ಮಂಗಳವಾರ, ಮೇ 11, 2021
24 °C
ಸ್ಪಾಟ್ ಫಿಕ್ಸಿಂಗ್: ಬಿಸಿಸಿಐ ಕಾರ್ಯದರ್ಶಿಯಾಗಿ ಸಂಜಯ್

ಕುಂದ್ರಾ ವಿವಾದ: 10ರಂದು ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದ್ರಾ ವಿವಾದ: 10ರಂದು ಸಭೆ

ಕೋಲ್ಕತ್ತ (ಪಿಟಿಐ): `ನಾನೂ ಬೆಟ್ಟಿಂಗ್ ಆಡಿದ್ದೇನೆ' ಎಂದು ಪೊಲೀಸರ ಮುಂದೆ ಬಹಿರಂಗಗೊಳಿಸಿ ವಿವಾದಕ್ಕೆ ಕಾರಣವಾಗಿರುವ ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಹೇಳಿಕೆ ಕುರಿತು ಚರ್ಚಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಕಾರಿ ಸಮಿತಿ ನವದೆಹಲಿಯಲ್ಲಿ ಜೂನ್ 10ರಂದು ತುರ್ತು ಸಭೆ ಕರೆದಿದೆ.`ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕುಂದ್ರಾ ಹೇಳಿಕೆಯ ಬಗ್ಗೆ ಚರ್ಚಿಸಲಾಗುವುದು. ಕುಂದ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆಯೂ ಚರ್ಚೆ ನಡೆಯಲಿದೆ' ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ತಿಳಿಸಿದ್ದಾರೆ.`ಹಿತಾಸಕ್ತಿ' ಸಂಘರ್ಷದಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ  ವಿಚಾರವನ್ನು ಚಾಂಪಿಯನ್ಸ್ ಟ್ರೋಫಿ ಬಳಿಕ ಚರ್ಚಿಸಲಾಗುವುದು ಎಂದೂ ಇದೇ ವೇಳೆ ಅವರು ನುಡಿದರು.ಸಂಜಯ್ ನೂತನ ಕಾರ್ಯದರ್ಶಿ: ಬಿಸಿಸಿಐ ನೂತನ ಕಾರ್ಯದರ್ಶಿಯಾಗಿ ಸಂಜಯ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ. ಐಪಿಎಲ್‌ನ ಸ್ಪಾಟ್ ಫಿಕ್ಸಿಂಗ್ ವಿವಾದ ಉದ್ಬವಿಸಿದ ಕಾರಣ ಸಂಜಯ್ ಜಗದಾಳೆ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.`ಸ್ಪಾಟ್ ಫಿಕ್ಸಿಂಗ್ ಪ್ರಕರಣ ಕುರಿತು ವಿಚಾರಣೆ ನಡೆಸಲು ನೇಮಿಸಲಾಗಿರುವ ಬಿಸಿಸಿಐ ತನಿಖಾ ಆಯೋಗದಲ್ಲಿ ಇಬ್ಬರೇ ವ್ಯಕ್ತಿಗಳು ಇರುತ್ತಾರೆ. ಬಿಸಿಸಿಐನ ಯಾವುದೇ ಸದಸ್ಯರು ಇರುವುದಿಲ್ಲ' ಎಂದೂ ನೂತನ ಕಾರ್ಯದರ್ಶಿ ಸಂಜಯ್ ಪಟೇಲ್ ನುಡಿದರು.ಈ ಆಯೋಗದಲ್ಲಿ ಹೈಕೋರ್ಟ್‌ನ ನಿವೃತ್ತಿ ನ್ಯಾಯಮೂರ್ತಿಗಳಾದ ಟಿ. ಜಯರಾಮ್ ಚೌಟಾ ಮತ್ತು ಅರ್. ಬಾಲಸುಬ್ರಮಣಿಯಮ್ ಸದಸ್ಯರಾಗಿದ್ದಾರೆ. ಮೊದಲು ಮೂವರು ಸದಸ್ಯರನ್ನೊಳಗೊಂಡ ಆಯೋಗವನ್ನು ರಚಿಸಲಾಗಿತ್ತು. ಆದರೆ, ಸಂಜಯ್ ಜಗದಾಳೆ ಆಯೋಗದಿಂದ ಹಿಂದೆ ಸರಿದ ಕಾರಣ ಈಗ ಇಬ್ಬರೇ ಸದಸ್ಯರಿದ್ದಾರೆ.ವಿಶ್ವಾಸ

ಬಿಸಿಸಿಐನ ಬಹುತೇಕ ಹಿರಿಯ ಅಧಿಕಾರಿಗಳು ನನಲ್ಲಿ ವಿಶ್ವಾಸ ಇಟ್ಟಿದ್ದಾರೆ. ಇಂತಹ ಸವಾಲಿನ ಸಮಯದಲ್ಲೂ ಜವಾಬ್ದಾರಿ ನಿಭಾಯಿಸುವ ಬಲ ತಂದಿದೆ. `ವ್ಯವಸ್ಥೆಯನ್ನು ಸ್ವಚ್ಛಗೊಳಿಸುವುದು ನಮ್ಮ  ಪ್ರಯತ್ನವಾಗಲಿದೆ. ತಪ್ಪಿತಸ್ಥ ಶಿಕ್ಷೆಯಿಂದ ನುಣುಚಿಕೊಳ್ಳಲಾರ ಎಂದು ಆಶ್ವಾಸನೆ ನೀಡುತ್ತೇನೆ.  -ಸಂಜಯ್ ಪಟೇಲ್, ಬಿಸಿಸಿಐ ಹಂಗಾಮಿ ಕಾರ್ಯದರ್ಶಿಖಜಾಂಚಿ ಸ್ಥಾನಕ್ಕೆ ತಲ್ಲಮ್ ವೆಂಕಟೇಶ್?

ಬೆಂಗಳೂರು:
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಖಜಾಂಚಿ ಕೂಡ ಆಗಿರುವ ತಲ್ಲಮ್ ವೆಂಕಟೇಶ್ ಅವರು ಬಿಸಿಸಿಐ ಖಜಾಂಚಿಯಾಗಿ ನೇಮಕವಾಗುವ ಸಾಧ್ಯತೆ ಇದೆ.ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಳಿಯ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ರಾಜೀನಾಮೆಗೆ ಒತ್ತಾಯಿಸಿ ಈ ಹಿಂದಿನ ಖಜಾಂಚಿ ಅಜಯ್ ಶಿರ್ಕೆ ಪದತ್ಯಾಗ ಮಾಡಿದ್ದರು. ಹಾಗಾಗಿ ಮಹತ್ವದ ಈ ಸ್ಥಾನ ಈಗ ತೆರವಾಗಿದೆ.ಈ ಸಂಬಂಧ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, `ನನ್ನ ಹೆಸರು ಖಜಾಂಚಿ ಸ್ಥಾನಕ್ಕೆ ಕೇಳಿ ಬಂದಿರುವುದು ನಿಜ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ನನಗೆ ಲಿಖಿತವಾಗಿ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ' ಎಂದಿದ್ದಾರೆ.ಜೂನ್ 10ರಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಸಂಬಂಧ ಅಂತಿಮ ಪ್ರಕಟಣೆ ಹೊರಬೀಳುವ   ನಿರೀಕ್ಷೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.