ಮಂಗಳವಾರ, ನವೆಂಬರ್ 12, 2019
28 °C

ಕಿರುತೆರೆಯಲ್ಲಿ ಮರು ಮದುವೆ!

Published:
Updated:

ಅತ್ತೆಯೇ ಸೊಸೆಗೆ ಮರು ಮದುವೆ ಮಾಡುವ ವಿಶಿಷ್ಟ ಕಥಾಹಂದರವುಳ್ಳ `ಪುನರ್ ವಿವಾಹ' ಧಾರಾವಾಹಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಹಿಂದಿಯ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ಕನ್ನಡ ಅವತರಣಿಕೆಯಿದು. ಕನ್ನಡ ನೆಲದ ಸಂಸ್ಕೃತಿ, ವಾತಾವರಣಕ್ಕೆ ಪೂರಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ ಎನ್ನುವುದು ಧಾರಾವಾಹಿಯ ನಿರ್ಮಾಪಕಿ ಮತ್ತು ನಿರ್ದೇಶಕಿ ಶ್ರುತಿ ನಾಯ್ಡು ಮಾತು.ನಿರ್ದೇಶಕಿಯಾಗಿ ನಾಲ್ಕನೇ ಧಾರಾವಾಹಿ ಕೈಗೆತ್ತಿಕೊಂಡಿರುವ ಶ್ರುತಿ ನಾಯ್ಡು, ಇದು ವಿಭಿನ್ನವಾಗಿರಬೇಕು ಎಂಬ ಉದ್ದೇಶದಿಂದ ಪ್ರಮುಖ ಪಾತ್ರಗಳ ಪರಿಚಯವನ್ನು ಹಾಡಿನ ಮೂಲಕ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಗೋಪಿ ಅವರ ಸಂಗೀತ ಸಂಯೋಜನೆಯಲ್ಲಿ ಜಯಂತ ಕಾಯ್ಕಿಣಿ ಮೂರು ಗೀತೆಗಳನ್ನು ರಚಿಸಿದ್ದರೆ, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ.ಈ ಧಾರಾವಾಹಿಯನ್ನು ಪ್ರಾರಂಭಿಸುವ ಮುನ್ನ ಪುನರ್ ವಿವಾಹದ ಬಗ್ಗೆ ವಾಹಿನಿಯು ಜನರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಹೆಚ್ಚಿನ ಅಭಿಪ್ರಾಯಗಳು ಪುನರ್‌ವಿವಾಹದ ಪರವಾಗಿ ಬಂದಿದ್ದರಿಂದ ಈ ಕಥೆಯನ್ನು ಕೈಗೆತ್ತಿಕೊಳ್ಳಲಾಯಿತು. ಮಹಿಳಾ ನಿರ್ದೇಶಕಿಯೊಬ್ಬರು ಇದನ್ನು ನಿರ್ವಹಿಸಿದರೆ ಉತ್ತಮ ಎಂಬ ಅಭಿಮತದಿಂದ ಶ್ರುತಿ ನಾಯ್ಡು ಅವರಿಗೆ ಈ ಜವಾಬ್ದಾರಿ ವಹಿಸಲಾಯಿತು ಎಂದರು ಝೀ ವಾಹಿನಿಯ ಧಾರಾವಾಹಿ ವಿಭಾಗದ ಮುಖ್ಯಸ್ಥ ಕಿಶೋರ್ ಆಚಾರ್ಯ.ಚಿಕ್ಕ ವಯಸ್ಸಿಗೇ ಪ್ರಬುದ್ಧ ಪಾತ್ರ ನಿರ್ವಹಿಸುವ ಸವಾಲು ಜಗನ್ನಾಥ್ ಅವರೆದುರಿಗೆ. ಮಗುವೇ ಜೀವನ ಎಂದುಕೊಂಡು ಬದುಕುವ ತಂದೆಯ ಪಾತ್ರ ಅವರದು. ಧಾರಾವಾಹಿ ಲೋಕದಿಂದ ದೂರ ಸರಿಯುವ ಉದ್ದೇಶ ಹೊಂದಿದ್ದ ನಟಿ ಅನುಷಾ, ನಿರ್ದೇಶಕಿ ಶ್ರುತಿ ನಾಯ್ಡು ಅವರಿಂದ ಆಹ್ವಾನ ಬಂದಾಗ ಇಲ್ಲವೆನ್ನಲಾಗದೆ ಮತ್ತೆ ಬಣ್ಣಹಚ್ಚಿದ್ದಾರೆ.ನಟಿಯರಾದ ಪದ್ಮಾ ಕುಮಟ, ಅಂಬುಜಾ, ನಟರಾದ ಕೀರ್ತಿರಾಜ್, ಅರುಣ್ ಮುಂತಾದವರು ಉಪಸ್ಥಿತರಿದ್ದರು. `ಪುನರ್ ವಿವಾಹ' ಏಪ್ರಿಲ್ 8ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ಪ್ರತಿಕ್ರಿಯಿಸಿ (+)