ಗುರುವಾರ , ನವೆಂಬರ್ 21, 2019
21 °C

`ಕಿತ್ತೂರು ತಾಲ್ಲೂಕಿಗೆ ಸೇರಿಸದಿದ್ದರೆ ಚುನಾವಣೆಗೆ ಬಹಿಷ್ಕಾರ'

Published:
Updated:

ಚನ್ನಮ್ಮನ ಕಿತ್ತೂರು: ಖಾನಾಪುರ ತಾಲ್ಲೂಕಿನಲ್ಲಿರುವ ಬೋಗೂರು ಗ್ರಾಮವನ್ನು ನೂತನವಾಗಿ ರಚನೆಯಾಗಿ ರುವ ಕಿತ್ತೂರು ತಾಲ್ಲೂಕಿಗೆ ಸೇರ್ಪಡೆ ಮಾಡದಿದ್ದರೆ ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.ಸ್ಥಳೀಯ ವಿಶೇಷ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದ ಗ್ರಾಮಸ್ಥರು, `ಖಾನಾಪುರ ತಾಲ್ಲೂಕಿನ ಪೂರ್ವಭಾಗದ ಕೊನೆಯ ಊರಾಗಿರುವ ಬೋಗೂರು ಗ್ರಾಮವನ್ನು ಆಡಳಿತಾತ್ಮಕ ದೃಷ್ಟಿಯಿಂದ ಕಿತ್ತೂರು ತಾಲ್ಲೂಕಿಗೆ ಸೇರಿಸುವುದು ಸಮಂಜಸವಾಗಿದೆ' ಎಂದು  ಜೆಡಿಎಸ್ ಬೆಳಗಾವಿ ಜಿಲ್ಲಾ ಘಟಕದ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಆರ್. ಜಿ. ಹಿರೇಮಠ ತಿಳಿಸಿದರು.`ಕಿತ್ತೂರು ಕೇವಲ 10 ಕಿ.ಮೀ. ಅಂತರದಲ್ಲಿದೆ. ಈಗಿರುವ ಖಾನಾಪುರ 30 ಕಿ.ಮೀ. ದೂರದಲ್ಲಿದೆ. ದುಡಿದುಣ್ಣುವ ಶ್ರೀಸಾಮಾನ್ಯರೇ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ದೂರದ ಖಾನಾಪುರ ತಾಲ್ಲೂಕು ಕೇಂದ್ರಕ್ಕೆ ತೆರಳಿ ಕೆಲಸ ಪೂರೈಸಿಕೊಂಡು ಮರಳಿ ಬರಬೇಕಾದರೆ ಒಂದು ದಿನ ಪೂರ್ತಿ ಬೇಕಾ ಗುತ್ತದೆ. ಹೀಗಾಗಿ ಈಗಿರುವ ತಾಲ್ಲೂಕಿನಿಂದ ದುಡ್ಡಿನ ಜೊತೆ ಸಮಯ ನಷ್ಟವೂ ಆಗುತ್ತಿದೆ' ಎಂದು ಅವರು ವಿವರಿಸಿದರು.`ಅಚ್ಚ ಕನ್ನಡ ಮಾತನಾಡುವ ಜನ ಬೋಗೂರ ಗ್ರಾಮದಲ್ಲಿದ್ದಾರೆ. ಖಾನಾಪುರ ತಾಲ್ಲೂಕಿನಲ್ಲಿ ಈ ಜನರಿಗೆ ಭಾಷಾ ತೊಂದರೆಯೂ ಆಗುತ್ತಿದೆ. ಗುಮಾಸ್ತರು ಅಲ್ಲಿ ಮರಾಠಿ ಭಾಷೆ ಯಲ್ಲೇ ಹೆಚ್ಚಾಗಿ ವ್ಯವಹರಿಸುತ್ತಾರೆ. ಅವರು ಹೇಳುವುದು ಒಂದು, ನಾವು ತಿಳಿದುಕೊಳ್ಳುವುದು ಮತ್ತೊಂದು ಆಗುತ್ತಿದೆ. ಇದನ್ನೂ ಸಹ ಜಿಲ್ಲಾಧಿಕಾರಿ ಅವರು ಗಮನಿಸಬೇಕು' ಎಂದು ಹಿರೇಮಠ ಮನವಿ ಮಾಡಿಕೊಂಡರು.ವಿಶೇಷ ತಹಸೀಲ್ದಾರ ಅನುಪಸ್ಥಿತಿಯಲ್ಲಿ ಉಪತಹಶೀಲ್ದಾರ ಎಸ್.ಎಸ್. ಸಯ್ಯದ ಮನವಿ ಸ್ವೀಕರಿಸಿದರು. ಜೆಡಿಎಸ್ ಧುರೀಣ ಸಯ್ಯದ ಮನ್ಸೂರ, ಸಿ.ಜಿ. ಪಾಟೀಲ, ಅಡಿವೆಪ್ಪ ಮಾಟೊಳ್ಳಿ, ವೀರಭದ್ರಯ್ಯ ಬಳಮರ, ಅರ್ಜುನ ಬಾಜಪ್ಪನವರ, ಬಸವರಾಜ ತಳಮರ, ಬಸಪ್ಪ ಮುರಗೋಡ, ಮಹಾಂತೇಶ, ಮಾರುತಿ ಇಟಗಿ, ಬಸು ನಿಲಜಗಿ, ಕಲ್ಮೇಶ್ವರ ಯುವಕ ಮಂಡಳದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)