ಶುಕ್ರವಾರ, ಜೂನ್ 18, 2021
23 °C
ಮಂಗಳೂರು

ಕಿತ್ತು ಹೋಗಿದೆ ‘ಮಂಗಳಾ’ ಟ್ರ್ಯಾಕ್‌

ಪ್ರವೀಣ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಗೊಂಡಾಗ ಇಲ್ಲಿನ ಅಥ್ಲೀಟ್‌ಗಳು ಬಹುವರ್ಷದ ಕನಸು ಈಡೇರಿತೆಂದು ಸಂಭ್ರಮಪಟ್ಟಿದ್ದರು. ಆದರೆ,  ಒಂದೇ ವರ್ಷದಲ್ಲಿ ಈ ಸಿಂಥೆಟಿಕ್‌ ಟ್ರ್ಯಾಕ್‌ ಸರಿಯಾದ ನಿರ್ವಹಣೆ ಇಲ್ಲದೇ  ಸೊರಗುತ್ತಿದೆ. ಇದರ ಹಲವು ಭಾಗಗಳು ಕಿತ್ತುಹೋಗುತ್ತಿವೆ.‘ಇದಕ್ಕೆ ನಿಯಮಿತವಾಗಿ ನೀರುಣಿಸುವ ವ್ಯವಸ್ಥೆ ಇನ್ನೂ ಜಾರಿಯಾಗಿಲ್ಲ. ಒಳಚರಂಡಿ ಮೇಲೆ ಈ ಸಿಂಥೆಟಿಕ್‌ ಟ್ರ್ಯಾಕ್‌ ಹಾದುಹೋಗುವಲ್ಲಿ ನಿಗದಿತ ಪ್ರಮಾಣಕ್ಕಿಂತ ತೆಳುವಾಗಿ (15 ಮಿ.ಮೀ ಬದಲು  ಕೇವಲ 4 ಮಿ.ಮೀ. ಹಾಕಿದ್ದರು) ಸಿಂಥೆಟಿಕ್‌ ಹಾಕಿದ್ದು, ಅದು ಈಗಾಗಲೇ ಕಿತ್ತು ಹೋಗಿದೆ. ಹಾಗಾಗಿ ಈ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವುದು ಸಾಧ್ಯವಿಲ್ಲ. ಹಾಗಾಗಿ ಟ್ರ್ಯಾಕ್‌ ಕೇವಲ ಅಥ್ಲೀಟ್‌ಗಳ ಅಭ್ಯಾಸ ನಡೆಸುವುದಕ್ಕಷ್ಟೇ ಸೀಮಿತವಾಗಿದೆ. ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದರೂ ಈ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ’ ಎಂದು ದೂರುತ್ತಾರೆ ಜಿಲ್ಲೆಯ ಕ್ರೀಡಾಪ್ರೇಮಿಗಳು.‘ಟ್ರ್ಯಾಕ್‌ನಲ್ಲಿ ಏನೇ ಲೋಪ ಬಂದರೂ, ಏಳು ವರ್ಷ ಕಾಲ ಅದನ್ನು ಗುತ್ತಿಗೆದಾರರೇ ಸರಿಪಡಿಸಬೇಕು. ಸಿಂಥೆಟಿಕ್‌ ಕಿತ್ತು ಹೋಗಿರುವುದನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ’ ಎಂದು ಕ್ರೀಡೆ ಮತ್ತು ಯುವಸಬಲೀಕರಣ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್‌ ತಿಳಿಸಿದರು. ‘ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸುವಾಗಲೇ ಅದಕ್ಕೆ ನೀರುಣಿಸುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಅಳವಡಿಸಿಲ್ಲ. ಈಗ ನಾವು ಲಭ್ಯ ಸೌಕರ್ಯಗಳನ್ನು ಬಳಸಿಕೊಂಡು ಟ್ರ್ಯಾಕ್‌ಗೆ ವಾರಕ್ಕೆರಡು ಬಾರಿ ನೀರುಣಿಸುತ್ತಿದ್ದೇವೆ. ನೀರು ಸಂಗ್ರಹಣೆಗೆ ಬೇಕಾದ ಮೂಲಸೌಕರ್ಯದ  ಕೊರತೆಯೂ ಇದೆ’ ಎಂದೂ ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.