ಕೀಟನಾಶಕ್ಕೆ ಸ್ವಯಂಚಾಲಿತ ಸಿಂಪರಣೆ ಯಂತ್ರ!

7

ಕೀಟನಾಶಕ್ಕೆ ಸ್ವಯಂಚಾಲಿತ ಸಿಂಪರಣೆ ಯಂತ್ರ!

Published:
Updated:

ಚಿಕ್ಕೋಡಿ: ಕೆ.ಎಲ್‌ಇ ಸಂಸ್ಥೆಯ ಚಿಕ್ಕೋಡಿಯ ಸಿ.ಬಿ.ಕೋರೆ ಬಹುತಾಂತ್ರಿಕ ವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಸಾಮಾನ್ಯ ತಂತ್ರಜ್ಞಾನವನ್ನು ಬಳಸಿ ತಯಾರಿಸಿರುವ ಬೆಳೆಗಳಿಗೆ ಕೀಟನಾಶಕ ಸ್ವಯಂಚಾಲಿತ ಸಿಂಪರಣೆ ಯಂತ್ರ ಮತ್ತು ಟ್ಯಾಂಕ್‌ನಿಂದ ನೀರೆತ್ತುವ ಯಂತ್ರ ಕೃಷಿಮೇಳದಲ್ಲಿ ಜನಾಕರ್ಷಣೆ ಪಡೆದವು.ಬೈಸಿಕಲ್‌ನ ಎರಡು ಚಕ್ರಗಳು, ಒಂದು ಚಿಕ್ಕ ಟ್ಯಾಂಕ್, ಸೈಕಲ್ ಟ್ಯೂಬ್‌ಗೆ ಗಾಳಿ ತುಂಬುವ ಒಂದು ಪಂಪ್ ಹಾಗೂ ನ್ಯೂಮ್ಯಾಟಿಕ್ ಪೈಪ್ ಹಾಗೂ ಚಿಕ್ಕ ಚಿಕ್ಕ ಸರಳುಗಳನ್ನು ಬಳಸಿ ಸಿದ್ಧಪಡಿಸಿರುವ ತೀರಾ ಸರಳವಾದ ಈ ಉಪಕರಣ ಕೃಷಿಕರಿಗೆ ತೀರಾ ಉಪಯುಕ್ತವಾಗಿದೆ. ಯಂತ್ರವನ್ನು ಕೈಯಿಂದ ಬೆಳೆಯೊಳಗೆ ನೂಕುತ್ತ ಹೋಗುತ್ತಿದ್ದಂತೆಯೇ ಎರಡು ಚಕ್ರಗಳ ಮಧ್ಯೆ ಅಳವಡಿಸಲಾಗಿರುವ ಕ್ರ್ಯಾಂಕ್ ಶಾಪ್ಟ್ ತಿರುಗಲಾರಂಭಿಸುತ್ತದೆ.ಅದಕ್ಕೆ ಸಂಪರ್ಕ ಕಲ್ಪಿಸಿರುವ ಪಂಪ್‌ನಿಂದ ಟ್ಯಾಂಕ್‌ನಲ್ಲಿ ನ್ಯೂಮ್ಯಾಟಿಕ್ ಪೈಪ್‌ಗಳ ಮೂಲಕ ಗಾಳಿ ಸಂಗ್ರಹವಾಗುತ್ತದೆ. ಆ ಗಾಳಿಯ ಒತ್ತಡ ಹೆಚ್ಚಾದಾಗ ಟ್ಯಾಂಕ್‌ನಲ್ಲಿ ಶೇಖರಿಸಿರುವ ಕೀಟನಾಶಕ ದ್ರಾವಣ ಪೈಪ್‌ಗಳ ಮೂಲಕ ಸಿಂಪರಣೆ ಆಗುತ್ತದೆ. ಈ ಯಂತ್ರಕ್ಕೆ ಅಳವಡಿಸಿರುವ ಟ್ಯಾಂಕ್‌ನಲ್ಲಿ 10 ಲೀಟರ್ ದ್ರಾವಣವನ್ನು ಹಾಕಬಹುದಾಗಿದೆ. ಇದನ್ನು ತಯಾರಿಸಲು ಸುಮಾರು ಎಂಟು ಸಾವಿರ ರೂ. ಖರ್ಚು ಬರುತ್ತದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.ವಿದ್ಯಾಲಯದ ಉಪನ್ಯಾಸಕ ಸಂಗಮೇಶ ಎ.ಕೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ವಿನೋದ ಹುಚ್ಚೆನ್ನವರ, ವಿಶ್ವನಾಥ ಅಮಲಝರಿ, ವಿನಾಯಕ ನಾಯಕನ ಮತ್ತು ಶಿವರಾಜ ಮುಗಳಿ ಈ ಯಂತ್ರವನ್ನು ಸಿದ್ದಪಡಿಸಿದ್ದಾರೆ.ಇದೇ ವಿದ್ಯಾಲಯದ ವಿದ್ಯಾರ್ಥಿಗಳ ಇನ್ನೊಂದು ತಂಡ ಟ್ಯಾಂಕ್‌ನಿಂದ ನಿರೇತ್ತುವ ಯಂತ್ರವೊಂದನ್ನು ತಯಾರಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಈ ಯಂತ್ರವನ್ನು ಬಳಸಿ ಟ್ಯಾಂಕ್‌ನಿಂದ ಮನೆಯೊಳಗೆ ನೀರು ಬಳಸಬಹುದಾಗಿದೆ. ಸೈಕಲ್‌ವೊಂದಕ್ಕೆ ಪಂಪ್‌ಅನ್ನು ಅಳವಡಿಸಲಾಗಿದೆ. ಸೈಕಲ್ ಚಕ್ರಕ್ಕೆ ಅಳವಡಿಸಲಾಗಿರುವ ಪರ್ಯಾಯ ರೀಮ್ ಮತ್ತು ಪಂಪ್‌ಗೆ ಗಿರಣಿಗೆ ಬಳಸುವ ವಿ.ಮಾದರಿ ಬೆಲ್ಟ್ ಅಳವಡಿಸಲಾಗಿದ್ದು, ಸೈಕಲ್‌ನ ಪೆಡಲ್ ತುಳಿಯುತ್ತಿದ್ದಂತೆಯೇ ಬೆಲ್ಟ್ ತಿರುಗಿ ಪಂಪ್‌ನಿಂದ ನೀರು ಎತ್ತಲಾರಂಭಿಸುತ್ತದೆ. ಎಷ್ಟು ವೇಗವಾಗಿ ಪೆಡಲ್ ತುಳಿಯುತ್ತದೆಯೋ ಅಷ್ಟು ದೂರದವರೆಗೆ ನೀರು ಎತ್ತಬಹುದಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಇದನ್ನು ತಯಾರಿಸಲು ಮಾಡಿರುವ ವೆಚ್ಚ ಕೇವಲ ಆರು ಸಾವಿರ ರೂ.ಮಾತ್ರ. ಈ ಯಂತ್ರ ಬಳಕೆಯಿಂದ ವಿದ್ಯುತ್ ಉಳಿತಾಯದ ಜತೆಗೆ ವ್ಯಾಯಾಮವೂ ಆಗುತ್ತದೆ ಎಂಬುದು ಅವರ ಅಭಿಪ್ರಾಯ. ಈ ಯಂತ್ರವನ್ನು ಮುಬಾರಕ ಮುಲ್ಲಾ, ನವೀನ ಯಾದವಾಡ, ಕಾಶೀನಾಥ ಜಾಧವ ಅವರು ತಯಾರಿಸಿದ್ದಾರೆ.ಸಾರ್ವಜನಿಕರು ಇಂತಹ ತಂತ್ರ ಜ್ಞಾನವನ್ನು ಬಳಸಿಕೊಂಡಲ್ಲಿ ವಿದ್ಯಾರ್ಥಿಗಳ ಶ್ರಮ ಸಾರ್ಥಕವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry