ಕುಂಚದ ಹೂಗಳು

7

ಕುಂಚದ ಹೂಗಳು

Published:
Updated:

`ಚಿಕ್ಕಂದಿನಿಂದಲೂ ಬಣ್ಣಗಳ ಬಗ್ಗೆ ನನಗೆ ತುಂಬಾ ಆಸಕ್ತಿ ಇತ್ತು. ಶಾಲಾ ರಜಾ ದಿನಗಳಲ್ಲಿ ಚಿತ್ರಕಲೆಯಲ್ಲಿ ತರಬೇತಿ ಪಡೆಯುತ್ತಿದ್ದೆ. ಆ ನಂತರ ಕಲ್ಪನೆಗೆ ಬಂದಂತೆ ಕ್ಯಾನ್ವಾಸ್ ಮುಂತಾದವುಗಳನ್ನು ಬಳಸಿ ಚಿತ್ರ ಬಿಡಿಸುತ್ತಿದ್ದೆ.

 

ಮದುವೆ ಆದ ನಂತರ ಎಂಟು ವರ್ಷದ ನನ್ನ ಮಗಳಿಗೆ ಚಿತ್ರಕಲೆ ಕಲಿಸಬೇಕು ಎಂದೆನಿಸಿತು. ಕಲಾವಿದ ರಾಘವೇಂದ್ರ ರಾವ್ ಎಂಬವರ ಬಳಿ ಕರೆದುಕೊಂಡು ಹೋದೆ. ಆಗಲೇ ನನ್ನಲ್ಲಿರುವ ಕಲಾಪ್ರೀತಿ ಗುರುತಿಸಿ ನನಗೆ ಪೇಂಟಿಂಗ್ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟರು.ಅದೇ ಕಲಾಪ್ರೀತಿ ಇಂದು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ~ ಎನ್ನುತ್ತಾ ಖುಷಿಯಿಂದ ಮಾತಿಗಿಳಿದರು ಕಲಾವಿದೆ ಸುರೇಖಾ ಎಚ್.ಎಂ.ಮೂಲತಃ ದಾವಣಗೆರೆಯವರಾದ ಇವರದ್ದು ವಾಟರ್ ಕಲರ್ ಪೇಂಟಿಂಗ್, ಆಕ್ರಿಲಿಕ್, ಆಯಿಲ್ ಅಂಡ್ ಪೆನ್ಸಿಲ್ ಪೇಂಟಿಂಗ್, ಕಲರ್ ಪೇಂಟಿಂಗ್ ಮುಂತಾದ ಚಿತ್ರಕಲೆಯಲ್ಲಿ ಪಳಗಿದ ಕೈ.ಸುರೇಖಾ ಅವರ ಕಲೆಯಲ್ಲಿ ನಾನಾ ವಿಧದ ಕಲ್ಪನೆಗಳು ಮೂಡಿದ್ದರೂ ಕುಂಚದಲ್ಲಿ ಅರಳಿದ ಹೂವುಗಳು ಥಟ್ಟನೆ ಕಣ್ಣನ್ನು ಸೆಳೆಯುತ್ತವೆ. ಬಳೆ ಮಾರಾಟದಲ್ಲಿ ತೊಡಗಿದವರು, ಗೋಪಾಲಕ ಶ್ರೀಕೃಷ್ಣ, ಬುದ್ಧನ ಮುದ್ರೆಗಳ ಕಲ್ಪನೆಗಳು ಕಲೆಯಾಗಿ ರೂಪು ತಳೆದಿದ್ದು, ಬಣ್ಣಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿದಂತಿದೆ. ಬೇರೆ ಬೇರೆ ಬಣ್ಣಗಳನ್ನು ಆವರಿಸಿಕೊಂಡು ಎದ್ದು ಕಾಣುವ ನೈದಿಲೆ, ಕಮಲ, ತಾವರೆ ಹೂವುಗಳು ಚಿತ್ರದ ನೈಜತೆಯನ್ನು ಬಿಂಬಿಸುತ್ತವೆ.ಬಣ್ಣಗಳಲ್ಲೇ ಆಟವಾಡುತ್ತಾ ಸುಂದರ ಕಲಾಲೋಕ ಸೃಷ್ಟಿಸಿರುವ ಇವರ ವರ್ಣಪ್ರೀತಿ ಕಲೆಯಲ್ಲಿ ಬಿತ್ತರಗೊಂಡಿದೆ. `ಎಂಟನೇ ವಯಸ್ಸಿನಲ್ಲಿದ್ದಾಗ ಲಾಲ್‌ಬಾಗ್ ಹೂ ಪ್ರದರ್ಶನಕ್ಕೆ ಬಂದಿದ್ದೆ. ಆ ಬಣ್ಣಬಣ್ಣದ ಹೂ, ಅದರ ಸುವಾಸನೆ, ಅಂದ-ಚಂದ ನನ್ನನ್ನು ಬಹುವಾಗಿ ಕಾಡಿದೆ. ಇಂದಿಗೂ ಅಷ್ಟು ವರ್ಷ ಹಳೆಯದಾದ ಆ ಹೂ ಪ್ರದರ್ಶನ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ಚಿತ್ರಗಳನ್ನೆಲ್ಲಾ ನೋಡಿ ಸ್ವ ವಿಮರ್ಶೆ ಮಾಡಿಕೊಂಡರೆ ಆ ಪ್ರದರ್ಶನವೇ ನನಗೆ ಸ್ಫೂರ್ತಿ ಎನಿಸುತ್ತದೆ~ ಎನ್ನುತ್ತಾರೆ ಸುರೇಖಾ.ತಮ್ಮೆಲ್ಲಾ ಚಿತ್ರಕಲೆಗಳನ್ನು ಒಟ್ಟು ಸೇರಿಸಿ ಜಯನಗರದ್ಲ್ಲಲಿರುವ ಮನೆಯಲ್ಲೇ ಗ್ಯಾಲರಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಕುಟುಂಬ, ಸ್ನೇಹಿತರ ತುಂಬು ಸಹಕಾರವೇ ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ ಎನ್ನುವ ಅವರು ಕಲೆಯ ಕುರಿತು ಇತರರಿಗೆ ತರಬೇತಿ ನೀಡುವ ಬಗ್ಗೆ ಇನ್ನು ಯೋಚಿಸಿಲ್ಲವಂತೆ. ಅಲಂಕಾರಿಕ ಚಿತ್ರಗಳನ್ನು ಚಿತ್ರಿಸುವುದರಲ್ಲಿಯಷ್ಟೇ ಸದ್ಯಕ್ಕೆ ತಮ್ಮ ಮನಸ್ಸು ತಲ್ಲೆನ ಎನ್ನುತ್ತಾರೆ.ಬಣ್ಣದ ಪ್ರೀತಿಯಲ್ಲಿ ಮೈದಳೆದಿರುವ ಈ ಕಲಾಪ್ರಿಯೆಯ ಚಿತ್ರಪ್ರದರ್ಶನ ನಡೆಯುತ್ತಿದೆ. ಇದೇ 16ರಂದು (ಅ.16) ಪ್ರದರ್ಶನಕ್ಕೆ ತೆರೆಬೀಳಲಿದೆ. ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ 35ರಿಂದ 40 ಚಿತ್ರಗಳಿವೆ. ಕಲಾರಾಧಾಕರಿಗೆ 5000 ರೂಪಾಯಿಯಿಂದ 45ಸಾವಿರ ರೂಪಾಯಿವರೆಗಿನ ಸುಂದರ ಕಲಾಕೃತಿ ಆಯ್ಕೆ ಮಾಡುವ ಅವಕಾಶ. ಸಂಪರ್ಕಕ್ಕೆ 96636 96794.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry