ಕಿಣಿ... ಕಿಣಿ.. ಚೆಂಡಿನ ಸುತ್ತ!

ಸೋಮವಾರ, ಮೇ 27, 2019
24 °C

ಕಿಣಿ... ಕಿಣಿ.. ಚೆಂಡಿನ ಸುತ್ತ!

Published:
Updated:

ಕಿಣಿ..ಕಿಣಿ.. ಕಿಣಿ..ಜಣ..ಜಣ..ಸದ್ದಿನೊಂದಿಗೆ ಎನ್ನುತ್ತ ಪುಟಿಯುವ ಆ ಪ್ಲಾಸ್ಟಿಕ್ ಚೆಂಡಿನ ಸುತ್ತಲೂ ಬೆಳೆದಿರುವ ಜಗತ್ತು ಹಲವು ಕುತೂಹಲಗಳ ಸಂತೆ!

ಜಗತ್ತಿನ ಸೌಂದರ್ಯವನ್ನು ನೋಡುವ ಅವಕಾಶದಿಂದ ವಂಚಿತರಾದ ಅಂಧ ಯುವಕರನ್ನು ಕತ್ತಲಿಂದ ಬೆಳಕಿನತ್ತ ಒಯ್ಯುವ ದಿವ್ಯಮಂತ್ರ ಈ ಕಿಣಿ..ಕಿಣಿ.. ಸದ್ದು.ಅಚ್ಚ ಬಿಳಿಯ ಬಣ್ಣದ ಈ ಪ್ಲಾಸ್ಟಿಕ್ ಚೆಂಡಿನೊಳಗಿರುವ ಸೈಕಲ್ ಬಾಲ್‌ಬೇರಿಂಗ್‌ಗಳೇ ಈ ಆಟದ ಜೀವಾಳ. ಇದು ಅಂಧರ ಕ್ರಿಕೆಟ್‌ನ ಹುಟ್ಟು ಮತ್ತು ಬೆಳವಣಿಗೆಗೆ  ಕಾರಣವಾದ  ಸರಳ ಸೂತ್ರ.ದಸರಾ ಹಬ್ಬದ ಸಿದ್ಧತೆಯ ಭರದಲ್ಲಿ ತರಾತುರಿಯಿಂದ ಓಡಾಡುತ್ತಿರುವವರನ್ನೂ  ತನ್ನತ್ತ ಚುಂಬಕದಂತೆ ಸೆಳೆದುಕೊಂಡಿತ್ತು ಈ ಕಿಣಿ..ಕಿಣಿ.. ಕ್ರಿಕೆಟ್. ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆಯ ಆಶ್ರಯದಲ್ಲಿ ಸೆಪ್ಟೆಂಬರ್ 22 ರಿಂದ 25ರವರೆಗೆ `ಅರಮನೆನಗರಿ~ಯಲ್ಲಿ ನಡೆದ ಮೈಸೂರು ದಸರಾ ಕಪ್ 18ನೇ ರಾಷ್ಟ್ರಮಟ್ಟದ ಅಂಧರ ಕ್ರಿಕೆಟ್ ಟೂರ್ನಿಯು ಅಂಧರ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆಯಾಯಿತು.ರೈಲ್ವೆ ಮೈದಾನ, ಮಹಾರಾಜ ಕಾಲೇಜಿನ ಮೈದಾನಗಳಲ್ಲಿ ನಾಲ್ಕು ದಿನಗಳ ಕಾಲ ಕಿಣಿ,,ಕಿಣಿ..ಕಿಣಿ..ಠಪ್... ಫೋರ್...ಔಟ್.. ಸಿಕ್ಸರ್.. ಶಬ್ದಗಳದ್ದೇ ಪ್ರತಿಧ್ವನಿ. ಕರ್ನಾಟಕದ ಶೇಖರ್ ನಾಯ್ಕ ನಾಯಕತ್ವದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ವಲಯ ಮತ್ತು ಪಶ್ಚಿಮ ವಲಯ ತಂಡಗಳ ಆಟಗಾರರು ತಮ್ಮ ಸಾಮರ್ಥ್ಯ ಮೀರಿ ಪ್ರತಿಭೆ ಪ್ರದರ್ಶಿಸಿದ್ದರು.

 

ಈ ಎಲ್ಲ ಆಟಗಾರರೂ ಸಂಪೂರ್ಣ ಮತ್ತು ಭಾಗಶಃ ಅಂಧತ್ವ ಉಳ್ಳವರು. ಆದರೆ ಇವರ ಆತ್ಮವಿಶ್ವಾಸ, ಪರಿಶ್ರಮದ ಮುಂದೆ ನ್ಯೂನತೆ ಗೌಣವಾಗಿತ್ತು.ಈ ಕ್ರಿಕೆಟ್‌ನಲ್ಲಿ ಏನಿದೆ?: 1920ರ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಅಂಧರ ಕ್ರಿಕೆಟ್‌ಗೆ ಅಲ್ಲಿಯ ಕೆಲವು ಹಿರಿಯ ಕ್ರಿಕೆಟಿಗರೇ ಚಾಲನೆ ನೀಡಿದರು. ಈ ಕ್ರಿಕೆಟ್ ಕೂಡ ಸಾಮಾನ್ಯವಾಗಿ ಆಡುವ ಕ್ರಿಕೆಟ್‌ನಂತೆ ಇದ್ದು, ಕೆಲವು ನಿಯಮಗಳಲ್ಲಿ ಮಾರ್ಪಾಡು ಮಾಡಲಾಗಿದೆ.ಅಂಧರ ಕ್ರಿಕೆಟ್ ಆಡುವ ಮೈದಾನದ ಬೌಂಡರಿ 40 ಯಾರ್ಡ್‌ಗಳಿರುತ್ತದೆ. ಇಲ್ಲಿ ಅಂಡರ್ ಆರ್ಮ್ ಬೌಲಿಂಗ್ ಮಾಡಬೇಕು. ಸಾಮಾನ್ಯ ಕ್ರಿಕೆಟ್‌ನ ಅಳತೆಯ ಪಿಚ್ ಇಲ್ಲಿರುತ್ತದೆ. ಆದರೆ ಅದರ ನಟ್ಟನಡುವೆ ಒಂದು ಗೆರೆ ಹಾಕಿರುತ್ತಾರೆ. ಬೌಲರ್ ಎಸೆದ ಚೆಂಡು ಆ ಗೆರೆ ದಾಟಿ ಬೀಳುವಂತಿಲ್ಲ.

 

ಗೆರೆಗಿಂತಲೂ ಮೊದಲೇ ಪುಟಿತವಾಗಬೇಕು. ಸ್ಟಂಪ್‌ಗಳನ್ನು ಮುಟ್ಟುವ     ಬ್ಯಾಟ್ಸ್‌ಮನ್ ಕ್ರಿಸ್‌ನಲ್ಲಿ ತಮ್ಮ ಗಾರ್ಡ್ ತೆಗೆದುಕೊಳ್ಳುತ್ತಾರೆ.  ವಿಕೆಟ್ ಕೀಪರ್ ಕೂಡ  ಸ್ಟಂಪ್‌ಗಳನ್ನು ಸ್ಪರ್ಶಿಸಿ ತನ್ನ ಸ್ಥಾನವನ್ನು ನಿಗದಿಪಡಿಸಿಕೊಳ್ಳುತ್ತಾರೆ. ಈ ಆಟದಲ್ಲಿ ಅತ್ಯಂತ ರೋಚಕ ಪಾತ್ರ ಇರುವುದೇ ವಿಕೆಟ್ ಕೀಪರ್‌ನದ್ದು. ಕಿವಿಗಳು ಅತ್ಯಂತ ಚುರುಕಾಗಿರುವವರು ಮಾತ್ರ ಉತ್ತಮ ಕೀಪಿಂಗ್ ಮಾಡಲು ಸಾಧ್ಯ.ಬ್ಯಾಟ್ಸ್‌ಮನ್ ಬೀಟ್ ಆದಾಗ, ಫೀಲ್ಡರುಗಳು ಚೆಂಡು ಎಸೆದಾಗ ಹಿಡಿಯಲು ಅದರ ಶಬ್ದದ ಮೂಲಕ ಅರಿತುಕೊಂಡು ಕ್ಷಣಮಾತ್ರದಲ್ಲಿ  ಮುನ್ನುಗ್ಗುವ ಇವರ ಚಾಕಚಕ್ಯತೆ ಎಂತಹವರನ್ನೂ ಬೆರಗುಗೊಳಿಸುತ್ತದೆ. ಒಂದು ರನ್ ಓಡುವ ಬ್ಯಾಟ್ಸ್‌ಮನ್‌ಗೆ ಮತ್ತೊಂದು ರನ್ ಅನ್ನು ಬೋನಸ್ ಆಗಿ (ಒಟ್ಟು ಎರಡು ರನ್) ನೀಡಲಾಗುತ್ತದೆ. ಮೂರ‌್ನಾಲ್ಕು ಪುಟಿತವಾಗಿ ಬರುವ ಚೆಂಡನ್ನು ಸಿಕ್ಸರ್ ಎತ್ತುವ ಇವರ ಕಲೆಯನ್ನು ನೋಡಿಯೇ ಸವಿಯಬೇಕು.ಟೂರ್ನಿಯ ಮೊದಲ ದಿನ ದಕ್ಷಿಣ ವಲಯ ತಂಡದ ಕರ್ನಾಟಕದ ಬಲಗೈ    ಬ್ಯಾಟ್ಸ್‌ಮನ್ ಪ್ರಕಾಶ್  (85 ರನ್) ಸಿಡಿಸಿದ 4 ಸಿಕ್ಸರ್‌ಗಳು, ಅಜಯಕುಮಾರ್ ರೆಡ್ಡಿ ಗಳಿಸಿದ್ದ ಆರು ಸಿಕ್ಸರ್‌ಗಳು ಅದ್ಭುತವಾಗಿದ್ದವು. ಸ್ಕ್ವೇರ್ ಕಟ್, ಸ್ವೀಪ್ ಶಾಟ್‌ಗಳನ್ನೇ ಹೆಚ್ಚಾಗಿ ಆಡುವುದು ಇಲ್ಲಿ ಇನ್ನೊಂದು ವಿಶೇಷ.ಪಾಕ್‌ನೊಂದಿಗೆ ಸ್ನೇಹಹಸ್ತ: ಇದೇ ನವೆಂಬರ್‌ನಲ್ಲಿ ಪಾಕ್‌ನಲ್ಲಿ ನಡೆಯುವ ಟೂರ್ನಿಗೆ ತಂಡವನ್ನು ಕಳಿಸಲಾಗುತ್ತಿದೆ. ಆ ತಂಡವನ್ನು ಮೈಸೂರಿನಲ್ಲಿ ಅಯ್ಕೆ ಮಾಡಲಾಗುತ್ತಿದೆ. 

ವಿಶ್ವಕಪ್ ಟೂರ್ನಿ: ರಾಷ್ಟ್ರೀಯ ಅಂಧರ ಕ್ರಿಕೆಟ್ ಟೂರ್ನಿ ನೋಡಿ ಸಂಭ್ರಮಪಟ್ಟಿರುವ ಮೈಸೂರಿಗರಿಗೆ ಮುಂದಿನ ವರ್ಷ ಅಂಧರ ವಿಶ್ವಕಪ್ ಕ್ರಿಕೆಟ್ ನೋಡುವ ಅವಕಾಶ ಸಿಗಲಿದೆ.  2012ರ ಡಿಸೆಂಬರ್‌ನಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಅಂಧರ ವಿಶ್ವಕಪ್ ಟೂರ್ನಿ ನಡೆಯಲಿದೆ.ಅದಕ್ಕಾಗಿ ಸಿದ್ಧತೆಗಳೂ ಆರಂಭವಾಗಿವೆ. ಆಗ ವಿದೇಶಗಳಿಂದ ಬರುವ ತಂಡಗಳ ಆಟಗಾರರು, ಕಿಣಿ..ಕಿಣಿ.. ಚೆಂಡನ್ನು ಆಡುವ ರೀತಿಯ ಕೌತುಕ ಲೋಕವೂ ಅನಾವರಣಗೊಳ್ಳಲಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry