ಸೋಮವಾರ, ಜೂನ್ 21, 2021
29 °C

ಕಿಡ್ನಿ ಕಾಪಾಡುವ ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಧ್ಯಯನವೊಂದರ ಪ್ರಕಾರ ಬೆಂಗಳೂರು ನಗರದಲ್ಲೇ ಪ್ರತಿದಿನ ಸುಮಾರು 30 ಸಾವಿರದಿಂದ 40 ಸಾವಿರ ಡಯಾಲಿಸಿಸ್ ಚಿಕಿತ್ಸೆ ಅಗತ್ಯವಿರುವ ಅಂಶ ಇದಕ್ಕೆ ಪುಷ್ಟಿ ನೀಡುತ್ತದೆ.

ದೇಹದಲ್ಲಿ ಸುಸೂತ್ರವಾಗಿ ಎಲ್ಲಾ ಕಾರ್ಯಗಳು ನಡೆಯಲು ಕಿಡ್ನಿ (ಮೂತ್ರಪಿಂಡ) ಅತಿ ಅವಶ್ಯಕ. ಇದು ದೇಹದಲ್ಲಿ ರಕ್ತದ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿಷಯುಕ್ತ ವಸ್ತುಗಳನ್ನು ಬೇರ್ಪಡಿಸುವುದು, ರಕ್ತದ ಒತ್ತಡ ಕಾಪಾಡುವುದು, ಹಾರ್ಮೋನ್‌ಗಳ ಬಿಡುಗಡೆಯಂತಹ ಅತಿಮುಖ್ಯವಾದ ಕೆಲಸಗಳನ್ನು ಕಿಡ್ನಿ ನಿರ್ವಹಿಸುತ್ತದೆ. ಕಿಡ್ನಿ ಸಮಸ್ಯೆ ಇಂದು ಯುವ ಪೀಳಿಗೆಯನ್ನೂ ಕಾಡುತ್ತಿದೆ.

ಕಿಡ್ನಿ ಕಾಯಿಲೆ ನಿಧಾನವಾಗಿ ಸದ್ದಿಲ್ಲದೆ ದೇಹದಲ್ಲಿ ಆರಂಭವಾಗುತ್ತದೆ ಮತ್ತು ವರ್ಷಗಳು ಉರುಳಿದಂತೆ ಕಿಡ್ನಿಯ ಕಾರ್ಯಕ್ಷಮತೆ ಕುಂಠಿತವಾಗಿ ಕೊನೆಗೆ ಕಿಡ್ನಿ ವೈಫಲ್ಯ ಉಂಟಾಗುತ್ತದೆ. ಇದನ್ನು ವೈದ್ಯಕೀಯವಾಗಿ ಐದು ಹಂತಗಳಲ್ಲಿ ಗುರುತಿಸಲಾಗುತ್ತದೆ. ಐದನೇ ಹಂತದಲ್ಲಿ ಹೊಸ ಕಿಡ್ನಿಯ ಜೋಡಣೆ ಅವಶ್ಯಕವಾಗಿ ಬೇಕಾಗುತ್ತದೆ. ಇಲ್ಲದಿದ್ದರೆ ರೋಗಿಯು ಸಾವಿಗೀಡಾಗುವ ಸಾಧ್ಯತೆ ಇದೆ. ಹಾಗಾಗಿ ಕಿಡ್ನಿ ಬಗ್ಗೆ ಹೆಚ್ಚು ಜಾಗರೂಕರಾಗಬೇಕಾದ ಅನಿವಾರ್ಯತೆಯಿದೆ.

ನಾಳೆ (ಮಾ.8) ವಿಶ್ವ ಕಿಡ್ನಿ ದಿನ. 2006ರಲ್ಲಿ `ಇಂಟರ್‌ನ್ಯಾಷನಲ್ ಸೊಸೈಟಿ ಆಫ್ ನ್ಯಾಚುರೋಥೆರಫಿ~ ಮತ್ತು `ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಕಿಡ್ನಿ ಫೌಂಡೇಷನ್~ ಜೊತೆಗೂಡಿ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮೊದಲ ಬಾರಿ ವಿಶ್ವ ಕಿಡ್ನಿ ದಿನವನ್ನು ಆಚರಿಸಿದವು. ಅಂದಿನಿಂದ ಮಾರ್ಚ್ ತಿಂಗಳ 2ನೇ ಗುರುವಾರ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ.

ಒಂದೊಂದು ವರ್ಷ ಒಂದೊಂದು ವಿಷಯ ಇಟ್ಟುಕೊಂಡು ಕಿಡ್ನಿ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ  ಕೆಲಸ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ `ಕಿಡ್ನಿ ಸ್ವೀಕರಿಸಿ ಮತ್ತು ಕಿಡ್ನಿ ದಾನಮಾಡಿ~ ಎಂಬ ವಿಷಯ ಇಟ್ಟು, ಕಿಡ್ನಿ ದಿನ ಆಯೋಜಿಸಲಾಗಿದೆ.

ವಿಶ್ವ ಕಿಡ್ನಿ ದಿನದ ಅಂಗವಾಗಿ ಜನಸಾಮಾನ್ಯರಲ್ಲಿ ಕಿಡ್ನಿ ಕಾಯಿಲೆ ಕುರಿತು ಅನೇಕ ಮಾಹಿತಿ, ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಕಿಡ್ನಿ ಫೌಂಡೇಷನ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

`1994ರ ಅಂಗಾಂಗ ಕಸಿ ಕಾಯ್ದೆ~ ಪ್ರಕಾರ ಕಿಡ್ನಿ ವೈಫಲ್ಯ ಹೊಂದಿದ ರೋಗಿಗೆ ಆತನ ಸಂಬಂಧಿಕರು ಮಾತ್ರ ಕಿಡ್ನಿ ದಾನ ಮಾಡಬೇಕೆಂಬ ನಿಯಮವಿದೆ. ಅಪಘಾತವಾದಾಗ, ಕಾಯಿಲೆ ಇಲ್ಲದ ಸ್ವಾಭಾವಿಕ ಸಾವಾಗಿದ್ದರೂ ಅಂಥವರ ಕಿಡ್ನಿಯನ್ನು ದಾನ ಮಾಡಬಹುದು. ಕೆಲವೊಮ್ಮೆ ಸಾವಿಗೀಡಾದವರ ಮಕ್ಕಳು ಕಿಡ್ನಿ ದಾನ ಮಾಡಲು ಒಪ್ಪದಿದ್ದರೆ ಕಿಡ್ನಿ ಪಡೆಯುವಂತಿಲ್ಲ. ಇಂಥ ಸಣ್ಣ ಹಾಗೂ ಮುಖ್ಯ ವಿಷಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎನ್ನುತ್ತಾರೆ ಬೆಂಗಳೂರು ಕಿಡ್ನಿ ಫೌಂಡೇಷನ್ ನಿರ್ದೇಶಕ ಎಂ.ವಿ.ಎನ್.ರಾಜ್.

ನಿಯಂತ್ರಣದಲ್ಲಿರದ ದೀರ್ಘಕಾಲಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ, ಕಿಡ್ನಿಯಲ್ಲಿ ಕಲ್ಲುಗಳು, ಗೌಟ್ (ಅತಿ ಹೆಚ್ಚಿನ ಯುರಿಕ್ ಆಮ್ಲ), ವಂಶವಾಹಿ ಸಮಸ್ಯೆ (ಜೆನೆಟಿಕ್ಸ್) ಮತ್ತು ಆಧುನಿಕ ಜೀವನಶೈಲಿ, ಅತಿಯಾಗಿ ನೋವುನಿವಾರಕ ಮತ್ತು ಇತರೆ ಮಾತ್ರೆಗಳ ನಿರಂತರ ಸೇವನೆ ಹಾಗೂ ಅತಿಹೆಚ್ಚು ಅಥವಾ ಕಡಿಮೆ ನೀರು ಕುಡಿಯುವುದರಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಾರೆ.

ನಗರದ ಒಟ್ಟು ಜನಸಂಖ್ಯೆಯ 25ರಷ್ಟು ಮಂದಿ 2ನೇ ಹಂತದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ 20ರಿಂದ 40 ವರ್ಷದೊಳಗಿನವರು ಕಿಡ್ನಿ ಸಮಸ್ಯೆಯೆಂದು ಬರುತ್ತಿದ್ದಾರೆ. ತಿಳವಳಿಕೆ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಿಡ್ನಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ರಾಜ್ ಹೇಳುತ್ತಾರೆ.

ಕಿಡ್ನಿ ದಿನದ ಪ್ರಯುಕ್ತ ಡಯಾಲಿಸ್ ರೋಗಿಗಳ ಪುನಶ್ಚೇತನ ಕಾರ್ಯಕ್ರಮ (ಟೋಟಲ್ ಡಯಾಲಿಸಿಸ್ ಕೇರ್   ಟಿಡಿಸಿ) ಆಯೋಜಿಸಲಾಗಿದೆ. ಈ ಯೋಜನೆಯಲ್ಲಿ ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತದೆ.

ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ವೈದ್ಯಕೀಯ ಸಲಹೆ-ಸೂಚನೆ ಕೊಡುವುದರ ಜೊತೆಗೆ ಪ್ರತಿರಕ್ಷಣೆಗೆ ಕ್ರಮಬದ್ಧವಾದ ಎರಿಥ್ರೋಪೊಯೆಟಿನ್ ಹಾಗೂ ಐಯನ್ ಸುಕ್ರೋಸ್ ಚುಚ್ಚುಮದ್ದುಗಳು, ಪೌಷ್ಟಿಕ ಆಹಾರ ಧಾನ್ಯ ವಿತರಿಸಲಾಗುತ್ತದೆ.

ರಂಗದೊರೆ ಮೆಮೋರಿಯಲ್ ಆಸ್ಪತ್ರೆ, ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚು ವೇಗದಲ್ಲಿ ಇಂದು ಹಲವಾರು ಕಿಡ್ನಿ ಸಮಸ್ಯೆಗಳು ಉಂಟಾಗುತ್ತಿವೆ. ಇದನ್ನು ಆರಂಭದ್ಲ್ಲಲೇ ಪತ್ತೆಹಚ್ಚಿದರೆ ನಿವಾರಣೆ ಸುಲಭ ಸಾಧ್ಯ. 

ವಿಶ್ವ ಕಿಡ್ನಿ ದಿನ

ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಟೋಟಲ್ ಡಯಾಲಿಸಿಸ್ ಕೇರ್ ಪ್ರಾಜೆಕ್ಟ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ರಂಗದೊರೆ ಮೆಮೋರಿಯಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಡಿ. ವಿಶ್ವನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸ್ಥಳ: ರಂಗದೊರೆ ಮೆಮೋರಿಯಲ್ ಆಸ್ಪತ್ರೆ, 1ನೇ ಕ್ರಾಸ್, ಪಂಪಮಹಾಕವಿ ರಸ್ತೆ,  ಶಂಕರಪುರಂ, ಬಸವನಗುಡಿ. ಬೆಳಿಗ್ಗೆ 10.30. ಮಾಹಿತಿಗೆ: 2666 4900

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.