ಗುರುವಾರ , ಮೇ 28, 2020
27 °C

ಕುಕ್ಕರ್‌ನಿಂದಲೂ ವಿದ್ಯುತ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕ್ಕರ್‌ನಿಂದ ಅಡುಗೆ ಮಾತ್ರ ಮಾಡಬಹುದು    ಎಂದುಕೊಂಡರೆ ಅದು ತಪ್ಪು. ಅದರಿಂದ ರೇಡಿಯೋ, ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಬಹುದು ಹಾಗೂ ರಿಚಾರ್ಜಬಲ್ ಟಾರ್ಚ್ ಕೂಡ ಬೆಳಗಬಹುದು!ಒಲೆಯ ಮೇಲಿಟ್ಟ ಕುಕ್ಕರ್ ಸ್ವಲ್ಪ ಸಮಯದ ಶಾಖದ ಬಳಿಕ ಸಿಳ್ಳೆ (ವಿಶಲ್) ಹಾಕುತ್ತದೆ. ಅದು ಒಳಗಿರುವ ಆವಿ ಹೊರಬರುವ ವಿಧಾನವಷ್ಟೇ. ಅದನ್ನೇ ಬಳಸಿಕೊಂಡು ಕಿರು ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಸರಳ ಯಂತ್ರವೊಂದಿದೆ. ಗುಲ್ಬರ್ಗದಲ್ಲಿ ಈಚೆಗೆ ನಡೆದ ‘ಕಲಬುರ್ಗಿ ಕಂಪು’ ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತುಪ್ರದರ್ಶನದಲ್ಲಿ ‘ಹಬೆಯಿಂದ ಕಿಡಿ’ ಎಂಬ ಈ ಯಂತ್ರವೇ ಪ್ರಮುಖ ಆಕರ್ಷಣೆಯಾಗಿತ್ತು.ಗುಲ್ಬರ್ಗದ ಎಲೆಕ್ಟ್ರಾನಿಕ್ ಉಪಕರಣಗಳ ಮೆಕಾನಿಕ್ ಎಸ್.ಅಶ್ರಫ್ ಇದರ ವಿನ್ಯಾಸಗಾರರು. ಕೊಪ್ಪಳ ಜಿಲ್ಲೆ ಗಂಗಾವತಿಯ ಆಚಾರನರಸಾಪೂರ ಗ್ರಾಮದಲ್ಲಿದ್ದ ತಮ್ಮ ಮಾವ ಅನೀಸ್ ಹೈದರ್ ತಲಾಟಿ ಅವರ ಹೊಲದಲ್ಲಿದ್ದ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದ್ದನ್ನು ಗಮನಿಸಿದ್ದರು. ಒಮ್ಮೆ ಅವರ ಮನೆಯಲ್ಲಿ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಸಿಳ್ಳೆ ಹೊಡೆದಾಗ ಅದರಿಂದ ಹೊರಹೋಗುತ್ತಿದ್ದ ಆವಿಯನ್ನು ಅಶ್ರಫ್ ನೋಡಿದರು. ಅವರ ಮನಸ್ಸಿನಲ್ಲಿ ಹೊಸ ಐಡಿಯಾ ಹೊಳೆಯಿತು. ಅದನ್ನೇ ಕಾರ್ಯರೂಪಕ್ಕೆ ಇಳಿಸಿದರು.ವೃತ್ತಾಕಾರದ ಲೋಹದ ತುಂಡಿಗೆ ಸಣ್ಣಸಣ್ಣ ರೆಕ್ಕೆ ಜೋಡಿಸಿ, ಫ್ಯಾನ್ ರೂಪ ಬರುವಂತೆ ಮಾಡಿದರು. ಒತ್ತಡದ ಹಬೆ ಮೇಲೆ ನುಗ್ಗಿದಾಗ ತಿರುಗುವ ಇದರ ರೆಕ್ಕೆಗಳು, ಫ್ಯಾನ್‌ಗೆ ಅಳವಡಿಸಿರುವ ಚಿಕ್ಕ ಡೈನಮೋವನ್ನೂ ತಿರುಗಿಸುತ್ತವೆ. ಹೀಗೆ ವಿದ್ಯುತ್ ಉತ್ಪಾದನೆಯಾಗುತ್ತದೆ. ‘ಇದೊಂದು ಸರಳ ಯಂತ್ರ.