ಶುಕ್ರವಾರ, ಏಪ್ರಿಲ್ 16, 2021
31 °C

ಕುಂದಾನಗರಿಯಲ್ಲಿ ಕೊಡಗಿನ ಸಾಂಸ್ಕೃತಿಕ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಕುಂದಾನಗರಿ ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕೊಡಗಿನ ಸಾಂಸ್ಕೃತಿಕ ಕಲಾ ವೈಭವ ಮೇಳೈಸಿತು.

ಕೊಡಗಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ತೆರಳಿದ್ದ ಕಲಾ ತಂಡಗಳು ಕೊಡಗಿನ ಕಲೆ, ಕೊಡವ ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುವ ಮೂಲಕ ಕಲಾ ಪ್ರತಿಭೆಯನ್ನು ಎತ್ತಿಹಿಡಿದವು.ಕನ್ನಡ ಮತ್ತು ಸಂಸ್ಕೃತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಅಕಾಡೆಮಿ ಅಧ್ಯಕ್ಷೆ ರಾಣಿ ಮಾಚಯ್ಯ ನೇತೃತ್ವದಲ್ಲಿ ಮಡೆಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ವಿರಾಜಪೇಟೆ ಕಾವೇರಿ ಮಹಿಳಾ ಕಾಲೇಜು, ಕಾವೇರಿ ಕಾಲೇಜಿನಿಂದ ತೆರಳಿದ್ದ ವಿದ್ಯಾರ್ಥಿನಿಯರು ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆಯಲ್ಲಿ ಪ್ರದರ್ಶಿಸಿದ ಕೊಡವ ಸಂಸ್ಕೃತಿಯ ಪ್ರತೀಕವಾದ ಉಮ್ಮತ್ತಾಟ್ ಜನಮನಸೂರೆಗೊಂಡಿತು.ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಕೊಡಗಿನ ಉತ್ಪನ್ನಗಳಾದ ಕಾಫಿ, ಏಲಕ್ಕಿ, ಜೇನು, ಕರಿಮೆಣಸು ಪ್ರದರ್ಶನ ಗಮನ ಸೆಳೆಯಿತು. ವಸ್ತು ಪ್ರದರ್ಶನದಲ್ಲಿ  ಸೋಮವಾರಪೇಟೆ ಮಹಿಳಾ ಜಾಗೃತಿ ಸಂಘದ ವತಿಯಿಂದ ಸಂಘದ ವ್ಯವಸ್ಥಾಪಕ ನಿರ್ದೇಶಕಿ ಪೂರ್ಣಿಮಾ ವಿರೂಪಾಕ್ಷ ನೇತೃತ್ವದಲ್ಲಿ ದಾಕ್ಷಾಯಿಣಿ, ಕಾತ್ಯಾಯಿನಿ ಕೊಡಗಿನ ಕಾಫಿಯ ರುಚಿಯನ್ನು ಜನರಿಗೆ ಪರಿಚಯಿಸಿದರು.ಸಮ್ಮೇಳನಕ್ಕೆ ಜಿಲ್ಲೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 45 ಮಂದಿಯನ್ನು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡಗಿನ ಪರವಾಗಿ ಮದೆನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಆರ್.ಜೋಯಪ್ಪ ನೇತೃತ್ವದಲ್ಲಿ ಪ್ರತಿನಿಧಿಗಳನ್ನಾಗಿ ಕಳುಹಿಸಿಕೊಡಲಾಗಿತ್ತು.ಜಿ.ಪಂ.ಉಪಾಧ್ಯಕ್ಷೆ ಎಚ್.ಎಂ.ಕಾವೇರಿ, ಸಾಹಿತಿಗಳಾದ ಕಣಿವೆ ಭಾರದ್ವಾಜ, ಡಾ ಜೆ.ಸೋಮಣ್ಣ, ದೇವರ್, ಕವಿಗಳಾದ ಚಕ್ಕೇರ ತ್ಯಾಗರಾಜ್, ಶಶಿ ಸುಬ್ರಮಣಿ, ಕಲಾವಿದರಾದ ಬಿ.ಎಚ್.ಉದಯ್‌ಕುಮಾರ್, ಬಿ.ಎಸ್.ಲೋಕೇಶ್‌ಸಾಗರ್,  ಎಚ್.ಕೆ.ತಿಲಗಾರ್, ಎನ್.ಕೆ.ಮೋಹನ್‌ಕುಮಾರ್, ಚಾರ್ಲ್ಸ್ ಡಿ’ಸೋಜ, ಫಿಲಿಪ್‌ವಾಸ್, ಪ್ರೇಮಕುಮಾರ್, ರವಿಶಂಕರ್, ರಾಘವ, ಸಂಜೀವ, ಕೆ.ಎಸ್.ಮಹೇಶ್, ಕೆ.ವಿ.ಉಮೇಶ್, ಮೂರ್ತಿ, ರಘು ಇತರರು ಜಿಲ್ಲೆಯ ಪ್ರತಿನಿಧಿಗಳಾಗಿ ತೆರಳಿದ್ದರು.ಕಸಾಪ ಕುಶಾಲನಗರ ಹೋಬಳಿ ಘಟಕದ ಅಧ್ಯಕ್ಷ ಎನ್.ಕೆ.ಮೋಹನ್‌ಕುಮಾರ್ ನೇತೃತ್ವದಲ್ಲಿ ‘ತಿನ್ನುವ ಹಕ್ಕಿದೆ, ಬಿಸಾಡುವ ಹಕ್ಕು ನಮಗಿಲ್ಲ’ ಎಂಬ ಘೋಷಣೆಯಡಿ ಸಮ್ಮೇಳನದ ಅಂಗವಾಗಿ ನಡೆದ ಮೆರವಣಿಗೆ ಮತ್ತು ಊಟದ ಮನೆಯಲ್ಲಿ ಆಹಾರ ಅಪವ್ಯಯ ತಡೆಗಟ್ಟುವ ಕುರಿತು ಕರಪತ್ರಗಳನ್ನು ಹಂಚುವ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಸಮ್ಮೇಳನದ ಅಂಗವಾಗಿ ಜಿಮ್ಮಿ ಸಿಕ್ವೇರಾ, ರಾಜು ನೇತೃತ್ವದಲ್ಲಿ ಬೆಳಗಾವಿಗೆ ತೆರಳಿದ್ದ ಕನ್ನಡ ತೇರು ಕೊಡಗಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.