ಭಾನುವಾರ, ಮೇ 22, 2022
27 °C

ಕಿವೀಸ್‌ಗೆ ಸವಾಲಾಗದ ಜಿಂಬಾಬ್ವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ನ್ಯೂಜಿಲೆಂಡ್ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಡೇನಿಯಲ್ ವೆಟೋರಿ ಬಳಗ ಜಿಂಬಾಬ್ವೆ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದು ಬೀಗಿತು. ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಕಿವೀಸ್ ಶುಕ್ರವಾರ ಆಲ್‌ರೌಂಡ್ ಆಟದ ಪ್ರದರ್ಶನ ತೋರಿತು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವನ್ನು 46.2 ಓವರ್‌ಗಳಲ್ಲಿ 162 ರನ್‌ಗಳಿಗೆ ಕಟ್ಟಿಹಾಕಿತು. ಬಳಿಕ 33.3 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 166 ರನ್ ಗಳಿಸಿ ಗೆಲುವಿನ ನಗು ಬೀರಿತು.ಕೆಲದಿನಗಳ ಹಿಂದೆ ತವರಿನಲ್ಲಿ ನಡೆದ ಭೂಕಂಪ ಘಟನೆ ಹಾಗೂ ಆ ಬಳಿಕ ಆಸ್ಟ್ರೇಲಿಯಾ ಕೈಯಲ್ಲಿ ಎದುರಾದ ಸೋಲಿನಿಂದಾಗಿ ಕಿವೀಸ್ ಆಟಗಾರರು ಆತ್ಮವಿಶ್ವಾಸ ಕಳೆದುಕೊಂಡಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಲಯ ಕಂಡುಕೊಳ್ಳಲು ಭರ್ಜರಿ ಗೆಲುವಿನ ಅಗತ್ಯವಿತ್ತು. ಅದು ತಂಡಕ್ಕೆ ಲಭಿಸಿದೆ. ಸಾಧಾರಣ ಗುರಿ ಬೆನ್ನಟ್ಟಿದ ಕಿವೀಸ್ ತಂಡವನ್ನು ಮಾರ್ಟಿನ್ ಗುಪ್ಟಿಲ್ (ಔಟಾಗದೆ 86, 108 ಎಸೆತ, 7 ಬೌಂ, 2 ಸಿಕ್ಸರ್) ಮತ್ತು ಬ್ರೆಂಡನ್ ಮೆಕ್ಲಮ್ (ಔಟಾಗದೆ 76, 95 ಎಸೆತ, 6 ಬೌಂ, 2 ಸಿಕ್ಸರ್) ಅವರು ಸುಲಭವಾಗಿ ಗೆಲುವಿನ ಗಡಿ ದಾಟಿಸಿದರು.

 

ಜಿಂಬಾಬ್ವೆ ಬೌಲರ್‌ಗಳು ಕೆಲವೊಂದು ವಿಕೆಟ್‌ಗಳನ್ನು ಪಡೆಯಲು ಹರಸಾಹಸಪಟ್ಟರೂ ಯಶಸ್ವಿಯಾಗಲಿಲ್ಲ. ‘ಪಂದ್ಯ ಶ್ರೇಷ್ಠ’ ಗುಪ್ಟಿಲ್ ಮತ್ತು ಮೆಕ್ಲಮ್ ಎಚ್ಚರಿಕೆಯ ಆಟವಾಡಿದರು. ಇವರು ಯಾವ ಹಂತದಲ್ಲೂ ಒತ್ತಡಕ್ಕೆ ಒಳಗಾಗಲಿಲ್ಲ. ಟಿನೇಶ್ ಪನ್ಯಾಗರ ಎಸೆದ ಮೊದಲ ಓವರ್‌ನಲ್ಲಿ ಗುಪ್ಟಿಲ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಜಿಂಬಾಬ್ವೆ ಬೌಲಿಂಗ್‌ನ ದಿಕ್ಕು ತಪ್ಪಿಸಿದರು. ಬಳಿಕ ಎದುರಾಳಿ ತಂಡದ ಸ್ಪಿನ್ ಕೇಂದ್ರಿತ ದಾಳಿಯನ್ನು ಯಶಸ್ವಿಯಾಗಿ ಮೆಟ್ಟಿನಿಂತರು.ಕಿವೀಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಕೀನ್ಯಾ ವಿರುದ್ಧ ಇದೇ ಅಂತರದಲ್ಲಿ ಜಯ ಸಾಧಿಸಿತ್ತು. ಲೀಗ್‌ನ ಇನ್ನುಳಿದ ಪಂದ್ಯಗಳನ್ನಾಡಲು ಉಭಯ ತಂಡಗಳು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿವೆ. ಪ್ರಭಾವಿ ಬೌಲಿಂಗ್: ಬೆಳಿಗ್ಗೆ ಟಾಸ್ ಗೆದ್ದ ಜಿಂಬಾಬ್ವೆ ನಾಯಕ ಎಲ್ಟಾನ್ ಚಿಗುಂಬುರ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಕಿವೀಸ್‌ನ ಯೋಜನಾಬದ್ಧ ದಾಳಿಯನ್ನು ಎದುರಿಸಿ ನಿಲ್ಲುವಲ್ಲಿ ತಂಡ ಎಡವಿತು. ಟಿಮ್ ಸೌಥಿ (29ಕ್ಕೆ 3), ಕೈಲ್ ಮಿಲ್ಸ್ (29ಕ್ಕೆ 2) ಮತ್ತು ಡೇನಿಯಲ್ ವೆಟೋರಿ (25ಕ್ಕೆ 2) ಎದುರಾಳಿ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸಿದರು.ಪಿಚ್ ಬ್ಯಾಟಿಂಗ್‌ಗೆ ಯೋಗ್ಯವಾಗಿತ್ತು. ಆದರೆ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳು ಅದರ ಲಾಭ ಎತ್ತಿಕೊಳ್ಳಲಿಲ್ಲ. 46 ರನ್ ಗಳಿಸುವಷ್ಟರಲ್ಲೇ ಐದು ವಿಕೆಟ್‌ಗಳು ಪತನಗೊಂಡವು. ಬ್ರೆಂಡನ್ ಟೇಲರ್ (44, 57 ಎಸೆತ, 4 ಬೌಂ), ಪ್ರಾಸ್ಪರ್ ಉತ್ಸೇಯ (36) ಮತ್ತು ಗ್ರೇಮ್ ಕ್ರೆಮರ್ (22) ಅವರು ಕ್ರೀಸ್ ಬಳಿಕ ನಿಲ್ಲುವ ಛಲ ತೋರಿದ ಕಾರಣ ತಂಡದ ಮೊತ್ತ 150ರ ಗಡಿ ದಾಟಿತು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ಉತ್ಸೇಯ ಹಾಗೂ ಕ್ರೆಮರ್ ತಂಡ ಬೇಗನೇ ಆಲೌಟ್ ಆಗದಂತೆ ನೋಡಿಕೊಂಡರು. 65 ಎಸೆತಗಳನ್ನು ಎದುರಿಸಿದ ಉತ್ಸೇಯ ಮೂರು ಬೌಂಡರಿ ಗಳಿಸಿದರು.ಜಿಂಬಾಬ್ವೆ ತಂಡ ಕೊನೆಯ ಎರಡು ವಿಕೆಟ್‌ಗಳಿಂದ 40 ರನ್ ಸೇರಿಸಿತು. ರೇ ಪ್ರೈಸ್ (11) ಅವರು ಕ್ರೆಮರ್ ಜೊತೆ ಒಂಬತ್ತನೇ ವಿಕೆಟ್‌ಗೆ 35 ರನ್‌ಗಳನ್ನು ಸೇರಿಸಿದರು. ಕಿವೀಸ್ ಪರ ವೆಟೋರಿ ಅವರಂತೂ ಬಿಗುವಾದ ಬೌಲಿಂಗ್ ನಡೆಸಿದರು. 10 ಓವರ್‌ಗಳಲ್ಲಿ ಕೇವಲ 25 ರನ್ ಬಿಟ್ಟುಕೊಟ್ಟ ಅವರು ಎರಡು ವಿಕೆಟ್‌ಗಳನ್ನೂ ಪಡೆದರು. ವೇಗಿಗಳಾದ ಸೌಥಿ ಮತ್ತು ಮಿಲ್ಸ್ ಕೂಡಾ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಕಳೆದ ಪಂದ್ಯದಲ್ಲಿ ಜಿಂಬಾಬ್ವೆ 175 ರನ್‌ಗಳಿಂದ ಕೆನಡಾ ತಂಡವನ್ನು ಮಣಿಸಿತ್ತು. ಆದರೆ ಶುಕ್ರವಾರ ಆಫ್ರಿಕಾದ ಈ ತಂಡ ಎದುರಾಳಿಗಳಿಗೆ ಯಾವುದೇ ಪೈಪೋಟಿ ಒಡ್ಡದೆ ಶರಣಾದದ್ದು ವಿಶೇಷ. ನ್ಯೂಜಿಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ಮಾರ್ಚ್ 8 ರಂದು ಪಾಕಿಸ್ತಾನದ ಜೊತೆ ಪೈಪೋಟಿ ನಡೆಸಲಿದೆ.ಸ್ಕೋರು ವಿವರ

ಜಿಂಬಾಬ್ವೆ: 46.2 ಓವರ್‌ಗಳಲ್ಲಿ 162

ಬ್ರೆಂಡನ್ ಟೇಲರ್ ಎಲ್‌ಬಿಡಬ್ಲ್ಯು ಬಿ ಸ್ಕಾಟ್ ಸ್ಟೈರಿಸ್  44

ಚಾರ್ಲ್ಸ್ ಕೊವೆಂಟ್ರಿ ರನೌಟ್  00

ತಟೇಂಡ ತೈಬು ಎಲ್‌ಬಿಡಬ್ಲ್ಯು ಬಿ ಟಿಮ್ ಸೌಥಿ  08

ಕ್ರೆಗ್ ಇರ್ವಿನ್ ಸಿ ರೈಡರ್ ಬಿ ಕೈಲ್ ಮಿಲ್ಸ್  11

ಎಲ್ಟಾನ್ ಚಿಗುಂಬುರ ಎಲ್‌ಬಿಡಬ್ಲ್ಯು ಬಿ ಡೇನಿಯಲ್ ವೆಟೋರಿ  01

ರೆಜಿಸ್ ಚಕಾಬ್ವ ಸಿ ಟೇಲರ್ ಬಿ ಡೇನಿಯಲ್ ವೆಟೋರಿ  00

ಜಾರ್ಜ್ ಲ್ಯಾಂಬ್ ರನೌಟ್  18

ಪ್ರಾಸ್ಪರ್ ಉತ್ಸೇಯ ಬಿ ಟಿಮ್ ಸೌಥಿ  36

ಗ್ರೇಮ್ ಕ್ರೆಮರ್ ಸಿ ಬ್ರೆಂಡನ್ ಮೆಕ್ಲಮ್ ಬಿ ಕೈಲ್ ಮಿಲ್ಸ್  22

ರೇ ಪ್ರೈಸ್ ಎಲ್‌ಬಿಡಬ್ಲ್ಯು ಬಿ ಟಿಮ್ ಸೌಥಿ  11

ಟಿನೇಶ್ ಪನ್ಯಾಗರ ಔಟಾಗದೆ  04

ಇತರೆ: (ಲೆಗ್‌ಬೈ-4, ವೈಡ್-3)  07

ವಿಕೆಟ್ ಪತನ: 1-2 (ಕೊವೆಂಟ್ರಿ; 1.2), 2-27 (ತೈಬು; 7.4), 3-42 (ಎರ್ವಿನ್; 12.6), 4-46 (ಚಿಗುಂಬುರ; 14.1), 5-46 (ಚಕಾಬ್ವ; 14.3), 6-89 (ಟೇಲರ್; 23.1), 7-89 (ಲ್ಯಾಂಬ್; 26.6), 8-122 (ಕ್ರೆಮರ್; 36.6), 9-157 (ಪ್ರೈಸ್; 44.1), 10-162 (ಉತ್ಸೇಯ; 46.2).

ಬೌಲಿಂಗ್: ಕೈಲ್ ಮಿಲ್ಸ್ 10-0-29-2, ಟಿಮ್ ಸೌಥಿ 9.2-3-29-3, ಹಾಮಿಷ್ ಬೆನೆಟ್ 8-0-37-0, ಡೇನಿಯಲ್ ವೆಟೋರಿ 10-3-25-2, ಸ್ಕಾಟ್ ಸ್ಟೈರಿಸ್ 4-0-13-1, ನಥಾನ್ ಮೆಕ್ಲಮ್ 3-0-15-0, ಜೆಸ್ಸಿ ರೈಡರ್ 2-0-10-0

ನ್ಯೂಜಿಲೆಂಡ್ 33.3 ಓವರ್‌ಗಳಲ್ಲಿ 166

ಮಾರ್ಟಿನ್ ಗುಪ್ಟಿಲ್ ಔಟಾಗದೆ  86

ಬ್ರೆಂಡನ್ ಮೆಕ್ಲಮ್ ಔಟಾಗದೆ  76

ಇತರೆ: (ಲೆಗ್‌ಬೈ-1, ವೈಡ್-1, ನೋಬಾಲ್-2)  04

ಬೌಲಿಂಗ್: ಟಿನೇಶ್ ಪನ್ಯಾಗರ 5.3-0-42-0, ರೇ ಪ್ರೈಸ್ 7-0-23-0, ಪ್ರಾಸ್ಪರ್ ಉತ್ಸೇಯ 6-0-23-0, ಜಾರ್ಜ್ ಲ್ಯಾಂಬ್ 5-0-18-0, ಗ್ರೇಮ್ ಕ್ರೆಮರ್ 7-0-38-0, ಎಲ್ಟಾನ್ ಚಿಗುಂಬುರ 3-0-21-0

ಫಲಿತಾಂಶ: ನ್ಯೂಜಿಲೆಂಡ್‌ಗೆ 10 ವಿಕೆಟ್ ಜಯ

ಪಾಯಿಂಟ್ಸ್: ನ್ಯೂಜಿಲೆಂಡ್-2, ಜಿಂಬಾಬ್ವೆ-0

ಪಂದ್ಯಶ್ರೇಷ್ಠ: ಮಾರ್ಟಿನ್ ಗುಪ್ಟಿಲ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.