ಕುಕ್ಕರ್‌ನ ಮೇಲಿನ ಮುಚ್ಚಳದಲ್ಲಿ ಅಳವಡಿಸಿರುವ ವಿಷಲ್‌ಗೆ ಇದನ್ನು ಜೋಡಿಸಿದರೆ ಆಯ್ತು. ಅಡುಗೆ ಮಾಡುವಾಗ ಕುಕ್ಕರ್‌ನಲ್ಲಿ ನೀರು ಹಬೆಯಾಗಿ ರೂಪುಗೊಳ್ಳುತ್ತದೆ. ಒತ್ತಡ ಹೆಚ್ಚಾಗಿ ಹಬೆ ಹೊರ ಹಾಕಿದ (ವಿಷಲ್) ಸಂದರ್ಭದಲ್ಲಿ ಆ ಹಬೆಯು ಕಿರು ಫ್ಯಾನ್ ಅನ್ನು ಜೋರಾಗಿ ತಿರುಗಿಸುತ್ತದೆ.ಎಷ್ಟೆಂದರೆ, ಒಮ್ಮೆ ವಿಷಲ್ ಹಾಕಿದಾಗ ಅರ್ಧ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಹೀಗೆ ಒಮ್ಮೆ ಅಡುಗೆ ಮಾಡುವಾಗ ಸರಾಸರಿ ಮೂರು ಸಲ ವಿಷಲ್ ಹೊಡೆದರೆ ಒಂದೂವರೆ ವಾಟ್ ವಿದ್ಯುತ್ ಸಿಗುತ್ತದೆ’ ಎಂದು ಎಸ್.ಅಶ್ರಫ್ ಹೇಳುತ್ತಾರೆ.ದಿನಕ್ಕೆ ಎರಡು ಸಲ ಕುಕ್ಕರ್‌ನಿಂದ ಅಡುಗೆ ಮಾಡುವ ಸಮಯದಲ್ಲಿ ಮೂರು ವಾಟ್ ವಿದ್ಯುತ್ ಲಭ್ಯವಾಗುತ್ತದೆ. ಇಷ್ಟು ಪ್ರಮಾಣದ ವಿದ್ಯುತ್‌ನಿಂದ ಎಲ್‌ಇಡಿ ಬಲ್ಬ್‌ಗಳುಳ್ಳ ಬ್ಯಾಟರಿ ರಿಚಾರ್ಜ್ ಮಾಡಬಹುದು. ರೇಡಿಯೋ ಅಥವಾ ಮೊಬೈಲ್ ಬ್ಯಾಟರಿಯನ್ನೂ ಚಾರ್ಜ್ ಮಾಡಿಕೊಳ್ಳಬಹುದು.ಆಚಾರನರಸಾಪುರ ಗ್ರಾಮದ ತೋಟದ ಮನೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಅಳವಡಿಸಿದ್ದ ಅಶ್ರಫ್, ಕತ್ತಲ ಮನೆಯಲ್ಲಿ ಬೆಳಕು ಬರುವಂತೆ ಮಾಡಿದ್ದರು.ಅತ್ಯಲ್ಪ ವೆಚ್ಚದಲ್ಲಿ ತಯಾರಾದ ಈ ಯಂತ್ರದ ಹಿಂದಿರುವ ಕಾರ್ಯವೈಖರಿ ಕೂಡ ಸರಳವಾಗಿದೆ. ವಿದ್ಯುತ್ ಬಳಸಿ ಫ್ಯಾನ್ ತಿರುಗಿಸುವಷ್ಟೇ ಸುಲಭವಾದುದು. ಫ್ಯಾನ್ ತಿರುಗಿಸಿ ವಿದ್ಯುತ್ ಉತ್ಪಾದನೆ ಮಾಡುವುದು. ಈ ಕಿರು ಯಂತ್ರಕ್ಕೆ ಬಳಸಿದ ಯಂತ್ರ ಮಕ್ಕಳ ಎಲೆಕ್ಟ್ರಿಕ್ ಆಟಿಕೆಯಲ್ಲಿದ್ದಂಥದು. ಅದನ್ನೇ ಬಳಸಿ ಒಂದೂವರೆ ವಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಎಂಬುದನ್ನು ಅಶ್ರಫ್ ನಿರೂಪಿಸಿದ್ದಾರೆ. ಈ ಯಂತ್ರವನ್ನು ಇನ್ನಷ್ಟು ಅಚ್ಚುಕಟ್ಟಾಗಿ ರೂಪಿಸುವ ಉದ್ದೇಶ ಅವರದು.‘ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕಲಬುರ್ಗಿ ಕಂಪು ಕಾರ್ಯಕ್ರಮಕ್ಕೆ ಬಂದಿದ್ದ ಸಂದರ್ಭದಲ್ಲಿ ಅವರ ವಿಜ್ಞಾನ ವಿಭಾಗದ ಅಧಿಕಾರಿಗಳು ಈ ಹಬೆ ಯಂತ್ರದ ಬಗ್ಗೆ ಮಾಹಿತಿ ತೆಗೆದುಕೊಂಡು ಹೋಗಿದ್ದಾರೆ. ಮುಂದಿನ ಸಂಶೋಧನೆಗೆ ಅವರು ನೆರವು ನೀಡುವ ನಿರೀಕ್ಷೆಯಲ್ಲಿ ಇದ್ದೇವೆ. ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನಕ್ಕೆ (ಎನ್‌ಐಎಫ್) ಪತ್ರ ಬರೆದು, ಈ ಸಂಶೋಧನೆಯ ವಿವರ ಒದಗಿಸಿದ್ದೇವೆ. ಪೇಟೆಂಟ್ ಕೂಡ ಪಡೆಯುವ ಪ್ರಯತ್ನದಲ್ಲಿ ಇದ್ದೇವೆ’ ಎಂದು ವಿಜ್ಞಾನ ವಿಭಾಗದ ಸಂಚಾಲಕ ಸಮಿ ಹೈದರ್ ವಿವರಿಸುತ್ತಾರೆ. ಕುಕ್ಕರ್ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡು, ಈ ತಂತ್ರಜ್ಞಾನವನ್ನು ಅವರಿಗೆ ನೀಡಿದರೆ ಕುಕ್ಕರ್‌ನೊಂದಿಗೇ ಅದನ್ನು ಕೊಡಲು ಸಾಧ್ಯವಿದೆ ಎಂದು ಕೆಲವು ಜನರು ಸಲಹೆ ನೀಡಿದ್ದಾರೆ.ಆದರೆ, ಲಾಭವನ್ನೇ ಪ್ರಮುಖ ಉದ್ದೇಶವನ್ನಾಗಿ ನಾವು ಹೊಂದಿಲ್ಲ.  ವಿಜ್ಞಾನ- ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಸ್ವಲ್ಪ ತಿಳಿವಳಿಕೆ ಹೊಂದಿರುವ ಸಾಮಾನ್ಯ ಜನರು ಕೂಡ ಅಲ್ಪ ವೆಚ್ಚದಲ್ಲಿ ಸರಳವಾಗಿ ಸಂಶೋಧನೆ ಮಾಡಬಹುದು ಎಂಬುದನ್ನು ತೋರಿಸಿಕೊಡಬೇಕಾಗಿದೆ. ಇದರ ಜತೆಗೆ ವಿಜ್ಞಾನದ ಸದುಪಯೋಗ ಕಡಿಮೆ ಬೆಲೆಯಲ್ಲಿ ಜನರಿಗೆ ಸುಲಭವಾಗಿ ಸಿಗಬೇಕು ಎಂಬುದು ನಮ್ಮ ಧ್ಯೇಯ. ಹಾಗಾಗಿ ಈ ಯಂತ್ರಗಳನ್ನು ನಿರ್ದಿಷ್ಟ ಬ್ರಾಂಡ್‌ನ ಅಡಿಯಲ್ಲಿ ಉತ್ಪಾದಿಸಿ ಮಾರುವ ಉದ್ದೇಶವಿದೆ’ ಎಂದು ಹೈದರ್ ಸ್ಪಷ್ಟಪಡಿಸುತ್ತಾರೆ.ಇನ್ನು ಕೆಲವು ದಿನಗಳಲ್ಲಿ ಈ ಹಬೆಯಿಂದ ಕಿಡಿ ಯಂತ್ರ ಸುಧಾರಿಸಿದ ರೂಪದಲ್ಲಿ ಹೊರಬರಬಹುದು. ಆಗ   ಮನೆಯಲ್ಲಿನ ಕುಕ್ಕರ್ ಕೂಡ ಟಾರ್ಚ್‌ಗೆ ‘ಬೆಳಕು’ ನೀಡಬಹುದು. ರೇಡಿಯೋಕ್ಕೆ ‘ಧ್ವನಿ’ ಕೊಡಬಹುದು!  ಮಾಹಿತಿಗೆ   97397 10027  ಸಂಪರ್ಕಿಸಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.