ಶನಿವಾರ, ಮೇ 8, 2021
18 °C

ಕುಂದು ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದು ಕೊರತೆ

ನಿವಾಸಿಗಳಿಗೆ ಜವಾಬ್ದಾರಿ ಹೆಚ್ಚಲಿ

ಪಟ್ಟೆಗಾರಪಾಳ್ಯ, 2ನೇ ಮುಖ್ಯರಸ್ತೆ 4ನೇ ಅಡ್ಡರಸ್ತೆ, ಟೋಟಲ್‌ ಗ್ಯಾಸ್‌ ಶಾಪ್‌ ಬಳಿ ಒಂದು ಖಾಲಿ ನಿವೇಶನ ಇದೆ. ಬಿಬಿಎಂಪಿಯವರು ಸಂಗ್ರಹಿಸಿದ ಕಸಗಳನ್ನು ಅಲ್ಲಿ ತಂದು ವಿಂಗಡಿಸಿ ಆಟೊದಲ್ಲಿ ತುಂಬಿಕೊಂಡು ಹೋಗುತ್ತಾರೆ. ಅವರ ಕೆಲಸವನ್ನು ಸರಿಯಾಗಿಯೇ ಮಾಡುತ್ತಿದ್ದಾರೆ.ಆದರೆ ಇಲ್ಲಿನ ನಾಗರಿಕರು ಹೇಗಿದ್ದರೂ ಖಾಲಿ ನಿವೇಶನ ಎಂದು ಕಸವನ್ನು ತಂದು ಅಲ್ಲಿ ಎಸೆದು ಹೋಗುತ್ತಿದ್ದಾರೆ. ಹತ್ತಿರದಲ್ಲೇ ಚಿಕನ್‌ ಶಾಪ್‌ ಕೂಡ ಇದೆ. ಕೋಳಿ, ಮಟನ್‌ ತ್ಯಾಜ್ಯವನ್ನು ಇಲ್ಲೇ ತಂದು ಎಸೆಯುತ್ತಾರೆ. ಇದರಿಂದ ಅಸಹನೀಯ ವಾಸನೆ ಬರುತ್ತಿದೆ.ಕಸ ಎಸೆಯುವವರ ಬಳಿ ಹಾಗೆ ಮಾಡಬೇಡಿ ಎಂದು ಕೇಳಿಕೊಂಡರೆ ಜಗಳಕ್ಕೇ ಬರುತ್ತಾರೆ. ದುರ್ನಾತದ ಜೊತೆಗೆ ಸೊಳ್ಳೆ ಕಾಟವೂ ಹೆಚ್ಚಿದೆ. ಈ ಪ್ರದೇಶದ ಸುತ್ತಮುತ್ತಲಿರುವ ಮಕ್ಕಳಿಗೆ ಪದೇ ಪದೇ ಜ್ವರ ಬರುತ್ತಿದೆ. ಸಂಬಂಧಪಟ್ಟವರು ಈ ಸಮಸ್ಯೆ ನಿವಾರಿಸಿ ನಾಗರಿಕರಿಗೆ ಸಹಾಯ ಮಾಡಬೇಕು ಎಂದು ವಿನಂತಿ.

–ಎ.ಪಿ.ಘನಶ್ಯಾಂ, ಪಟ್ಟಗಾರಪಾಳ್ಯ***

ಬೆಂಗಳೂರು ಒನ್‌ ಕೇಂದ್ರಗಳ ಸಂಖ್ಯೆ ಹೆಚ್ಚಲಿ

ಬೆಂಗಳೂರು ಮಹಾನಗರದ ನಾಗರಿಕರಿಗೆ ಅನೇಕ ಸೌಲಭ್ಯಗಳು ಒಂದೇ ಕಡೆ ಲಭ್ಯವಾಗುವಂತೆ ಬೆಂಗಳೂರು ಒನ್‌ ಕೇಂದ್ರಗಳನ್ನು ತೆರೆಯಲಾಗಿದೆ. ಸರ್ಕಾರದ ಈ ಕ್ರಮ ಶ್ಲಾಘನೀಯ. ಆದರೆ ನಾನು ಆಗಾಗ ಕಂಡಂತೆ, ಶಂಕರ್‌ನಾಗ್ ವೃತ್ತದ ಬಳಿಯ ಈ ಕೇಂದ್ರದ ಬಳಿ ನೂರಾರು ಜನ ಸರತಿಯ ಸಾಲಿನಲ್ಲಿ ಬಹಳ ಹೊತ್ತು ಕಾಯುತ್ತಾ ಪಾದಚಾರಿ ರಸ್ತೆಯಲ್ಲಿ ಬಿಸಿಲು–ಮಳೆ–ಗಾಳಿಗೆ ರಕ್ಷಣೆ ಇಲ್ಲದೆ ನಿಂತಿರುತ್ತಾರೆ.ಇದರಲ್ಲಿ ಕೆಲವು ಮಹಿಳೆಯರು ಪುಟ್ಟ–ಪುಟ್ಟ ಮಕ್ಕಳನ್ನು ಎತ್ತಿಕೊಂಡು ನಿಂತಿರುವುದು ಮತ್ತು ಪುಟ್ಟ ಕಂದಮ್ಮಗಳು ಅಳುವುದನ್ನು ನೋಡುವಾಗ ಬಹಳ ದುಃಖವಾಗುತ್ತದೆ. ಇಲ್ಲಿ ಸರತಿ ಸಾಲಿನಲ್ಲಿ ನಿಲ್ಲುವವರಿಗೆ ರಕ್ಷಣೆಯಿಲ್ಲ. ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಸಾಲೂ ಇದ್ದಂತಿಲ್ಲ.

ಈ ಕೇಂದ್ರದ ಸ್ಥಳದ ಬಾಗಿಲು– ಸ್ಥಳಾವಕಾಶ ಸಹ ಸಾಕಷ್ಟು ವಿಶಾಲವಾಗಿಲ್ಲದೆ ಇರುವುದನ್ನು ಸಹ ಕಾಣಬಹುದು. ಈ ಅವ್ಯವಸ್ಥೆಯನ್ನು ಸರಿಪಡಿಸಲು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಈ ಬೆಂಗಳೂರು ಒನ್‌ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇದರಿಂದ ನಾಗರಿಕರ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆದು ಹೆಚ್ಚು ಹೊತ್ತು ನಿಲ್ಲದೆ ನಡೆಯುವಂತಾಗಲು ಸರ್ಕಾರ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಲ್ಲಿ ವಿನಂತಿಸುತ್ತೇನೆ.

–ಎ.ಕೆ. ಅನಂತಮೂರ್ತಿ, ನಾಗೇಂದ್ರ ಬ್ಲಾಕ್‌***

ರಸ್ತೆ ಸರಿಪಡಿಸಿ

ವಿಲ್ಸನ್‌ ಗಾರ್ಡನ್‌ ಹೊಸೂರು ರಸ್ತೆ ಜಂಕ್ಷನ್‌ 12ನೇ ಅಡ್ಡರಸ್ತೆ, ಇಲ್ಲಿ ಅನೇಕ ವರ್ಷಗಳಿಂದ ರಸ್ತೆ ತುಂಬ ಹೊಂಡಗಳದ್ದೇ ಕಾರುಬಾರು. ಈ ಬಗ್ಗೆ ಯಾರಿಗೆ ಎಷ್ಟೇ ದೂರು ನೀಡಿದರೂ ರಸ್ತೆ ಸುಧಾರಣೆ ಮಾತ್ರ ಆಗಲಿಲ್ಲ. ನಾಗರಿಕರು ಇದೇ ರಸ್ತೆಯಲ್ಲಿ ನಿತ್ಯ ಓಡಾಡಬೇಕಿದ್ದು ವಾಹನ ಚಲಾಯಿಸುವುದೂ ಕಷ್ಟವಾಗಿದೆ.

–ಶಂಕರ, ವಿಲ್ಸನ್‌ ಗಾರ್ಡನ್‌***

ಗಾಂಧಿನಗರ ಅಭಿವೃದ್ಧಿಪಡಿಸಲಿ

ಗಾಂಧಿನಗರ ಕ್ಷೇತ್ರ ನಗರದ ಹೃದಯಭಾಗದ ಬಹು ವಿಸ್ತಾರದ ಭಾಗವಾಗಿದೆ. ಅಲ್ಲದೆ ಹೊರಗಿನ ಜನರು ಪ್ರತಿನಿತ್ಯ ಸಂದರ್ಶಿಸುವ ಸ್ಥಾನವಾಗಿ ಬಹುಕೋಟಿ ವ್ಯವಹಾರದ ತಾಣವಾದ ಗಾಂಧಿನಗರವು ವಾಣಿಜ್ಯ ಸ್ಥಳವೆನಿಸಿದೆ. ಇಲ್ಲಿನ ಮೊದಲನೇ ಮೇನ್‌ನಿಂದ ಆರನೇ ಮೇನ್‌ ತನಕ ರಸ್ತೆಗಳು ತುಂಬಾ ಹದಗೆಟ್ಟಿದ್ದು, ರಸ್ತೆಯ ಎರಡೂ ಬದಿಯಲ್ಲಿ ಕಸ ಹಾಗೂ ಮಣ್ಣಿನ ಗುಡ್ಡೆಯ ರಾಶಿಗಳಿವೆ.ಪಾದಚಾರಿಗಳು ನಿತ್ಯವು ನಡೆದಾಡುವ ಪುಟ್‌ಪಾತ್‌ ಮೇಲಿನ ಕಲ್ಲಿನ ಚಪ್ಪಡಿಗಳು ಸಮನಾಗಿ ಇರದೆ ಉಬ್ಬುತಗ್ಗು ರೀತಿಯಲ್ಲಿ ಇವೆ. ಮಳೆ ಬಂದರೆ ಚರಂಡಿಯಲ್ಲಿ ನೀರು ಹಾದು ಹೋಗದೆ ರಸ್ತೆಯಲ್ಲಿ ತುಂಬಿ ಹರಿಯುತ್ತಿರುತ್ತದೆ. ಜೊತೆಗೆ ಜನರಿಗೆ ಪಾದಚಾರಿ ಮಾರ್ಗವೂ ಸರಿಯಿಲ್ಲ, ಅತ್ತ ರಸ್ತೆಯೂ ಸರಿಯಿಲ್ಲದೆ ಓಡಾಡಲು ಕಷ್ಟಕರವಾಗಿದೆ.ಅನೇಕ ಕಡೆ ಕಟ್ಟಡವನ್ನು ಕೆಡವಿ ಹಾಕಿರುವ ಸಾಮಗ್ರಿಗಳು ಮತ್ತು ಮಣ್ಣಿನ ಗುಡ್ಡೆಗಳೂ ಇವೆ. ಇನ್ನು ಕೆಲವು ಕಡೆ ಪುಟ್‌ಪಾತ್‌ಗಳು ಕಾಣದಾಗಿದೆ. ಆದ್ದರಿಂದ ಈ ಕ್ಷೇತ್ರದ ಶಾಸಕರು, ಜನ ಪ್ರತಿನಿಧಿಯಿಂದ ಆಯ್ಕೆ ಆದ ನಗರಸಭಾ ಸದಸ್ಯರು ಇಲ್ಲಿನ ಕೊರತೆಯನ್ನು ಹಾಗೂ ಹಳ್ಳ–ದಿಣ್ಣೆಯ ರಸ್ತೆಗಳನ್ನು ಸರಿಪಡಿಸುವಂತೆ ಮನವಿ

–ಬಿ.ಎಂ. ಉಮಾಪತಿ***

ಚೆಲ್ಲಾಡಿದೆ ಕಸದ ರಾಶಿ

ಕೆ.ಆರ್‌.ಪುರದ ಭಟ್ಟರಹಳ್ಳಿ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ. ಕಸ ತೆಗೆಯುವವರು ವಾರಕ್ಕೆ ಒಂದು ಸಲ ಬರುತ್ತಾರೆ. ಎಲ್ಲರೂ ಕೆಲಸಕ್ಕೆ ಹೋದ ನಂತರ ಅವರು ಬರುವುದರಿಂದ ಯಾವಾಗ ಬರುತ್ತಾರೆ ಎನ್ನುವುದೂ ಗೊತ್ತಾಗುವುದಿಲ್ಲ. ಹೀಗಾಗಿ ಕಸ ವಿಲೇವಾರಿ ಸಮಸ್ಯೆ ಇಲ್ಲಿ ತಲೆದೋರಿದೆ. ದಯವಿಟ್ಟು ಸಂಬಂಧಪಟ್ಟವರು ಬೇಗ ಸಮಸ್ಯೆ ನಿವಾರಿಸಿಕೊಡಿ.

–ಉಷಾಶ್ರೀ, ಭಟ್ಟರಹಳ್ಳಿ ***

ಪಾದಚಾರಿ ಮಾರ್ಗದಲ್ಲೇ ಕಸ

ನಾನು ಫಿಲೋಮಿನಾದಿಂದ ಜಂಕ್ಷನ್‌ ಮಾರ್ಕೆಟ್‌ ರಸ್ತೆಯಲ್ಲಿ ನಿತ್ಯ ಪಾದಚಾರಿ ಮಾರ್ಗದಲ್ಲಿ ಓಡಾಡುತ್ತೇನೆ. ಇದೇ ರಸ್ತೆಯಲ್ಲಿ ಕೆಲ ಕಿಡಿಗೇಡಿಗಳು ಕೋಳಿ ಸ್ವಚ್ಛಗೊಳಿಸಿ ಅವುಗಳ ತ್ಯಾಜ್ಯವನ್ನು ರಸ್ತೆಯ ಮೇಲೆ ಬಿಸಾಕುತ್ತಿದ್ದಾರೆ.ಇದರಿಂದ ಅಲ್ಲಿ ಕೆಟ್ಟ ವಾಸನೆ ಬರುತ್ತದೆ.  ಪಾದಚಾರಿಗಳಿಗೆ ಓಡಾಡುವುದು ಅಸಾಧ್ಯವಾಗಿದೆ. ದಯವಿಟ್ಟು ಎಲ್ಲೆಂದರಲ್ಲಿ ಕಸ ಚೆಲ್ಲುವ ಇಂಥವರಿಗೆ ದಂಡ ವಿಧಿಸಬೇಕಾಗಿ ವಿನಂತಿ.

–ಮುನಿರಾಜು***

ನೆತ್ತಿ ಸುಡುತ್ತಿದ್ದರೂ ಉರಿಯುವ ವಿದ್ಯುತ್‌ ದೀಪ

ವಿದ್ಯುತ್‌ ಸಮಸ್ಯೆ ಎಲ್ಲ ನಾಗರಿಕರನ್ನು ತಟ್ಟಿದೆ. ಆದರೆ ಸುಮನಹಳ್ಳಿ ಬಳಿ ಇರುವ ಔಟರ್‌ ರಿಂಗ್‌ ರೋಡ್‌ನಲ್ಲಿ ಮಧ್ಯಾಹ್ನವಾದರೂ ಬೀದಿ ದೀಪ ಹಚ್ಚೇ ಇರುತ್ತದೆ. ಸಂಬಂಧಿಸಿದವರಿಗೆ ಬೆಳಕು ಹರಿದು ಮಧ್ಯಾಹ್ನವಾದರೂ ಬೆಳಕು ಆರಿಸಲು ಸಮಯ ಸಿಗುತ್ತಿಲ್ಲ ಎಂಬುದೇ ಆಶ್ಚರ್ಯ.

–ಸಚಿತ್‌, ಸುಮನಹಳ್ಳಿ***

ರಸ್ತೆಯಲ್ಲೇ ಕಸ ಸುಡುತ್ತಾರೆ

ಸುಲ್ತಾನ್‌ಪಾಳ್ಯದ ಪುಷ್ಪಾಂಜಲಿ ಥಿಯೇಟರ್‌ ಬಳಿ ಇರುವ ದಿಣ್ಣೂರು ಮುಖ್ಯ ರಸ್ತೆಯ ಹತ್ತಿರ ಕಸಗಳನ್ನು ಸುಡಲಾಗುತ್ತದೆ. ಪ್ಲಾಸ್ಟಿಕ್‌ಗಳನ್ನೂ ಇಲ್ಲಿ ಸುಡುವುದರಿಂದ ಸುತ್ತಲ ಪ್ರದೇಶದಲ್ಲಿರುವವರಿಗೆ ಉಸಿರಾಡಲು ಕಷ್ಟವಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಓಡಾಡುವುದಕ್ಕೂ ತೊಂದರೆಯಾಗಿದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ.

–ಶಾರದಾ, ಸುಲ್ತಾನ್‌ಪಾಳ್ಯ***

ವ್ಯವಸ್ಥೆ ಸರಿಪಡಿಸಿ

ಮೆಜೆಸ್ಟಿಕ್‌ಗೆ ಹೋಗಲು ಇಸ್ರೊ ಬಡಾವಣೆ ಬಸ್‌ ನಿಲ್ದಾಣದಲ್ಲಿ ಬೆಳಿಗ್ಗೆ 10.45ರಿಂದ ಕಾಯುತ್ತಿದ್ದೆ. ಆದರೆ ಬಸ್‌ ಬಂದಿದ್ದು  ಮಾತ್ರ 11.35ಕ್ಕೆ. ಈ ಮೊದಲು ಸಹ ಅನೇಕ ಬಾರಿ ಬಸ್‌ಗಾಗಿ ಕಾದಿರುವುದುಂಟು. ಇಸ್ರೊ ಲೇಔಟ್‌ನಿಂದ ಬೆಳಿಗ್ಗೆ 10 ರಿಂದ 10–30ರ ಅವಧಿಯಲ್ಲಿ 210ಎ, 201ಎಕ್‌್ಸ, 210ಯು, 210ಆರ್‌ ಹೀಗೆ ನಾಲ್ಕೈದು ಬಸ್‌ಗಳು ಸರದಿಯಂತೆ ಒಮ್ಮೆಲೆ ಮೆಜೆಸ್ಟಿಕ್‌ಗೆ ಹೊರಡುತ್ತವೆ.ಮುಂದಿನ ಕುಮಾರಸ್ವಾಮಿ ಲೇಔಟ್‌ನಿಂದಲೂ 15ಇ ಬಸ್‌ ಹೊರಡುತ್ತದೆ. ಕೆಲವು ಬಸ್‌ಗಳಲ್ಲಿ ಪ್ರಯಾಣಿಕರೇ ಇರುವುದಿಲ್ಲ. ಜನ ಇದ್ದಾಗ ಬಸ್‌ ಇರುವುದಿಲ್ಲ, ಬಸ್‌ ಇದ್ದಾಗ ಜನ ಇರುವುದಿಲ್ಲ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ತಿಳಿದು ಅವಶ್ಯವಾದರೆ ಬಸ್‌ ವೇಳಾ ಪಟ್ಟಿಯನ್ನು ಪರಿಷ್ಕರಿಸಿ ಬೆಳಿಗ್ಗೆ 10 ಗಂಟೆಯ ನಂತರ 20–25 ನಿಮಿಷಕ್ಕಾದರೂ ಒಂದು ಬಸ್‌ ಹೊರಡುವಂತೆ ವ್ಯವಸ್ಥೆ ಮಾಡಬೇಕು.ಇದರಿಂದ ಬಹಳಷ್ಟು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಗಮನ ಹರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ.

–ಪಿ.ಎ. ಸುಧೀಂದ್ರ, ಇಸ್ರೊ ಬಡಾವಣೆ***

ಎಲ್ಲಿ ನೋಡಿ ಕಸ

ಸುಂಕದಕಟ್ಟೆ ವಿಜಯಚಂದ್ರ ಕಲ್ಯಾಣ ಮಂಟಪ ರಸ್ತೆ ತುಂಬ ಕಸವೇ ತುಂಬಿಕೊಂಡಿದೆ.

ಹೀಗೆ ಕಸ ಚೆಲ್ಲಿರುವುದರಿಂದ ದುರ್ನಾತ ಹೆಚ್ಚಾಗಿದೆ, ಸೊಳ್ಳೆ ಕಾಟವೂ ಹೆಚ್ಚಿದೆ. ಸಂಬಂಧಪಟ್ಟವರು ಆದಷ್ಟು ಬೇಗ ಪರಿಹಾರ ಒದಗಿಸಿ.

–ಚನ್ನವೀರಯ್ಯ***

ರಸ್ತೆ ದುರವಸ್ತೆ

ವಾರ್ಡ್‌ ನಂ. 198ರಲ್ಲಿರುವ ಎಚ್‌.ಗೊಲ್ಲಹಳ್ಳಿ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ವಾಟರ್‌ ಟ್ಯಾಂಕ್‌ ಬಳಿ ಇರುವ ರಸ್ತೆಯ ದುರವಸ್ತೆಯಿದು. ಕಳೆದ ಒಂದು ವರ್ಷದಿಂದ ರಸ್ತೆ ಹೀಗೆ ಇದ್ದು ವಾಹನಗಳು ಓಡಾಡುವುದು ಸಾಧ್ಯವೇ ಇಲ್ಲದಂತಾಗಿದೆ.ಒಂದು ಬೈಕ್‌ ಮಾತ್ರ ಚಲಿಸಬಹುದಾದೆ. ರಸ್ತೆ ಕೆಳಭಾಗದಲ್ಲಿ ಮೋರಿಯಿದ್ದು, ಎರಡೂ ಕಡೆ ಹೊಂಡ ಬಿದ್ದಿದೆ. ಹಿಂದೊಮ್ಮೆ ಕಾರು ಸಿಲುಕಿಕೊಂಡು ಜೆಸಿಬಿ ತರಿಸಿ ಎತ್ತಿಸಿದ್ದೆವು. ಈ ಬಗ್ಗೆ ಸ್ಥಳೀಯ ಶಾಸಕರಿಗೆ ದೂರು ನೀಡಿದ್ದೆವು. ಸ್ಥಳಕ್ಕೆ ಬಂದು ಪರಿಶೀಲಿಸಿದ್ದ ಅವರು, ನಾಗರಿಕರ ಮೇಲೆಯೇ ತಪ್ಪು ಹೊರಿಸಿ ಹೊರಟು ಹೋಗುತ್ತಾರೆ.ಇಲ್ಲಿನ ನಾಗರಿಕರು ನಿತ್ಯ ವಾಹನ ಓಡಾಟಕ್ಕೆ ಸಂಬಂಧಿಸಿದಂತೆ ಸಮಸ್ಯೆ ಅನುಭವಿಸುತ್ತಲೇ ಇದ್ದು ಆದಷ್ಟು ಬೇಗ ಸರಿಪಡಿಸಬೇಕಾಗಿ ವಿನಂತಿ.

–ಕಿರಣ್‌ ಕುಮಾರ್‌***


ಕಸ, ಮೋರಿ ನೀರಿನ ಕಾರುಬಾರು

ಹಳೇ ಐಟಿಸಿ ಕಟ್ಟಡದ ಬಳಿ ಇರುವ ಇಂಡಿಯನ್‌ ಆಯಿಲ್‌ ಬ್ರಿಡ್ಜ್‌ ಕೆಳಭಾಗ ಸದಾ ಕಸ ಹಾಗೂ ಕೊಚ್ಚೆ ನೀರಿನಿಂದ ತುಂಬಿರುತ್ತದೆ. ಇದರಿಂದ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಅಧಿಕಾರಿಗಳು ಇತ್ತ ಗಮನಹರಿಸಿ.

–ಯತೀಶ್‌, ಬಾಣಸವಾಡಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.