ಕುಂಭಕರ್ಣ ನಿದ್ದೆಯಲ್ಲಿ ಕೆಜೆಪಿ: ಜಗದೀಶ್ ಶೆಟ್ಟರ್ ಲೇವಡಿ

7

ಕುಂಭಕರ್ಣ ನಿದ್ದೆಯಲ್ಲಿ ಕೆಜೆಪಿ: ಜಗದೀಶ್ ಶೆಟ್ಟರ್ ಲೇವಡಿ

Published:
Updated:

ಧಾರವಾಡ: `ಈಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಇನ್ನೂ ಕುಂಭಕರ್ಣ ನಿದ್ದೆಯಲ್ಲಿದೆ. ಅವರ ಪಕ್ಷವನ್ನು ಎಚ್ಚರಿಸಲು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಯಡಿಯೂರಪ್ಪ  ಅವರ ಪಕ್ಷದ ಬಲವರ್ಧನೆಗಾಗಿ ಸರ್ಕಾರದ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ. ಆಡಳಿತಕ್ಕೆ ಸಾಕಷ್ಟು ಚುರುಕು ಮುಟ್ಟಿಸಲಾಗಿದೆ. ರಾಜ್ಯದಲ್ಲಿ ಐದು ತಿಂಗಳಿಂದ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೇ ಉತ್ತಮ ಆಡಳಿತ ನೀಡಲಾಗುತ್ತಿದೆ' ಎಂದರು.`ಯಡಿಯೂರಪ್ಪ ಆರಂಭಿಸಿದ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಸುವರ್ಣ ಭೂಮಿ ಸೇರಿದಂತೆ ಅನೇಕ ಯೋಜನೆಗಳನ್ನು ಮುಂದುವರಿಸಲಾಗಿದೆ. ಒಂದೇ ಒಂದು ಯೋಜನೆ ಸ್ಥಗಿತಗೊಳಿಸಿಲ್ಲ. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಕಾಲ ಕಾಲಕ್ಕೆ ಬಿಡುಗಡೆಗೊಳಿಸಲಾಗುತ್ತದೆ. ಯಾವುದೇ ಯೋಜನೆಗಳಿಗೆ ಆರ್ಥಿಕ ತೊಂದರೆ ಇಲ್ಲ' ಎಂದು ಸ್ಪಷ್ಟಪಡಿಸಿದರು.ಕಾವೇರಿ ನೀರು ಬಿಡುವಂತೆ ತಮಿಳುನಾಡು ಮತ್ತೆ ಅರ್ಜಿ ಸಲ್ಲಿಸಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಸಾಕಷ್ಟು ನೀರು ಬಿಟ್ಟು ಸಂಕಷ್ಟ ಅನುಭವಿಸುತ್ತೀದ್ದೇವೆ. ಈಗ ಯಾವುದೇ ಕಾರಣಕ್ಕೆ ನೀರು ಬಿಡುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಪಡಿಸಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡದ ಅವರು, `ನೋಡೋಣ' ಎಂದಷ್ಟೇ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry