ಸೋಮವಾರ, ಡಿಸೆಂಬರ್ 16, 2019
17 °C

ಕಿತ್ತು ಹೋದ ರಸ್ತೆ: ಸಂಚಾರಕ್ಕೆ ಕಿರಿಕಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಪಟ್ಟಣದಿಂದ ಹಡಗಿನಾಳ ಗ್ರಾಮದ ಮೂಲಕ ಸಾಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಪ್ರಯಾಣಿಕರು, ವಾಹನ ಸವಾರರು ನಿತ್ಯವೂ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದಿಂದ ತಾಲ್ಲೂಕು ಕೇಂದ್ರಕ್ಕೆ ಹೋಗಲು ಈ ಹಿಂದೆ ಇದ್ದದ್ದು ಮಿಣಜಗಿ ಮಾರ್ಗ ಬಿಟ್ಟರೆ ಇನ್ನೊಂದು ಹಡಗಿನಾಳ ಗ್ರಾಮದ ಮಾರ್ಗ. ಮಿಣಜಗಿ ಮಾರ್ಗದಿಂದ ಮೂಕಿಹಾಳ ತಲುಪಲು 11ಕಿ.ಮೀ. ದೂರವಿದ್ದರೆ, ಹಡಗಿನಾಳ ಮಾರ್ಗದಿಂದ ಹೋದರೆ 5 ಕಿ.ಮೀ. ಅಂತರ ಕಡಿಮೆಯಾಗುತ್ತಿತ್ತು.ಜನತೆಯ ಬೇಡಿಕೆಯಂತೆ ಹಡಗಿನಾಳ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದ್ದರೂ  5ರಿಂದ 6 ಸಿಡಿಗಳು ಹಾಗೂ ಸೋಗಲಿ ಹಳ್ಳದ ಬಳಿಯ ನೆಲಮಟ್ಟದ ಸೇತುವೆ ನಿರ್ಮಾಣ ಮಾಡಿಲ್ಲದ ಕಾರಣ  ಭಾರಿ ವಾಹನಗಳು ಇಲ್ಲಿ ಸಂಚರಿಸುತ್ತಿರಲಿಲ್ಲ. ಕಳೆದ ವರ್ಷ ಪ್ರಧಾನಮಂತ್ರಿ ಗ್ರಾಮಿಣ ಸಡಕ್ ಯೋಜನೆಯಲ್ಲಿ  ರಸ್ತೆ ರಿಪೇರಿಯಾದ ಕಾರಣ ಇಲ್ಲಿ ಭಾರಿ ವಾಹನಗಳ ಜೊತೆಗೆ ಬಸ್‌ಗಳೂ ಸಹ ಸಂಚಾರ ಪ್ರಾರಂಭಿಸಿದವು. ಭಾರಿ ವಾಹನಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಪಟ್ಟಣ ಸೇರಲು ಮುಂದಿನ ಮೂರು ಕಿಲೋಮೀಟರ್ ರಸ್ತೆ ದುರಸ್ತಿಯಾಗದೇ ಹಾಗೇ ಉಳಿದಿದೆ. ನಿತ್ಯ ನೂರಾರು ವಾಹನಗಳ ಸಂಚಾರದ ಭರಾಟೆಯಿಂದ ಈ ರಸ್ತೆಯಲ್ಲಿ ಈಗ ಎಲ್ಲೆಡೆ ಬರೀ ತೆಗ್ಗುಗಳು, ಆಳದ ಕಂದಕಗಳು ಉಂಟಾಗಿವೆ.ರಸ್ತೆಯನ್ನು ದುರಸ್ತಿ ಮಾಡುವಂತೆ ಜನತೆ ಜಿ.ಪಂ. ಎಂಜಿನಿಯರಿಂಗ್ ವಿಭಾಗಕ್ಕೆ ಒತ್ತಾಯಿಸಿದರೆ ನಮ್ಮಲ್ಲಿ ಅನುದಾನವಿಲ್ಲ, ಅನುದಾನ ನೀಡಿದರೆ ದುರಸ್ತಿ ಮಾಡಬಹುದು ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದೆ ಆದರೆ ಇದು ಜಿಲ್ಲಾ ಮುಖ್ಯರಸ್ತೆಯಲ್ಲವೆಂಬ ಕಾರಣಕ್ಕೆ ದುರಸ್ತಿಗೆ ಮುಂದಾಗಲು ಅವಕಾಶವಾಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ಮೂಕಿಹಾಳ, ಮೊದಲಾದಡೆ ನಡೆದಿರುವ ಜನಸಂಪರ್ಕ ಸಭೆಗಳಲ್ಲಿ, ಗ್ರಾಮಸಭೆಗಳಲ್ಲಿ ಜನತೆ ಹಡಗಿನಾಳ ರಸ್ತೆಯನ್ನು ಜಿಲ್ಲಾಮುಖ್ಯರಸ್ತೆಯನ್ನಾಗಿಸಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿ  ಎಂದು ಜನತೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ನಿತ್ಯ ವಾಹನಗಳ ಭರಾಟೆ ಯಿಂದ ಹದಗೆಡುತ್ತಿರುವ ರಸ್ತೆ ಒಂದೆಡೆಯಾದರೆ, ಪಟ್ಟಣದಿಂದ ಡೋಣಿ ನದಿವರೆಗಿನ ಭಾರಿ ಇಳಿಜಾರಿನ ರಸ್ತೆಯ ಡಾಂಬರು, ಜೆಲ್ಲಿಕಲ್ಲು ಮಣ್ಣು ಕಿತ್ತು ಹೋಗಿ ಭಾರಿ ಅಪಾಯಕ್ಕೆ  ಆಹ್ವಾನ ನೀಡುವಂತಿದೆ.ತಾತ್ಕಾಲಿಕವಾಗಿ ಈ ಮೂರು ಕಿ.ಮೀ. ರಸ್ತೆಯಲ್ಲಿ ತೆಗ್ಗುಗಳಿಗೆ ಮಣ್ಣು ತುಂಬುವ  ಕಾರ್ಯವನ್ನು ತಾಲ್ಲೂಕು ಆಡಳಿತ ಗಮನಿಸಿ ಮಾಡಬೇಕೆನ್ನುವುದು ಜನತೆಯ ಬೇಡಿಕೆಯಾಗಿದೆ.

ಪ್ರತಿಕ್ರಿಯಿಸಿ (+)