ಕುಂಬಾರಗಡಿಗೆ ಪಟ್ಟಣಕ್ಕೆ ಹತ್ತಿರ: ಸೌಲಭ್ಯ ಬಲುದೂರ!

7

ಕುಂಬಾರಗಡಿಗೆ ಪಟ್ಟಣಕ್ಕೆ ಹತ್ತಿರ: ಸೌಲಭ್ಯ ಬಲುದೂರ!

Published:
Updated:
ಕುಂಬಾರಗಡಿಗೆ ಪಟ್ಟಣಕ್ಕೆ ಹತ್ತಿರ: ಸೌಲಭ್ಯ ಬಲುದೂರ!

ಸೋಮವಾರಪೇಟೆ: ನಗರದಿಂದ ಕೇವಲ 25 ಕಿ.ಮೀ ದೂರವಿರುವ ಗರ್ವಾಲೆ ಗ್ರಾಮ ಪಂಚಾಯಿತಿಗೆ ಸೇರಿದ ಕುಂಬಾರಗಡಿಗೆ ಗ್ರಾಮವು ವಿದ್ಯುತ್, ಶಾಲೆಯಂತಹ ಯಾವುದೇ ಸೌಲಭ್ಯವಿಲ್ಲದೇ ನಲುಗುತ್ತಿದೆ.ಗರ್ವಾಲೆಯಿಂದ 15 ಕಿ.ಮೀ ದೂರವಿರುವ ಈ ಗ್ರಾಮ ತಲುಪಲು ಕಿಕ್ಕರಳ್ಳಿ ಮುಖ್ಯರಸ್ತೆ ಮೂಲಕ ಕೆಟ್ಟ ದಾರಿಯಲ್ಲಿ 8 ಕಿ.ಮೀ ದೂರ ಸಾಗಬೇಕಾಗುತ್ತದೆ. ಇಲ್ಲಿ 30 ಕುಟುಂಬಗಳು ವಾಸಿಸುತ್ತಿವೆ.ಈ ಪ್ರದೇಶದಲ್ಲಿ ವಿಪರೀತ ಮಳೆ. ಆದರೂ ಇಲ್ಲಿನ ಜನರು ಹಿಂದಿನಿಂದಲೂ ಬೇಸಾಯ ಮಾಡುತ್ತಿದ್ದಾರೆ. ಬತ್ತ ಹಾಗೂ ತರಕಾರಿ ಇಲ್ಲಿನ ಮುಖ್ಯ ಕೃಷಿ. ಕಾಡಾನೆ, ಹಂದಿ ಮೊದಲಾದ ವನ್ಯಜೀವಿಗಳ ನಿರಂತರ ದಾಳಿ ಕೃಷಿಕರ ಬದುಕು ನಲುಗಿಸುತ್ತಿದೆ.ರಸ್ತೆ ಸೌಕರ್ಯ ಇಲ್ಲದಿರುವುದರಿಂದ ಬೆಳೆದ ಫಸಲನ್ನು 8 ಕಿ.ಮೀ ದೂರ ತಲೆ ಮೇಲೆ ಹೊತ್ತು ತರಬೇಕು. ಸೋಮವಾರಪೇಟೆ, ಮಾದಾಪುರ ಹಾಗೂ ಮಡಿಕೇರಿ ಮೊದಲಾದ ಪಟ್ಟಣಗಳಿಗೆ ಸಾಗಿಸಿ ಮಾರಾಟ ಮಾಡಬೇಕಾದ ದುಸ್ಥಿತಿ ಇವರದು.ಚುನಾವಣೆಯ ಸಂದರ್ಭ ಬಿಟ್ಟರೆ ಬಳಿಕ ಯಾವ ಜನಪ್ರತಿನಿಧಿಗಳೂ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ ನಿದರ್ಶನ ಇಲ್ಲ. ಬೇಕಾದಷ್ಟು ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ಚುನಾವಣೆಯ ನಂತರ ಸಮಸ್ಯೆ ನಿವಾರಿಸುವ ಗೋಜಿಗೆ ಹೋಗಿಲ್ಲ ಎಂಬುದು ವಿಷಾದನೀಯ.`ಗ್ರಾಮದ ಶೇ.90ರಷ್ಟು ಕುಟುಂಬಗಳು ಬಿಪಿಎಲ್ ವಾಪ್ತಿಗೆ ಸೇರಿವೆ. ಆದರೆ, ಆಶ್ರಯ ಯೋಜನೆಯಡಿ ಯಾವ ಗ್ರಾಮಸ್ಥರಿಗೂ ಮನೆ ಕಟ್ಟಿಸಿಕೊಟ್ಟಿಲ್ಲ. ಇಲ್ಲಿನ ಸಮಸ್ಯೆ ಪರಿಶೀಲಿಸಿಲ್ಲ~ ಎಂಬುದು ಗ್ರಾಮದ ಯುವಕ ಪವನ್‌ರ ಕಿಡಿನುಡಿ.`ಸಾಲ ಸೋಲ ಮಾಡಿ ಬಹಳ ಕಷ್ಟಪಟ್ಟು ಬಾಳೆತೋಟ ಮಾಡಿದೆ. ಮಾರುವುದಕ್ಕೆ ಹೋಗಲಿ, ತಿನ್ನಲೂ ನನಗೆ ಒಂದು ಬಾಳೆಕೊನೆಯೂ ಸಿಗಲಿಲ್ಲ. ಎಲ್ಲಾ ಕಾಡಾನೆ ಪಾಲಾಯಿತು. ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಅವರು ರೂ. 800 ನೀಡುತ್ತಾರೆ. ಆದರೆ, ಅದನ್ನು ಪಡೆಯಲು ಒಂದು ಸಾವಿರ ರೂ. ಖರ್ಚು ಮಾಡಬೇಕಾಗುತ್ತದೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು ಕೃಷಿಕ ಡಿ.ಈ.ಉತ್ತಯ್ಯ.`ಕೃಷಿ ಮತ್ತು ತೋಟಗಾರಿಕಾ ಇಲಾಖೆ ಹಲವಾರು ಸೌಲಭ್ಯ ನೀಡುವವರೆಂದು ಕೇಳಿದ್ದೇವೆ. ಆದರೆ, ಅಂತಹ ಸೌಲಭ್ಯ ಇದುವರೆಗೂ ತಲುಪಿಲ್ಲ. ಗ್ರಾಮ ಪಂಚಾಯಿತಿಯ ಸದಸ್ಯರು ವರ್ಷಕ್ಕೆ ಒಮ್ಮೆಯಾದರೂ ಈ ಕುಗ್ರಾಮ ಪರಿಶೀಲನೆ ನಡೆಸಿದ್ದರೆ ಇದು ಇಷ್ಟೊಂದು ಹಿಂದುಳಿಯುತ್ತಿರಲಿಲ್ಲ~ ಎಂಬುದು ಟಿ.ಈ.ರಮೇಶ್ ಅವರ ವಿಷಾದನೀಯ ಅನಿಸಿಕೆ.ಗ್ರಾಮಕ್ಕೊಂದು ಉತ್ತಮ ರಸ್ತೆ, ವಿದ್ಯುತ್ ಸೌಕರ್ಯ, ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆ ಬೇಕು. ಇದನ್ನು ಮಾಡಿದರೆ ಸಾಕು. ಇದು ಇಡೀ ಊರಿನ ಆಗ್ರಹವೂ ಹೌದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry