ಶನಿವಾರ, ಮೇ 21, 2022
26 °C

ಕಿರುತೆರೆಯಲ್ಲಿ ಅಮೀರ್ ಕಹಾನಿ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಅಮಿತಾಬ್ ಬಚ್ಚನ್, ಶಾರೂಖ್, ಸಲ್ಮಾನ್, ಅಭಿಷೇಕ್ ಬಚ್ಚನ್, ಅಕ್ಷಯ್ ಕುಮಾರ್, ರಾಣಿ ಮುಖರ್ಜಿ ಹೀಗೆ ಬೆಳ್ಳಿ ಪರದೆಯಲ್ಲಿ ರಾರಾಜಿಸಿದ ಬಾಲಿವುಡ್‌ನ ಪ್ರಖರ ವರ್ಚಸ್ಸಿನ ತಾರೆಗಳೆಲ್ಲಾ ಟೀವಿ ಪರದೆ ಮೇಲೆ ಕಾಣಿಸಿಕೊಂಡು ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸುವುದರ ಜೊತೆಗೆ ಮತ್ತಷ್ಟು ಪ್ರಚಾರವನ್ನೂ ಗಿಟ್ಟಿಸಿದ್ದಾಯ್ತು.

 

ಐಟಂ ಬೆಡಗಿ ರಾಖಿ ಸಾವಂತ್‌ರಂತಹವರೂ ಲಕ್ಷಾಂತರ ವೀಕ್ಷಕರನ್ನು ಟೀವಿ ಮುಂದೆ ಕೂರುವಂತೆ ಮಾಡಿದ್ದಾರೆ. ಹೀಗಿರುವಾಗ ಬಾಲಿವುಡ್‌ನ `ಮಿ.ಪರ್ಫೆಕ್ಷನಿಸ್ಟ್~ ಅಮೀರ್‌ಖಾನ್ ಇನ್ನೂ ಯಾಕೆ ಇತ್ತ ಸುಳಿದಿಲ್ಲ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಈ ಕುತೂಹಲಕ್ಕೆ ತೆರೆ ಎಳೆಯಲು ಅಮೀರ್ ಮುಂದಾಗಿದ್ದಾರೆ. ಅರ್ಥಾತ್ ಕಿರುತೆರೆಯಲ್ಲಿ  ಕಾಣಿಸಿಕೊಳ್ಳಲು ತಯಾರಾಗಿದ್ದಾರೆ.ಟಾಕ್ ಷೋ, ರಿಯಾಲಿಟಿ ಷೋ, ಗೇಮ್ ಷೋ, ಚಾಟ್ ಷೋ ಇವ್ಯಾವುದೂ ಅಲ್ಲದ ವಿಶಿಷ್ಟ ಬಗೆಯ ಕಾರ್ಯಕ್ರಮವನ್ನು ಅಮೀರ್ ಸ್ಟಾರ್‌ಪ್ಲಸ್ ಚಾನೆಲ್‌ನಲ್ಲಿ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮ ನಡೆಸಿಕೊಡುವಂತೆ ಚಾನೆಲ್‌ಗಳು ಅವರಿಗೆ ಮುಗಿಬ್ದ್ದಿದಿದ್ದವಂತೆ.ಕಿರುತೆರೆಗೆ ಕಾಲಿಡುವ ಆಸೆ ಅಮೀರ್ ಅವರಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಮೊಳಕೆಯೊಡೆದಿತ್ತಂತೆ. ಆದರೆ ನಾನು ನಡೆಸುವ ಕಾರ್ಯಕ್ರಮವನ್ನು ಯಾರೂ ನಡೆಸಿರಬಾರದು. ಇದು ಕಾಲಹರಣದ, ಮನರಂಜನೆಗೆ ಸೀಮಿತವಾಗುವ ಷೋ ಆಗಬಾರದು ಎಂಬ ಭಾವ ಅವರದು.

 

ಅದು ಇಡೀ ದೇಶವನ್ನು ಉತ್ತೇಜಿಸಬೇಕು, ಜನಸಾಮಾನ್ಯರ ಬದುಕನ್ನು ಬದಲಿಸಬೇಕು, ಪ್ರತಿ ಭಾರತೀಯನ ಹೃದಯವನ್ನು ಸ್ಪರ್ಶಿಸಬೇಕು, ಕೋಟ್ಯಂತರ ಕನಸುಗಳಿಗೆ ಸ್ಫೂರ್ತಿ ನೀಡಬೇಕು ಎಂಬ ಆಶಯ ಅವರದ್ದು. ಇದು ಭಾರತ ಮತ್ತು ಭಾರತೀಯನ ಕುರಿತ ಕಥೆಯೇ ಆಗಿರುತ್ತದೆ.ವರ್ಷಗಳ ಹಿಂದೆಯೇ ಅವರಲ್ಲಿ ಚಿಗುರೊಡೆದ ಕಲ್ಪನೆ ಈಗ ಹೆಮ್ಮರವಾಗಿದೆ. ಅದಕ್ಕೊಂದು ರೂಪುರೇಷೆ ನೀಡುವ ಕೆಲಸ ಆರಂಭಿಸಿದ್ದಾರೆ. ಬರುವ ವರ್ಷ ಶೀಘ್ರದಲ್ಲಿಯೇ ಕಾರ್ಯಕ್ರಮ ಆರಂಭಿಸುವ ಬಯಕೆ ಸ್ಟಾರ್‌ಪ್ಲಸ್‌ನದ್ದು.ಕಿರುತೆರೆಗೆ ತಮ್ಮ ಪದಾರ್ಪಣೆಯ ಕುರಿತ ಕಾರ್ಯಕ್ರಮದ ವಿವರ ನೀಡಲು ಅಮೀರ್ ಮುಂಬೈನಲ್ಲಿ ಕರೆದ ಸುದ್ದಿಗೋಷ್ಠಿಗೂ ಒಂದು ಅದ್ದೂರಿತನವಿತ್ತು. ಸುದ್ದಿಗಾರರ ಪ್ರಶ್ನೆಗಳಿಗೆ ಅಮೀರ್ ಸಾವಧಾನದಿಂದ ಉತ್ತರಿಸಿದರು. ಅಂದಹಾಗೆ, ಯಾವ ಪ್ರಕಾರಕ್ಕೂ ಸೇರದ ಈ ಕಾರ್ಯಕ್ರಮಕ್ಕೆ ಏನೆಂದು ನಾಮಕರಣ ಮಾಡಬೇಕೆಂಬ ಗೊಂದಲ ಅವರನ್ನು ಕಾಡುತ್ತಿದೆಯಂತೆ.

 

ವಿಶೇಷವೆಂದರೆ ಅಮೀರ್ ಒತ್ತಾಸೆಯಂತೆ ಈ ಕಾರ್ಯಕ್ರಮ ಹಿಂದಿಯಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಮತ್ತು ಭಾರತದ ಇತರ ಏಳು ಭಾಷೆಗಳಲ್ಲಿಯೂ ಪ್ರಸಾರವಾಗಲಿದೆ. ಸ್ಟಾರ್ ಸಮೂಹದೊಂದಿಗೆ ಪಾಲುದಾರಿಕೆ ಹೊಂದಿರುವ `ಸುವರ್ಣ ವಾಹಿನಿ~ಯಲ್ಲಿ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.ತಮ್ಮ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಬಗ್ಗೆ ಮಾತಿಗಿಳಿದ ಅಮೀರ್‌ಖಾನ್ ಪ್ರಶ್ನೆಗಳಿಗೆ ಉತ್ತರಿಸಿದ್ದು ಹೀಗೆ:ಕಿರುತೆರೆಗೆ ಮೊದಲ ಬಾರಿ ಪ್ರವೇಶ ಮಾಡುತ್ತಿರುವುದು ಹೇಗೆನ್ನಿಸುತ್ತಿದೆ?

ಇದು ನನಗೆ ವೈಯಕ್ತಿಕವಾಗಿ ಒಂದು ಪಯಣ. ನಮ್ಮನ್ನು ಉತ್ತೇಜಿಸುವ ಅನ್ವೇಷಣೆ, ಬದಲಾವಣೆ, ಭಾವನೆ, ಹೃದಯಸ್ಪರ್ಶಿ ಮಾನವೀಯ ಕಥೆಗಳೊಂದಿಗಿನ ಪಯಣ. ಕೇವಲ ಸ್ಟುಡಿಯೋದೊಳಗೆ ಕುಳಿತು ಕಾರ್ಯಕ್ರಮ ನಡೆಸುವುದಿಲ್ಲ. ಬದಲಿಗೆ ಇಡೀ ಭಾರತವನ್ನು ಸುತ್ತುತ್ತೇನೆ. ವಿವಿಧ ವ್ಯಕ್ತಿತ್ವದ ಜನರನ್ನು ಸಂಪರ್ಕಿಸುತ್ತೇನೆ.ಅವರೊಂದಿಗೆ ಬೆರೆಯುತ್ತೇನೆ, ಮಾತನಾಡಿಸುತ್ತೇನೆ. ಸಂಭ್ರಮಿಸುತ್ತೇನೆ, ನೋವಿಗೆ ದನಿಗೂಡಿಸುತ್ತೇನೆ. ದೇಶದ ಯಾವುದೋ ಮೂಲೆಯ ವ್ಯಕ್ತಿಯೊಬ್ಬ ನನ್ನಿಂದಾಗಿ ಇನ್ನೊಂದು ಮೂಲೆಯಲ್ಲಿರುವ ವ್ಯಕ್ತಿಗೆ ಪ್ರೇರಣೆಯಾಗಬಲ್ಲನಾದರೆ ಅದಕ್ಕಿಂತ ಬೇರೆ ಸಂತೋಷ ಇನ್ನೇನಿದೆ?

 

ಜನರ ನಡುವಿನ ರಾಯಭಾರಿಯಾಗುವ ಈ ಅನುಭವ ನಿಜವಾಗಿಯೂ ರೋಮಾಂಚನ ಉಂಟುಮಾಡುತ್ತಿದೆ. ದೊಡ್ಡ ಸವಾಲು ಕೂಡ. ಹೀಗಾಗಿ 22 ವರ್ಷದ ಹಿಂದೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾಗ ಹೇಗೆ ನರ್ವಸ್ ಆಗಿದ್ದೆನೋ ಈಗ ಅದಕ್ಕಿಂತ ಹತ್ತು ಪಟ್ಟು ಹೆಚ್ಚು ನರ್ವಸ್ ಆಗಿದ್ದೇನೆ.

ಜನರನ್ನು ಸ್ಫೂರ್ತಿಗೊಳಿಸುವ ಈ ಕಾರ್ಯಕ್ರಮದ ಹಿಂದಿನ ಸ್ಫೂರ್ತಿ ಯಾವುದು?

ಜನರು. ನಮ್ಮ ದೇಶ ಸಾಂಸ್ಕೃತಿಕವಾಗಿ ಮತ್ತು ಪ್ರಾದೇಶಿಕವಾಗಿ ವೈವಿಧ್ಯಮಯವಾಗಿದೆ. ಇಲ್ಲಿನ ಸಾಮಾನ್ಯ ಜನರ ಬದುಕಿನತ್ತ ಸುಮ್ಮನೆ ದೃಷ್ಟಿ ಹಾಯಿಸಿದರೆ ಸಾಕು ನೂರಾರು ಹೊಸ ಯೋಚನೆಗಳು ಮನಸಿಗೆ ಬರುತ್ತವೆ. ನಾನು ಎಲ್ಲೇ  ಇದ್ದಾಗಲೂ, ಯಾವುದೇ ಕೆಲಸದಲ್ಲಿ ಬ್ಯುಸಿಯಾಗಿದ್ದಾಗಲೂ ಸುತ್ತಮುತ್ತ ನಡೆಯುವ ಘಟನೆಗಳ ಬಗ್ಗೆ ಕೇಳುತ್ತೇನೆ.ಅವುಗಳ ಬಗ್ಗೆ ಆಲೋಚಿಸುತ್ತೇನೆ. ಸಾಮಾನ್ಯ ಮನುಷ್ಯನೊಬ್ಬ ಏನಾದರೂ ಸಾಧಿಸಿದ್ದನ್ನು ಕೇಳಿದರೆ ಅದು ನನ್ನ ಮನಸಿನಲ್ಲಿ ಆಳವಾಗಿ ಬೇರೂರುತ್ತದೆ. ಹೀಗೆ ಕೇಳಿದ್ದನ್ನೇ ಹಲವು ಬಾರಿ ಸಿನಿಮಾಗಳಲ್ಲಿ ಅಳವಡಿಸಿದ್ದೇನೆ. ಹಣ ನೀಡಿದರೆ ಒಬ್ಬರಿಗೆ ಸಹಾಯವಾಗಬಹುದು.

 

ಆದರೆ ನನಗೆ ಸ್ಫೂರ್ತಿ ನೀಡುವ ಇಂತಹ ಅನೇಕ ಅಂಶಗಳು ಕೋಟ್ಯಂತರ ಜನಸಾಮಾನ್ಯರಿಗೆ ಸ್ಫೂರ್ತಿಯಾಗುತ್ತದೆ. ಇದರಿಂದ ಭಾರತ ಬದಲಾಗುತ್ತದೆ ಎಂಬ ಆಶಯ ನನ್ನದು.ಕಾರ್ಯಕ್ರಮದ ಉದ್ದೇಶ ಈಡೇರುವುದೇ?

ನಂಬಿಕೆ ಇದೆ. ಟೀವಿ ಅತ್ಯಂತ ಪ್ರಭಾವಶಾಲಿ ಮಾಧ್ಯಮ ಎಂಬ ಅರಿವು ನನಗಿದೆ. ಇದು ಜನಸಾಮಾನ್ಯರನ್ನು ಸಂಪರ್ಕಿಸುವ ಕಾರ್ಯಕ್ರಮ. ಜನರ ನೋವು ನಲಿವುಗಳನ್ನು, ಸಾಧನೆ ಸಂಕಷ್ಟಗಳನ್ನು ಅವರಿಂದಲೇ ತಿಳಿಸಿದಾಗ ವೀಕ್ಷಕರನ್ನು ಮುಟ್ಟುತ್ತದೆ.ಕಾರ್ಯಕ್ರಮ ನಡೆಸುವಾಗ ಸೂಕ್ತ ಅಧ್ಯಯನ ಮಾಡಲಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡುತ್ತೇವೆ. ಸಂಸ್ಕೃತಿ, ಸಂಪ್ರದಾಯ, ವೃತ್ತಿಗಳ ಜೊತೆಗೆ ಮನರಂಜನೆಯನ್ನೂ ಹದವಾಗಿ ಬೆರೆಸುತ್ತೇವೆ. ಪ್ರಯತ್ನ ಖಂಡಿತ ಸಫಲವಾಗುತ್ತದೆ ಎಂಬ ಭರವಸೆ ಇದೆ.ಟೀವಿ ಕಾರ್ಯಕ್ರಮ ಸಿನಿಮಾ ಬದುಕಿಗೆ ಅಡ್ಡಿಯಾಗುವುದಿಲ್ಲವೇ?


ಖಂಡಿತಾ ಇಲ್ಲ. ರೀಮಾ ಕಗ್ತಿ ನಿರ್ದೇಶನದಲ್ಲಿ ರಾಣಿ ಮುಖರ್ಜಿ ಮತ್ತು ಕರೀನಾ ಕಪೂರ್ ಜೊತೆಗೂಡಿ ನಟಿಸುತ್ತಿರುವ `ದಿ ಆ್ಯಕ್ಟ್ ಆಫ್ ಮರ್ಡರ್~ ಚಿತ್ರದ ಚಿತ್ರೀಕರಣ ಸ್ವಲ್ಪ ಮಾತ್ರ ಬಾಕಿ ಇದೆ. `ಧೂಮ್ 3~ ಚಿತ್ರೀಕರಣ ಶುರುವಾಗುವುದು ಮುಂದಿನ ವರ್ಷದ ಜುಲೈ ಬಳಿಕ. ಅಲ್ಲಿಯವರೆಗೂ ನನಗೆ ಬಿಡುವು. ನನ್ನ ಸಿನಿಮಾ ಬದುಕಿನ ಜೊತೆಗೇ ಇದನ್ನು ತೆಗೆದುಕೊಳ್ಳುತ್ತೇನೆ.ಬೇರೆ ಯಾವುದಾದರೂ ಕಾರ್ಯಕ್ರಮದಿಂದ ಇದು ಪ್ರೇರಣೆ ಪಡೆದಿದೆಯೇ?


ಇಲ್ಲ. ಬೇರೆ ಯಾವ ದೇಶದಲ್ಲೋ ಯಾವ ಭಾಷೆಯಲ್ಲೋ ಈ ರೀತಿ ಕಾರ್ಯಕ್ರಮ ಪ್ರಸಾರವಾಗುತ್ತಿದೆಯೋ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಟೀವಿ ಕಾರ್ಯಕ್ರಮಗಳನ್ನು ನೋಡುವುದೇ ಅಪರೂಪ. ಇದು ನನ್ನಲ್ಲೇ ನಾಲ್ಕು ವರ್ಷದ ಹಿಂದೆಯೇ ಮೊಳಕೆಯೊಡೆದ ಪರಿಕಲ್ಪನೆ.ನಿಮ್ಮ ಷೋನಲ್ಲಿ ಶಾರೂಖ್, ತೆಂಡೂಲ್ಕರ್‌ರಂತಹ ಸೆಲೆಬ್ರಿಟಿಗಳು ಬರುತ್ತಾರೆಯೇ?

ಬರಬಹುದು. ಇದು ಮುಖ್ಯವಾಗಿ ಬಡ ಮತ್ತು ಮಧ್ಯಮವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಮಾಡುವ ಕಾರ್ಯಕ್ರಮ. ಭಾಗವಹಿಸುವವರೂ ಹೆಚ್ಚಾಗಿ ಅದೇ ವರ್ಗದವರು. ಆದರೆ ಪ್ರೇರಣೆ ನೀಡಬಲ್ಲ ಸೆಲೆಬ್ರಿಟಿಗಳು ಭಾಗವಹಿಸುವ ಸಾಧ್ಯತೆಯೂ ಇದೆ. ಇದರ ಬಗ್ಗೆ ಮುಂದೆ ಯೋಚಿಸುತ್ತೇನೆ.ಟೀವಿ ಕಾರ್ಯಕ್ರಮ ನಿಮ್ಮ ಚಿತ್ರಗಳ ಮಾರ್ಕೆಟಿಂಗ್‌ನ ಒಂದು ಭಾಗವೇ?

ಇಲ್ಲ. ಇದು ನನ್ನ ಸಿನಿಮಾ ಚಟುವಟಿಕೆಗಳಿಂದ ಹೊರತಾಗಿದ್ದು. ಟಿಆರ್‌ಪಿ ಕುರಿತು ನನಗೆ ಅಷ್ಟಾಗಿ ಜ್ಞಾನವಿಲ್ಲ. ಅದರ ಬಗ್ಗೆ ಚಿಂತಿಸುವುದೂ ಇಲ್ಲ. ನನ್ನ ಸಂತೋಷಕ್ಕೋಸ್ಕರ ಮತ್ತು ಸಮಾಜದಲ್ಲಿನ ಬದಲಾವಣೆಗೋಸ್ಕರ ಮಾಡುತ್ತಿರುವ ಕಾರ್ಯಕ್ರಮವಿದು. ಹಾಗೆ ನೋಡಿದರೆ ನಾನು ಸಿನಿಮಾಗಳ ಮಾರ್ಕೆಟಿಂಗ್‌ನಲ್ಲೂ ಪರಿಣತನಲ್ಲ.ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಿ?

ಬಿಡುವೆಂಬುದೇ ಇರುವುದಿಲ್ಲ. ಅಮ್ಮ ಟೀವಿ ನೋಡುವಾಗ ಒಮ್ಮಮ್ಮೆ ಕಣ್ಣುಹಾಯಿಸುತ್ತೇನೆ. ನ್ಯೂಸ್ ತಪ್ಪದೇ ನೋಡುತ್ತೇನೆ. ಕ್ರಿಕೆಟ್ ಕೂಡ ಇಷ್ಟ. ಓದುವುದು ನನ್ನ ಹವ್ಯಾಸ. ದಿನಪತ್ರಿಕೆಗಳು, ಮ್ಯಾಗಜಿನ್, ಪುಸ್ತಕಗಳು ನನ್ನ ಆಪ್ತಮಿತ್ರರು.ಇದುವರೆಗಿನ ಬದುಕನ್ನು ಬರಹ ರೂಪದಲ್ಲಿ ಹೊರತರುವ ಆಕಾಂಕ್ಷೆ ಇದೆಯೇ?

ಇದೆ. ಶೀಘ್ರದಲ್ಲಿಯೇ ಜೀವನ ಚರಿತ್ರೆ ಬರೆಯುವ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ಆದರೆ ಇದರಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸದ ವೈಯಕ್ತಿಕ ಬದುಕಿನ ಕೆಲವು ಘಟನೆಗಳನ್ನು ದಾಖಲಿಸುವುದಿಲ್ಲ. ಬದಲಾಗಿ ಚಿತ್ರರಂಗದ ಅನುಭವಗಳನ್ನು, ಮರೆಯಲಾಗದ ಘಟನೆಗಳನ್ನು ಬರೆಯುತ್ತೇನೆ.ಬಿಡುಗಡೆಯಾಗುತ್ತಿರುವ ಶಾರೂಖ್‌ರ `ರಾ.ಒನ್~ ಚಿತ್ರದ ಬಗ್ಗೆ ಏನು ಹೇಳುತ್ತೀರಿ?

ಚಿತ್ರದ ಬಗ್ಗೆ ನನಗೂ ಕುತೂಹಲವಿದೆ. ಚಿತ್ರ ಯಶಸ್ವಿಯಾಗಲಿ. ಆಲ್ ದಿ ಬೆಸ್ಟ್ ಶಾರೂಖ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.