ಕುಂಟುತ್ತಿರುವ ಯರಗೋಳು ಯೋಜನೆ: ವಿಷಾದ

7

ಕುಂಟುತ್ತಿರುವ ಯರಗೋಳು ಯೋಜನೆ: ವಿಷಾದ

Published:
Updated:

ಕೋಲಾರ: 6 ವರ್ಷವಾದರೂ ಯರಗೋಳು ಯೋಜನೆ ಕುಂಟುತ್ತಲೇ ಇರುವುದು ವಿಷಾದನೀಯ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹೇಳಿದರು.ತಾಲ್ಲೂಕಿನ ವಕ್ಕಲೇರಿ ಹೋಬಳಿಯ ಕೋರಗಂಡಹಳ್ಳಿಯಲ್ಲಿ ಏಕಲವ್ಯ ಯುವಕರ ಕ್ಷೇಮಾಭಿವದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಕೋಲಾರ, ಮಾಲೂರು, ಬಂಗಾರಪೇಟೆ ಹಾಗೂ ನೂರಾರು ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಲನೆ ನೀಡಲಾಗಿತ್ತು. ಆದರೆ ಇದುವರೆಗೂ ಯೋಜನೆ ಅಣೆಕಟ್ಟು ನಿರ್ಮಾಣಕ್ಕೆ ಬೇಕಾದ ಅರಣ್ಯಭೂಮಿಗೆ ಪರ್ಯಾಯವಾಗಿ ಕಂದಾಯ ಭೂಮಿಯನ್ನು ಹಸ್ತಾಂತರಿಸುವ ಕೆಲಸ ನಡೆದಿಲ್ಲ. ಯೋಜನೆ ಪೂರ್ಣಗೊಂಡಿದ್ದರೆ ಕುಡಿಯುವ ನೀರಿನ ಸಮಸ್ಯೆಯನ್ನು ಕನಿಷ್ಠ ಮಟ್ಟದಲ್ಲಿ ನಿವಾರಿಸಲು ಸಾಧ್ಯವಾಗುತ್ತಿತ್ತು ಎಂದು ವಿಷಾದಿಸಿದರು.ಶಾಶ್ವತ ನೀರಾವರಿ: ಈಗಾಗಲೇ ಕೋಲಾರ,ಚಿಕ್ಕಬಳ್ಳಾಪುರ ಮುಖಂಡರು ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ 8 ಜಿಲ್ಲೆಗಳಿಗೆ ಹಾಗೂ 74 ವಿಧಾನಸಭಾ ಕ್ಷೇತ್ರಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಘೋಷಣೆ ಮಾಡಲು ನಿರ್ಧರಿಸಲಾಗಿದೆ ಎಂದರು.ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದರ ಬದಲು ವಾಮ ಮಾರ್ಗದಲ್ಲಿ ಯತ್ನಗಳು ನಡೆದಿವೆ. ಹಣದಿಂದ ಜನರನ್ನು ತಾತ್ಕಾಲಿಕ ಆಮಿಷಗಳಿಗೆ ಬಲಿ ಮಾಡುವ ಹುನ್ನಾರಗಳು ನಡೆಯುತ್ತಿವೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾಗುವಂತಹ ಚಟುವಟಿಕೆಗೆ ಕಡಿವಾಣ ಹಾಕಲು ಯುವಜನ ಜಾಗೃತರಾಗಬೇಕು ಎಂದರು.ಏಕಲವ್ಯ ಯುವಕರ ಕ್ಷೇಮಾಭಿವೃದ್ಧಿ ಸಂಘದ ಮೂಲಕ ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು. ಬಡವರ ಸಂಕಷ್ಟಗಳಿಗೆ ನೆರವಾಗಬೇಕು. ಕೋರಗಂಡಹಳ್ಳಿಗೆ ಮಾತ್ರ ಸೀಮಿತವಾಗದೆ ಸುತ್ತ ಮುತ್ತಲಿನ ಗ್ರಾಮಗಳ ಕಷ್ಟ-ಸುಖಗಳಿಗೆ ಸ್ಪಂದಿಸುವಂತಾಗಬೇಕು ಎಂದರು. ಸಂಘಕ್ಕೆ 25 ಸಾವಿರ ರೂಪಾಯಿ ಆರ್ಥಿಕ ನೆರವನ್ನು ನೀಡುವುದಾಗಿ ಘೋಷಿಸಿದರು.ಮಹಿಳಾ ಸಂಘಗಳಿಗೆ ವಿಮಾ ಪತ್ರಗಳನ್ನು ಇದೇ ಸಂದರ್ಭದಲ್ಲಿ ಉಚಿತವಾಗಿ ವಿತರಿಸಿದ ಗೌಡರು, ಹೃದಯ, ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಹಲವು ರೈತರಿಗೆ ಇಫ್ಕೋ ಸಂಸ್ಥೆಯಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ನೀಡಲಾಗಿದೆ ಎಂದರು.ಬೆಂಗಳೂರಿನ ಎಸಿಪಿ ಡಿ.ದೇವರಾಜ್, ಕೆಎಲ್‌ಇ. ಕಾಲೇಜಿನ ಡಾ.ಕೆ.ವಿ.ಜೈರಾಮ್.ಗಾಯಕ ಸುರಕ್ಷಿತ್ ಗೌಡ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಗೋಪಾಲಕೃಷ್ಣ, ಕಲ್ಲಂಡೂರು ನಂಜುಂಡಗೌಡ, ಕೃಷ್ಣಪ್ಪ ಮಾತನಾಡಿದರು.ಎಪಿಎಂಸಿ ಅಧ್ಯಕ್ಷ ಈರಪ್ಪ, ರಾಜೇಶ್ವರಿ, ನಟರಾಜು, ಗ್ರಾಮ ಪಂಚಾಯಿತಿ ಸದಸ್ಯ ಬಿ.ಗೋಪಣ್ಣ, ಎನ್.ಪ್ರಕಾಶ್, ಬಿ.ಆರ್.ಕೃಷ್ಣಪ್ಪ, ಸಂಘದ ಅಧ್ಯಕ್ಷ ವಿಶ್ವನಾಥಗೌಡ, ಪದಾಧಿಕಾರಿಗಳಾದ ಚಂದ್ರಶೇಖರ್, ಎನ್.ಸಂಪಂಗಿ ಹಾಗೂ ಜಿ.ನಾಗರಾಜ್ ವೇದಿಕೆಯಲ್ಲಿದ್ದರು. ಅರುಣ್ ಕುಮಾರ್ ಸ್ವಾಗತಿಸಿ ವಂದಿಸಿದರು. ವಕೀಲ ಮುನಿರಾಜು ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry