ಶುಕ್ರವಾರ, ಫೆಬ್ರವರಿ 26, 2021
31 °C

ಕಿನ್ನರದಲ್ಲಿ ‘ಮತ್ಸ್ಯ ಬೇಟೆ’ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿನ್ನರದಲ್ಲಿ ‘ಮತ್ಸ್ಯ ಬೇಟೆ’ ಸಂಭ್ರಮ

ಕಾರವಾರ: ತಾಲ್ಲೂಕಿನ ಕಿನ್ನರ ಗ್ರಾಮದಲ್ಲಿ ಬುಧವಾರ ಒಂದು ರೀತಿಯ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಈ ಸಂಭ್ರಮಕ್ಕೆ ಕಾರಣವಾಗಿದ್ದು ಕಾಳಿನದಿಯ ಹಿನ್ನೀರಿನಲ್ಲಿ ನಡೆದ ಮತ್ಸ್ಯಗಳ ಬೇಟೆ.ವರ್ಷಕ್ಕೊಮ್ಮೆ ನಡೆಯುವ ಈ ಮೀನುಗಳ ಬೇಟೆಯಲ್ಲಿ ಗ್ರಾಮದ ನೂರಾರು ಮಂದಿ ಭಾಗವಹಿಸಿದ್ದರು. ಬಲೆಗಳನ್ನು ಹಿಡಿದು ನೀರಿಗಿಳಿದವರು ಕೈಗೆ ಸಿಕ್ಕಷ್ಟು ಮೀನುಗಳನ್ನು ಬಾಚಿಕೊಂಡರು. ಎಲ್ಲರೂ ಇದೊಂದು ಮೀನು ಹಬ್ಬವಾಗಿ ಆಚರಿಸಿದರು. ಚಿಕ್ಕವರು, ದೊಡ್ಡವರು ಎನ್ನದೇ ನೀರಿಗೆ ಇಳಿದು ಮೀನು ಹಿಡಿದರು. ಇನ್ನು ಕೆಲವರು ಸಾಂಪ್ರದಾಯಿಕ ದೋಣಿ ಬಳಸಿ ಮೀನು ಹಿಡಿಯುತ್ತಿದುದು ಕಂಡುಬಂತು. ಜಾತ್ರೆಯಲ್ಲಿ ಸೇರುವ ಹಾಗೆ ಜನರು ಹಿನ್ನೀರಿನಲ್ಲಿ ನೆರೆದಿದ್ದರು.ಗ್ರಾಮದ ಗಿಂಡಿ ದೇವಸ್ಥಾನ ಬಳಿಯಿರುವ ಕಾಳಿ ನದಿ ಹಿನ್ನೀರು ಪ್ರದೇಶದಲ್ಲಿ ಒಂದು ವರ್ಷಗಳ ಕಾಲ ಯಾರು ಸಹ ಮೀನುಗಾರಿಕೆ ಮಾಡುವುದಿಲ್ಲ. ಇದರಿಂದ ಇಲ್ಲಿ ಮೀನುಗಳು ಸೊಂಪಾಗಿ ಬೆಳೆದಿರುತ್ತವೆ. ನೊಗಲಿ, ಮಡ್ಲೆ, ಕುರುಡೆ, ತಾಂಬುಸ್, ಸಿಗಡಿ, ಭುರಾಟೆ, ಕಾಗಳಸಿ, ಗೊಳಸು ಮುಂತಾದ ಜಾತಿಯ ಮೀನುಗಳು ಇಲ್ಲಿ ಸಿಗುತ್ತವೆ.

ಇಲ್ಲಿ ಗ್ರಾಮಸ್ಥರು ಬೇಟೆಯಾಡಲು ಒಂದು ಷರತ್ತನ್ನು ವಿಧಿಸಲಾಗಿದೆ. ಬೇಟೆಯಾಡಿದ ಮೀನಿನಲ್ಲಿ ಅರ್ಧಪಾಲನ್ನು ದೇವರಿಗೆಂದು ಕೊಡಬೇಕು. ಅದನ್ನು ದೇವಸ್ಥಾನ ಸಮಿತಿಯವರು ಹರಾಜು ಹಾಕುತ್ತಾರೆ. ಅದರಿಂದ ಬಂದ ಹಣವನ್ನು ದೇವಸ್ಥಾನದ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ.‘ಪ್ರತಿ ವರ್ಷದ ಮೇ ತಿಂಗಳ ಆರಂಭದಲ್ಲಿ ಇಲ್ಲಿ ಮೀನುಗಳ ಬೇಟೆ ನಡೆಯುತ್ತದೆ. ಬೇಟೆಯಲ್ಲಿ ವಿವಿಧ ಜಾತಿಯ ಹಾಗೂ ವಿವಿಧ ಗಾತ್ರದ ಮೀನುಗಳ ಸಿಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಹೀಗೆ ಒಟ್ಟಾಗಿ ಮೀನು ಹಿಡಿಯುವುದರಿಂದ ಒಂದು ರೀತಿಯ ಖುಷಿ ಸಿಗುತ್ತದೆ’ ಎನ್ನುತ್ತಾರೆ ಗ್ರಾಮದ ರಮೇಶ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.