ಕುಂಜಾರಮ್ಮ ಸನ್ನಿಧಿಯಲ್ಲಿ ಸೋಣ ಶುಕ್ರವಾರ ಜಾತ್ರೆ

7

ಕುಂಜಾರಮ್ಮ ಸನ್ನಿಧಿಯಲ್ಲಿ ಸೋಣ ಶುಕ್ರವಾರ ಜಾತ್ರೆ

Published:
Updated:

ಶಿರ್ವ: ಸಮುದ್ರಮಟ್ಟಕ್ಕಿಂತ ಸುಮಾರು 100 ಅಡಿಗಳಿಗಿಂತಲೂ ಎತ್ತರದಲ್ಲಿರುವ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಸಿಂಹಮಾಸದ ಸೋಣ ವಿಶೇಷ ಜಾತ್ರೆ ನಡೆಯಲಿದೆ.ಅನಾದಿಕಾಲದಿಂದಲೂ ಕುಂಜಾರು ದುರ್ಗೆಯ ಸನ್ನಿಧಿಯಲ್ಲಿ ಸಿಂಹ ಮಾಸದ ಪ್ರತಿ  ಶುಕ್ರವಾರ ವಿಶೇಷ ಹರಕೆ ಸೇವೆ, ಪೂಜೆ ಪುನಸ್ಕಾರಗಳು ನಿರಂತರವಾಗಿ ನಡೆಯುತ್ತಿವೆ.ಕರಾವಳಿಯಾದ್ಯಂತ ಸಹಸ್ರಾರು ಮಂದಿ ಭಕ್ತಾದಿಗಳು ವಿಶೇಷವಾಗಿ ಸಿಂಹಮಾಸದ ಶುಕ್ರವಾರಗಳಂದು ಸಮಗ್ರವಾಗಿ ಅಭಿವೃದ್ಧಿಗೊಂಡ ಕ್ಷೇತ್ರವನ್ನು ಸಂದರ್ಶಿಸಿ ದುರ್ಗೆಯ ಕೃಪೆಗೆ ಪಾತ್ರರಾಗುತ್ತಾರೆ.ನೂರಾರು ವರ್ಷಗಳಿಂದ ಸಿಂಹಮಾಸದಲ್ಲಿ ವಾಡಿಕೆಯಂತೆ  ಕುಂಜಾರುಗಿರಿಯ 257 ಮೆಟ್ಟಿಲುಗಳನ್ನು ಭಕ್ತಾದಿಗಳು ಏರಿ ದುರ್ಗೆಯ ದರ್ಶನ ಪಡೆಯುತ್ತಾರೆ. ಊರ ಪರವೂರಿನಿಂದ ಬರುವ ಭಕ್ತಾಧಿಗಳಿಗಾಗಿ ದೇವಳದ ಆಡಳಿತ ಮಂಡಳಿಯ ನೇತೃತ್ವದಲ್ಲಿ ದೇವಳವನ್ನು ವಿಶೇಷವಾಗಿ ಶೃಂಗರಿಸಿ, ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸಿಂಹಮಾಸದ ಎರಡನೇ ಮತ್ತು ಮೂರನೇ ಶುಕ್ರವಾರದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ, ಹರಕೆಗಳನ್ನು ಸಲ್ಲಿಸುತ್ತಾರೆ.ಸಿಂಹ ಶುಕ್ರವಾರಗಳಂದು ದೇವಿ ದರ್ಶನ ಪಡೆದರೆ ಮಂಗಳವಾಗುವುದು ಎಂಬ ನಂಬಿಕೆ ಇದೆ. ವಿಶೇಷವಾಗಿ ಆಷಾಢ ಮಾಸ ಕಳೆದ ಮೇಲೆ ಬರುವ ಸಿಂಹಮಾಸದಲ್ಲಿ ಭಕ್ತರು ವಿವಿಧ ಹಬ್ಬಗಳಿಗೆ ನಾಂದಿ ಹಾಡುತ್ತಾರೆ. ಇದೇ ವೇಳೆ ಭಕ್ತರು ಕಷ್ಟಕಾಲದಲ್ಲಿ ದೇವಿಗೆ ಸಂಕಲ್ಪಿಸಿಕೊಂಡಿರುವ ವಿವಿಧ ಹರಕೆ, ಸೇವೆಗಳನ್ನು ಈ ಪರ್ವಕಾಲದಲ್ಲಿ ತೀರಿಸುತ್ತಾರೆ. ಕುಂಜಾರಿನಲ್ಲಿ ಭಕ್ತರ ಹರಕೆಗಳನ್ನು ಸೋಣ ಶುಕ್ರವಾರಗಳಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.ಬೆಳ್ಳಿ,ಬಂಗಾರದ ವಸ್ತುಗಳ ಹರಕೆ!

ಸೋಣ ತಿಂಗಳಲ್ಲಿ ದೇವಸ್ಥಾನಗಳನ್ನು ಹರಕೆ ಸಲ್ಲಿಸುವ ನೆಪದಲ್ಲಾದರೂ ಸಂದರ್ಶಿಸಬೇಕೆಂಬ ಹಿರಿಯರ ಸಂಪ್ರದಾಯಗಳನ್ನು ಇಲ್ಲಿ ಮುಂದುವರಿಸಲಾಗುತ್ತಿದೆ. ಗರ್ಭಿಣಿಯರ ಸುಖಪ್ರಸವ, ಉಬ್ಬಸ, ಕಾಲಿನಲ್ಲಿಆಣಿ, ಮಕ್ಕಳು ಮಣ್ಣು ತಿನ್ನುವುದಕ್ಕೆ ಹರಕೆಗಳನ್ನು ಕ್ರಮವಾಗಿ ಬೆಳ್ಳಿಯ ಅಥವಾ ಬಂಗಾರ ಲೋಹಗಳ ಸಣ್ಣ ಸಣ್ಣ ಆಕಾರಗಳನ್ನು ಸಮರ್ಪಿಸಲಾಗುತ್ತದೆ.ಬೆಳ್ಳಿಯ ಸಿಬ್ಬ, ಬೆಳ್ಳಿಯ ಆಣಿ, ಬೆಳ್ಳಿಯ ನರ, ಬಂಗಾರದ ತೊಟ್ಟಿಲು ಇತ್ಯಾದಿಗಳನ್ನು ಆಯಾಯ ಸಮಸ್ಯೆಗಳಿಗೆ ಅನುಗುಣವಾಗಿ ರೆಡಿಮೆಡ್ ಆಗಿ ತಯಾರಿಸಿಟ್ಟಿರುವ ವಸ್ತುಗಳನ್ನು ಇಲ್ಲಿ ಖರೀದಿಸಿ ಶ್ರೀದೇವಿಗೆ ಸಮರ್ಪಿಸಲಾಗುತ್ತದೆ.ಮಣ್ಣು ತಿನ್ನುವ ಅಭ್ಯಾಸ ಬೆಳೆಸಿಕೊಂಡ ಪುಟ್ಟಮಕ್ಕಳ  ಮಣ್ಣು ತಿನ್ನುವ ಅಭ್ಯಾಸ ನಿಲ್ಲುವುದಕ್ಕೆ ವಿಶೇಷವಾಗಿ ಶ್ರಿದೇವಿಗೆ ಬೆಲ್ಲವನ್ನು ಹರಕೆಯಾಗಿ ಸಮರ್ಪಿಸಲಾಗುತ್ತದೆ.ಮಂಗ ಮತ್ತು ನವಿಲುಗಳ ಆಕರ್ಷಣೆ!

ಕುಂಜಾರುಗಿರಿಯಲ್ಲಿ ಜಾತ್ರೆಯ ಸಂದರ್ಭದಲ್ಲಿ ವಿಶೇಷವಾಗಿ ಕುಂಜಾರುಬೆಟ್ಟದಲ್ಲಿ ನವಿಲು ಹಾಗೂ ಮಂಗಗಳು ಹಿಂಡು ಹಿಂಡಾಗಿ ಬಂದು ಮರಗಿಡಗಳಲ್ಲಿ ನೇತಾಡುತ್ತಾ ಭಕ್ತರನ್ನು ಸ್ವಾಗತಿಸುತ್ತವೆ. ಮಕ್ಕಳಂತೂ ಮಂಗಗಳೊಂದಿಗೆ ಮೋಜಿನಾಟವಾಡಲು, ಮಂಗಗಳಿಗೆ ಕೀಟಲೆ ಮಾಡಲು ಸೋಣ ಶುಕ್ರವಾರ ತಪ್ಪದೇ ಬರುತ್ತಾರೆ.ನೂರಾರು ಮಂಗಗಳು, ನವಿಲುಗಳಿಗೆ ಹಣ್ಣು, ಮಿಠಾಯಿ ನೀಡಿ ಜಾತ್ರೆಯ ಸಡಗರವನ್ನು ಕಾಣಲು ಅಬಾಲವೃದ್ಧರಾದಿಯಾಗಿ ಸಕಲರೂ ಇಲ್ಲಿಗೆ ಬರುತ್ತಾರೆ.ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನ ಹಾಗೂ ಪರಶುರಾಮ ದೇವಸ್ಥಾನ ಊರ, ಪರವೂರ ದಾನಿಗಳ ನೆರವಿನಿಂದ ಅಭಿವೃದ್ಧಿಯಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ.

ಪ್ರಕಾಶ್ ಸುವರ್ಣ ಕಟಪಾಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry