ಕುಂಟುತ್ತಿರುವ ಜೋಡಿ ರೈಲು ಮಾರ್ಗ ಕಾಮಗಾರಿ

7

ಕುಂಟುತ್ತಿರುವ ಜೋಡಿ ರೈಲು ಮಾರ್ಗ ಕಾಮಗಾರಿ

Published:
Updated:

ಬೆಂಗಳೂರು: `ನಾವು ಕೊಡಬೇಕಾದದ್ದು ಎಲ್ಲೊ ಒಂದಷ್ಟು ಜಾಗ ಮಾತ್ರ! ರೈಲ್ವೆ ಹಳಿ ಹಾಕಲು ಅದರಿಂದ ಯಾವ ಸಮಸ್ಯೆಯೂ ಇಲ್ಲ...' ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದರೆ, ರೈಲ್ವೆ ಅಧಿಕಾರಿಗಳು `ನಮಗೆ ಇನ್ನೂ 40 ಎಕರೆಯಷ್ಟು ಜಾಗ ಬೇಕಾಗಿದೆ. ಜಮೀನು ನೀಡದ ಹೊರತು ಕಾಮಗಾರಿ ಪೂರ್ಣಗೊಳಿಸುವುದು ಕಷ್ಟ' ಎನ್ನುತ್ತಿದ್ದಾರೆ.ಬೆಂಗಳೂರು- ಮೈಸೂರು ನಡುವಿನ ಜೋಡಿ ರೈಲು ಮಾರ್ಗದ ಪೈಕಿ ಚನ್ನಪಟ್ಟಣ- ನಾಗನಹಳ್ಳಿ ನಡುವಿನ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಜಮೀನನ್ನು ಸಕಾಲಕ್ಕೆ ಹಸ್ತಾಂತರ ಮಾಡದ ಕಾರಣ ಜೋಡಿ ಮಾರ್ಗದ ನಿರ್ಮಾಣ ಯೋಜನೆ ನಿಧಾನ ಆಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.ಅಗತ್ಯ ಭೂಮಿ ಒದಗಿಸಿರುವುದಾಗಿ ವರ್ಷದ ಹಿಂದೆಯೇ ಕಂದಾಯ ಇಲಾಖೆ ಹೇಳಿತ್ತು. ಆದರೆ, ವಾಸ್ತವವಾಗಿ ಅದು ಇನ್ನೂ ಕೈಗೂಡಿಲ್ಲ. ರೈಲ್ವೆ ಇಲಾಖೆಯು ರೈತರ ಆಗ್ರಹದಂತೆ ಹೆಚ್ಚುವರಿ ಪರಿಹಾರ ನೀಡದ ಕಾರಣ ಕೆಲವು ಕಡೆ ಭೂಸ್ವಾಧೀನ ವಿಳಂಬ ಆಗಿದೆ. ಆದರೆ, ಜೋಡಿ ಮಾರ್ಗದ ಹಳಿ ಹಾಕಲು ಇದರಿಂದ ಯಾವ ಸಮಸ್ಯೆಯೂ ಇಲ್ಲ ಎನ್ನುತ್ತವೆ ಕಂದಾಯ ಇಲಾಖೆ ಮೂಲಗಳು.ಬೆಂಗಳೂರು- ಚನ್ನಪಟ್ಟಣ ಮತ್ತು ಮೈಸೂರು- ನಾಗನಹಳ್ಳಿ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡು, ರೈಲುಗಳ ಸಂಚಾರ ಆರಂಭವಾಗಿದೆ. ಚನ್ನಪಟ್ಟಣ- ನಾಗನಹಳ್ಳಿ ನಡುವೆ ಅನೇಕ ಕಡೆ ಭೂಸ್ವಾಧೀನದ ಸಮಸ್ಯೆಯಿಂದಾಗಿ ನಿರೀಕ್ಷೆಯಂತೆ ಕಾಮಗಾರಿ ನಡೆಯುತ್ತಿಲ್ಲ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.ಚನ್ನಪಟ್ಟಣ ರೈಲ್ವೆ ನಿಲ್ದಾಣ ಸಮೀಪದ 4.3 ಎಕರೆ ಸಲುವಾಗಿ ರೈಲ್ವೆ ಮಂಡಳಿ ರಾಮನಗರ ಜಿಲ್ಲಾಧಿಕಾರಿಗಳಿಗೆ 7.25 ಕೋಟಿ ರೂಪಾಯಿ ಸಂದಾಯ ಮಾಡಿದೆ. ಆದರೆ, ಇವತ್ತಿಗೂ ಭೂಮಿ ಹಸ್ತಾಂತರ ಆಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ದೂರುತ್ತಾರೆ.`ಚನ್ನಪಟ್ಟಣದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಹೀಗಾಗಿ ರೈತರಿಂದ ಜಮೀನನ್ನು ಪಡೆಯಲು ಸಾಧ್ಯವಾಗಿಲ್ಲ. ಜೋಡಿ ಮಾರ್ಗಕ್ಕೆ ಇದರಿಂದ ಹೆಚ್ಚು ಸಮಸ್ಯೆ ಆಗದಿದ್ದರೂ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಮಾರ್ಗಗಳ ನಿರ್ಮಾಣಕ್ಕೆ ಅಡಚಣೆ ಆಗಿದೆ' ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.ಶೆಟ್ಟಿಹಳ್ಳಿ ಸಮೀಪ 9.18 ಎಕರೆ ಜಮೀನಿನ ಹಸ್ತಾಂತರ ಬಾಕಿ ಇದೆ. ರೈಲ್ವೆ ಮಂಡಲಿ ಇದಕ್ಕೆ ಎರಡು ಕಂತುಗಳಲ್ಲಿ 6.4 ಕೋಟಿ ರೂಪಾಯಿ ಸಂದಾಯ ಮಾಡಿದ್ದರೂ ಭೂಮಿ ಮಾತ್ರ ಅವರ ವಶಕ್ಕೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.ಮದ್ದೂರು ಸಮೀಪದ ಶಿಂಷಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಿದ್ದು, ಅದರ ಆಸುಪಾಸಿನ ಹುಲಗನಹಳ್ಳಿಯಲ್ಲಿ ಎರಡು ಎಕರೆ ಮತ್ತು ಚಾಮನಹಳ್ಳಿಯಲ್ಲಿ 7.3 ಎಕರೆ ಜಮೀನನ್ನು ಹಸ್ತಾಂತರ ಮಾಡಬೇಕಾಗಿದೆ.ಈ ಜಮೀನಿಗೆ ಎಷ್ಟು ಹಣ ನೀಡಬೇಕು ಎಂಬುದನ್ನು ಕಂದಾಯ ಇಲಾಖೆ ಇದುವರೆಗೂ ತಿಳಿಸಿಲ್ಲ. ಹೀಗಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.ಪಾಂಡವಪುರ ವ್ಯಾಪ್ತಿಯ ದೊಡ್ಡ ಬ್ಯಾಡರಹಳ್ಳಿ (1.2 ಎಕರೆ), ಪಟ್ಟಸೋಮನಹಳ್ಳಿ (3.27 ಎಕರೆ), ನೆಲಮನೆ (2.10 ಎಕರೆ), ಕೆನ್ನಾಲು (1.7 ಎಕರೆ), ರಾಮಪುರ (24 ಗುಂಟೆ), ಕಿರಂಗೂರು (4.19 ಎಕರೆ) ಮತ್ತು ಮೈಸೂರು ಜಿಲ್ಲೆಯ ಲಕ್ಷ್ಮೀಪುರ (4.5 ಎಕರೆ) ವ್ಯಾಪ್ತಿಯಲ್ಲಿ ಜೋಡಿ ಮಾರ್ಗಕ್ಕೆ ತುರ್ತಾಗಿ ಜಮೀನು ಬೇಕು ಎಂದು ಬೇಡಿಕೆ ಸಲ್ಲಿಸಿದ್ದರೂ ಸ್ಥಳೀಯ ಅಧಿಕಾರಿಗಳು ಭೂಸ್ವಾದೀನ ಪ್ರಕ್ರಿಯೆಯನ್ನೇ ಪೂರ್ಣಗೊಳಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ದೂರುತ್ತಾರೆ.ವಿಳಂಬ: ಒಟ್ಟು 40 ಎಕರೆಯಲ್ಲಿ ಜೋಡಿ ಮಾರ್ಗದ ನಿರ್ಮಾಣಕ್ಕೇ ಸುಮಾರು 30 ಎಕರೆ ಬೇಕಾಗಿದೆ. ಹೀಗಾಗಿ ಜಮೀನು ಹಸ್ತಾಂತರ ಮಾಡದೆ ಕಾಮಗಾರಿ ಕೈಗೆತ್ತಿಕೊಳ್ಳುವುದು ಕಷ್ಟ. ಬ್ಯಾಡರಹಳ್ಳಿ- ಪಾಂಡವಪುರ ಮಧ್ಯೆ ಜಮೀನು ಹಸ್ತಾಂತರ ಮಾಡಿರುವ ಕಡೆ ಮಾತ್ರ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಕಡೆ ಇನ್ನೂ ಕೈಗೆತ್ತಿಕೊಂಡಿಲ್ಲ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಟಿಪ್ಪು ಶಸ್ತ್ರಾಗಾರ ಸ್ಥಳಾಂತರ ವಿವಾದ ಇನ್ನೂ ಬಗೆಹರಿದಿಲ್ಲ. ಅದರ ಜತೆಗೆ ಭೂಮಿ ಹಸ್ತಾಂತರ ಆಗದಿದ್ದ ಕಾರಣಕ್ಕೆ ಜೋಡಿ ಮಾರ್ಗದ ಕಾಮಗಾರಿ ನಿರೀಕ್ಷೆಯಂತೆ 2014ರ ವೇಳೆಗೆ ಪೂರ್ಣಗೊಳ್ಳುವುದು ಕಷ್ಟ ಎಂದು ವಿಶ್ಲೇಷಿಸಲಾಗಿದೆ.ಶೀಘ್ರ ಇತ್ಯರ್ಥ: ಈ ಕುರಿತು `ಪ್ರಜಾವಾಣಿ' ಜತೆ ಮಾತನಾಡಿದ ಮಂಡ್ಯ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರು `ಭೂಸ್ವಾಧೀನಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಆ ಕುರಿತು ರೈಲ್ವೆ ಅಧಿಕಾರಿಗಳ ಜತೆ ಚರ್ಚಿಸಿ, ಶೀಘ್ರದಲ್ಲೇ ಬಗೆಹರಿಸಲಾಗುವುದು' ಎಂದು ಹೇಳಿದರು.`ಮಂಡ್ಯ ಜಿಲ್ಲೆಯಲ್ಲಿ ನೀರಾವರಿ ಭೂಮಿಯನ್ನು ರೈಲ್ವೆ ಸಲುವಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ರೈಲ್ವೆ ಕೊಡುವ ಪರಿಹಾರಕ್ಕೆ ರೈತರು ಒಪ್ಪುತ್ತಿಲ್ಲ. ಹೆಚ್ಚುವರಿ ಪರಿಹಾರ ನೀಡಬೇಕು ಎಂದು ರೈಲ್ವೆ ಅಧಿಕಾರಿಗಳನ್ನು ಕೋರಲಾಗಿದೆ. ಈ ಕುರಿತು ಶೀಘ್ರವೇ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು' ಎಂದು ಅವರು ವಿವರಿಸಿದರು.

ವಿದ್ಯುದೀಕರಣಕ್ಕೂ ರಾಜ್ಯದ ಹಣ

ಬೆಂಗಳೂರು: ಕೆಂಗೇರಿ- ಮೈಸೂರು ನಡುವಿನ ಜೋಡಿ ರೈಲು ಮಾರ್ಗದ ವಿದ್ಯುದೀಕರಣಕ್ಕೆ ರಾಜ್ಯ ಸರ್ಕಾರ ಕೊನೆಗೂ ಶೇ 50ರಷ್ಟು ಹಣ ನೀಡಲು ಒಪ್ಪಿಗೆ ಸೂಚಿಸಿದೆ.ವೆಚ್ಚ ಹಂಚಿಕೆಯ ಮೂಲ ಒಪ್ಪಂದದಲ್ಲಿ ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಮಾತ್ರ ಶೇ 67ರಷ್ಟು ಹಣ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ರೈಲ್ವೆ ಮಂಡಳಿ, ವಿದ್ಯುದೀಕರಣ ಯೋಜನೆಗೂ ಶೇ 67ರಷ್ಟು ಹಣ ಕೊಡಬೇಕು ಎಂದು ಕೋರಿಕೆ ಸಲ್ಲಿಸಿತ್ತು.ಇದಕ್ಕೆ ರಾಜ್ಯದ ಮೂಲಸೌಲಭ್ಯ ಇಲಾಖೆ ಪ್ರತಿಕ್ರಿಯೆ ನೀಡಿ, `ಒಪ್ಪಂದದ ಪ್ರಕಾರ ಜೋಡಿ ರೈಲು ಮಾರ್ಗದ ನಿರ್ಮಾಣಕ್ಕೆ ಮಾತ್ರ ಹಣ ನೀಡಲಾಗುವುದು. ವಿದ್ಯುದೀಕರಣ ಯೋಜನೆಗೆ ಹಣ ನೀಡುವುದಿಲ್ಲ' ಎಂದು ಸ್ಪಷ್ಟವಾಗಿ ಪತ್ರದ ಮೂಲಕ ತಿಳಿಸಿತ್ತು.ರಾಜ್ಯ ಸರ್ಕಾರ ಮತ್ತು ರೈಲ್ವೆ ಮಂಡಳಿ ನಡುವೆ ನಡೆದ ಸತತ ಪತ್ರ ವ್ಯವಹಾರದ ಬಳಿಕ ಶೇ 67ರ ಬದಲಿಗೆ, ಶೇ 50ರಷ್ಟು ಹಣ ನೀಡಲು ಒಪ್ಪಲಾಗಿದೆ. ಇದಕ್ಕೆ ಹಣಕಾಸು ಇಲಾಖೆ ಕೂಡ ಸಮ್ಮತಿ ಸೂಚಿಸಿದೆ.ಬೆಂಗಳೂರು- ಕೆಂಗೇರಿ ನಡುವಿನ ಜೋಡಿ ಮಾರ್ಗಕ್ಕೆ ವಿದ್ಯುದೀಕರಣದ ಸೌಲಭ್ಯ ಕಲ್ಪಿಸಲಾಗಿದೆ. ಕೆಂಗೇರಿ- ಮೈಸೂರು ನಡುವಿನ ವಿದ್ಯುದೀಕರಣಕ್ಕೆ 145 ಕೋಟಿ ರೂಪಾಯಿಗಳ ಅಂದಾಜು ಮಾಡಿದ್ದು, ಇದರಲ್ಲಿ ಶೇ 50ರಷ್ಟು ರಾಜ್ಯ ಸರ್ಕಾರ ಭರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry