ಗುರುವಾರ , ಆಗಸ್ಟ್ 13, 2020
27 °C

`ಕುಕಾ' ರೂವಾರಿ ರಾಮಸಿಂಗ್‌ಜಿ ಸ್ಮರಣಾರ್ಥ ನಾಣ್ಯ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕುಕಾ' ರೂವಾರಿ ರಾಮಸಿಂಗ್‌ಜಿ ಸ್ಮರಣಾರ್ಥ ನಾಣ್ಯ ಬಿಡುಗಡೆ

ಅಂಕೋಲಾ: ದೇಶದ ವಿಮೋಚನೆಗಾಗಿ ಅಪೂರ್ವ ತ್ಯಾಗ ಬಲಿದಾನಗೈದ ಹೋರಾಟಗಾರರನ್ನು ತಡವಾಗಿಯಾದರೂ ಸರ್ಕಾರ ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ.18ನೇ ಶತಮಾನದ ಆರಂಭದಿಂದ 19ನೇ ಶತಮಾನದ ಕೊನೆಯವರೆಗೆ ಭಾರತದಲ್ಲಿನ ವಸಾಹತು ಪ್ರಭುತ್ವವು ಅಕ್ಷರಶಃ ಜನತಾ ದಂಗೆಗಳ ಜ್ವಾಲಾಮುಖಿಯ ಮೇಲೆ ಕುಳಿತಿದ್ದಿತು. ಅದರ ಮಹಾವಿಸ್ಫೋಟವೇ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ.ಈ ಹೋರಾಟದಲ್ಲಿ ಜನಸಾಮಾನ್ಯರನ್ನು ಒಗ್ಗೂಡಿಸಿ ಸಶಸ್ತ್ರ ಕ್ರಾಂತಿಯ ಮೂಲಕ ಹೋರಾಡಿದ ರಾಮಸಿಂಗ್‌ಜಿ ಮತ್ತು ಅವರ ಅನುಯಾಯಿಗಳು ಸಾಮ್ರೋಜ್ಯಶಾಹಿಗಳ ತುಪಾಕಿಗಳಿಗೆ ಬಲಿಯಾದರು. ಅವರ ಹೋರಾಟವು ಕುಕಾ ಚಳವಳಿಯೆಂದೇ ಚರಿತ್ರೆಯಲ್ಲಿ ದಾಖಲಾಗಿದೆ. ಈ ಹೋರಾಟದ 150ನೇ ವರ್ಷದ ಸ್ಮರಣಾರ್ಥವಾಗಿ ಭಾರತ ಸರ್ಕಾರವು ಇತ್ತೀಚೆಗೆ 100 ಮತ್ತು 5 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಬಿಡುಗಡೆಗೊಳಿಸಿದೆ. ಈ ವಿವರಗಳನ್ನು ಕರ್ನಾಟಕ ನಾಣ್ಯ ಸಂಗ್ರಹಕಾರರ ಸಂಘದ ಸದಸ್ಯ ಸುಭಾಷ್ ನಾರ್ವೇಕರ ಮಾಧ್ಯಮ ಪ್ರತಿನಿಧಿಗಳಿಗೆ ಬುಧವಾರ ತಿಳಿಸಿದ್ದಾರೆ.ವಿವರ: ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡುವ ಬಹಳ ವರ್ಷಗಳ ಹಿಂದೆಯೇ ರಾಮಸಿಂಗ್ 12-4-1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹಾಗೂ ಭಾರತಕ್ಕೆ ಮುಕ್ತಿ ನೀಡುವ ಬಗ್ಗೆ ಚಳವಳಿ ಆರಂಭಿಸಿದರು. ಅವರು ಆ ಸಂದರ್ಭದಲ್ಲಿ ಅಸಹಕಾರ ಚಳವಳಿ, ಸ್ವದೇಶಿ ಆಂದೋಲನ ಹಾಗೂ ಬ್ರಿಟಿಷರಿಂದ ನಡೆಯುವ ಶಿಕ್ಷಣ ಸಂಸ್ಥೆ, ನ್ಯಾಯಾಲಯ, ಆಡಳಿತ, ಅಂಚೆ, ಸಾರಿಗೆ ಇತ್ಯಾದಿಗಳಿಗೆ ಬಹಿಷ್ಕಾರ ಹಾಕಬೇಕು ಮತ್ತು ವಿದೇಶಿ ಬಟ್ಟೆ, ಸಾಮಾನುಗಳನ್ನು ಬಳಸಬಾರದು ಎಂದು ಕರೆ ನೀಡಿದ್ದರು.ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಮತ್ತು ವರದಕ್ಷಿಣೆ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಇಂತಹ ಭಾರತೀಯ ವಿಚಾರಗಳ ಸ್ಫೂರ್ತಿಯಿಂದ ಲಕ್ಷಾಂತರ ಜನರು ಆಕರ್ಷಿತರಾಗಿ ಈ ಕುಕಾ ಆಂದೋಲನದಲ್ಲಿ ಧುಮುಕಿ ರಾಮಸಿಂಗ್ ಅವರ ಶಿಷ್ಯರಾದರು. ಅವರು ತಮ್ಮ ಆಚಾರ ವಿಚಾರಗಳಲ್ಲಿ ಶುಭ್ರತೆಯನ್ನು ಕಾಪಾಡಿಕೊಂಡಿದ್ದಲ್ಲದೆ, ತಮ್ಮ ಶುಭ್ರ ಬಿಳಿ ಬಟ್ಟೆಗಳ ಧರಿಸುವಿಕೆಯಿಂದಲೂ ಸಹ ಹೆಚ್ಚು ಹೆಚ್ಚು ಪ್ರಖ್ಯಾತಿಯನ್ನು ಹೊಂದಿ  ನಾಮಧಾರಿ ಸಿಖ್ ಎಂದೇ ಜನಪ್ರಿಯರಾದರು.ಇವರ ಆಂದೋಲನದ ತೀವತೆಗೆ ನಡುಗಿದ ಬ್ರಿಟಿಷ್ ಸರ್ಕಾರ ರಾಮಸಿಂಗ್ ಅವರ ಪ್ರಮುಖರನ್ನು ಹುಡುಕಿ ಹುಡುಕಿ ಗಲ್ಲಿಗೇರಿಸಲು, ಗಡಿಪಾರು ಮಾಡಲು ತೋಪುಗಳ ಬಾಯಿಗೆ ನೀಡಲು ಆರಂಭಿಸಿದರು. ಇದಕ್ಕೆ ಬಗ್ಗದ ನಾಮಧಾರಿ ಪಂಗಡದವರು ಭಜನೆಗಳನ್ನು, ಕೀರ್ತನೆಗಳನ್ನು ಹಾಡಲು ಗಲ್ಲಿಗೇರುತ್ತಿದ್ದದ್ದು ಹಾಗೂ ತೋಪುಗಳಿಗೆ ಎದೆಯೊಡ್ಡುತ್ತಿದ್ದದ್ದು ಅವರ ಶೌರ್ಯದ ಹಾಗೂ ತ್ಯಾಗದ ಪ್ರತೀಕವಾಗಿದೆ. ಇಂಥಮಹಾನ್ ಬಲಿದಾನವನ್ನು ಭಾರತದ ಇತಿಹಾಸದಲ್ಲಿ  ಕುಕಾ ಚಳವಳಿ  ಎಂದು ಕರೆಯುತ್ತಾರೆ. ಹೀಗಾಗಿ ಮರೆತುಹೋದ ಇತಿಹಾಸದ ಶ್ರೀಮಂತ ಅಧ್ಯಾಯವನ್ನು ಜನತೆಗೆ ತಲುಪಿಸಲು ಸರ್ಕಾರವು ನಾಣ್ಯಗಳನ್ನು ಚಲಾವಣೆಗೆ ತಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.