಲೆ ಮೈತಳೆಯುವಂತೆ ಮಾಡುವ ಕಿಟ್ಟಿ, ಕನ್ನಡ ಚಿತ್ರೋದ್ಯಮದಲ್ಲಿ `ಪಾನಿಪುರಿ ಕಿಟ್ಟಿ~ ಎಂದೇ ಹೆಸರುವಾಸಿ.

ಕುಣಿಗಲ್ ಬಳಿಯ ಅಗ್ರಹಾರ ಸಿಂಗೋನಹಳ್ಳಿಯಿಂದ ಬಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಆಂಜನೇಯ ದೇವಸ್ಥಾನದ ಹತ್ತಿರ ಪಾನಿಪುರಿ ಗಾಡಿ ಇಟ್ಟುಕೊಂಡಿದ್ದರು ಕಿಟ್ಟಿ. ಒಂದು ದಿನ ಪಾನಿಪುರಿ ತಿನ್ನಲು ಬಂದ ಪ್ರಸಾದ್ ಎಂಬ ವ್ಯಕ್ತಿ ಕಿಟ್ಟಿಗೆ ಮೈಕಟ್ಟಿನ ಬಗ್ಗೆ ಅರಿವು ಮೂಡಿಸಿದರು. ಅದನ್ನೇ ಸ್ಫೂರ್ತಿಯಾಗಿ ಮಾಡಿಕೊಂಡ ಕಿಟ್ಟಿ, ಮಲ್ಲೇಶ್ ಎಂಬ ಗುರುವಿನ ಸಲಹೆ ಸೂಚನೆ ಪಡೆದುಕೊಂಡು ಮೈಕಟ್ಟು ಹದ ಮಾಡಿಕೊಳ್ಳಲು ಮುಂದಾದರು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿತು. ಮಿಸ್ಟರ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದುಕೊಂಡರು. ಮರು ವರ್ಷ 3ನೇ ಸ್ಥಾನ ಅವರದಾಯಿತು. ಜೊತೆಗೆ ಮಿಸ್ಟರ್ ಯೂನಿವರ್ಸ್ ಸ್ಪರ್ಧೆಯಲ್ಲೂ ಸ್ಥಾನ ಗಳಿಸಿದರು.

ಮಿಸ್ಟರ್ ಇಂಡಿಯಾ ಸ್ಪರ್ಧೆಯಂತೂ ಅವರಿಗೆ ನೀರು ಕುಡಿದಷ್ಟೇ ಸುಲಭವಾಯಿತು. 11 ಬಾರಿ `ಮಿಸ್ಟರ್ ಇಂಡಿಯಾ~ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಕಿಟ್ಟಿ, 24 ಬಾರಿ `ಮಿಸ್ಟರ್ ಕರ್ನಾಟಕ~ ಎನಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ಸಾಧಿಸಿದ ಮೇಲೆ ಸುಮ್ಮನೆ ಕೂರುವುದು ಹೇಗೆ? ಎನಿಸಿ `ಮಸಲ್ ಪ್ಲಾನೆಟ್~ ಹೆಸರಿನ ಜಿಮ್ ಆರಂಭಿಸಿದರು. ಬೆಂಗಳೂರಿನ ನಂದಿನಿ ಲೇ ಔಟ್‌ನಲ್ಲಿ ಇರುವ ಅವರ ಜಿಮ್‌ನಲ್ಲಿ ಕನ್ನಡದ ಸ್ಟಾರ್‌ಗಳೊಂದಿಗೆ ಸಾಮಾನ್ಯ ಯುವಕರೂ ವರ್ಕ್‌ಔಟ್ ಮಾಡುತ್ತಾರೆ.

`ಜಂಗ್ಲಿ~ ಚಿತ್ರದಲ್ಲಿ 6 ಪ್ಯಾಕ್ ಮಾಡಿಕೊಂಡಿದ್ದ `ದುನಿಯಾ~ ವಿಜಯ್, `ಶತ್ರು~ ಚಿತ್ರದ 6ಪ್ಯಾಕ್‌ನ `ನೆನಪಿರಲಿ~ ಪ್ರೇಮ್, `ಸಿಂಹರಾಶಿ~ ಚಿತ್ರದ 8 ಪ್ಯಾಕ್‌ನ ಚೇತನ್ ಚಂದ್ರ ಕಿಟ್ಟಿ ಅವರ ಬಳಿ ತರಬೇತು ಪಡೆದವರು. ಇದೀಗ ನಟ ಯಶ್‌ಗೆ ತರಬೇತು ನೀಡುತ್ತಿರುವ ಕಿಟ್ಟಿ ಸ್ಟಾರ್‌ಗಳ ತರಬೇತುದಾರ ಎಂದೇ ಖ್ಯಾತಿ.

`ಸ್ಟಾರ್ ಆಗಲೀ, ಸಾಮಾನ್ಯ ಹುಡುಗನಾಗಲೀ ಇಬ್ಬರಿಗೂ ಒಂದೇ ಫೀಸು~ ಎಂದು ಖಡಕ್ಕಾಗಿ ಹೇಳುವ ಕಿಟ್ಟಿ ಅವರು ಇದೀಗ ಮೈಕಟ್ಟು ತರಬೇತಿಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ.

ಸಿಕ್ಸ್‌ಪ್ಯಾಕಿಗೆ ದೇಹ ಹೊಂದಿಸುವುದು ಹೇಗೆ? ಏಯ್ಟ ಪ್ಯಾಕಿಗೆ ದೇಹ ಹೊಂದಿಸುವುದು ಹೇಗೆ? ಎಂದು ಹೇಳಿಕೊಡುವುದರೊಂದಿಗೆ ತಮ್ಮ 6 ಪ್ಯಾಕಿನ ದೇಹವನ್ನೂ ನಿಭಾಯಿಸುತ್ತಿರುವ ಕಿಟ್ಟಿ, `ಕೆಲವರು ಎಷ್ಟು ಕಸರತ್ತು ಮಾಡಿದರೂ 8 ಪ್ಯಾಕು ಕೂರುವುದೇ ಇಲ್ಲ. ಅದರಿಂದ ಅವರವರ ದೇಹ ವಿನ್ಯಾಸವನ್ನು ಆಧರಿಸಿ ತರಬೇತಿ ನೀಡಬೇಕಾಗುತ್ತದೆ~ ಎನ್ನುತ್ತಾರೆ.

ಕಿಟ್ಟಿ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಿಜೇತರಾದ ಕಾರಣ ಪ್ರಮಾಣೀಕೃತ ತರಬೇತುದಾರ ಎನಿಸಿಕೊಂಡಿದ್ದಾರೆ. ಅದರಿಂದ ಅವರ ಜಿಮ್‌ಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚು.

`70 ಕೆಜಿ ತೂಕ ಇರುವವರಿಗೆ ಎಷ್ಟು ಪ್ರೊಟೀನು, ವಿಟಮಿನ್, ಕ್ಯಾಲ್ಸಿಯಂ ಬೇಕು. ಅವರು ಎಷ್ಟು ವರ್ಕ್‌ಔಟ್ ಮಾಡಿದರೆ ಕ್ಯಾಲೋರಿ ಕಡಿಮೆಯಾಗುತ್ತದೆ ಎಂಬ ವಿಚಾರವೆಲ್ಲಾ ನನಗೆ ಗೊತ್ತು. ಅದರಿಂದ ಯಾವುದೇ ವೈದ್ಯರ ಸಹಾಯವಿಲ್ಲದೇ ನಾನು ಡಯಟ್ ಹೇಳುವೆ~ ಎಂದುಆತ್ಮವಿಶ್ವಾಸದಿಂದ ಹೇಳುತ್ತಾರೆ ಕಿಟ್ಟಿ.

ಇಂದಿಗೂ ಆಂಜನೇಯ ದೇವಾಲಯದ ಬಳಿ ಅವರ ಪಾನಿಪುರಿ ಗಾಡಿ ನಿಲ್ಲುತ್ತದೆ. ಆಗಾಗ್ಗೆ ಕಿಟ್ಟಿ ಕೂಡ ತಮ್ಮ ಹಳೆಯ ವೃತ್ತಿಗೆ ಮರಳುವುದೂ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry