ಭಾನುವಾರ, ಮೇ 16, 2021
29 °C

ಕುಂಟುತ್ತಿದೆ ಕಾಮಗಾರಿ: ಸಂಚಾರಕ್ಕೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಹಾಸನ-ದುದ್ದ-ಚಿಕ್ಕನಾಯಕನಹಳ್ಳಿ ರಾಜ್ಯ ಹೆದ್ದಾರಿ ಕಾಮಗಾರಿ ಹಲವು ತಿಂಗಳಿಂದ ಸ್ಥಗಿತಗೊಂಡಿದೆ. ಇದರಿಂದ ಈ ಭಾಗದಲ್ಲಿ ಓಡಾಡುವ ಜನರು ಪರದಾಡಬೇಕಾದ ಸ್ಥಿತಿ ಬಂದಿದ್ದು, ಕೂಡಲೇ ರಸ್ತೆ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಸೋಮವಾರ ನಾಗರಿಕರು ಗಂಡಸಿ ಹ್ಯಾಂಡ್‌ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಗಂಡಸಿ ಹ್ಯಾಂಡ್-ಪೋಸ್ಟ್ ಬಳಿ ಸೋಮವಾರ ಬೇರೆ ಬೇರೆ ವೇಳೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ತದ್ವಿರುದ್ದ ಹೇಳಿಕೆ ನೀಡಿದ್ದು ಮಾತ್ರ ವಿಶೇಷವಾಗಿತ್ತು.ಕೆಪಿಸಿಸಿ ಸದಸ್ಯ ಗೊಲ್ಲರಹಳ್ಳಿ ಪಟೇಲ್ ಶಿವಪ್ಪ, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುರಾಜ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಇತ್ತ ಜೆಡಿಎಸ್ ಮುಖಂಡ ಗಂಗಾಧರ್ ಹಾಗೂ ಲಾಳನಕೆರೆ ಯೋಗೀಶ್ ನೇತೃತ್ವದಲ್ಲೂ ಕಾರ್ಯಕರ್ತರು ಪ್ರತಿಭಟಿಸಿದರು.ಪ್ರತಿಭಟನಾಕಾರರನ್ನು ಉದ್ದೇಸಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಗೊಲ್ಲರಹಳ್ಳಿ ಪಟೇಲ್ ಶಿವಪ್ಪ, `ಹಾಸನ- ದುದ್ದ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸುವ 259 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಗುತ್ತಿಗೆ ಪಡೆದಿರುವ ಅಭಿಜಿತ್ ಗ್ರೂಪ್ ಕಂಪನಿ ಈಗಾಗಲೇ 144 ಕೋಟಿ ರೂಪಾಯಿ ಪಡೆದಿದ್ದು, ಈವರೆಗೆ ಶೇ 10ರಿಂದ 15ರಷ್ಟು ಕೆಲಸ ಮಾತ್ರ ಮಾಡಿದೆ. ಸ್ಥಳೀಯ ಶಾಸಕರಾಗಲಿ ಅಥವಾ ಜಿಲ್ಲೆಯ ಯಾವ ಜೆಡಿಎಸ್ ನಾಯಕರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ' ಎಂದು ಆರೋಪಿಸಿದರು.ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರವನ್ನು ತಂದು ಸ್ಥಗತಗೊಂಡಿರುವ ಕಾಮಗಾರಿಗೆ ಕೂಡಲೇ ಚಾಲನೆ ನೀಡುವಂತೆ ಒತ್ತಾಯಿಸಲಾಗುವುದು' ಎಂದರು.ಕಾಂಗ್ರೆಸ್ ಮುಖಂಡರಾದ ನಂಜುಂಡೇಗೌಡ ರಾಮಚಂದ್ರು, ಎಪಿಎಂಸಿ ಸದಸ್ಯ ಕುಶಲ್‌ಬಾಬು ಉಪಸ್ಥಿತರಿದ್ದರು.

ನಂತರ ಜೆಡಿಎಸ್ ಮುಖಂಡ ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ಇಲ್ಲಿ ಮಾತನಾಡಿದ ಗಂಗಾಧರ್, `ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹೆದ್ದಾರಿ ಕಾಮಗಾರಿಗೆ ತಗಲುವ ವೆಚ್ಚದಲ್ಲಿ ಶೇಕಡ 39 ರಷ್ಟು ಹಣವನ್ನು ಭರಿಸಿದರೆ ಉಳಿದ ಹಣವನ್ನು ಅಭಿಜಿತ್ ಗ್ರೂಪ್ ಭರಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸಿ 30 ವರ್ಷ ಸುಂಕ ವಸೂಲಿ ಮಾಡಿಕೊಳ್ಳುವಂತೆ ಒಪ್ಪಂದ ಮಾಡಿ ಕೊಂಡಿದೆ.ಆದರೆ, ಸರ್ಕಾರದ ಅಂಗ ಸಂಸ್ಥೆಯಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಭಿವೃದ್ಧಿ ನಿಗಮದಿಂದ ಅಭಿಜಿತ್ ಗ್ರೂಪ್ ಕಂಪನಿಗೆ ಹಣ ಸಂದಾಯವಾ ಗಿಲ್ಲ ಎಂಬ ಕಾರಣವೊಡ್ಡಿ ಕಂಪನಿ ಕಾಮಗಾರಿ ಸ್ಥಗಿತಗೊಳಿಸಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ' ಎಂದರು.

ಸ್ಥಗಿತಗೊಂಡಿರುವ ಕಾಮಗಾರಿಯನ್ನು ಶೀಘ್ರ  ಪೂರ್ಣಗೊಳಿಸಿಕೊಡಬೇಕು ಎಂದು ಅವರೂ ಒತ್ತಾಯಿಸಿದರು.ಜೆಡಿಎಸ್ ಮುಖಂಡರಾದ ಲಾಳನಕೆರೆ ಯೋಗೀಶ್, ಎ.ಪಿ.ಎಂಸಿ ಮಾಜಿ ಸದಸ್ಯ ರಾಮಚಂದ್ರ, ಜಯರಾಂ, ಲೋಕೇಶ್, ಧರ್ಮಣ್ಣ ಹಾಗೂ ರವಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.