ಕುಂಭಮೇಳ: ಆಡಳಿತದ ಹೆಮ್ಮೆ-ಉಪೇಕ್ಷೆಯ ಸಂಗಮ

7

ಕುಂಭಮೇಳ: ಆಡಳಿತದ ಹೆಮ್ಮೆ-ಉಪೇಕ್ಷೆಯ ಸಂಗಮ

Published:
Updated:
ಕುಂಭಮೇಳ: ಆಡಳಿತದ ಹೆಮ್ಮೆ-ಉಪೇಕ್ಷೆಯ ಸಂಗಮ

ಡಳಿತ ಎನ್ನುವುದು ಇತ್ತೀಚೆಗೆ ಕಂಡುಹಿಡಿಯಲಾದ ಒಂದು ಪದ. ಪ್ಲೇಟೊ ಉಪಯೋಗಿಸಿದ ಈ ಪದ ಹರ್ಲನ್ ಕ್ಲೆವ್‌ಲೆಂಡ್‌ನ ಬರಹಗಳಲ್ಲಿ ಮರುಶೋಧಗೊಂಡು ವಿಶ್ವಬ್ಯಾಂಕ್‌ನ ಕಡತಗಳಲ್ಲಿ ಅಸ್ಮಿತೆಯನ್ನು ಪಡೆಯಿತು. ಇದರ ಬಳಕೆ ಕುರಿತಂತೆಯೇ ಪ್ರತಿರೋಧವಿದೆ.

ವಿಶ್ವಬ್ಯಾಂಕ್‌ನ ಏಜೆನ್ಸಿಗಳು ಮತ್ತು ಸರ್ಕಾರಗಳು ಆಡಳಿತದ ಬಗ್ಗೆ ಮಾತನಾಡುತ್ತವೆ. ಇದರ ಕುರಿತು ಬಹುರಾಷ್ಟ್ರೀಯ ಚರ್ಚೆಗಳು ನಡೆಯುತ್ತವೆ. ಆದರೆ ಎಲ್ಲೋ ಕೆಲವರು ಮಾತ್ರ ಯಾತ್ರಾ ಸ್ಥಳಗಳು ಹಾಗೂ ಪವಿತ್ರಧಾಮಗಳಲ್ಲಿ ಆಡಳಿತಕ್ಕೆ ಅವಕಾಶವಿದೆಯೇ ಎಂಬುದನ್ನು ಹುಡುಕುತ್ತಾರೆ.ಹಿಂದೂ ಯಾತ್ರಾರ್ಥಿಗಳು ಹಾಗೂ ಮಹಾತ್ಮ ಗಾಂಧಿ ಅವರು ಚೆನ್ನಾಗಿ ಅರಿತುಕೊಂಡಿದ್ದನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಕಂಡುಕೊಂಡಿದ್ದು ತೀರಾ ಇತ್ತೀಚೆಗಷ್ಟೆ. ಕುಂಭಮೇಳ ಎನ್ನುವುದು ಕೇವಲ ಹಬ್ಬ ಅಥವಾ ಉತ್ಸವವಲ್ಲ ಎಂಬುದು ಹಿಂದೂ ಯಾತ್ರಾರ್ಥಿಗಳಿಗೆ, ಗಾಂಧೀಜಿಗೆ ತಿಳಿದಿತ್ತು. ಅದು ತಾತ್ಕಾಲಿಕ ನಗರಗಳ ಆಡಳಿತಕ್ಕೂ ಸಂಬಂಧಿಸಿದ್ದು.

ಕುಂಭ ಎನ್ನುವುದು ಕೇವಲ ಐದು ವಾರಗಳಲ್ಲಿ ನದಿ ತೀರದ ಪಟ್ಟಣವೊಂದು ದಿಢೀರನೆ ಸುಮಾರು 10 ಕೋಟಿ ಜನಸಂಖ್ಯೆಯನ್ನು ತನ್ನೊಳಗೆ ಸೇರಿಸಿಕೊಳ್ಳುವ `ತಾತ್ಕಾಲಿಕ ನಗರ' ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ತರುಣ್ ಖನ್ನಾ ಗುರುತಿಸುತ್ತಾರೆ. ಇದು ಚಲನಶೀಲವಾದ ಬೃಹತ್ ಹಿಂಡು ಇರುವ ಅದ್ಭುತ ನಗರ. ಈ ಹಿಂಡಿನಲ್ಲಿ ಯಾತ್ರಾರ್ಥಿಗಳು ಮಾತ್ರವಲ್ಲ ಜಂತುಗಳೂ ಇರುತ್ತವೆ.ಕುಂಭ ಎನ್ನುವುದು ಆಧುನಿಕ ಬದುಕಿನ ಮಹಾನಗರವಾಗಿ ಬದಲಾಗುತ್ತಿದೆ. ಆದರೆ ನಗರ ಸಮಾಜವಿಜ್ಞಾನಿಗಳು ಮತ್ತು ಆಡಳಿತದ ಇತಿಹಾಸಕಾರರ ಗಮನವನ್ನು ಇದು ಎಂದಿಗೂ ಸೆಳೆದಿಲ್ಲ. ಬೆಚ್ಚಿಬೀಳಿಸುವ ಅಂಕಿಅಂಶಗಳ ಲೆಕ್ಕಾಚಾರದಲ್ಲಷ್ಟೇ ಮನಸ್ಸು ತೊಡಗಿಕೊಳ್ಳುತ್ತದೆ.

ನಗರ ಯೋಜನೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ಸಂಬಂಧಿಸಿದಂತೆ ಈ ಮೇಳ ಒಂದು ಪ್ರಯೋಗವೂ ಹೌದು. ಇಡೀ ಆಡಳಿತ ಇವುಗಳ ಬಗ್ಗೆ ಮೊದಲೇ ಚಿಂತಿಸಿ ತಕ್ಷಣ ಕಾರ್ಯಪ್ರವೃತ್ತವಾಗಬೇಕು.ಕುಂಭಮೇಳದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಅಂದಾಜು 8ರಿಂದ 9 ಕೋಟಿ. ಈವರೆಗೆ ಇದನ್ನೊಂದು ಧಾರ್ಮಿಕ ನಗರವಾಗಿ ಈವರೆಗೆ ಸಮೀಕ್ಷೆ ನಡೆಸಿಲ್ಲ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ ಕನಿಷ್ಠ 8 ಕೋಟಿ ಲೀಟರ್ ಕುಡಿಯುವ ನೀರು, 25 ಸಾವಿರ ಟನ್ ಅಕ್ಕಿ, 35 ಸಾವಿರ ಶೌಚಾಲಯಗಳು, ನೂರು ಹಾಸಿಗೆಯುಳ್ಳ 100 ಆಸ್ಪತ್ರೆಗಳು ಹಾಗೂ 12 ಪುಟ್ಟ ಆರೋಗ್ಯ ಕೇಂದ್ರಗಳ ಅಗತ್ಯವಿದೆ. ಸ್ಥಳೀಯ ಆಡಳಿತದ ಪ್ರಕಾರ, ಕುಂಭ ಮೇಳಗಳಲ್ಲಿ ಬಡತನ ರೇಖೆಗಿಂತಲೂ ಕಡಿಮೆ ಬೆಲೆಗೆ ಆಹಾರ ದೊರೆಯುತ್ತದೆ.

ಇನ್ನೂ ಕೆಲವು ಭಾರತೀಯರ ಪಾಲಿಗೆ, ಕುಂಭವೆಂಬ ಮಹಾನಗರಿಯನ್ನು ತಾವು ನಿರ್ಮಿಸಿದ್ದೇವೆ ಎನ್ನುವುದು ಮನವರಿಕೆಯಾಗಿದೆ. ಕುಂಭ ಎನ್ನುವುದು ಆಧ್ಯಾತ್ಮಿಕ ಸಂಚಲನವನ್ನು ಉಂಟುಮಾಡುವುದರ ಜತೆಗೆ ಹೆಮ್ಮೆಯನ್ನೂ, `ಆಡಳಿತದ ಸೂತ್ರಧಾರರು' ತಾವೆಂಬುದನ್ನೂ ಮನವರಿಕೆ ಮಾಡಿಕೊಡುತ್ತದೆ.

ಇಲ್ಲೊಂದು ಅಸಂಗತವಿದೆ. ಕುಂಭ ಮೇಳದಲ್ಲಿ ನಾಗರಿಕತೆಯ ರೂವಾರಿಗಳಂತೆ ಕಾಣುವ ಭಾರತೀಯರು ಅದರಾಚೆಗೆ ಅಶಿಕ್ಷಿತರಂತೆ ತೋರುತ್ತಾರೆ. ಅಲಹಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದ ಅವಘಡವನ್ನು ನೆನಪಿಸಿಕೊಳ್ಳಿ. ಕುಂಭಮೇಳ ನಡೆಯುತ್ತಿದ್ದ ಜಾಗಕ್ಕಿಂತಲೂ ನಿಲ್ದಾಣ ಬಹುದೂರದಲ್ಲಿತ್ತು ಹಾಗೂ ಅದು ಮೇಳದ ವ್ಯಾಪ್ತಿಗೆ ಒಳಪಡುತ್ತಿರಲಿಲ್ಲ.

ದುರಂತ ಸಂಭವಿಸಿದ ಸ್ಥಳ ರೈಲ್ವೆ ಇಲಾಖೆಗೆ ಸೇರಿದ ಜಾಗವಾಗಿತ್ತು. ದುರಂತದ ದಿನ ರೈಲ್ವೆಯವರು ಮೊದಲೇ ಭರವಸೆ ನೀಡಿದಂತೆ 150 ರೈಲುಗಳ ಬದಲಾಗಿ ಎಪ್ಪತ್ತೈದು ರೈಲುಗಳು ಮಾತ್ರ ಸಂಚರಿಸಿದ್ದವು. ಆದರೂ ಜನದಟ್ಟಣೆ ಮಾತ್ರ ವಿಪರೀತವಾಗಿ ಏರಿತ್ತು. ಪ್ಲಾಟ್‌ಫಾರ್ಮ್‌ಗಳೆಲ್ಲ ತುಂಬಿ ತುಳುಕುತ್ತಿದ್ದುದರಿಂದ ಅದೊಂದು ತೊನೆಯುತ್ತಿದ್ದ ಜನ ಸಾಗರವಾಗಿ ಭಾಸವಾಗುತ್ತಿತ್ತು.

ಮೇಲ್ಸೇತುವೆ ಕೂಡ ಜನರಿಂದ ಭರ್ತಿಯಾಗಿತ್ತು. ಇಂಥ ಹೊತ್ತಿನಲ್ಲಿ ಲಾಠಿ ಪ್ರಹಾರ ಮಾಡುವ ಮೂಲಕ ರೈಲ್ವೆ ಆಡಳಿತ `ಕಡಜದ ಗೂಡಿಗೆ' ಕಲ್ಲು ತೂರಿತು. ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ 36 ಮಂದಿ ಅಸು ನೀಗಿದರು. ರೈಲ್ವೆ ನಿಲ್ದಾಣದ ಹೊರಮಾರ್ಗಗಳನ್ನು ಮುಚ್ಚಿದ್ದರಿಂದಾಗಿ ಸುಮಾರು 6,000 ಮಂದಿ ಮೇಲ್ಸೇತುವೆ ನಡುವೆ ಸಿಕ್ಕಿ ಹಾಕಿಕೊಳ್ಳಬೇಕಾಯಿತು. ಕನಿಷ್ಠ ಮೂರು ಗಂಟೆಗಳವರೆಗೆ ಮೃತ ದೇಹಗಳನ್ನು ಸ್ಥಳಾಂತರಿಸುವವರೇ ಇರಲಿಲ್ಲ. ಘಟನೆಯ ನೈತಿಕ ಹೊಣೆ ಹೊತ್ತು ಉತ್ತರ ಪ್ರದೇಶದ ಸಚಿವ ಅಜಂ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಇದೊಂದು ಕಠೋರ ಅಣಕ. ಎರಡು ಘಟನೆಗಳನ್ನು ನಿರ್ವಹಿಸುವಲ್ಲಿ ಇರುವ ಭಿನ್ನತೆ ನಂಬಲಸಾಧ್ಯ. ಒಂದು ಘಟನೆ ಆಡಳಿತದ `ಮಾಸ್ಟರ್ ಪೀಸ್'ನಂತೆ ತೋರಿದರೆ ಮತ್ತೊಂದು ಆಡಳಿತದ ಅಜ್ಞಾನಕ್ಕೆ ಕನ್ನಡಿ ಹಿಡಿದಿದೆ. ಈ ಎರಡು ಘಟನೆಗಳನ್ನು ಕುರಿತು ಭಾರತೀಯ ಪತ್ರಕರ್ತರು  ಹಾರ್ವರ್ಡ್ ತಂಡ ಕೇಳುವುದಕ್ಕಿಂತಲೂ ಭಿನ್ನವಾದ ಪ್ರಶ್ನೆಗಳನ್ನು ಕೇಳಬೇಕು.

ಹಾರ್ವರ್ಡ್ ತಂಡ ಇದ್ದದ್ದು ಅಲ್ಲಿನ ಜನದಟ್ಟಣೆಯ ಪವಾಡ ಸದೃಶ ನಿಯಂತ್ರಣ, ನಗರ ಸಂಕೀರ್ಣತೆ, ಹಾಗೂ ನಗರವಾಸಿಗಳ ವರ್ತನೆಯನ್ನು ಅಧ್ಯಯನ ಮಾಡಲೆಂದು. ಇದರ ಬ್ಲಾಗ್ ಒಂದು ಪ್ರತಿಪಾದಿಸುವಂತೆ, ತಂಡವು ತಾತ್ಕಾಲಿಕ ನಗರದಲ್ಲಿ ನೆರೆದವರ ನಡವಳಿಕೆಗಳಿಂದ ಹಿಡಿದು, ಶೌಚಾಲಯಗಳ ಪ್ರಮಾಣ, ಮಾಹಿತಿ ಹರಿಯುವ ರೀತಿ ಇತ್ಯಾದಿಗಳನ್ನು ಅಧ್ಯಯನ ಮಾಡಲಿದೆ.

ಆದರೆ ಕಾಲ್ತುಳಿತದಂಥ ಮೂರ್ಖ ಘಟನೆಯನ್ನು ಎದುರಿಸಿದ ಭಾರತೀಯರು ಎರಡೂ ಘಟನೆಗಳು ಒಟ್ಟಿಗೆ ಹೇಗೆ ಸಂಭವಿಸಲು ಸಾಧ್ಯ ಎನ್ನುವುದನ್ನು ಪ್ರಶ್ನಿಸಬೇಕಿದೆ. ಜನರನ್ನು ನಿರ್ವಹಿಸುವ ಕುರಿತಂತೆ ಆಡಳಿತದ ಅಜ್ಞಾನದ ಜೊತೆಗೇ ಕುಂಭಮೇಳದಂಥ ಆಡಳಿತದ ಪವಾಡವನ್ನು ಸೃಷ್ಟಿಸಲು ಹೇಗೆ ಸಾಧ್ಯ ಎಂಬುದನ್ನು ಕೇಳಬೇಕಿದೆ. ಇಲ್ಲಿನ ರಿಯಲ್ ಎಸ್ಟೇಟ್, ಮೂಲ ಸೌಕರ್ಯ, ನಾಗರಿಕತೆ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತು ಪ್ರಶ್ನಿಸಲೆಂದೇ ಹಾರ್ವರ್ಡ್ ಮ್ಯಾನೇಜ್‌ಮೆಂಟ್ ಸ್ಕೂಲ್ ಇದೆ.

ಯಾಕೆ ಇದು ಅಜ್ಞಾನದ ಪರಮಾವಧಿ, ಕೆಟ್ಟ ನಿರ್ವಹಣೆ ಹಾಗೂ ಹೊಣೆಗಾರಿಕೆಯ ವೈಫಲ್ಯ ಎಂಬುದನ್ನು ನಮ್ಮ ಸಮಾಜಶಾಸ್ತ್ರಜ್ಞರು ಕೇಳಬೇಕಿದೆ. ಉತ್ತರ ಪ್ರದೇಶ ಎಂಬ ಜಗತ್ತಿನಲ್ಲಿ ಕುಂಭಮೇಳ ಹಾಗೂ ಅಲಹಾಬಾದ್ ರೈಲ್ವೆ ನಿಲ್ದಾಣಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಎರಡು ವಿಶ್ವಗಳಂತೆ ತೋರುತ್ತಿವೆ.

ಈ ಎರಡೂ ಘಟನೆಗಳ ಮುಖಾಮುಖಿ ಒಂದು ಕಟ್ಟುಕತೆಯಂತೆ ತೋರಬಹುದು. ಧಾರ್ಮಿಕ ಹಾಗೂ ನಗರದ ಪರಿಕಲ್ಪನೆಯಲ್ಲಿ ಮಹಾನಗರಗಳ ಮನುಷ್ಯರು ಒಂದೆಡೆ ಸೇರುವ ಶ್ರೇಷ್ಠ ಘಟನೆಯಾಗಿ ಕುಂಭ ತೋರುತ್ತದೆ. ಅದೇ ಹೊತ್ತಿಗೆ  ಸಂತ್ರಸ್ತರನ್ನು ಹೊರತು ಪಡಿಸಿದರೆ ಕಾಲ್ತುಳಿತದ ಘಟನೆ ಅನೇಕರಿಗೆ ಯಃಕಶ್ಚಿತ್ ಘಟನೆಯಾಗಿ ಕಾಣುತ್ತಿದೆ. ಘಟನೆಯಿಂದ ಹಾರ್ವರ್ಡ್ ಮತ್ತು ಅಮೆರಿಕ ಪಾಠ ಕಲಿಯಬಹುದು.

ಆದರೆ ಭಾರತ ಮಾತ್ರ ಅದರ ಅವಘಡ ಹಾಗೂ ದುರಂತಗಳಿಂದ ಪಾಠ ಕಲಿಯುವಂತೆ ತೋರುತ್ತಿಲ್ಲ. ಕುಂಭಮೇಳದ ಸಂದರ್ಭದಲ್ಲಿ ಆಧ್ಯಾತ್ಮಿಕ ಮಂಥನ ಸಾಧ್ಯ ಎಂಬುದು ಗೌರವ ತರುವಂತಹ ವಿಚಾರ. ಆದರೆ ನಗರ ಯೋಜನೆಯ ಮೂಲಗಳನ್ನೇ ತಿಳಿಯದ ಆಡಳಿತದ ಅಜ್ಞಾನ ಇದಕ್ಕೆ ಹೊರತಾದದ್ದು. ಇಂಥ ಭಾರತೀಯ ಅಹಂಕಾರವನ್ನು ಪೋಷಿಸಿಕೊಳ್ಳುತ್ತಲೇ ನಮ್ಮ ನಾಗರಿಕ ಪೈಪೋಟಿಯ ಬಗ್ಗೆ ಸಂಭ್ರಮಿಸಲು ನಮ್ಮ `ಐಐಎಂ' ಮತ್ತು ನಗರ ಯೋಜನಾ ಸಂಸ್ಥೆಗಳು ಡಯಾನಾ ಎಕ್ ಹಾಗೂ ತರುಣ್ ಖನ್ನಾ ಅವರನ್ನು ಆಹ್ವಾನಿಸಲಿವೆ.

ಭಾರತದಲ್ಲಿ ಯಾರೊಬ್ಬರೂ ಕಾಲ್ತುಳಿತದ ಘಟನೆಯನ್ನು ತಡೆಯಬಹುದಿತ್ತಲ್ಲವೇ ಎಂದು ಪ್ರಶ್ನಿಸುತ್ತಿಲ್ಲ. ಹಾರ್ವರ್ಡ್ ಅಧ್ಯಯನವನ್ನು ಕಂಡು ನಗರಶಾಸ್ತ್ರಜ್ಞರು ಅಸೂಯೆ ಪಡಬಹುದು, ಆದರೆ ಆಧುನಿಕ ಭಾರತದ ದಿನನಿತ್ಯದ ಬದುಕಿನಲ್ಲಿ ಉಂಟಾಗುತ್ತಿರುವ ನಷ್ಟವನ್ನು ಅರಿಯಲಿದ್ದಾರೆ. ಹಾರ್ವರ್ಡ್ ಬೆಲೆ ನೀಡದಿದ್ದರೆ ಭಾರತದ ಜೀವಗಳು ಹಾಗೂ ಭಾರತದ ಪ್ರಯೋಗಗಳು ಇನ್ನಷ್ಟು ಪಾತಾಳಕ್ಕೆ ಕುಸಿಯುತ್ತಿದ್ದವು.

ಇಲ್ಲಿ ಧಾರ್ಮಿಕ ಭಾವನೆಗಳಿಗೂ ಮೀರಿದ ವಿಷಾದವೊಂದಿದೆ. ಅದು ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಗಡಿಯಾರದಂತೆ ಶಿಸ್ತುಬದ್ಧವಾಗಿ ನಡೆಯುವಾಗ,  ಇತರ ಕಾರ್ಯಕ್ರಮಗಳಲ್ಲಿನ ಜನದಟ್ಟಣೆಯ ನಿರ್ವಹಣೆ ಬಗ್ಗೆ ನಮಲ್ಲಿ ಇರುವ ಉದಾಸೀನತೆಯನ್ನು ಈ ಘಟನೆ ಬಿಂಬಿಸುತ್ತದೆಯೇ? ಅಲಹಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದ ದುರ್ಘಟನೆ ಕ್ಷುಲ್ಲಕವೆಂದು ನಿರ್ಲಕ್ಷಿಸಬಹುದಾದರೂ, ಇದು ಕುಂಭಮೇಳದ ಯಶಸ್ಸಿಗಿಂತಲೂ ಹೆಚ್ಚಾಗಿ ಭಾರತದ ಆಡಳಿತ ವೈಫಲ್ಯದ ಕುರಿತು ಪ್ರಶ್ನೆಗಳನ್ನೆತ್ತುತ್ತದೆ.

ಕುಂಭಮೇಳದಿಂದ ಆಧ್ಯಾತ್ಮಿಕ ತಿರುಳನ್ನು ನೀಡುವ ಭಾರತೀಯ ಮನಸ್ಸೇ ಅಲಹಾಬಾದ್ ನಿಲ್ದಾಣದಲ್ಲಿ ತಲೆದೋರಿದ ಉಪೇಕ್ಷೆಯನ್ನೂ ಉಂಟುಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry