ಕಿಟ್ಟಿ ಕಲರವ, ಪ್ರಾಣೇಶ್ ಕಂಪು, ಪೂಜಾ ಮೆರುಗು

7

ಕಿಟ್ಟಿ ಕಲರವ, ಪ್ರಾಣೇಶ್ ಕಂಪು, ಪೂಜಾ ಮೆರುಗು

Published:
Updated:

 ಗುಲ್ಬರ್ಗ: ಶರಣಬಸವೇಶ್ವರ ಶಾಲಾ ಆವರಣದಲ್ಲಿ ಭಾನುವಾರ ಸಂಜೆ ಕನ್ನಡದ ಕಲರವ. ಕನ್ನಡವು ಹಾಸ್ಯ, ಸಂಗೀತ, ನೃತ್ಯ, ಮಾತು, ಭಾಷಣ, ಹೇಳಿಕೆಗಳ ಹಲವು ಹೊನಲಾಗಿ ಹರಿಯಿತು. ಪ್ರೇಕ್ಷಕರ ಸಂತಸವು ಚಪ್ಪಾಳೆ ಮೂಲಕ ಮುಗಿಲು ಮುಟ್ಟಿತು. ಪ್ರಾಣೇಶ್ ಗಂಗಾವತಿ, ಶ್ರೀನಗರ ಕಿಟ್ಟಿ, ಪೂಜಾ ಗಾಂಧಿ ನರಸಿಂಹ ಜೋಶಿ, ಬಸವರಾಜ ಮಹಾಮನಿ ಮತ್ತಿತರರು ಕನ್ನಡದ ಕಂಪನ್ನು ಬೀರಿದರು. ಇದು ಆಳಂದ ರಸ್ತೆಯ ಭೀಮಳ್ಳಿಯಲ್ಲಿ ಕನ್ನಡ ತಾಯಿ ಭುವನೇಶ್ವರಿ ಮಾತೆಯ ದೇವಸ್ಥಾನ ನಿರ್ಮಿಸುವ ಸಹಾಯಾರ್ಥವಾಗಿ ಭಾನುವಾರ ನಗರದ ಶರಣಬಸವೇಶ್ವರ ಸಿ.ಬಿ.ಎಸ್.ಸಿ. ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ರಸಮಂಜರಿ ಹಾಗೂ ನಗೆಹಬ್ಬದ ಸಂಭ್ರಮ.ಕನ್ನಡ ಸೇನೆ ಭುವನೇಶ್ವರಿ ಸೇವಾ ಟ್ರಸ್ಟ್ ಆಯೋಜಿಸಿರುವ ಈ ಕಾರ್ಯಕ್ರಮದ ಆರಂಭದಲ್ಲಿ ನರಸಿಂಹ ಜೋಶಿ ತಮ್ಮ ಮಿಮಿಕ್ರಿಯ ಚಮತ್ಕಾರದ ಮೂಲಕ ಮಾತಿನ ಲಹರಿ ಹರಿಸಿದರು. ಧ್ವನಿ ಮತ್ತು ಶಬ್ದಗಳ ನಡುವಿನ ಬಾಂಧವ್ಯಕ್ಕೆ ಹಾಸ್ಯದ ಲೇಪನ ನೀಡಿದರು. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿಗಳ ಮಾತನ್ನು ಕ್ರಿಕೆಟ್ ಕಮೆಂಟರಿ ಮೂಲಕ ಪ್ರಸ್ತುತ ಪಡಿಸಿದರು.ಬಳಿಕ ಬಂದ ಬಸವರಾಜ ಮಹಾಮನಿ ತನ್ನ ಗಾತ್ರವನ್ನೇ ವಿಡಂಬನೆ ಮಾಡುತ್ತಾ ಹಾಸ್ಯಕ್ಕೆ ಎಲ್ಲವೂ ವಸ್ತುವೇ ಎಂಬುದನ್ನು ಸಾಬೀತು ಪಡಿಸಿದರು. ಕೊನೆಯದಾಗಿ ಪ್ರಾಣೇಶ್ ಗಂಗಾವತಿ ಹಾಸ್ಯದ ಲಹರಿ ಹರಿಸಿದರು. ಬದುಕಿನ ಜೀವಂತಿಕೆ, ಬಡತನದ ಸಾರ, ಅನುಭವಗಳ ಮಾತು, ಬೀಚಿ ಬರಹಗಳು, ಹಿಂದೂ-ಮುಸ್ಲಿಂ ನಡುವಿನ ಹಿಂದಿ-ಕನ್ನಡದ ಬಂಧ, ಎಲ್ಲೆ ಇಲ್ಲದ ಭಾಷೆ-ಭಾವಗಳನ್ನು ನೆರೆದಿದ್ದವರ ಮನಮುಟ್ಟುವಂತೆ ಹಾಸ್ಯರೂಪದಲ್ಲಿ ತಟ್ಟಿದರು. ಅವರ ಮಾತಿಗೆ ನೆರೆದ ಜನತೆ ಮೂಕವಿಸ್ಮಿತರಾದರು. ಜನಸಾಗರದಲ್ಲಿ ಕಂಡದ್ದು ನಗೆ ಮತ್ತು ಕೇಳಿದ್ದು ಚಪ್ಪಾಳೆ, ಸಿಳ್ಳೆಯ ಸದ್ದು.ಆ ಬಳಿಕ ವೇದಿಕೆಗೆ ಬಂದ ಬೆಂಗಳೂರಿನ ಗಂಧರ್ವ ಮಂಜು ಮೆಲೋಡಿಯಸ್ ತಂಡವು ರಸಮಂಜರಿ ನಡೆಸಿಕೊಟ್ಟಿತು. ಬೆಂಗಳೂರಿನ ಸಿಸ್ಲರ್ ತಂಡ ನೃತ್ಯ ಮಾಡಿತು. ಚಿತ್ರನಟ ಶ್ರೀನಗರ ಕಿಟ್ಟಿ ಮತ್ತು ನಟಿ ಪೂಜಾ ಗಾಂಧಿ ಮಾತನಾಡಿ, ಹಾಡಿನೊಂದಿಗೆ ಜನರನ್ನು ರಂಜಿಸಿದರು. ಜನತೆ ತಮ್ಮ ನಾಯಕ-ನಾಯಕಿಯನ್ನು ಪ್ರತ್ಯಕ್ಷ ಕಂಡು ಭಾವನಾಲಹರಿಯಲ್ಲಿ ತೇಲಿ ಹೋದರು.ಉದ್ಘಾಟನೆ: ಇದಕ್ಕೂ ಮೊದಲು ಸಂಜೆ  ಸುಲಫಲ ಮಠದ ಮಹಾಂತ ಶಿವಾಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರ ಮನವಿಯಂತೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಅಲ್ಲಮಪ್ರಭು ಪಾಟೀಲ, ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ್, ವಿನೋದ್ ಕೆ.ಬಿ. ಶಾಣಪ್ಪ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಮರನಾಥ ಪಾಟೀಲ ತಲಾ ಐದು ಲಕ್ಷ ರೂಪಾಯಿಯಂತೆ 25 ಲಕ್ಷ ರೂಪಾಯಿ ನೆರವನ್ನು ಭುವನೇಶ್ವರಿ ದೇಗುಲಕ್ಕೆ ನೀಡುವುದಾಗಿ ಸೂಚಿಸಿದರು.ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಕಾಂತಾ, ಮಹಾದೇವ ಹೊನ್ನೂರು, ಕಿರಣ್ ಕುಮಾರ್, ಬಿ.ಜಿ.ಪಾಟೀಲ್, ಟ್ರಸ್ಟ್‌ನ ಅಧ್ಯಕ್ಷ ಶಿವಶರಣಪ್ಪ ಖಣದಾಳ, ಎಂ.ಡಿ.ಪಾಟೀಲ, ಶಿವಲಿಂಗಪ್ಪ ಬಂಡಕ, ಭೀಮಾಶಂಕರ ಪಟ್ಟಣ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry