ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟಗಳ ಕರೆಹಾಡಿನ ಹಿಂದೆ...

ವಿಜ್ಞಾನ ಲೋಕದಿಂದ
Last Updated 14 ಜೂನ್ 2015, 19:30 IST
ಅಕ್ಷರ ಗಾತ್ರ

ಸಂವಹನ ನಮ್ಮ ದೈನಿಕದ ಬಹುಮುಖ್ಯ ಅಂಗ. ಬೇರೆ ಬೇರೆ ಕಾರಣಗಳಿಗಾಗಿ ನಮ್ಮ ಕೂಗಾಟ, ಚೀರಾಟ, ಪಿಸುಮಾತು, ಗುನುಗುವಿಕೆ ಎಲ್ಲವೂ ನಡೆದೇ ಇರುತ್ತವೆ. ಇಷ್ಟೆಲ್ಲಾ ವಿಧದ ಶಬ್ದಗಳು ಹೊರಬರು ವುದು ಧ್ವನಿಪೆಟ್ಟಿಗೆ ಮೂಲಕ. ಒಂದೊಮ್ಮೆ ಈ ಧ್ವನಿಪೆಟ್ಟಿಗೆಯೇ ಇರದಿದ್ದರೆ ಏನಾಗುತ್ತಿತ್ತು? ಇನ್ಯಾವ ವಿಧದಲ್ಲಿ ನಮ್ಮ ಸಂವಹನ ಸಾಗುತ್ತಿತ್ತೆಂಬ ಆಲೋಚನೆಯೇ ಎಷ್ಟೊಂದು ಕುತೂಹಲಕಾರಿ ಅಲ್ಲವೇ?

ಅಕಶೇರುಕಗಳಲ್ಲಿ ಈ ತೆರನಾದ ಧ್ವನಿಪೆಟ್ಟಿಗೆ ಇರುವುದಿಲ್ಲ; ಇದ್ದರೂ ಬಹಳ ಪ್ರಾಥಮಿಕ ವಿನ್ಯಾಸ ಹೊಂದಿರು ತ್ತದೆ ಎಂಬುದು ಕೆಲವು ಪ್ರಯೋಗ      ಗಳ ಮೂಲಕ ತಿಳಿದುಬಂದಿದೆ. ಹಾಗಾದರೆ ಈ ಅಕಶೇರುಕಗಳು ಹೇಗೆ ಪರಿಣಾಮ ಕಾರಿ ಸಂವಹನ ನಡೆಸುತ್ತಿರಬಹುದು?

ಬಹಳಷ್ಟು ಪ್ರಾಣಿಗಳು ರಾಸಾಯನಿಕ ಸಂಕೇತಗಳ ಮೂಲಕ ನಡೆಯುವ ಸಂವಹನ ನಡೆಸುವುದು ಕಂಡುಬಂದಿದೆ. ‘ಫೆರಮೋನ್’ ಸೇರಿದಂತೆ ವಿವಿಧ ರಾಸಾಯನಿಕ ಕಳಿಸಬಲ್ಲ ಮತ್ತು ಪಡೆಯಬಲ್ಲ ವಿಶಿಷ್ಟ ಜೀವಕೋಶಗಳು ಅಂತಹ ಪ್ರಾಣಿಗಳಲ್ಲಿ ರೂಪುಗೊಂಡಿರುತ್ತವೆ. ಈ ವಿಧಾನವನ್ನು ಹಲವು ಪ್ರಾಣಿಗಳು ತಮ್ಮ ಪರಿಧಿಯನ್ನು ಸೂಚಿಸಲು, ಸಂಗಾತಿಯನ್ನು ಸೆಳೆಯಲು ಹಾಗೂ ವೈರಿಗಳ ಅತಿಕ್ರಮಣದಿಂದ ಪಾರಾಗಲು ಬಳಸಿಕೊಳ್ಳುತ್ತವೆ.

ಶಾಬ್ದಿಕ ಸಂವಹನ: ಇನ್ನು ಇದಕ್ಕಿಂತ ಸ್ವಲ್ಪ ಮುಂದು ವರೆದ ವಿಧಾನ – ಶಾಬ್ದಿಕ ಸಂವಹನ. ಇದು ವಾಚಿಕವೂ ಆಗಿರಬ ಹುದು ಅಥವಾ ಸಾಂಕೇತಿಕವೂ ಆಗಿರ ಬಹುದು. ಧ್ವನಿಪೆಟ್ಟಿಗೆ ಸಹಾಯದಿಂದ ಆಗುವ ಸಂವಹನವನ್ನು ವಾಚಿಕ ವೆಂದೂ, ಅದಲ್ಲದೆ ಚಿಟಿಕೆ, ಚಪ್ಪಾಳೆ ಗಳಂತಹ ದೇಹದ ಇತರೆ ಭಾಗಗಳನ್ನು ಉಜ್ಜುವ ಮೂಲಕ ಆಗುವ ಸಂವಹನ ವನ್ನು ಸಾಂಕೇತಿಕ/ ಅವಾಚಿಕ ಸಂವಹನ ವೆಂದೂ ಕರೆಯಬಹುದು.

ಈ ರೀತಿಯ ಶಾಬ್ದಿಕ ಸಂವಹನದ ವಿಕಾಸದ ಹಾದಿ ಹೇಗಿರಬಹುದು? ಯಾವಾಗ ಮತ್ತು ಹೇಗೆ ಪ್ರಾಣಿಗಳು ಸಂವಹನ ನಡೆಸುತ್ತವೆ? ಈ ಪ್ರಶ್ನೆಗಳಿಗೆ ಸಂಶೋಧನೆ ಮೂಲಕ ಉತ್ತರ ಹುಡುಕುತ್ತಿರುವವರಲ್ಲಿ ಡಾ. ರೋಹಿಣಿ ಬಾಲಕೃಷ್ಣನ್ ಪ್ರಮುಖರು. ಇವರು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ.

ಕರೆಹಾಡು: ಕಳೆದ ಹತ್ತು ವರ್ಷಗಳಿಂದ ರೋಹಿಣಿ ಅವರು ಮಿಡತೆ ಪ್ರಭೇದಗಳಲ್ಲಿ ನಡೆಯುವ ಶಾಬ್ದಿಕ ಸಂವಹನದ ಹಲವು ಆಯಾಮಗಳ ಕುರಿತು ಸಂಶೋಧಿಸಿ ದ್ದಾರೆ. ಮಿಡತೆಗಳು ಸಂತಾನೋತ್ಪತ್ತಿ  ಕಾಲದಲ್ಲಿ, ತಮ್ಮ ಘನವಾದ ರೆಕ್ಕೆ ಉಜ್ಜಿ ಶಬ್ದ ಹೊರಡಿಸುತ್ತವೆ. ಇದನ್ನೇ ‘ದಿ ಕಾಲಿಂಗ್ ಸಾಂಗ್’ ಅಥವಾ ‘ಕರೆಹಾಡು’ ಎಂದು ಕರೆಯುತ್ತಾರೆ.

ಡಾ. ರೋಹಿಣಿ ಅವರ ತಂಡವು ಈ ‘ಕರೆಹಾಡು’ಗಳ ಧ್ವನಿ ಮುದ್ರಿಸಿಕೊಂಡು, ಗಣಕೀಕರಿಸಿ, ಆ ಶಬ್ದಗಳ ಕಂಪನಾಂಕ ಮತ್ತು ಸಮಯ ವಿನ್ಯಾಸಗಳನ್ನು ವಿಶ್ಲೇಷಿಸಿದ್ದಾರೆ. ಈ ಗಣಕೀಕೃತ ಧ್ವನಿಯನ್ನು ಬಳಸಿ, ಕೀಟ ಪ್ರಭೇದಗಳನ್ನು ಗುರುತಿಸಬಲ್ಲ ಸುಸಜ್ಜಿತ ವಿಧಾನವೊಂದನ್ನು ರೂಪಿಸುವುದು ಈ ಸಂಶೋಧಕರ ತಂಡದ ಸದ್ಯದ  ಗುರಿ. ಟ್ಯಾಪಿಂಗ್ ತರದ ವಿಧಾನ ಗಳಿಗಿಂತಲೂ ಈ ವಿಧಾನವು ಹೆಚ್ಚು ನಿರಪಾಯಕಾರಿ.

ಪ್ರತಿ ಪ್ರಭೇದಕ್ಕೂ ವಿಶಿಷ್ಟವಾದ ಧ್ವನಿ ಇದೆ. ಇಂತಹ ಧ್ವನಿಗಳನ್ನು ಒಳಗೊಂಡ ದತ್ತಾಂಶ ನಿರ್ಮಿಸುವುದು ಡಾ. ರೋಹಿಣಿ ತಂಡದ ಉದ್ದೇಶ. ಈ ಧ್ವನಿ ಸಂಗ್ರಹವು ಯಾವುದೇ ಧ್ವನಿಯ ಪ್ರಭೇದವನ್ನು ಗುರುತಿಸುವಂತೆ ಮಾಡಬ ಹುದು. ಪ್ರಾಣಿಯನ್ನು ಮುಟ್ಟದೆಯೂ, ಧ್ವನಿ ಮಾತ್ರದಿಂದ ಅದನ್ನು ಗುರುತಿಸುವ ಸಾಧ್ಯತೆಯುಳ್ಳ ಈ ವಿಧಾನವು ನಿರ್ದಿಷ್ಟ ಪ್ರದೇಶದ ಜೀವವೈವಿಧ್ಯ ಮಾಪನಕ್ಕೆ ನೆರವಾಗುತ್ತದೆ.

ಸಂವಹನದ ವಿಕಾಸ: ಈ ಧ್ವನಿ ವಿಶ್ಲೇಷಣೆ ಸಂಶೋಧ ನೆಯನ್ನು ಹೊರತು ಪಡಿಸಿ, ರೋಹಿಣಿ ಅವರ ತಂಡವು ಸಂವಹ ನದ ವಿಕಾಸ ಮತ್ತು ಈ ವಿಕಾಸ ಪ್ರಕ್ರಿಯೆಯಲ್ಲಿ ಜೀವಿಯ ವಾಸಸ್ಥಳದ ಪಾತ್ರ ವನ್ನು ಕುರಿತೂ ಅಧ್ಯಯನ ನಡೆಸಿದೆ. ‘ಧ್ವನಿಸಂಕೇತಗಳ ಪ್ರೇಷಕ, ಸಂಗ್ರಾಹಕ ಮತ್ತು ಸಂಕೇತಗಳ ವಿಸ್ತೃತ ಅಧ್ಯಯನವು ಪ್ರಕೃತಿಯ ಅತಿ ವಿಸ್ಮಯಕಾರಿ ಸಂವಹನ ಜಾಲಗಳ ಕುರಿತು ಬೆಳಕು ಚೆಲ್ಲಬಲ್ಲದು, ಅಲ್ಲದೆ ವಿಕಾಸವು ಯಾಕೆ ಈ ಹಾದಿಯನ್ನೇ ಆಯ್ದುಕೊಂಡಿತು ಎಂಬುದರ ಕುರಿತಾದ ಹೊಳಹನ್ನೂ ನೀಡಬಲ್ಲದು’ ಎನ್ನುತ್ತಾರೆ ಡಾ. ರೋಹಿಣಿ.

ಈ ವಿಜ್ಞಾನಿಗಳ ತಂಡವು ಮಳೆ ಕಾಡುಗಳಲ್ಲಿ ಕಂಡು ಬರುವ ಕೀಟ ಮತ್ತು ಪಕ್ಷಿ ಪ್ರಭೇದಗಳ ಸಂವಹನವನ್ನೂ ಅಭ್ಯಸಿಸುತ್ತಿದೆ. ಹಲವು ರೀತಿಯ ಶಬ್ದಗಳು, ದಟ್ಟ ಮರಗಳು ಇರುವ ಈ ಕಾಡಿನಲ್ಲಿ ಶಬ್ದವು ಅಸ್ಪಷ್ಟವಾಗುವ, ಕ್ಷೀಣವಾಗುವ ಸಾಧ್ಯತೆಗಳು ಹೆಚ್ಚು. ಇಂತಹ ಪ್ರಾಕೃತಿಕ ಸನ್ನಿವೇಶದಲ್ಲಿ, ಅಲ್ಲಿನ ಪ್ರಾಣಿಗಳು ಯಾವ ಯಾವ ವಿಧಾನ ಗಳಿಂದ ತಮ್ಮ ಧ್ವನಿಯ ಸ್ಪಷ್ಟತೆಯನ್ನು ಕಾಯ್ದುಕೊಳ್ಳುತ್ತವೆ ಎಂದು ತಿಳಿಯುವುದೇ ಈ ತಂಡದ ಮುಖ್ಯ ಉದ್ದೇಶ.

ಪ್ರೇಷಕ ಪ್ರಾಣಿಯ ಧ್ವನಿಸಂಕೇತ ಗಳು, ಆ ಧ್ವನಿ ಚದುರುತ್ತಾ ಚಲಿಸುವ ಬಗೆ ಮತ್ತು ಅದು ಕೇಳುಗನಿಗೆ ಕೇಳುವ ರೀತಿ ಎಲ್ಲವನ್ನೂ ಅಭ್ಯಸಿಸಿ ಮೂರು ಆಯಾಮದ ಶಬ್ದವಲಯವನ್ನು ರಚಿಸುವುದು ಪ್ರಯೋಗಾಲಯದ ಮತ್ತೊಂದು ಯೋಜನೆ. ಇದರ ಮೂಲಕ ಅರಣ್ಯವನ್ನು ಅರಣ್ಯವಾಸಿಗಳ ಕಿವಿಯ ಮೂಲಕ ಶಾಬ್ದಿಕವಾಗಿ ಅರಿಯುವ ಪ್ರಯತ್ನ ನಡೆಯುತ್ತಿದೆ.

ಧ್ವನಿಪೆಟ್ಟಿಗೆ ಹೊಂದಿರುವ ಮಳೆ    ಕಾಡಿನ ವಾಸಿಗಳನ್ನೂ ರೋಹಿಣಿ ಅವರ ತಂಡವು ಅಧ್ಯಯನ ಮಾಡುತ್ತಿದೆ. ಕಾಡಿನಲ್ಲಿ ಆನೆಯೇ ಮುಂತಾದ ಪ್ರಾಣಿಗಳ ಕೂಗನ್ನು ಅನುಕರಿಸುವ ವಿಶಿಷ್ಟ ಪಕ್ಷಿ ರಾಕೆಟ್ ಬಾಲದ ಡ್ರೋಂಗೋ. ಇದರ ಧ್ವನಿ ವಿನ್ಯಾಸ ಮತ್ತು ಧ್ವನಿ ಸಮೃದ್ಧಿ ವಿಕಾಸದ ಮೂಲವನ್ನೂ ಇವರು ಹುಡುಕಹೊರಟಿದ್ದಾರೆ.

ಒಟ್ಟಿನಲ್ಲಿ ಇಲ್ಲಿ ಯಾವ ಶಬ್ದವೂ ಅಮುಖ್ಯವಲ್ಲ. ಪ್ರತಿ ಶಬ್ದವೂ ಒಂದು ವಿಸ್ಮಯ. ಆ ಶಬ್ದವು ಅದೇ ರೀತಿ ಇರುವುದಕ್ಕೆ ಕಾರಣ ಮತ್ತು ಅದು ತನ್ನ ಮೂಲದ ಬಗ್ಗೆ ಕೊಡುವ ಮಾಹಿತಿ ನಮ್ಮ ಮುಂದೆ ಹೊಸ ಶಾಬ್ದಿಕ ಪ್ರಪಂಚವನ್ನೇ ತೆರೆದೀತು. ‘ನಾದಮಯ ಈ ಲೋಕವೆಲ್ಲಾ’ ಎಂಬುದು ನಿಜವಲ್ಲವೇ, ಮತ್ತೆ?

– ಗುಬ್ಬಿ ಲ್ಯಾಬ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT