ಶುಕ್ರವಾರ, ಆಗಸ್ಟ್ 6, 2021
21 °C
ಕಲಬುರ್ಗಿ ನಗರದಿಂದ ಹುಮನಾಬಾದ್ ಮಾರ್ಗದ ಉಪಳಾಂವ ನಿಸರ್ಗಧಾಮಕ್ಕೆ ಸ್ಥಳಾಂತರ

ಕಿರು ಮೃಗಾಲಯ ಸ್ಥಳಾಂತರ: ಸಿದ್ಧತೆ ಜೋರು

ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಕಲಬುರ್ಗಿ: 1984ರಲ್ಲಿ ಆರಂಭ ಗೊಂಡಿರುವ ಇಲ್ಲಿನ ಸಾರ್ವಜನಿಕ ಉದ್ಯಾನದ ಹಿಂಭಾಗದಲ್ಲಿರುವ ಕಿರು ಮೃಗಾಲಯವನ್ನು ಉಪಳಾಂವ ನಿಸರ್ಗ ಧಾಮಕ್ಕೆ ಸ್ಥಳಾಂತರಿಸುವ ಸಂಬಂಧ ಕರ್ನಾಟಕ ಮೃಗಾಲಯ ಪ್ರಾಧಿಕಾರ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರೊಂದಿಗೆ ಸಭೆ ನಡೆಸಿರುವ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲದೆ, ಈ ಕುರಿತು ಸಮಗ್ರ ವರದಿ ಸಿದ್ಧಪಡಿಸಿ, ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅನುಮೋದನೆಗೆ ಕಳುಹಿಸಿಕೊಟ್ಟಿದ್ದಾರೆ.ಸ್ಥಳಾಂತರಕ್ಕೆ ಕಾರಣ ಏನು?: ಈಗಿರುವ ಮೃಗಾಲಯವು 6 ಎಕರೆ 33 ಗುಂಟೆ ಜಾಗ ಹೊಂದಿದೆ. ಮೃಗಾಲಯಕ್ಕೆ ಇಷ್ಟು ಜಾಗ ಸಾಲದು ಎಂಬುದು ಪ್ರಾಣಿ ಪ್ರಿಯರ ಅಭಿಪ್ರಾಯ. ‘ಹಣ ಕೊಟ್ಟು ಮೃಗಾಲಯ ನೋಡಲು ಬಂದವರು ಹೀಗೆ ಬಂದು, ಹಾಗೆ ಹೋಗಬಾರದು. ಕೆಲಹೊತ್ತು ಅಲ್ಲಿಯೇ ಇದ್ದು ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಬೇಕು. ಮಕ್ಕ ಳೊಂದಿಗೆ ಸಂತಸದಿಂದ ಕಾಲ ಕಳೆಯ ಬೇಕು. ಅಂತಹ ವಾತಾವರಣ ನಿರ್ಮಿಸಬೇಕು ಎಂದರೆ ಮೃಗಾಲಯ ಸ್ಥಳಾಂತರ ಅನಿವಾರ್ಯ’ ಎಂಬುದು ಪ್ರಾಧಿಕಾರದ ವಿವರಣೆ.ಯಾವೆಲ್ಲ ಪ್ರಾಣಿಗಳಿವೆ?: ಈಗಿರುವ ಮೃಗಾಲಯದಲ್ಲಿ  ಚುಕ್ಕೆ ಜಿಂಕೆ, ಕೃಷ್ಣಮೃಗ, ಕಡವೆ, ಕೋತಿ, ಪುನುಗು ಬೆಕ್ಕು, ಎಮು, ಹದ್ದು, ನವಿಲು, ಗಿಳಿ, ಗೌಜುಗ, ಮೊಸಳೆ, ಆಮೆ ಮತ್ತು ಹೆಬ್ಬಾವು ಸೇರಿದಂತೆ 90ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿವೆ. ಮೃಗಾಲಯ ಸ್ಥಳಾಂತ ರವಾದಲ್ಲಿ ಹುಲಿ, ಚಿರತೆ, ಮೈನಾ ಪಕ್ಷಿಗಳು ಸೇರಿದಂತೆ ಇಲ್ಲಿನ ವಾತಾವ ರಣಕ್ಕೆ ಹೊಂದಿಕೊಳ್ಳುವಂತಹ ಪ್ರಾಣಿಗಳನ್ನು ಮೃಗಾಲಯಕ್ಕೆ ಸೇರ್ಪಡೆಗೊಳ್ಳಲಿವೆ.‘ಮೃಗಾಲಯ ಪ್ರಾಧಿಕಾರಕ್ಕೆ ಸರ್ಕಾರ ವಾರ್ಷಿಕ ₹ 5 ಕೋಟಿ ಅನುದಾನ ನಿಗದಿ ಮಾಡಿದೆ. ಆದಾಯ ಕಡಿಮೆ ಇರುವ ಕಲಬುರ್ಗಿ, ಬಳ್ಳಾರಿ, ಬೆಳಗಾವಿ, ಗದಗ ಮತ್ತು ದಾವಣಗೆರೆ ಕಿರು ಮೃಗಾಲಯಗಳ ನಿರ್ವಹಣೆ ಹಾಗೂ ಸಿಬ್ಬಂದಿ ಸಂಬಳಕ್ಕಾಗಿ ಈ ಹಣವನ್ನು ಬಳಸಲಾಗುತ್ತಿದೆ. ಕಲಬುರ್ಗಿಯಲ್ಲಿರುವ ಮೃಗಾಲಯವನ್ನು ಉಪಳಾಂವಕ್ಕೆ ಸ್ಥಳಾಂತರಿಸಿ, ದೊಡ್ಡ ಪ್ರಮಾಣದಲ್ಲಿ ಮೃಗಾಲಯ ನಿರ್ಮಿಸುವ ಉದ್ದೇಶ ದಿಂದ ಕ್ರಿಯಾಯೋಜನೆ ಸಿದ್ಧಪಡಿಸ ಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯು ಇದಕ್ಕೆ ಬೇಕಾದ ಅನುದಾನ ನೀಡಲಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೆಹಾನಾ ಬಾನು ‘ಪ್ರಜಾವಾಣಿ’ಗೆ ತಿಳಿಸಿದರು.‘ಅರಣ್ಯ ಇಲಾಖೆಗೆ ಸೇರಿದ 44 ಎಕರೆ ಜಾಗ ಉಪಳಾಂವನಲ್ಲಿ ಲಭ್ಯವಿದೆ. ಅಲ್ಲಿ ಎರಡು ವಾಚ್ ಟವರ್ ನಿರ್ಮಿಸಿ ಟೆಲಿಸ್ಕೋಪ್‌ ಉಪಕರಣ ಅಳವಡಿಸ ಲಾಗುವುದು. ಅಲ್ಲದೆ, ಮಕ್ಕಳಿಗಾಗಿ ವಾಟರ್ ಸ್ಪೋರ್ಟ್ಸ್‌, ಮೊಸಳೆ ಪಾರ್ಕ್ ನಿರ್ಮಿಸಲಾಗುವುದು. ನಗರ ಪ್ರದೇಶದಲ್ಲಿ ವಾಹನಗಳ ಅಬ್ಬರ, ಕಲುಷಿತ ವಾತಾವರಣ ಇರುವುದರಿಂದ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ. ಹೀಗಾಗಿ, ಉಪಳಾಂವಕ್ಕೆ ಸ್ಥಳಾಂತ ರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಾಣಿ ಪ್ರಿಯರ ಅನುಕೂಲಕ್ಕಾಗಿ ಕೇಂದ್ರೀಯ ಬಸ್ ನಿಲ್ದಾಣದಿಂದ ಬಸ್ಸಿನ ಸೌಕರ್ಯ ಕಲ್ಪಿಸಲಾಗುವುದು. ಅಲ್ಲದೆ, ಪ್ರಾಣಿ ದತ್ತು ಸ್ವೀಕಾರ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು’ ಎಂದು ಹೇಳಿದರು.

*

ಕಲಬುರ್ಗಿ ಕಿರು ಮೃಗಾಲಯವನ್ನು ಉಪಳಾಂವ ನಿಸರ್ಗ ಧಾಮಕ್ಕೆ ಸ್ಥಳಾಂತರಿಸುವ ಸಂಬಂಧ ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಕೇಂದ್ರೀಯ ಮೃಗಾಲಯ ಪ್ರಾಧಿಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ.

ರೆಹಾನಾ ಬಾನು,

ಅಧ್ಯಕ್ಷೆ, ಕರ್ನಾಟಕ ಮೃಗಾಲಯ ಪ್ರಾಧಿಕಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.