ಕಿಮ್ಮನೆಗೆ ಕೃತಜ್ಞತೆಯ ಆತಿಥ್ಯ!

7

ಕಿಮ್ಮನೆಗೆ ಕೃತಜ್ಞತೆಯ ಆತಿಥ್ಯ!

Published:
Updated:
ಕಿಮ್ಮನೆಗೆ ಕೃತಜ್ಞತೆಯ ಆತಿಥ್ಯ!

ಭದ್ರಾವತಿ: ಬದುಕುಳಿದ ಕುಟುಂಬ ತಮ್ಮನ್ನು ರಕ್ಷಿಸಿದವರಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭ ಅದಾಗಿತ್ತು. ಕೆಲವರು ಆ ಭಯಾನಕ ಕ್ಷಣವನ್ನು ದುಃಸ್ವಪ್ನದಂತೆ ನೆನಪಿಸಿಕೊಂಡರೆ, ಸಾವಿನ ಅಂಚಿನಿಂದ ಬದುಕಿದ ಹಿರಿಯರಲ್ಲಿ ಕೆಲವರು ಭಾವುಕ ರಾಗಿದ್ದರು.



ಇಲ್ಲಿನ ಹೊಸಮನೆ ಉದಯ ಕುಮಾರ್‌ ಕುಟುಂಬ ಕಳೆದ ಮಂಗಳ ವಾರ ಕಾರಿನಲ್ಲಿ ಕಾರ್ಕಳದಿಂದ ಬರುತ್ತಿದ್ದ ವೇಳೆ ತೀರ್ಥಹಳ್ಳಿ ಸಮೀಪದ ಬೇಗುವಳ್ಳಿ ಕೆರೆಯಲ್ಲಿ ಮುಳುಗಿದಾಗ ಹಿಂದೆಯೇ ಬರುತ್ತಿದ್ದ ಸಚಿವರು ಹಾಗೂ ಅವರ ಬೆಂಗಾವಲು ಪಡೆ ರಕ್ಷಿಸಿತ್ತು. ತಮ್ಮನ್ನು ರಕ್ಷಿಸಿದ ಸಚಿವರು ಹಾಗೂ ಅವರ ಸಿಬ್ಬಂದಿಯನ್ನು ಸತ್ಕರಿಸಲು ಮುಂದಾದ ಉದಯ ಕುಮಾರ್‌ ಕುಟುಂಬ ಶನಿವಾರ ಬೆಳಿಗ್ಗೆ ಅವರನ್ನು ತಮ್ಮ ಮನೆಗೆ ಆಹ್ವಾ ನಿಸಿದ ಸಂದರ್ಭದಲ್ಲಿ ಸಚಿವರು ಹೇಳಿದ ಮಾತುಗಳ ಸಾಲು ಹೀಗಿತ್ತು.



‘ಏಳು ಜನರಲ್ಲಿ ಒಬ್ಬರು ಉಳಿಯ ದಿದ್ದರೂ ನಾನು ಇಂದು ಈ ಸಂತಸ ಹಂಚಿಕೊಳ್ಳಲು ಇಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಾ ದೇವರ ದಯೆ’ ಎಂದು ಸಚಿವ ಕಿಮ್ಮನೆ ಮಾತು ಆರಂಭಿಸಿದರು. ಮೃತ್ಯುಕೂಪದಿಂದ ಗೆದ್ದು ಬಂದ ಪುಟಾಣಿಗಳಾದ ಸಿಂಚನ್‌, ವೈಷ್ಣವ್‌ ಅವರನ್ನು ತೊಡೆಯ ಮೇಲೆ ಕೂರಿಸಿ ಕೊಂಡು ಅವರ ತಲೆ ನೇವರಿಸುತ್ತಾ ಹೇಳಿದ ಮಾತುಗಳು ನೆರೆದಿದ್ದ ಮಂದಿಯಲ್ಲಿ ಭಯಾನಕ ಚಿತ್ರಣ ತೆರೆದಿಟ್ಟಿತ್ತು.



ಸಚಿವರ ಬರುವಿಕೆಗೆ ಕಾದ ಕುಟುಂಬದಲ್ಲಿ ಒಂದೆಡೆ ಉತ್ಸಾಹ, ಮತ್ತೊಂದೆಡೆ ಕಾತುರತೆ ಎದ್ದು ಕಾಣುತ್ತಿತ್ತು. ಸಚಿವರು ಇಳಿದ ಕೂಡಲೇ ಪುಟಾಣಿ ಸಿಂಚನ್‌ ಗುಲಾಬಿ ನೀಡಿ ಸ್ವಾಗತಿಸಿದರೆ, ಉಳಿದವರು ಚಪ್ಪಾಳೆ ಹಾಕಿ ಸಂಭ್ರಮಿಸಿದರು.

ಮನೆ ಒಳಗೆ ಕುಳಿತ ಕೂಡಲೇ ತಮ್ಮ ಬೆಂಗಾವಲು ಪಡೆಯನ್ನು ಅಕ್ಕಪಕ್ಕದಲ್ಲೇ ಕೂರಿಸಿಕೊಂಡ ಸಚಿವರು, ಮನೆಯವರು ನೀಡಿದ ಅತಿಥ್ಯ ಸ್ವೀಕರಿಸಿದರು. ಜತೆಯಲ್ಲಿದ್ದ ಸಿಬ್ಬಂದಿ ಸಂಕೋಚದಿಂದಲೇ ಎಲ್ಲವನ್ನು ಸ್ವೀಕರಿಸುವ ಜತೆಗೆ ‘ನಮ್ಮ ಸಾಹೇಬರ ಸಲಹೆ, ಸಹಕಾರ ಇದಕ್ಕೆ ಕಾರಣ’ಎಂದು ಹೇಳುವುದನ್ನು ಮರೆಯಲಿಲ್ಲ.



ಉದಯಕುಮಾರ್‌ ಪತ್ನಿ ಸುಮಾ ಅವರು ಬಡಿಸಿದ ನೀರುದೋಸೆ, ಕಾಯಿಚಟ್ನಿ ಹಾಗೂ ಕೇಸರಿಬಾತ್‌ ಸವಿದ ಸಚಿವರು ಹಾಗೂ ಸಿಬ್ಬಂದಿ, ‘ದೇವರು ದೊಡ್ಡವನು. ನಿಮ್ಮನ್ನು ಪಾರು ಮಾಡಿದ್ದಾನೆ. ಮುಂದಿನ ಜವಾಬ್ದಾರಿ ನಿಮ್ಮ ಮೇಲೆಯೇ ಇದೆ’ ಎಂದು ಹೇಳುತ್ತಾ, ಹೂನಗೆ ಚೆಲ್ಲಿ ಅಲ್ಲಿಂದ ಹೊರ ನಡೆದರು.



ಬೆಂಗಾವಲು ಪಡೆಯ ಕೃಷ್ಣಮೂರ್ತಿ, ಶೇಖರಪ್ಪ, ಹಾಲೇಶ್‌ ಹಾಗೂ ಚಾಲಕ ಚಂದ್ರು ಅವರನ್ನು ಮನದುಂಬಿ ಅಭಿನಂದಿಸಿದ ಕುಟುಂಬ ಹಾಗೂ ನೆರೆದಿದ್ದ ಮಂದಿ ‘ನಿಮ್ಮ ಸೇವೆ ಈ ಮನೆಯ ಸಂತೋಷ ಹೆಚ್ಚು ಮಾಡಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry