ಮಂಗಳವಾರ, ಮಾರ್ಚ್ 2, 2021
31 °C

ಕೀಟ ಸಮಸ್ಯೆಯೇ? ಪರಿಹಾರ ಇಲ್ಲಿದೆ...

ಉಷಾ ಕೆ. ಪಿ. Updated:

ಅಕ್ಷರ ಗಾತ್ರ : | |

ಕೀಟ ಸಮಸ್ಯೆಯೇ? ಪರಿಹಾರ ಇಲ್ಲಿದೆ...

ಮನೆ, ಮಳಿಗೆ ಎಂದ ಮೇಲೆ ಅಲ್ಲಿ ಕೀಟಗಳು ಸಾಮಾನ್ಯ. ಇಲಿ, ಇರುವೆ, ತಿಗಣೆ, ಹಲ್ಲಿ, ಜಿಗಣೆ... ಹೀಗೆ ಒಂದಾ ಎರಡಾ... ಮನೆ- ಮಳಿಗೆಗಳಲ್ಲಿ ದೂಳು ಹೆಚ್ಚಿದ್ದರಂತೂ ಮುಗಿದೇ ಹೊಯ್ತು. ಅಲ್ಲಿ ಇಂಥ ಕೀಟಗಳದ್ದೇ ರಾಜ್ಯ. ಇನ್ನು ಸೊಳ್ಳೆ, ಜಿರಳೆಯಂತೂ ಸಾಮಾನ್ಯ. ಇವುಗಳ ಸಮಸ್ಯೆಯಿಂದ ನೀವೂ ತೊಳಲಾಡುತ್ತಿದ್ದೀರಾ? ಹಾಗಿದ್ದರೆ ಅವುಗಳಿಂದ ಮುಕ್ತಿ ಹೊಂದಲು ಇಲ್ಲಿವೆ ನೋಡಿ ಸರಳ ಉಪಾಯ.ಸೊಳ್ಳೆ

*ಐದಾರು ಕರ್ಪೂರಗಳನ್ನು ಒಂದು ತಟ್ಟೆಯಲ್ಲಿ ಹಾಕಿ ಅದು ನೆನೆಯುವಷ್ಟು ಸ್ವಲ್ಪ ಬಿಸಿ ಹಾಕಿಡಿ. ಹೀಗೆ ಮಾಡಿದರೆ ಕರ್ಪೂರದ ಸುವಾಸನೆ ನಿಮಗಾದರೆ, ಸೊಳ್ಳೆಗಳಿಗೆ ಅದು ಮಂಪರು ತರುವ ಔಷಧ. ಸೊಳ್ಳೆಗಳ ಹತ್ತಿರ ಸುಳಿಯುವುದಿಲ್ಲ.*ರಾತ್ರಿ ಸೊಳ್ಳೆ ಕಾಟ ತಡೆಯಲು ಮಲಗುವಾಗ ಕಿವಿಯ ಹತ್ತಿರ, ಕುತ್ತಿಗೆಗೆ, ಕೈಕಾಲುಗಳಿಗೆ ಸ್ವಲ್ಪ ಡೆಟಾಲ್‌ ಹಚ್ಚಿಕೊಳ್ಳಿ.*ಸೊಳ್ಳೆ ಓಡಿಸಲು ಸಂಜೆ ಒಣಗಿದ ಬೇವಿನೆಲೆಗೆ ಹೊಗೆ ಹಾಕಿಇರುವೆ

*ಸಕ್ಕರೆ ಡಬ್ಬಕೆ ಇರುವೆ ಮುತ್ತಿದರೆ ಒಂದು ಚೂರು ಕರ್ಪೂರವನ್ನು ಕಾಗದದಲ್ಲಿ ಪೊಟ್ಟಣ ಕಟ್ಟಿ ಡಬ್ಬದಲ್ಲಿ ಸ್ವಲ್ಪ ಹೊತ್ತು ಹಾಕಿಡಿ. ಇರುವೆಗಳು ಓಡಿಹೋಗುತ್ತವೆ. ಬಳಿಕ ಡಬ್ಬವನ್ನು ಬಿಸಿ ಮಾಡಿ ಮುಚ್ಚಿಡಿ. ಇರುವೆಗಳ ಅದರ ಹತ್ತಿರವೂ ಸುಳಿಯುವುದಿಲ್ಲ.*ಸಣ್ಣ ಇರುವೆ (ಕೆಂದಿರುವೆ)  ಮನೆಯಲ್ಲಿ ತುಂಬಾ ಇದ್ದರೆ ಸೀಮೆಎಣ್ಣೆ ಹಾಕಿದರೆ ಹೋಗುತ್ತವೆ.*ತಿಂಡಿ ಪದಾರ್ಥಗಳಿಗೆ ಇರುವೆ ಬಾರದೇ ಇರಲು ತಟ್ಟೆಯಲ್ಲಿ ನೀರು ಹಾಕಿ ಇಡಿ. ಪದಾರ್ಥದ ಸುತ್ತಲೂ ಸೀಮೆಎಣ್ಣೆಯ ಪಟ್ಟಿ ಬಳಿದರೂ ಸಾಕು.*ಇರುವೆ ಗೂಡಿನಲ್ಲಿ ಸೋಡಾ ಎರಚಿದರೆ ಅವು ಗೂಡಿನಿಂದ ಹೊರಗೆ ಹೊರಡಲಾರದು.*ಬೇಸಿಗೆಯಲ್ಲಿ ಎಲ್ಲೆಲ್ಲೂ ಇರುವೆ ಕಾಣಿಸುತ್ತದೆ. ಆಗ ಮನೆ ಒರೆಸುವಾಗ ನೀರಿನ ಜೊತೆ ಸ್ವಲ್ಪ ಸೀಮೆಎಣ್ಣೆ ಅಥವಾ ಫಿನಾಯಿಲ್ ಹಾಕಬಹುದು. ಇದರಿಂದ ಇರುವೆ ಮಾತ್ರವಲ್ಲದೇ ಯಾವ ಕ್ರಿಮಿಕೀಟಗಳೂ ಬರುವುದಿಲ್ಲ.*ಟಾಲ್ಕಂ ಪೌಡರ್‌ನ ಡಬ್ಬ ಖಾಲಿಯಾದಾಗ ಅದರಲ್ಲಿ ಅಥವಾ ಕ್ರಿಮಿನಾಶಕ ತುಂಬಿಸಿ ಇರುವೆಯ ಗೂಡಿಗೆ ಹಾಕಿದರೆ ಇರುವೆ ಸಾಯುತ್ತವೆ. ಇದರಿಂದ ಅನಾವಶ್ಯಕವಾಗಿ ಹೆಚ್ಚಿಗೆ ಪುಡಿ ಚೆಲ್ಲುವ ಪ್ರಮೆಯವೂ ಇರುವುದಿಲ್ಲ.ಇಲಿ

*ತೆಂಗಿನಕಾಯಿಯ ಚೂರನ್ನು ಬೆಂಕಿಯಲ್ಲಿ ಬಾಡಿಸಿ ಇಲಿಯ ಬೋನಿನಲ್ಲಿ ಇಟ್ಟರೆ ಇಲಿ ಇನ್ನೂ ಬೇಗನೆ ಬೋನಿನಲ್ಲಿ ಬೀಳುತ್ತದೆ.ಉಂಬಳ

ಪಟ್ಟಣಗಳಲ್ಲಿ ಇದು ಅಪರೂಪವಾದರೂ ಕಾಡಿನ ದಾರಿಯಲ್ಲಿ ಹೋಗುವಾಗ ಉಂಬಳ ಮೈಗೆ ತಗಲುವುದು ಮಾಮೂಲು. ಹೀಗಾದಲ್ಲಿ ಅದರ ಕಡಿತದಿಂದ ಪಾರಾಗಲು ಅರಿಶಿಣ ಹಚ್ಚಿ.*ಜಿಗಣೆ ಕಚ್ಚಿದ ತಕ್ಷಣ ಸ್ವಲ್ಪ ಸುಣ್ಣದ ನೀರು ಅಥವಾ ನಶ್ಯವನ್ನು ಹಾಕಿದರೆ ಕೂಡಲೇ ಅವು ಬಿದ್ದು ಹೋಗುತ್ತವೆ.ಜಿರಲೆ

* ಪೆಟ್ಟಿಗೆ ಅಥವಾ ಬೀರುವಿನಲ್ಲಿ ಜಿರಲೆ ಇದ್ದರೆ ಸ್ವಲ್ಪ ಲವಂಗ ತಂದು ಇಡಿ. ಜಿರಲೆ ಹತ್ತಿರ ಸುಳಿಯುವುದಿಲ್ಲ.* ಮೈದಾಹಿಟ್ಟು, ಸಕ್ಕರೆ ಮತ್ತು ಬೋರಿಕ್ ಪೌಡರ್ ಇವುಗಳನ್ನು ಕಲೆಸಿ ಸಣ್ಣ ಗುಳಿಗೆ ಮಾಡಿ ಜಿರಲೆ ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಇಡಿ, ಮಾರನೇ ದಿನವೇ ಜಿರಲೆ ಸತ್ತುಬಿದ್ದಿರುತ್ತವೆ.* ಜಿರಲೆ ಇರುವ ಕಡೆ ಒಂದು ದಿನ ಬರಿಯ ಅಕ್ಕಿ ಹಿಟ್ಟನ್ನು ಸಿಂಪಡಿಸಿ. ಮರುದಿನ ಅವು ಅಲ್ಲಿಯೇ ಬರುತ್ತವೆ. ಆಗ ಅಕ್ಕಿ ಹಿಟ್ಟು ಮತ್ತು ಡಿ.ಡಿ.ಟಿ ಸಮಪ್ರಮಾಣದಲ್ಲಿ ಬೆರೆಸಿ ಇಡಿ. ಇದನ್ನು ತಿಂದು ಜಿರಳೆಗಳು ಸಾಯುತ್ತವೆ.ತಿಗಣೆ

*ತಲೆದಿಂಬು, ಹಾಸಿಗೆಗಳಲ್ಲಿ ಹತ್ತಿ ತುಂಬುವಾದ ಕರ್ಪೂರದ ಪುಡಿಯನ್ನು ಹಾಕಿ ತುಂಬಬೇಕು. ಬೇಸಿಗೆ ಕಾಲದಲ್ಲಿ ತಲೆದಿಂಬು ಶೀತಲವಾಗಿ ತಿಗಣೆ ಸೇರುವುದಿಲ್ಲ.*ತಿಗಣೆ ಜಾಸ್ತಿಯಾದರೆ ಅವುಗಳನ್ನು ಸೀಮೆಎಣ್ಣೆಯಲ್ಲಿ ಹಾಕಿ. ಅವುಗಳ ಸಾಯುತ್ತವೆ. ಕಪ್ಪಗೆ ಮೊಟ್ಟೆ ಇರುವ ಕಡೆಗಳಲ್ಲಿ ಸೀಮೆಎಣ್ಣೆ ಹಾಕಿ ಸ್ವಲ್ಪ ಹೊತ್ತಿನ ಬಳಿಕ ಎಲ್ಲ ಜಾಗವನ್ನು ಬ್ಲೇಡಿನಿಂದ ಕೆರೆದರೆ ಮತ್ತೆ ತಿಗಣೆ ಅತ್ತ ಸುಳಿಯುವುದಿಲ್ಲ.ಮಳೆಹುಳು

ಮಳೆ ಬರುವ ಮುನ್ಸೂಚನೆಯಾಗಿ ಬರುವ ಮಳೆಹುಳುಗಳು ಮನೆಯ ಒಳಗೆ ಸೇರಿಕೊಂಡು ಉಪದ್ರ ಮಾಡುತ್ತವೆ. ಅಂತ ಸಂದರ್ಭದಲ್ಲಿ ದೀಪ ಆರಿಸಿ ಅವುಗಳನ್ನು ಓಡಿಸುವುದು ಸಾಮಾನ್ಯ. ಆದರೆ ಇದರ ಬದಲು ಈರುಳ್ಳಿಯನ್ನು ಹೆಚ್ಚಿ ಒಂದು ತಟ್ಟೆಯಲ್ಲಿ ಇಟ್ಟರೆ ಎಲ್ಲ ಹುಳುಗಳೂ ಹೊರಟುಹೋಗುತ್ತವೆ.

(ಸಂಗ್ರಹ)ಉಷಾ ಕೆ.ಪಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.