ಕುಂದಾಪುರ: ಕಂಬನಿ ಮಹಾಪೂರ

7

ಕುಂದಾಪುರ: ಕಂಬನಿ ಮಹಾಪೂರ

Published:
Updated:

ಕುಂದಾಪುರ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಆಜಾತಶತ್ರುವಿನಂತೆ ಗುರುತಿಸಿಕೊಂಡಿದ್ದ ಡಾ.ವಿ. ಎಸ್ ಆಚಾರ್ಯ ಅವರ ಆಕಸ್ಮಿಕ ನಿಧನದ ಕುರಿತು ತಾಲ್ಲೂಕಿನಾದ್ಯಾಂತ ಕಂಬನಿಯ ಮಹಾಪೂರವೇ ಹರಿದು ಬರುತ್ತಿದೆ.ಟಿ.ವಿ ವಾಹಿನಿಯಲ್ಲಿ ಮರಣದ ಸುದ್ದಿ ವೀಕ್ಷಿಸಿದ ತಾಲ್ಲೂಕಿನ ಅವರ ಅಭಿಮಾನಿಗಳು ಪ್ರಮುಖ ಪತ್ರಿಕೆಗಳ ವರದಿಗಾರರಿಗೆ ಕರೆ ಮಾಡಿ  ಸುದ್ದಿ ಖಚಿತ ಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದುದು ಮಾಮೂಲಾಗಿತ್ತು.

ರಾಷ್ಟ್ರೀಯ ಸ್ವಯಂಸೇವಾ ಸಂಘದ ಕಾರ್ಯ ಚಟುವಟಿಕೆಯ ಮೂಲಕ ಕುಂದಾಪುರ ತಾಲ್ಲೂಕಿನ ಪರಿಚಿತರಾಗಿದ್ದ ಅವರು ಮುಂದೆ ಜನಸಂಘ ಹಾಗೂ ಬಿಜೆಪಿಯ ರಾಜಕೀಯ ಒಡನಾಟದ ಸಂದರ್ಭದಲ್ಲಿಯೂ ಪಕ್ಷ ಸಂಘಟನೆಗಾಗಿ ತಾಲ್ಲೂಕಿನಾದ್ಯಾಂತ ಸಂಪರ್ಕ ಬೆಳೆಸಿಕೊಂಡಿದ್ದರು.ಕುಂದಾಪುರದ ಸಮೀಪದ ಮೂಡ್ಲಕಟ್ಟೆ ಕಂದಾವರದ ಸುಬ್ರಹ್ಮಣ್ಯ ದೇವಸ್ಥಾನದ ದೇವರು ಅವರ ಕುಟುಂಬದ ಮನೆ ದೇವರಾಗಿದ್ದ ಕಾರಣದಿಂದ ಅವರು ವರ್ಷದಲ್ಲಿ ವಿಶೇಷ ಸಂದರ್ಭಗಳಲ್ಲಿ ಹಾಗೂ ಕೌಟುಂಬಿಕ ಕಾರ್ಯಕ್ರಮದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುತ್ತಿದ್ದರು.ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ ಹಾಗೂ ಆನೆಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನದ ಅನನ್ಯ ಭಕ್ತರಾಗಿದ್ದ ಅವರು ಕಳೆದ ಕೆಲವು ವರ್ಷಗಳಿಂದ ನವರಾತ್ರಿ ಹಾಗೂ ಗಣೇಶೋತ್ಸವದ ಸಂದರ್ಭದಲ್ಲಿ ಈ ಕ್ಷೇತ್ರಗಳಿಗೆ ಭೇಟಿ ನೀಡುವ ಪರಿಪಾಠ ಬೆಳೆಸಿಕೊಂಡಿದ್ದರು.ಕುಂದಾಪುರ ಪುರಸಭೆಯ ತ್ಯಾಜ್ಯ ಸಂಸ್ಕರಣ ಕೇಂದ್ರ ಹಾಗೂ ಒಳಚರಂಡಿ ಯೋಜನೆ, ಕೊಲ್ಲೂರಿನ ಒಳಚರಂಡಿ ಯೋಜನೆ ಹಾಗೂ ಸಮಗ್ರ ಅಭಿವೃದ್ದಿ ಯೋಜನೆ, ನಕ್ಸಲ್ ಚಟುವಟಿಕೆ ಪ್ರದೇಶಗಳ ಅಭಿವೃದ್ಧಿ ಯೋಜನೆಯ ಕುರಿತು ವಿಶೇಷ ಆಸಕ್ತಿ ವಹಿಸಿದ್ದರು. ಡಾ.ಆಚಾರ್ಯ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಬಹಳಷ್ಟು ವರ್ಷಗಳಿಂದ ಬೇಡಿಕೆಯಲ್ಲಿದ್ದ ಕುಂದಾಪುರದ ಪಟ್ಟಣ ಠಾಣೆ ಹಾಗೂ ನಕ್ಸಲ್ ಚಟುವಟಿಕೆ ಇರುವ ಅಮಾಸೆಬೈಲು ಠಾಣೆಗಳ ಸ್ಥಾಪನೆಯಾಗಿತ್ತು.ಆಚಾರ್ಯ ಒಡ ನಾಡಿಯಾಗಿದ್ದ 3ನೇ ಹಣಕಾಸು ವರದಿ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷ ಎ.ಜಿ ಕೊಡ್ಗಿಯವರ ಕನಸಿನ ಸೌಭಾಗ್ಯ ಸಂಜೀವಿನಿ ಯೋಜನೆಯ ಕುರಿತು ಅವರ ವಿಶೇಷ ಆಸಕ್ತಿ ತೋರಿದ್ದರು.

ಕುಂದಾಪುರ ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಮಾಣಿ ಗೋಪಾಲ್, `ದಿ.ಶ್ರೀನಿವಾಸ ಮಲ್ಯ ಹಾಗೂ ಟಿ.ಎ.ಪೈ ಗಳ ನಂತರ ಕರಾವಳಿ ಕಂಡ ಅಪರೂಪದ ರಾಜಕಾರಣಿ, ನಿರ್ಗವಿ, ಸಜ್ಜನಿಕೆಯನ್ನು ಹೊಂದಿದ್ದ ಅವರು ನಮ್ಮ ಜಿಲ್ಲೆಯ ನಡೆದಾಡುವ ಜ್ಞಾನ ಭಂಡಾರವಿದ್ದಂತೆ~ ಎಂದು ಬಣ್ಣಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry