ಕುಂಬಾರಹಳ್ಳದಲ್ಲಿ ಮೌಂಟೇನ್ ಬೈಕ್ ರೋಮಾಂಚನ

7

ಕುಂಬಾರಹಳ್ಳದಲ್ಲಿ ಮೌಂಟೇನ್ ಬೈಕ್ ರೋಮಾಂಚನ

Published:
Updated:

ಲಕ್ಷ್ಮೇಶ್ವರ: ಮೌಂಟೇನ್ ಬೈಕ್ ಎಂದಾಕ್ಷಣ ಇದು ಗುಡ್ಡಗಾಡು ಪ್ರದೇಶದಲ್ಲಿ ಮಾತ್ರ ಓಡಿಸುವ ಮೋಟಾರ್ ಬೈಕ್ ಎಂದು ಯೋಚಿಸುವುದು ಸಹಜ. ಆದರೆ ಇದೂ ಒಂದು ಸಾಮಾನ್ಯ ಸೈಕಲ್. ಇದಕ್ಕೆ ಎಂಟಿಬಿ ಸೈಕಲ್ ಎಂದು ಕರೆಯುತ್ತಾರೆ. ಅಂದರೆ (ಮೌಂಟೇನ್ ಟೆರೆರಿಯನ್ ಬೈಕ್) ಎಂದರ್ಥ.ಇಂಥ ಸೈಕಲ್ ಬೆನ್ನೇರಿ ನೂರಾರು ಸೈಕ್ಲಿಸ್ಟ್‌ಗಳು ಫೆಬ್ರುವರಿ 18 ಹಾಗೂ 19ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಬಾರಹಳ್ಳ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ರಾಜ್ಯಮಟ್ಟದ ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಕಂಬಾರಹಳ್ಳವು ಸೈಕ್ಲಿಸ್ಟ್‌ಗಳ ಕರ್ಮಭೂಮಿ ಎಂದೇ ಹೆಸರುವಾಸಿ. ಆದ್ದರಿಂದ ಇಲ್ಲಿಯೇ ಈ ಬಾರಿ ಸ್ಪರ್ಧೆ ನಡೆಯುತ್ತಿರುವುದರಿಂದ ಮಹತ್ವ ಹೆಚ್ಚಿದೆ.ಸ್ಪರ್ಧಿಸುವವರಿಗೆ ಮಾತ್ರವಲ್ಲ ನೋಡುಗರಿಗೂ ಸೊಬಗು ಎನಿಸುವ `ಮೌಂಟೇನ್ ಬೈಕ್~ ಒಂದು ವಿಶಿಷ್ಟವಾದ ಸಾಹಸ ಕ್ರೀಡೆ. ಇದು ಸಹಜವಾಗಿಯೇ ದುಬಾರಿ ಕ್ರೀಡೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಆದರೆ ಅದು ಸತ್ಯವಲ್ಲ. ದುಬಾರಿಯಲ್ಲದ ಮೌಂಟೇನ್ ಬೈಕ್ ಅಪವಾದ ಎನ್ನುವಂತೆ ಕ್ರೀಡಾಲೋಕಕ್ಕೆ ಸೇರ್ಪಡೆಯಾಗಿದೆ.ಇದು ಸಾಮಾನ್ಯವರ್ಗದವರಿಗೂ ಕೈಗೆಟಕುವಂಥದ್ದು. `ಹರ್ಕ್ಯೂಲಸ್~, `ಬಿಎಸ್‌ಎ~, `ಅಟ್ಲಾಸ್~, `ಹೀರೊ~, `ಎ-ಒನ್~ ಹೀಗೆ ಮುಂತಾದ ಸೈಕಲ್ ಕಂಪನಿಗಳು ಸ್ಪರ್ಧಾ ಯೋಗ್ಯವಾದ ಸೈಕಲ್‌ಗಳನ್ನು ತಯಾರಿಸಿ ಎಲ್ಲ ವರ್ಗದವರಿಗೂ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗುವಂತೆ ಮಾಡಿವೆ. ಎರಡು ಸಾವಿರ ರೂಪಾಯಿಗೂ ಸಿಗುವಂಥ ಸೈಕಲ್‌ಗಳೂ ಲಭ್ಯ. ಆದರೆ ಅಲ್ಯೂಮಿನಿಯಂ ಬಿಡಿ ಭಾಗದಿಂದ ತಯಾರಿಸಿದ ಉತ್ತಮ ದರ್ಜೆಯ ಸೈಕಲ್‌ಗಳ ಬೆಲೆ ಸ್ವಲ್ಪ ಜಾಸ್ತಿ. ದುಬಾರಿಯಲ್ಲದ ಸೈಕ್ಲಿಂಗ್ ಅನ್ನು ಭಾರತದಲ್ಲಿ ಪರಿಚಯಿಸಿ, ಜನಪ್ರೀಯ ಕ್ರೀಡೆಯನ್ನಾಗಿಸಲು ಶ್ರಮಿಸುತ್ತಿರುವುದು `ಭಾರತ ಸೈಕ್ಲಿಂಗ್ ಫೇಡರೇಷನ್~. 2000ದಿಂದ ನಿರಂತರವಾಗಿ ರಾಷ್ಟ್ರೀಯ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್ ಆಯೋಜಿಸುತ್ತಾ ಬಂದಿದೆ. ಅದರಲ್ಲಿ ಕರ್ನಾಟಕದವರೂ ಗಮನ ಸೆಳೆದಿದ್ದಾರೆ. ಈ ಬಾರಿಯ ರಾಷ್ಟ್ರೀಯ ಸ್ಪರ್ಧೆಗೆ ಸಜ್ಜಾಗುತ್ತಿರುವ ರಾಜ್ಯದ ಸೈಕ್ಲಿಸ್ಟ್‌ಗಳು ರಾಜ್ಯಮಟ್ಟದಲ್ಲಿ ಪೈಪೋಟಿ ನಡೆಸಲಿದ್ದಾರೆ.2002ರಲ್ಲಿ ಬೆಳಗಾವಿಯ ಹನಮಂತ ಹುಡೇದ ಅವರು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ಗೆಲ್ಲುವ ಜೊತೆಗೆ ಅದೇ ಸಾಧನೆಯ ಆಧಾರದಲ್ಲಿ ಬಿಎಸ್‌ಎಫ್‌ನಲ್ಲಿ ಉದ್ಯೋಗ ಪಡೆದರು. 2004ರಲ್ಲಿ ವಿಜಾಪುರದ ಮಹಾಂತೇಶ ಕಪರಟ್ಟಿ ಕೂಡ ಚಿನ್ನದ ಗೌರವಕ್ಕೆ ಪಾತ್ರರಾಗಿದ್ದರು. ಕರ್ನಾಟಕ ಅಮೇಚೂರ್ ಸೈಕ್ಲಿಂಗ್ ಸಂಸ್ಥೆಯಂತೂ ಈ ಕ್ರೀಡೆಯನ್ನು ಹಳ್ಳಿ ಹಳ್ಳಿಗೆ ಮುಟ್ಟಿಸುವ ಸಾಹಸದಲ್ಲಿ ತೊಡಗಿದೆ. 1994ರಲ್ಲಿ ಲಕ್ಷ್ಮೇಶ್ವರದಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಸಿದ್ದು ಸ್ಮರಣೀಯ.ಹೀಗೆ ಪ್ರತಿ ವರ್ಷವೂ ಗ್ರಾಮೀಣ ಭಾಗದಲ್ಲಿ ಚಾಂಪಿಯನ್‌ಷಿಪ್ ನಡೆಸಿಕೊಂಡು ಬಂದಿದೆ. ಯತ್ತಿನಹಳ್ಳಿ, ತುಳಸಿಗಿರಿಯಂಥ  ಗ್ರಾಮೀಣ ಪ್ರದೇಶಗಳಿಗೂ ಮೌಂಟೇನ್ ಬೈಕ್ ತಲುಪುವಂತೆ ಮಾಡಿದ್ದು ವಿಶೇಷ. ನಮ್ಮ ನಾಡಿದ ಎಲ್ಲ ಹಳ್ಳಿಗಳಲ್ಲಿಯೂ ಈ ರೋಚಕ ಕ್ರೀಡೆ ಮುಟ್ಟಬೇಕು ಎನ್ನುವುದು ರಾಜ್ಯ ಸ್ಲೈಕಿಂಗ್ ಸಂಸ್ಥೆ ಅಧ್ಯಕ್ಷ  ಶ್ರೀಧರ ಎಂ.ಗೋರೆ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಎಂ.ಕುರಣಿ ಅವರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry