ಕಿಲಾಡಿ ಜೋಡಿ

7

ಕಿಲಾಡಿ ಜೋಡಿ

Published:
Updated:
ಕಿಲಾಡಿ ಜೋಡಿ

ಮುರಿದುಹೋಗುವ ಜೋಡಿ ಯಾವುದು? ಜೋಡಿಯಾಗುವವರು ಯಾರ‌್ಯಾರು? ಮಾಧವನ್‌ಗೂ ನಿಮಗೂ ಚಿತ್ರದಲ್ಲಿ ಏನು ಸಂಬಂಧ? ಈ ಸಿನಿಮಾ ಫ್ರೆಂಚ್ ಸಿನಿಮಾ `ಹಾರ್ಟ್ ಬ್ರೇಕರ್ಸ್‌~ಗೂ ಇದಕ್ಕೂ ಏನೂ ಸಂಬಂಧ ಇಲ್ಲವಾ?- ಒಂದಾದ ನಂತರ ಒಂದರಂತೆ ಪ್ರಶ್ನೆಗಳು ಹೊಮ್ಮುವ ಮೊದಲೇ ಕ್ಯಾಮೆರಾ ಫ್ಲಾಷ್‌ನ ಬೆಳಕಿನ ಜಳಕದಲ್ಲಿ ಬಿಪಾಶ ಬಸು-ಮಾಧವನ್ ಮಿಂದದ್ದಾಗಿತ್ತು. ಪಕ್ಕದಲ್ಲಿದ್ದ ಕುಳ್ಳನೆ ದೇಹದ ಓಮಿ ವೈದ್ಯ ಅನೇಕರಿಗೆ ಮುಖ್ಯವಾಗಲೇ ಇಲ್ಲ.ನಗರದ ಫೋರಂ ಮಾಲ್‌ಗೆ ಬಿಪ್ಪಿ-ಮಾಧವನ್ ಜೋಡಿ ಬಂದಾಗ ಅಭಿಮಾನಿಗಳ ಕಣ್ಣರಳಿತು. ಕಪ್ಪು ಸ್ಕರ್ಟ್, ಗುಲಾಬಿ ಬಣ್ಣದ ಮೇಲಂಗಿ ಧರಿಸಿದ್ದ ಬಿಪಾಶ ಹೂನಗೆಯ ಒಂದು ಝಲಕ್‌ಗಾಗಿ ಕಾತರಿಸಿದ್ದವರು ಅಲ್ಲಿದ್ದರು. ಬಿಪಾಶ ಜೊತೆ ಸ್ವಲ್ಪ ಗತ್ತಿನಿಂದಲೇ ಹೆಜ್ಜೆ ಹಾಕಿದ್ದು ಮುದ್ದು ಮೊಗದ ನಟ ಮಾಧವನ್.

 

ಅವರೊಟ್ಟಿಗೆ ತಾನು ಕೂಡ ಕಡಿಮೆ ಇಲ್ಲ ಎಂಬಂತೆ ಕೆಂಪು ಟಿ-ಶರ್ಟ್‌ನಲ್ಲಿ ಕಂಡೂ ಕಾಣದಂತೆ ನಗು ಬೀರುತ್ತಾ ಬಂದರು `ತ್ರೀ ಈಡಿಯಟ್ಸ್~ನಲ್ಲಿ ಚತುರ್ ರಾಮಲಿಂಗಂ ಉರುಫ್ `ಸೈಲೆನ್ಸರ್~ ಪಾತ್ರದಲ್ಲಿ ಗುರುತಾದ ಓಮಿ ವೈದ್ಯ. ಇಂದು ತೆರೆಕಾಣುತ್ತಿರುವ ಹಿಂದಿ ಚಿತ್ರ `ಜೋಡಿ ಬ್ರೇಕರ್ಸ್‌~ ಪ್ರಚಾರಕ್ಕಾಗಿ ಚಿತ್ರತಂಡ ಇಲ್ಲಿಗೆ ಪಾದ ಬೆಳೆಸಿದ್ದು.ಬಿಪಾಶ ನಿಲುವು, ಮಾಧವನ್ ಊದಿಕೊಂಡ ದೇಹ ಎಲ್ಲವುಗಳ ಬಗ್ಗೆ ನೆರೆದವರಲ್ಲಿ ಗುಸುಗುಸು. `ನನಗೆ ಮಾಧವನ್ ತರಹ ಇರುವ ಗಂಡನೇ ಬೇಕು~ ಎಂದು ಬಿಪಾಶ ಹೇಳಿದಾಗ ಕೆಲವು ಪಡ್ಡೆಗಳಿಗೆ ನಿರಾಸೆಯಾಗಿರುವ ಸಾಧ್ಯತೆ ಇದೆ.

 

ತಾನು ಮಾಧವನ್ ದೊಡ್ಡ ಅಭಿಮಾನಿ ಎಂದು ಮಾತು ಸೇರಿಸಿದ ಬಿಪಾಶ ಚಿತ್ರದ ಪಾತ್ರಗಳನ್ನು ಬಣ್ಣಿಸುವುದಕ್ಕಿಂತ ನೋಡಿ ಅರಿಯುವುದೇ ಲೇಸು ಎಂದು ತಮ್ಮ ಪ್ರಚಾರ ತಂತ್ರವನ್ನು ತೇಲಿಬಿಟ್ಟರು. `ಜೋಡಿ ಬ್ರೇಕರ್ಸ್‌ ರೊಮ್ಯಾಂಟಿಕ್ ಕಾಮಿಡಿ, ನೋಡುವಂಥ ಲವ್ ಸಾಂಗ್ಸ್ ಕೂಡ ಇವೆ~ ಎಂದು ಕಣ್ಣು ಮಿಟುಕಿಸಿದರು.`ಜೋಡಿ ಬ್ರೇಕಿಂಗ್‌ಗಿಂತ ನನಗೆ ಸಂಬಂಧ ಉಳಿಸಿಕೊಳ್ಳುವುದರಲ್ಲಿಯೇ ಮುಖ್ಯ~- ತೂರಿಬಂದ ಪ್ರಶ್ನೆಗೆ ಬಿಪಾಶ ಕೊಟ್ಟ ತಣ್ಣನೆಯ ಉತ್ತರವಿದು. ಮಾತಾಡಿದರೆ ಮುತ್ತು ಉದುರುತ್ತದೇನೋ ಎಂಬಂತೆ ಕುಳಿತಿದ್ದ ಮಾಧವನ್, `ಬಿಪಾಶಾಗೆ ಸುಂದರನೂ ಯೋಗ್ಯನೂ ಆದ ಹುಡುಗನನ್ನು ನಾನು ಹುಡುಕಿಕೊಡುತ್ತೇನೆ~ ಎಂದು ಆಶ್ವಾಸನೆ ನೀಡಿ, ನಗೆಯುಕ್ಕಿಸಿದರು.ಓಮಿ ಮಾತಿಗೆ ತೊಡಗಿದಾಗ ಎಲ್ಲಿ ಕತೆಯನ್ನು ಹೇಳಿಬಿಡುತ್ತಾರೋ ಎಂಬ ಆತಂಕಕ್ಕೀಡಾದ ಬಿಪಾಶ, `ಡೋಂಟ್ ಟೆಲ್ ದಿ ಸ್ಟೋರಿ~ ಎಂದು ಮೊದಲೇ ಅಡ್ಡಗೋಡೆ ಹಾಕಿಬಿಟ್ಟರು.ತಮ್ಮ ಹೆಂಡತಿಯನ್ನು ಹೊಗಳಿದ ಮಾಧವನ್ ತಾನೊಬ್ಬ ಒಳ್ಳೆಯ ಗಂಡ ಎಂದು ಬಿಪಾಶ ಹೇಳುತ್ತಿರುವ ಮಾತು ಸತ್ಯ ಎಂದು ನಸುನಕ್ಕರು. ಅವರ ಕೆನ್ನೆಮೇಲೆ ಸಣ್ಣ ಗುಳಿ ಮೂಡಿತು. ಸಂಬಂಧಗಳ ಬೆಸುಗೆಯ ಜೊತೆಗೆ ಅವು ಕಡಿದುಹೋಗುವ ಭಾವನಾತ್ಮಕ ಸನ್ನಿವೇಶಗಳು ಈ ಚಿತ್ರದಲ್ಲಿವೆ ಎಂದರು.`ನಿಮ್ಮನ್ನು ನೀವು ಪ್ರೀತಿಸಿ, ಗೌರವಿಸಿ. ಹಣಕ್ಕಿಂತ ಆರೋಗ್ಯ ಮುಖ್ಯ. ಇದೇ ನನ್ನ ಫಿಟ್‌ನೆಸ್ ಗುಟ್ಟು~ ಎಂದು ಪಟಪಟನೆ ಉಪದೇಶ ಮಾಡುವ ಧಾಟಿಯಲ್ಲಿ ಬಿಪಾಶ ಮಾತನಾಡಿದರು. `ಇಲ್ಲಿ ರುಚಿಯಾದ ಊಟ-ತಿಂಡಿ ಸಿಗುತ್ತದೆ ಹಾಗಾಗಿ ಐ ಲವ್ ಬೆಂಗಳೂರು~ ಎನ್ನುತ್ತಾ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಎದುರಾದಾಗ ಅಭಿಮಾನಿಗಳು ದಿವ್ಯ ಮೌನದಿಂದ ಅವರನ್ನೇ ನೋಡುತ್ತಾ ನಿಂತರು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry