ಕುಂದಗೋಳ: ಸಂಗೀತೋತ್ಸವ ನಾಳೆಯಿಂದ

7

ಕುಂದಗೋಳ: ಸಂಗೀತೋತ್ಸವ ನಾಳೆಯಿಂದ

Published:
Updated:

ಹುಬ್ಬಳ್ಳಿ: `ಸವಾಯಿ ಗಂಧರ್ವರ 60ನೇ ಪುಣ್ಯತಿಥಿ ಅಂಗವಾಗಿ ಕುಂದಗೋಳದ ನೂತನ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಇದೇ 9ರಿಂದ ಮೂರು ದಿನಗಳ ಸಂಗೀತೋತ್ಸವ ಆಯೋಜಿಸಲಾಗಿದೆ~ ಎಂದು ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಉಪಾಧ್ಯಕ್ಷ ಐ.ಎಂ. ನಾವಳ್ಳಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಈ ಭಾಗದ ಜನರ ಬಹುದಿನಗಳ ಕನಸಾಗಿದ್ದ ಸವಾಯಿ ಗಂಧರ್ವ ಸ್ಮಾರಕ ಭವನ ನಿರ್ಮಾಣ ಕನಸು ಈಗ ನನಸಾಗಿದೆ. ಈ ವರ್ಷ  ಸವಾಯಿ ಗಂಧರ್ವರ 60ನೇ ವರ್ಷದ ಪುಣ್ಯತಿಥಿಯನ್ನು ನೂತನ ಸಭಾಂಗಣದಲ್ಲಿ ಆಚರಿಸಲಾಗುತ್ತಿದ್ದು, ದೇಶದ ನಾನಾ ಭಾಗಗಳ ಖ್ಯಾತನಾಮ ಸಂಗೀತಗಾರರು ತಮ್ಮ ಸಂಗೀತ ಸುಧೆ ಹರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೂರು ದಿನಗಳ ಸಂಗೀತೋತ್ಸವ ಆಯೋಜಿಸಲಾಗಿದೆ~ ಎಂದು ಹೇಳಿದರು.`ಡಾ. ಗಂಗೂಬಾಯಿ ಹಾನಗಲ್ ಅವರು ಕುಂದಗೋಳದಲ್ಲಿ ಸವಾಯಿ ಗಂಧರ್ವ ಸ್ಮಾರಕ ಭವನ ನಿರ್ಮಾಣ ಮಾಡುವ ಕನಸು ಹೊಂದಿದ್ದರು. ಈಗ ಅವರ ಕನಸು ಈಡೇರಿದ್ದು, ಇದೇ 11ರಂದು ಅವರ ಕನಸಿನ ಭವನದಲ್ಲೇ ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ ಸಹಯೋಗದೊಂದಿಗೆ ಗಂಗಜ್ಜಿಯ ಜನ್ಮಶತಮಾನೋತ್ಸವ ಆಚರಿಸಲಾಗುತ್ತದೆ~ ಎಂದರು.`ಇದೇ 9ರಂದು ಸಂಜೆ 7 ಗಂಟೆಗೆ ಮಾಜಿ ಸಚಿವ ಎಚ್.ಕೆ. ಪಾಟೀಲ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಶಿತಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ ಮುಂತಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಧಾರವಾಡದ ಖ್ಯಾತ ಸಂಗೀತಗಾರ ಪಂ. ಸಂಗಮೇಶ್ವರ ಗುರವ ಅವರಿಗೆ ಸವಾಯಿ ಗಂಧರ್ವ ರಾಷ್ಟ್ರೀಯ ಸಂಗೀತ ಪುರಸ್ಕಾರ ಪ್ರದಾನ ಮಾಡಲಾಗುವುದು. ಪ್ರಸಿದ್ಧ ತಬಲಾ ವಾದಕ ಪಂ. ನಾನಾ ಮುಳೆ, ಪಂ. ದಿನಕರ ಪನಶೀಕರ ಅವರನ್ನು ಸನ್ಮಾನಿಸಲಾಗುವುದು~ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಕಾರ್ಯದರ್ಶಿ ಅಶೋಕ ನಾಡಗೀರ, ಸದಸ್ಯರಾದ ಬಿ.ಜಿ. ಹಾನಗಲ್ಲ, ಎ.ಎಂ. ಕಟಗಿ, ಟಿ.ಎಸ್. ಗೌಡಪ್ಪನವರ, ಆರ್.ಐ. ಬ್ಯಾಹಟ್ಟಿ ಹಾಜರಿದ್ದರು.ನಾಡಗೀರ ವಾಡೆಯಲ್ಲಿ ಅಹೋರಾತ್ರಿ ಸಂಗೀತ 10ರಂದುಹುಬ್ಬಳ್ಳಿ:
`ಸವಾಯಿ ಗಂಧರ್ವರ ಪುಣ್ಯತಿಥಿ ಅಂಗವಾಗಿ ನಾನಾಸಾಹೇಬ ನಾಡಗೀರ ಸ್ಮೃತಿ ಪ್ರತಿಷ್ಠಾನದ ಆಶ್ರಯದಲ್ಲಿ ಕುಂದಗೋಳದ ನಾಡಗೀರ ವಾಡೆಯಲ್ಲಿ ಇದೇ 10ರಂದು ಅಹೋರಾತ್ರಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ~ ಎಂದು ಪ್ರತಿಷ್ಠಾನದ ಅಧ್ಯಕ್ಷ ಅರ್ಜುನ ನಾಡಗೀರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಇದೇ 9ರಂದು ಪುಣ್ಯತಿಥಿ ಅಂಗವಾಗಿ ಸವಾಯಿ ಗಂಧರ್ವರ ಪ್ರತಿಮೆಗೆ ಪೂಜೆ ಸಲ್ಲಿಸಲಾಗುವುದು. 10ರಂದು ಸಂಜೆ 5 ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಂಸದ ಪ್ರಹ್ಲಾದ ಜೋಶಿ, ಶಾಸಕ ಎಸ್.ಐ. ಚಿಕ್ಕನಗೌಡ್ರು, ಆರ್.ಎಸ್.ಎಸ್. ಪ್ರಾಂತ ಸಂಚಾಲಕ ಗೋಪಾಲ ಮುಂತಾದವರು ಭಾಗವಹಿಸಲಿದ್ದಾರೆ ಇದೇ ಸಂದರ್ಭದಲ್ಲಿ ಹಾರ್ಮೋನಿಯಂ ವಾದಕ ಪಂ. ವಸಂತ ಕನಕಾಪುರ ಅವರನ್ನು ಸತ್ಕರಿಸಲಾಗುವುದು~ ಎಂದು ಹೇಳಿದರು.`ಸಂಗೀತ ದಿಗ್ಗಜರಾದ ಪಂ. ಸೋಮನಾಥ ಮರಡೂರ, ಮುಂಬೈನ ಪಂ. ಅಜೀತಕುಮಾರ ಕಡಕಡೆ, ಪಂ. ಜಯತೀರ್ಥ ಮೇವುಂಡಿ, ಡಾ. ಅಶೋಕ ಹುಗ್ಗಣ್ಣವರ, ಪಂ. ಕೃಷ್ಣೇಂದ್ರ ವಾಡಿಕರ ಅವರಿಂದ ಗಾಯನ ನಡೆಯಲಿದೆ. ಅಲ್ಲದೇ ಡಾ. ನರಸಿಂಹಲು ವಡವಾಟಿ ಅವರಿಂದ ಕ್ಲ್ಯಾರಿಯೋನೇಟ್, ಡಾ. ರವೀಂದ್ರ ಕಾತೋಟಿ ಅವರಿಂದ ಹಾರ್ಮೋನಿಯಂ, ಡಾ. ಸುಮಾ ಸುಧೀಂದ್ರ ಅವರಿಂದ  ವೀಣಾ ವಾದನ ನಡೆಯಲಿದೆ~ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ಯಾಮಸುಂದರ ದೇಸಾಯಿ, ಸದಸ್ಯ ರವಿ ಕಮಡೊಳ್ಳಿ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry