ಕುಂಬಾರಣ್ಣ ಬಂದನಣ್ಣ...

7

ಕುಂಬಾರಣ್ಣ ಬಂದನಣ್ಣ...

Published:
Updated:

ಕುಂಬಾರಿಕೆ ಸುಲಭದ ಕೆಲಸವಲ್ಲ. ಆಧುನಿಕ ಜಗತ್ತಿನಲ್ಲಿ ಎಲ್ಲವೂ ಹೊಸತನಕ್ಕೆ ತೆರೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಹಳ್ಳಿ ಉದ್ಯಮವಾದ ಕುಂಬಾರಿಕೆ ಮೆಲ್ಲನೆ ಇತಿಹಾಸದ ಪುಟಕ್ಕೆ ಸರಿಯುತ್ತಿದೆ.ಹಿಂದೆಲ್ಲಾ ಜನ ಕುಂಬಾರರ ಮನೆಗೆ (ಆಯದ ಕೊಟ್ಯ) ಬಂದು ತಮಗೆ ಬೇಕಾದ ಮಣ್ಣಿನ ಪಾತ್ರೆಗಳನ್ನು ಆರಿಸಿ ಕೇಳಿದಷ್ಟು ದುಡ್ಡು ಕೊಟ್ಟು ಕೊಂಡೊಯ್ಯುತ್ತಿದ್ದರು. ಈಗ ಮಡಿಕೆ ಅಂತಹ ಅನಿವಾರ್ಯ ಪರಿಕರವಾಗಿ ಉಳಿದಿಲ್ಲ. ಮಣ್ಣಿನ ಪಾತ್ರೆಗಳಿಗೆ ಪರ್ಯಾಯವಾಗಿ ಲೋಹದ ಪಾತ್ರಗಳ ಬಳಕೆ ಗಮನಾರ್ಹವಾಗಿ ಹೆಚ್ಚಳ ಕಂಡು ನಾಲ್ಕೈದು ದಶಕಗಳೇ ಕಳೆದು ಹೋಗಿದೆ. ಈ ಕಾರಣದಿಂದಲೇ ಇಂದು ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಕುಂಬಾರರು ಅದನ್ನು ಮಾರಲು ಊರೂರು ಅಲೆಯುವ ಅನಿವಾರ್ಯತೆ ಇದೆ.ಅವರ ಹೆಸರು ಮುತ್ತಪ್ಪ. ಉಜಿರೆಯವರು. ಆದರೆ ಅವರು ಊರಿನಲ್ಲಿರುವುದು ಅಪರೂಪ. ಕಳೆದ 25 ವರ್ಷಗಳಿಂದ ಕಾಸರಗೋಡು, ಸುಳ್ಯ, ಬೆಳ್ಮಣ್ ಕಟೀಲು, ತೊಕ್ಕೊಟ್ಟು, ಬಂಟ್ವಾಳ, ಕಾರ್ಕಳ ಬೈಂದೂರು, ಮುಲ್ಕಿ ಹೀಗೆ... ಕರಾವಳಿಯ  ಹತ್ತಾರು ಊರುಗಳನ್ನು ಸುತ್ತುತ್ತಿದ್ದಾರೆ. ಅವರ ಈ ತಿರುಗಾಟ ಹೊಟ್ಟೆಪಾಡಿಗಾಗಿ. ಊರೂರು ಸುತ್ತಿ ಮಣ್ಣಿನ ಪಾತ್ರೆಗಳನ್ನು ಮಾರುವುದೇ ಇವರ ಕಾಯಕ.

ಮುತ್ತಪ್ಪ ಒಂದು ಊರಿಗೆ ವರ್ಷದಲ್ಲಿ ಒಮ್ಮೆ ಮಾತ್ರ ಹೋಗುತ್ತಾರೆ.ವರ್ಷಕ್ಕೊಂದು ಬಾರಿ ದಿಡುಪೆಯಿಂದ ಒಂದೆರಡು ಲೋಡ್ ಆವೆ ಮಣ್ಣು ತರಿಸುತ್ತಾರೆ. ಪ್ರತಿ ಲೋಡ್‌ಗೆ ಸುಮಾರು ಹತ್ತುಸಾವಿರ ರೂಪಾಯಿ ಕೊಡಬೇಕು.  ಈ ಆವೆಮಣ್ಣನ್ನು ಹುಡಿ ಮಾಡಿ, ಒಣಗಿಸಿ, ಸಾರಿಸಲಾಗುತ್ತದೆ. ಇದರಿಂದ ಪುಡಿ ಮಣ್ಣನ್ನು ಮಾತ್ರ ಆಯ್ದು, ನೀರು ಹಾಕಿ ತುಳಿದು ಹದ ಮಾಡಿ ಅಂಟು ಬರಿಸುತ್ತಾರೆ. ಇನ್ನೂ ಹೆಚ್ಚು ಅಂಟು ಬರಿಸಲು ಮಣ್ಣನ್ನು ಮುದ್ದೆಗಳನ್ನಾಗಿ ನಾಲ್ಕು ದಿನ ಇಡುತ್ತಾರೆ.ನಂತರದ್ದು ಪಾತ್ರೆ ತಯಾರಿ ಕೆಲಸ. ಕುಂಬಾರಿಕೆಯ ಚಕ್ರ ಬಳಸಿ ಬೇಕಾದ ಆಕಾರದ, ಅಳತೆಯ ಪಾತ್ರೆ ಮಾಡಿ ಸ್ವಲ್ಪ ಒಣಗಿದ ನಂತರ ಕಲ್ಲಿನಿಂದ ಉಜ್ಜಿ ನುಣುಪುಗೊಳಿಸಿ ಪಾತ್ರೆಗೆ ಸುಂದರ ರೂಪ ನೀಡುತ್ತಾರೆ. ಒಂದು ವಾರ ಅವರುಗಳನ್ನು ಒಣಗಿಸಿ ಬಳಿಕ ಬತ್ತದ ಹುಲ್ಲಿನಿಂದ ಮಾಡಿದ ಬೆಂಕಿಯಲ್ಲಿ ಸುಡುತ್ತಾರೆ. ಇಷ್ಟಾದ ಬಳಿಕ ಮಡಿಕೆ ಬಳಕಗೆ ಸಿದ್ಧ.ಮುತ್ತಪ್ಪ ಅವರು ಮಣ್ಣಿನ ಪಾತ್ರೆಗಳನ್ನು ಟೆಂಪೊದಲ್ಲಿ ವಿವಿಧ ಊರುಗಳಿಗೆ ಸಾಗಿಸುತ್ತಾರೆ. ತಾವು ಮಡಿಕೆ ಮರುವ ಹಳ್ಳಿಯಲ್ಲಿ ಯಾರಾದರೂ ಪರಿಚಯಸ್ಥರ ಮನೆಯಲ್ಲಿ ಇಡುತ್ತಾರೆ. ಅಲ್ಲಿಂದ ಪ್ರತಿದಿನ ಬಿದಿರಿನಲ್ಲಿ ಪಾತ್ರೆಗಳನ್ನು ಕಲಾತ್ಮಕವಾಗಿ ಜೋಡಿಸಿ ಆ ಊರಿನ ಮನೆಮನೆಗೆ ಹೋಗಿ ಮಾರುತ್ತಾರೆ. ಕೊಂಡೊಯ್ದ ಮಡಿಕೆ ಖಾಲಿ ಆಗುವವರೆಗೆ ಅದೇ ಊರಿನಲ್ಲಿ ವ್ಯಾಪಾರ. ಮತ್ತೆ ಇನ್ನೊಂದು ಊರಿಗೆ ಪಯಣ.ಮಡಿಕೆ ಒಡೆಯಲು ನಿಮಿಷ ಸಾಕು! ಸ್ವಲ್ಪ ಎಚ್ಚರ ತಪ್ಪಿದರೂ ಎಲ್ಲ ಶ್ರಮ ವ್ಯರ್ಥ. ಮಣ್ಣಿನ ಪಾತ್ರೆಗಳನ್ನು ತಯಾರಿಸುವಲ್ಲಿಂದ ಹಿಡಿದು ಗಿರಾಕಿಗಳ ಕೈಗೆ ತಲುಪಿಸುವವರೆಗಿನ ಕೆಲಸ ಬಹಳ ನಾಜೂಕಿನದು.ಕುಂಬಾರಿಕೆಯ ಕೆಲಸಗಳೆಲ್ಲ ಮಳೆ ಇಲ್ಲದ ಅವಧಿಗೆ ಸೀಮಿತ. ಉಳಿದ ಸಮಯದಲ್ಲಿ ಮಡಿಕೆಗಳನ್ನು ಮಾರುಕಟ್ಟೆಯಲ್ಲಿ ಮಾತ್ರ ಮಾರಲು ಸಾಧ್ಯ ಎನ್ನುತ್ತಾರೆ ಮುತ್ತಪ್ಪಣ್ಣ.ಮಡಿಕೆ ಖರೀದಿಸುವುದು ಹೆಚ್ಚಾಗಿ ಹೆಂಗಸರು. ಅವರು ಚೌಕಾಶಿ ಮಾಡುತ್ತಾರೆ. ಹಾಗಾಗಿ ನಾವು ಕಡಿಮೆ ಬೆಲೆಗೆ ಪಾತ್ರೆಗಳನ್ನು ಮಾರಬೇಕಾಗುತ್ತದೆ. ಈಗ ಮಣ್ಣಿನ ಪಾತ್ರೆಗಳ ಅನಿವಾರ್ಯವೇನಲ್ಲ. ಹಾಗಾಗಿ ಕೆಲವೊಮ್ಮೆ ನಮ್ಮ  ದುಡಿಮೆಯ ಖರ್ಚು ಬಾರದಿದ್ದರೂ ನಷ್ಟ ಮಾಡಿಕೊಂಡು ಮಡಿಕೆ ಮಾರುವ ಪ್ರಮೇಯ ಎದುರಾಗುವುದೂ ಉಂಟು ಎನ್ನುತ್ತಾರೆ ಅವರು.ತಂದೆ ಕಾಲವಾದ ನಂತರ ಈ ವೃತ್ತಿ ಮುತ್ತಪ್ಪ ಅವರ ಹೆಗಲೇರಿದೆ. ಕಳೆದ 25 ವರ್ಷಗಳಿಂದ ಮಾಡುತ್ತಿದ್ದಾರೆ. ಬದಲಾದ ಬದುಕಿನ ಶೈಲಿಯಿಂದ ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಕಡಿಮೆಯಾದರೂ ಕೊನೆಯುಸಿರು ಇರುವವರೆಗೆ ಈ ಕುಲಕಸುಬು ಮಾಡಿಕೊಂಡು ಬದುಕುತ್ತೇನೆ ಎಂದು ಅಭಿಮಾನದಿಂದ ಹೇಳುತ್ತಾರೆ ಮುತ್ತಪ್ಪಣ್ಣ.ಒಂದು ಕಾಲದಲ್ಲಿ ಅಕ್ಕಿ ಅನ್ನವಾಗಲು ಬಳಕೆಯಾಗುತ್ತಿದ್ದ ಮಣ್ಣಿನ ಪಾತ್ರೆಗಳು ಇಂದು ಪೇಟೆ ಮನೆಗಳಲ್ಲಿ ಅಲಂಕಾರಿಕ ವಸ್ತುಗಳಾಗಿಬಿಟ್ಟಿವೆ.ಈಗಲೂ ಅನೇಕ ಮಂದಿ ಆರೋಗ್ಯದ ದೃಷ್ಟಿಯಿಂದ ಮಣ್ಣಿನ ಪಾತ್ರೆಗಳನ್ನೇ ಬಳಸುತ್ತಾರೆ. ಕರಾವಳಿಯ ಪ್ರತಿ ಊರುಗಳಲ್ಲೂ ಇಂತಹ ಅನೇಕ ಮಂದಿ ಸಿಗುತ್ತಾರೆ. ಅವರು ವರ್ಷಕ್ಕೊಮ್ಮೆ ಬರುವ ಮುತ್ತಪ್ಪಣ್ಣನ ಬರವಿಗಾಗಿ ಕಾಯುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry