ಶನಿವಾರ, ಮೇ 21, 2022
25 °C

ಕೀಟನಾಶಕ ಬಳಕೆಯ ವಿಷವರ್ತುಲದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು ಯಾವಾಗಲೂ ತರಕಾರಿ, ಹಣ್ಣು ಅಥವಾ ದಿನಸಿ ಖರೀದಿಸಲು ಹೋಗುವವನಲ್ಲ. ನನ್ನ ಈಗಿನ ವೃತ್ತಿಯ ಅಗತ್ಯಗಳು ಇಂಥ `ವಿಲಾಸಿ~ ಕೆಲಸಗಳನ್ನು ಮಾಡಲು ಅನುವು ಕೂಡ ಮಾಡಿಕೊಡುವುದಿಲ್ಲ. ಜೊತೆಗೆ ನನ್ನ ವೃತ್ತಿಯಿಂದ ಇಂಥ ಕಾರ್ಯಗಳಿಗೆ ಅನೇಕ ಅಡೆತಡೆಗಳೂ ಉಂಟಾಗಿವೆ.  ನಾನು ಸಣ್ಣವನಿದ್ದಾಗ, ಇಂಥ ಕೆಲಸಗಳಿಗೆ ನನ್ನ ಅಮ್ಮ ಮತ್ತು ಚಿಕ್ಕಮ್ಮನೊಂದಿಗೆ ಜೊತೆಯಾಗಿ ಮಾರುಕಟ್ಟೆಗೆ ಹೋಗುತ್ತಿದ್ದೆ ಎನ್ನುವುದು ನನಗಿನ್ನೂ ಚೆನ್ನಾಗಿ ನೆನಪಿದೆ.ಅವರು ಹಣ್ಣು, ತರಕಾರಿ ಕೊಳ್ಳಲು ಹೋಗುವಾಗಲೆಲ್ಲ ಅವರನ್ನು ಹಿಂಬಾಲಿಸಬೇಕಾಗುತ್ತಿತ್ತು. ತರಕಾರಿ ಖರೀದಿಯೇ ನನಗೆ ರೇಜಿಗೆ ಹುಟ್ಟಿಸುತ್ತಿತ್ತು. ಒಂದೊಂದು ತರಕಾರಿ ಖರೀದಿಸುವಾಗಲೂ ಆಯ್ಕೆ ಮಾಡಲು ಅವರು ಸಾಕಷ್ಟು ಸಮಯ ಕಳೆಯುತ್ತಿದ್ದರು. ಪ್ರತಿ ಹಣ್ಣನ್ನೂ ಮುಟ್ಟಿ, ಪರಿಶೀಲಿಸುತ್ತಿದ್ದರು. ಅತ್ಯಾಸಕ್ತಿಯಿಂದ ಅದನ್ನು ಇಡಿಯಾಗಿ ಪರಿಶೀಲಿಸುತ್ತಿದ್ದರು. ಅದು ತಾಜಾತನದಿಂದ ಕೂಡಿದೆಯೇ. ಉತ್ತಮ ಗುಣಮಟ್ಟದ್ದಾಗಿದೆಯೇ. ಪ್ರತಿ ಮಾರಾಟಗಾರನ ಬಳಿಯೂ ತಮಗೆ ಬೇಕಿರುವುದನ್ನು ಹೋಲಿಸಿ ನೋಡುತ್ತಿದ್ದರು. ಯಾರ ಬಳಿ ಹೆಚ್ಚು ತಾಜಾ ಹಾಗೂ ಉತ್ತಮವಾದುದು ದೊರೆಯಲಿದೆ ಎಂಬುದನ್ನು ತೀರ್ಮಾನಿಸುತ್ತಿದ್ದರು. ನನ್ನ ಸ್ನೇಹಿತರೆಲ್ಲರೂ ಕ್ರಿಕೆಟ್ ಆಡಲು ನನಗೆ ಕಾಯುತ್ತಿರುವ ಸಮಯದಲ್ಲಿ ಇವರ ಚೌಕಾಸಿ ವ್ಯಾಪಾರ ನಿರಂತರವಾಗಿ  ನಡೆಯುತ್ತಿತ್ತು.ಈಗ ನಾನು ಖಾರ್ ಮಾರುಕಟ್ಟೆಯಿಂದ ಅಥವಾ ಖಾರ್ ಟೆಲಿಫೋನ್ ಎಕ್ಸ್‌ಚೇಂಜ್ ಕಚೇರಿಯನ್ನು ಕೂಡುವ ಅಡ್ಡರಸ್ತೆಯಲ್ಲಿ ಹಾದು ಹೋಗುವ ಸಂದರ್ಭದಲ್ಲೆಲ್ಲ ಅಲ್ಲಿಯ ಬೀದಿ ಬದಿಯ ತರಕಾರಿ ಹಾಗೂ ಹಣ್ಣು ಮಾರಾಟಗಾರರನ್ನು ನೋಡುತ್ತೇನೆ. ಈಗಲೂ ಕೆಲ ಮಹಿಳೆಯರು ನನ್ನಮ್ಮ, ನನ್ನ ಚಿಕ್ಕಮ್ಮನಂತೆಯೇ ವ್ಯಾಪಾರಕ್ಕೆ ಇಳಿದಿರುತ್ತಾರೆ. ಅದನ್ನು ನೋಡಿದಾಗಲೆಲ್ಲ ನನ್ನ ಬಾಲ್ಯ ನೆನಪಾಗುತ್ತದೆ. ಅಮ್ಮನ ಹಿಂದೆ, ಚಿಕ್ಕಮ್ಮನ ಹಿಂದೆ ಇಂಥವೇ ಮಧ್ಯಾಹ್ನ ಅಥವಾ ಸಂಜೆಗಳಲ್ಲಿ  ಭಾರಿ ತೂಕದ ಚೀಲಗಳನ್ನು ಹೊತ್ತು ಅಲ್ಲೆಲ್ಲ ಓಡಾಡಿದ್ದು ನೆನಪಾಗುತ್ತದೆ. ಗೃಹಿಣಿಯರು ತಮ್ಮ ಕುಟುಂಬಕ್ಕೆ ತಾಜಾ ತರಕಾರಿ, ಹಣ್ಣುಗಳನ್ನೇ ಖರೀದಿಸಬೇಕೆಂದು  ಅದೆಷ್ಟು ಸಮಯ ವ್ಯಯ ಮಾಡುತ್ತಾರೆ. ಆದರೆ, ಅದೆಷ್ಟೇ ತಾಜಾತನದಿಂದ ಕೂಡಿದ ತರಕಾರಿ ಅಥವಾ ಹಣ್ಣು ಆಗಿರಲಿ, ಅದು ವಿಷಯುಕ್ತ ಆಗಿದೆಯೆಂಬುದು ನಮಗೆ ತಿಳಿದಿದೆಯೇ? ಆ ಹಣ್ಣು ಅಥವಾ ತರಕಾರಿ ವಿಷಕಾರಿ ಎಂಬುದು ನಮ್ಮ ಅರಿವಿಗೆ ಬಂದಿದೆಯೇ.ನಾವು ಹಣ್ಣಿನ ತಾಜಾತನವನ್ನು ಮುಟ್ಟುವುದರಿಂದ, ವಾಸನೆ ನೋಡುವುದರಿಂದ ಅಥವಾ ಒಂಚೂರು ಅಮುಕಿ ನೋಡುವುದರ ಮೂಲಕ ಪರಿಶೀಲಿಸುತ್ತೇವೆ. ಅಥವಾ ಹಣ್ಣಿನ ಮೇಲೆ ಕಲೆ ಬಿದ್ದಿದೆಯೇ, ಮುದುಡಿದೆಯೇ ಎಂದೆಲ್ಲ ನೋಡುತ್ತೇವೆ. ಆದರೆ, ಹಣ್ಣು,  ತರಕಾರಿಯೊಳಗೆ ಅದೆಷ್ಟು ಪ್ರಮಾಣದ ಕೀಟನಾಶಕದ ಅಂಶ ಹೊಂದಿದೆ ಎಂಬುದನ್ನು ಹೇಗೆ ಪರಿಶೀಲಿಸುವುದು ಎನ್ನುವುದು ಬಹುತೇಕರಿಗೆ ಗೊತ್ತೇ ಇಲ್ಲ.ನಾವು ಜೀವಿಸಲು ಆಹಾರ ಸೇವಿಸುತ್ತೇವೆ. ನಮ್ಮ ದೇಹಕ್ಕೆ ಪೌಷ್ಟಿಕಾಂಶಗಳ ಅಗತ್ಯ ಇರುತ್ತದೆ. ಪೌಷ್ಟಿಕಾಂಶ ಆಹಾರವು ನಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ನಾವು ಆರಾಮವಾಗಿರಲು, ರೋಗಗಳ ವಿರುದ್ಧ ನಿರೋಧಕ ಶಕ್ತಿಗಳನ್ನು ಬೆಳೆಸಿಕೊಳ್ಳಲು ಮುಂತಾದ ಕಾರಣಕ್ಕೆ ಆಹಾರ ಸೇವಿಸುತ್ತೇವೆ. ನಾವು ನಮ್ಮ ಆಹಾರದೊಂದಿಗೆ ಅಧಿಕ ಪ್ರಮಾಣದ ಕೀಟನಾಶಕವನ್ನೂ ಸೇವಿಸಿದರೆ... ಪೌಷ್ಟಿಕಾಂಶದೊಡನೆ ನಾವು ವಿಷವನ್ನೂ ಸೇವಿಸುತ್ತಿದ್ದೇವೆ. ಹಾಗಿದ್ದಾಗ, ನಾವು ಆಹಾರ ಸೇವನೆಯ ಮೂಲ ಮತ್ತು ಮೊದಲ ಕಾರಣವನ್ನೇ ಅಲ್ಲಗಳೆದಂತೆ ಆಗುತ್ತದೆ.1960ರ ದಶಕದಲ್ಲಿ ದೇಶವು ಕೃಷಿ ಪದ್ಧತಿಯಲ್ಲಿ ಹಸಿರು ಕ್ರಾಂತಿಯನ್ನೇ ಕಂಡಿತು. ಆ ಕಾಲದಲ್ಲಿ ಶಾಸನ ನಿರ್ಮಾಪಕರಿಗೆ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಪೂರೈಸಲು ರಾಸಾಯನಿಕ ಯುಕ್ತ ಕೃಷಿ ಅಗತ್ಯವಾಗಿ ಕಂಡಿತು. ರಾಸಾಯನಿಕ ಬಳಕೆಯಿಂದ ಉತ್ಪಾದನೆ ಹೆಚ್ಚುತ್ತದೆ. ಪ್ರತಿ ಎಕರೆಗೂ ಇಳುವರಿ ಹೆಚ್ಚುತ್ತದೆ ಎಂದೂ ಅನಿಸಿತ್ತು.ಹೀಗಾಗಿ ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಹಸ್ತಕ್ಷೇಪ ಆರಂಭವಾಯಿತು. ಇಳುವರಿ ಹೆಚ್ಚಿಸಲು ಕೃತಕ ಪೋಷಕಾಂಶಗಳು, ಕೀಟನಾಶಕಗಳನ್ನು ಬಳಸುವಂತಾಯಿತು. ಕೀಟಗಳು ನಮ್ಮ ಕೃಷಿ ಇಳುವರಿಯನ್ನು ತಿಂದು ಹಾಕುವ ಮೂಲಕ ಉತ್ಪಾದನಾ ಪ್ರಮಾಣದಲ್ಲಿ ಇಳಿಕೆ ಕಂಡು ಬರುವಂತೆ ಮಾಡುತ್ತಿದ್ದವು. ಆದ್ದರಿಂದ ಇಂಥ ಕೀಟಗಳನ್ನು ಕೊಲ್ಲಬೇಕು ಎಂಬ ನಿರ್ಣಯಕ್ಕೆ ಬರಲಾಯಿತು. ಕೀಟಗಳನ್ನು ಸಾಯಿಸಲು ಬಳಸುವ  ರಾಸಾಯನಿಕವನ್ನೇ ಕೀಟನಾಶಕಗಳೆಂದು ಕರೆಯಲಾಗುತ್ತದೆ. ಮೂಲತಃ ಇದು ಕೀಟಗಳನ್ನು ಕೊಂದು ಹಾಕುವ ವಿಷವಾಗಿದೆ.ಬೆಳೆಯ ಮೇಲೆ ಸಿಂಪಡಿಸಲಾಗುವ ಎಲ್ಲ ಕೀಟನಾಶಕಗಳಲ್ಲಿಯೂ ಕೇವಲ ಶೇ 1ರಷ್ಟು ಮಾತ್ರ ಕೀಟಗಳ ಮೇಲೆ ಬೀಳುತ್ತದೆ. ಶೇ 99ರಷ್ಟು ಪಾಲು ಬೆಳೆಗಳ ಮೇಲೆಯೇ ಬಿದ್ದಿರುತ್ತದೆ. ನಂತರ ಮಣ್ಣಿನಲ್ಲಿ ಕೀಟನಾಶಕ ಸೇರಿಹೋಗುತ್ತದೆ. ಮತ್ತೆ ನೀರಿನೊಂದಿಗೂ ಬೆರೆತು ಹೋಗುತ್ತದೆ. ಹಾಗೆಯೇ ಗಾಳಿಯ ಮೂಲಕ ಕೊಂಚ ದೂರವೂ ಪಸರಿಸುತ್ತದೆ. ಹೀಗೆ ಈ ವಿಷವು ನಮ್ಮ ಆಹಾರದೊಂದಿಗೆ ಬೆರೆತು ಹೋಗುತ್ತದೆ. ಜೊತೆಗೆ ನಮ್ಮಳಗೂ ಬೆರೆಯುತ್ತದೆ.ನಿಸರ್ಗವು ಸಮತೋಲನ ಕಾಪಾಡಿಕೊಳ್ಳಲು ತನ್ನದೇ ಆದ ವಿಧಾನ ಅನುಸರಿಸುತ್ತದೆ. ಹೀಗಾಗಿ ನಮ್ಮ ಬೆಳೆಗಳನ್ನು ನಾಶ ಮಾಡುವ ಈ ಪ್ರತಿಯೊಂದು ಕೀಟವೂ ಇತರ ಕೀಟಭಕ್ಷಕವನ್ನೂ ಹೊಂದಿವೆ. ಕೀಟ ಭಕ್ಷಕಗಳು ಕೀಟಗಳನ್ನು ಸಂಹರಿಸುತ್ತವೆ.ವಿಶಾಲ ಅರ್ಥದಲ್ಲಿ ಮಾತನಾಡುವುದಾದರೆ, ಕೀಟಗಳಲ್ಲಿ ಎರಡು ಪ್ರಕಾರಗಳಿವೆ. ಸಸ್ಯಾಹಾರಿ ಕೀಟಗಳು. ಅಂದರೆ ಬೆಳೆಗಳನ್ನೇ ಸೇವಿಸುವ ಕೀಟಗಳು. ಮಾಂಸಾಹಾರಿ ಕೀಟಗಳು. ಅಂದರೆ ನಮ್ಮ ಬೆಳೆಯನ್ನು ಸಂಹರಿಸುವ ಕೀಟಗಳನ್ನೇ ಭಕ್ಷಿಸುವ ಕೀಟಭಕ್ಷಕಗಳು. ಕೀಟನಾಶಕಗಳು ಹೀಗೆ ಕೀಟಗಳನ್ನು ಸಸ್ಯಾಹಾರಿ ಅಥವಾ ಮಾಂಸಾಹಾರಿ ಕೀಟಗಳೆಂದು ವಿಂಗಡಿಸುವುದಿಲ್ಲ. ಅದು ವಿಷ. ಅದು ಎರಡನ್ನೂ ಒಟ್ಟೊಟ್ಟಿಗೆ ಸಾಯಿಸುತ್ತದೆ. ಹಾಗಾಗಿ ನಾವು ಕೀಟಗಳೊಂದಿಗೆ ನಮ್ಮ ಮಿತ್ರಕೀಟಗಳನ್ನೂ ಕೊಲ್ಲುತ್ತಿದ್ದೇವೆ.ಬದುಕುಳಿಯುವ ಹಾನಿಕಾರಕ ಕೀಟಗಳು ಕೀಟನಾಶಕ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿವೆ. ನಂತರ ಇದೇ ಕೀಟಗಳನ್ನು ಕೊಲ್ಲಲು ನೀವು ಇನ್ನಷ್ಟು ಕೀಟನಾಶಕ ಸಿಂಪಡಿಸಬೇಕಾಗುತ್ತದೆ. ಇದೊಂದು ವಿಷವರ್ತುಲ. ಈ ವರ್ತುಲದಿಂದ ನಾವು ನಿರಂತರವಾಗಿ ನಮ್ಮ ರೈತಸ್ನೇಹಿ ಕೀಟಭಕ್ಷಗಳ ನಿವಾರಣೆ ಮಾಡುತ್ತಲೇ ಇದ್ದೇವೆ. ಜೊತೆಗೆ ನಾವು ಇನ್ನಷ್ಟು, ಮತ್ತಷ್ಟು ಕೀಟನಾಶಕವನ್ನು ಸೇವಿಸುವಂತೆ ಮಾಡುವ ವರ್ತುಲದ ಭಾಗವಾಗುತ್ತಲೇ ಹೋಗುತ್ತಿದ್ದೇವೆ.ಒಂದು ವೇಳೆ ನಮ್ಮ ಆಹಾರದಲ್ಲಿರುವ ಕೀಟನಾಶಕವು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದಾದರೆ ಅದು ನಮ್ಮ ರೈತರ ಮೇಲೆಯೂ ಪರಿಣಾಮ ಬೀರುತ್ತಿರಬಹುದಲ್ಲವೇ. ಹೇಗೆ ಎನ್ನುವೀರಾ. ನಮಗಿಂತಲೂ ಈ ಕೀಟನಾಶಕಗಳ ಪ್ರಭಾವಕ್ಕೆ ನೇರವಾಗಿ ಬಲಿಯಾಗುವವರು ಅವರು. ಕೀಟನಾಶಕಗಳ ಜತೆ ರೈತರು   ನೇರ ಸಂಪರ್ಕ ಹೊಂದಿರುತ್ತಾರೆ. ಅವರೇ ಅದನ್ನು ಬೆಳೆಗಳ ಮೇಲೆ ಸಿಂಪಡಿಸುತ್ತಾರೆ. ನಾವು ಕೀಟನಾಶಕದೊಂದಿಗೆ ಎಲ್ಲಿಯೂ ನೇರ ಸಂಪರ್ಕದಲ್ಲಿರುವುದಿಲ್ಲ. ಹೀಗಾಗಿ ಕೃಷಿ ನಿರತ ರೈತನ ಆರೋಗ್ಯದ ಮೇಲೆ ಗಂಭೀರವಾದ ದುಷ್ಪರಿಣಾಮಗಳು ಉಂಟಾಗುತ್ತವೆ.  ರೈತರು ಸದಾ ಸಾಲಗಾರರಾಗಲು ಕೀಟನಾಶಕಗಳ ದುಬಾರಿ ಬೆಲೆಯೂ ನೇರ ಕಾರಣವಾಗುತ್ತಿದೆ.ಆಂಧ್ರಪ್ರದೇಶದಲ್ಲಿ ಕೀಟನಾಶಕಗಳ ಬಳಕೆ ಇಲ್ಲದ ನೈಸರ್ಗಿಕ ಕೃಷಿ ಪದ್ಧತಿಯನ್ನು ಪ್ರಯೋಗಕ್ಕೆ ತರಲಾಗಿದೆ. ಆರಂಭದಲ್ಲಿ ಕೇವಲ ಕೆಲವೇ ಗ್ರಾಮಗಳಲ್ಲಿ 225 ಎಕರೆಗಳಲ್ಲಿ ಈ ಕೃಷಿ ಪದ್ಧತಿಯನ್ನು ಜಾರಿಗೆ ತರಲಾಯಿತು.   ಅದರ ಯಶಸ್ಸಿನಿಂದಾಗಿ ಈಗ 35 ಲಕ್ಷ ಎಕರೆಗಳಲ್ಲಿ ಇಂಥದ್ದೇ ಸಾವಯವ (ನೈಸರ್ಗಿಕ) ಕೃಷಿ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಇದು ಸಾಧ್ಯವಾದುದು ಮಹಿಳೆಯರ ಸಾಮುದಾಯಿಕ ಪ್ರಯತ್ನ ಮತ್ತು ಆಂಧ್ರಪ್ರದೇಶ ಸರ್ಕಾರದ ಸಹಕಾರದಿಂದ. ಸಾವಯವ ವಿಧಾನದಲ್ಲಿ ಕೃಷಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವಲ್ಲಿ ಸಿಕ್ಕಿಂ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಇನ್ನುಳಿದ ರಾಜ್ಯಗಳೂ ಇದೇ ಹಾದಿಯಲ್ಲಿ ಹೆಜ್ಜೆ ಹಾಕುತ್ತಿವೆ.ಕೀಟನಾಶಕಗಳ ವಿರುದ್ಧದ ವಾದಗಳು ಅನೇಕ. ಅವುಗಳಲ್ಲಿ ಬಹುತೇಕ ವಾದಗಳನ್ನು ನಮ್ಮ ಈ ಕಾರ್ಯಕ್ರಮದಲ್ಲಿ ಸಮರ್ಥವಾಗಿ ತೋರಿಸಲಾಗಿದೆ. ನನ್ನ ಆಯ್ಕೆ ಬಲು ಸರಳವಾಗಿದೆ. ನಾವು ನಿಧಾನವಾಗಿಯಾದರೂ ಸಾವಯವ  ಕೃಷಿಯತ್ತ ಸಂಪೂರ್ಣವಾಗಿ ಬದಲಾಗಬೇಕು ಎಂದು ನನಗೆ ವೈಯಕ್ತಿಕವಾಗಿ ಎನ್ನಿಸುತ್ತದೆ.  ಹಾಗೆ ಸಂಪೂರ್ಣವಾಗಿ ಸಾವಯವ (ಆರ್ಗ್ಯಾನಿಕ್) ಕೃಷಿ ಪದ್ಧತಿಗೆ  ಬದಲಾಗುವವರೆಗೂ ಸರ್ಕಾರವು ಮಾರುಕಟ್ಟೆಗೆ ಬರುವ ಎಲ್ಲ ಆಹಾರೋತ್ಪನ್ನವನ್ನು ಪರಿಶೀಲಿಸುವ ಕ್ರಮಕೈಗೊಳ್ಳಬೇಕು. ದೇಶದಾದ್ಯಂತ ಎಲ್ಲ ಸಣ್ಣ ದೊಡ್ಡನಗರಗಳಲ್ಲಿಯೂ ಈ ಕ್ರಮಕೈಗೊಳ್ಳಬೇಕು. ನಮ್ಮ ಆಹಾರದಲ್ಲಿರುವ ವಿಷಕಾರಿ ಅಂಶ  ಅಳೆಯುವ ಅಥವಾ ಗುರುತಿಸುವ ಕೆಲಸವನ್ನು ಸರ್ಕಾರದ ಈ ಅಂಗ ನಿರಂತರವಾಗಿ ನಿಖರವಾಗಿ ಮಾಡಬೇಕು.ಅಲ್ಲಿಯವರೆಗೂ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ -ಸಿಎಸ್‌ಸಿ) ನೀಡಿರುವ ಈ ವರದಿಯೊಂದಿಗೆ ನಾವು ಜೀವಿಸಬೇಕು.ಸದ್ಯಕ್ಕೆ ಸೇವಿಸುವ ಆಹಾರದ ಮೂಲಕ ನಾವೆಲ್ಲ ಎಂಆರ್‌ಎಲ್ (ಎಂಆರ್‌ಎಲ್: ಮ್ಯಾಕ್ಸಿಮಮ್ ರೆಸಿಡ್ಯು ಲಿಮಿಟ್- ಶೇಷ ಕೀಟನಾಶಕದ ಗರಿಷ್ಠಮಿತಿ) ಅನ್ನು ಮೀರಿ ವಿಷ ಸೇವನೆ ಮಾಡುತ್ತಿಲ್ಲ.  ಹಾಗೂ ವಿಷದ ಅಂಶವು ಅಂಗೀಕರಿಸಬಹುದಾದ ಪ್ರಮಾಣದಲ್ಲಿ ಇದೆ ಎಂಬುದು ಖಾತರಿಯಾಗಬೇಕು.  ನಮ್ಮ ಪ್ರತಿದಿನದ ಆಹಾರ ಸೇವನೆಯ ಸರಾಸರಿ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೂ ನಾವು ಎಡಿಐ ಪ್ರತಿದಿನವೂ ಸ್ವೀಕಾರ್ಹವಾದ ಪ್ರಮಾಣಕ್ಕಿಂತ (ಎಕ್ಸೆಪ್ಟೇಬಲರ್ ಡೈಲಿ ಇಂಟೇಕ್) ಪ್ರಮಾಣವನ್ನು ಅಂದಾಜು ಶೇ 400ರಷ್ಟು ಮೀರುತ್ತಿದ್ದೇವೆ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.