ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ನಾಣಯ್ಯ ಆಗ್ರಹ

7

ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ನಾಣಯ್ಯ ಆಗ್ರಹ

Published:
Updated:

ಮಡಿಕೇರಿ: ಜಿಲ್ಲಾಡಳಿತ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಗರದಲ್ಲಿ ಗಲಭೆ ಸೃಷ್ಟಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಗತ್ಯ ಬಿದ್ದರೆ ಗೂಂಡಾ ಕಾಯ್ದೆಯಡಿ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಒತ್ತಾಯಿಸಿದ್ದಾರೆ.ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ರೀತಿ ಗಲಭೆ ಸೃಷ್ಟಿಸುತ್ತಿರುವ ಕಿಡಿಗೇಡಿಗಳನ್ನು ರೌಡಿ ಪಟ್ಟಿಗೆ ಸೇರಿಸಿ ವಿಳಾಸ, ಭಾವಚಿತ್ರ ಸಹಿತ ಸಾರ್ವಜನಿಕವಾಗಿ ಆಗಿಂದಾಗ್ಗೆ ಪ್ರಕಟಿಸಬೇಕು’ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.‘ನಗರದಲ್ಲಿ ಎರಡು ದಿನ ಕಿಡಿಗೇಡಿಗಳು ಅನಾವಶ್ಯಕವಾಗಿ ಅಂಗಡಿಗಳ ಮೇಲೆ ಕಲ್ಲು ತೂರಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿರುವುದರಿಂದ ನಾಗರಿಕರು ಭಯಭೀತರಾಗಿದ್ದಾರೆ.ಶಾಂತಿಯುತ ಜಿಲ್ಲೆಯಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಕೆಲವು ಸ್ವಯಂಘೋಷಿತ ಸಂಘಟನೆಗಳು ಕೆಲವು ಜನರನ್ನು ಎತ್ತಿಕಟ್ಟುವ ಮೂಲಕ ಭಯದ ವಾತಾವರಣ ನಿರ್ಮಿಸುತ್ತಿರುವುದು ಆಕ್ಷೇಪಾರ್ಹ. ಹಿಂದೂ ಅಥವಾ ಮುಸ್ಲಿಂನ ಯಾವುದೇ ಸಂಘಟನೆಗಳಿಗೆ ಇಡೀ ಸಮಾಜವನ್ನು ಯಾರೂ ಗುತ್ತಿಗೆ ನೀಡಿಲ್ಲ’ ಎಂದು ಎಚ್ಚರಿಸಿದರು.‘ವಿರಾಟ್ ಹಿಂದೂ ಸಮಾಜೋತ್ಸವದ ಸಾನ್ನಿಧ್ಯ ವಹಿಸಿದ್ದ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮುಷ್ಠಿಯನ್ನು ಯಾರೊಬ್ಬರ ಮೇಲೆ ಪ್ರಯೋಗಿಸಬಾರದು ಎಂಬ ಉತ್ತಮ ಸಂದೇಶ ಸಾರಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಶ್ರೀಗಳೇ ಕೋಮು ಸೌಹಾರ್ದ ಕದಡದಂತೆ ಜನತೆಯಲ್ಲಿ ಮನವಿ ಮಾಡುವ ಮೂಲಕ ಮಾನವೀಯತೆಯ ಧರ್ಮ ಮೆರೆಯಬೇಕು’ ಎಂದು ಮನವಿ ಮಾಡಿದರು.‘ಕಿಡಿಗೇಡಿಗಳು ಎಲ್ಲ ಜಾತಿ- ಜನಾಂಗದಲ್ಲೂ ಇದ್ದಾರೆ. ಅವರಿಗೆ ಜಾತಿ ಇಲ್ಲ. ಸಮಾಜದ ಮೇಲೆ ಹಿಡಿತ ಸಾಧಿಸಬೇಕೆಂಬುದೇ ಈ ಮೂಲಭೂತವಾದಿಗಳ ಧ್ಯೇಯ. ಇಂತಹ ಕಿಡಿಗೇಡಿಗಳನ್ನು ಬಗ್ಗುಬಡಿಯಲು ಜಿಲ್ಲಾಡಳಿತ ಯಾವುದೇ ಒತ್ತಡಕ್ಕೆ ಮಣಿಯಬಾರದು. ರಾಜಕೀಯ ಪ್ರಭಾವ ಬಳಸಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಶಕ್ತಿಯನ್ನು ಕುಗ್ಗಿಸಿ ಇಂತಹ ಪುಂಡಾಟಿಕೆ ನಡೆಸುವವರನ್ನು ತಹಬದಿಗೆ ತರುವಲ್ಲಿ ಆಡಳಿತವನ್ನು ನಿಷ್ಕ್ರಿಯರಾಗುವಂತೆ ಮಾಡಿರುವುದು ಜಿಲ್ಲೆಯಲ್ಲಿ ಆಗಿಂದಾಗ್ಗೆ ನಡೆದಿದೆ. ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ದಾಂದಲೆ ನಡೆಸಿದವರ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದು ಇದಕ್ಕೆ ಸಾಕ್ಷಿ’ ಎಂದು ನಾಣಯ್ಯ ಉದಾಹರಿಸಿದರು.ನಿಷೇಧಾಜ್ಞೆ ವಾಪಸಿಗೆ ಆಗ್ರಹ: ‘ನಗರದಲ್ಲಿ ಸೋಮವಾರದವರೆಗೆ ನಿಷೇಧಾಜ್ಞೆ ಮುಂದುವರಿಸುವುದರಿಂದ ಜನ ಭಯಭೀತರಾಗಿ ಮನೆಯಲ್ಲೇ ಉಳಿಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆಯಿಂದಲೇ ನಿಷೇಧಾಜ್ಞೆ ವಾಪಸು ತೆಗೆದುಕೊಳ್ಳಬೇಕು’ ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ ಅವರು, ‘ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ’ ಎಂದರು.

ಜೆಡಿಎಸ್ ಮುಖಂಡ ಎಂ.ಪಿ. ಮುತ್ತಪ್ಪ, ನಗರಸಭಾ ಸದಸ್ಯರಾದ ಅಬ್ದುಲ್ ರಜಾಕ್, ಚುಮ್ಮಿ ದೇವಯ್ಯ, ಮುನೀರ್ ಅಹಮದ್, ಬದ್ರಿಯಾ ಮಸೀದಿ ಅಧ್ಯಕ್ಷ ಎಂ.ಇ. ಹನೀಫ್, ಯೂಸುಫ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry