ಮಂಗಳವಾರ, ಮೇ 11, 2021
28 °C

ಕುಕ್ಕುಟ ಸ್ವರ್ಣಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಆ ದಢೂತಿ ಕೋಳಿಯ ಹೆಸರೇ `ಸ್ವರ್ಣಧಾರ~! ಅದರ ದಢೂತಿ ದೇಹ ಬಿಟ್ಟರೆ ಅದರ ಪುಕ್ಕ, ಬಣ್ಣ, ರೂಪ, ಚಹರೆಯೆಲ್ಲ ನಮ್ಮ ಜವಾರಿ ಅಥವಾ ನಾಟಿ ಕೋಳಿಯದ್ದೇ. ಸರಾಸರಿ ಎರಡು ದಿನಕ್ಕೊಮ್ಮೆ ಮೊಟ್ಟೆ ಇಕ್ಕುವ ಈ ಕೋಳಿ ಮಾಂಸದ ದೃಷ್ಟಿಯಿಂದಲೂ ರೈತರಿಗೆ ಲಾಭದಾಯಕ. ಆದರೆ `ಗಿರಿರಾಜ~ ಕೋಳಿಯ ಸುಧಾರಿತ ತಳಿಯಾದ ಇದು ಮಾಹಿತಿಯ ಕೊರತೆಯಿಂದಾಗಿ ಹೆಚ್ಚಿನ ರೈತರನ್ನು ತಲುಪಿಲ್ಲ.ಬೆಂಗಳೂರು ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನವರು 25 ವರ್ಷಗಳ ಹಿಂದೆ `ಗಿರಿರಾಜ~  ಕೋಳಿ ತಳಿಯನ್ನು ರೂಪಿಸಿದ್ದರು. ನಮ್ಮ ನಾಟಿಕೋಳಿಯ ಸುಧಾರಿತ ತಳಿ ಗಿರಿರಾಜ ಕೂಡ ರೈತ ವರ್ಗದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ನಾಯಿ. ಬೆಕ್ಕು ಅಟ್ಟಿಸಿಕೊಂಡು ಬಂದರೆ ತನ್ನ ದಢೂತಿ ದೇಹದಿಂದ ಓಡಲಾರದೆ ಅವಕ್ಕೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತವೆ ಈ ಗಿರಿರಾಜ. ಪ್ರೌಢ ದಢೂತಿ ಗಿರಿರಾಜಕ್ಕೆ ಹಿತ್ತಲಲ್ಲಿ ಓಡಾಡುವುದೇ ಕಷ್ಟ.

ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನವರು ಗಿರಿರಾಜ  ಕೋಳಿ ತಳಿಯನ್ನು ಮತ್ತೆ ಸುಧಾರಿಸಿದ್ದು, ಅದಕ್ಕೆ `ಸ್ವರ್ಣಧಾರ~ ಎಂದು ನಾಮಕರಣ ಮಾಡಿದ್ದಾರೆ. ಈ ತಳಿ ರೂಪುಗೊಂಡು ಆಗಲೆ ಎರಡು ವರ್ಷ ಕಳೆದಿದೆ.ಗಿರಿರಾಜದಂತೆ ಸ್ವರ್ಣಧಾರದಿಂದಲೂ ಹೆಚ್ಚು ಮಾಂಸ ದೊರೆಯುತ್ತದೆ. ಗಿರಿರಾಜ ವರ್ಷಕ್ಕೆ 120ರಿಂದ 140 ಮೊಟ್ಟೆ ನೀಡಿದರೆ `ಸ್ವರ್ಣಧಾರ~ ವರ್ಷಕ್ಕೆ 160ರಿಂದ 180 ಮೊಟ್ಟೆ ಇಡುವುದು. ಒಟ್ಟಿನಲ್ಲಿ `ಸ್ವರ್ಣಧಾರ~ ಗಿರಿರಾಜಕ್ಕಿಂತ ಎಲ್ಲ ದೃಷ್ಟಿಯಿಂದಲೂ ಸುಧಾರಣೆಗೊಂಡು ಹೆಚ್ಚು ಜನಪ್ರಿಯವಾಗುತ್ತಿದೆ ಎನ್ನುತ್ತಾರೆ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಪಶುವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಜಾವೇದ್ ಇಕ್ಬಾಲ್ ಮುಲ್ಲಾ.ಡಾ. ಮುಲ್ಲಾ ಅವರು `ಸ್ವರ್ಣಧಾರ~ ಕೋಳಿ ತಳಿಯನ್ನು ರೈತರಿಗೆ ತಲುಪಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಸ್ವತಃ ಈ ಕೋಳಿಗಳನ್ನು ಬೆಳೆಸಿ ರೈತರಿಗೆ ತಲುಪಿಸುತ್ತಿದ್ದಾರೆ. ಇದೊಂದು ರೈತರಿಗೋಸ್ಕರ ಹೆಚ್ಚು ಲಾಭವಿಲ್ಲದೆ ಮಾಡುವ ಚಟುವಟಿಕೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುತ್ತಾರೆ ಅವರು.ರೈತರು `10ರಿಂದ 20 ಸ್ವರ್ಣಧಾರ ಕೋಳಿಗಳ ಒಂದು ಘಟಕ ರೂಪಿಸಿದರೆ ಪ್ರತಿ ದಿನ ಕನಿಷ್ಠ 10 ಮೊಟ್ಟೆ ಪಡೆಯಬಹುದು. ಮೊಟ್ಟೆಯನ್ನು ಐದು ರೂಪಾಯಿಯಂತೆ ಮಾರಾಟ ಮಾಡಿದರೆ ದಿನದ ಆದಾಯ ರೂ 50. ವಾರಕ್ಕೆ ರೂ 350 ಆದಾಯ ಬಂದ ಹಾಗಾಯ್ತು ಎನ್ನುತ್ತಾರೆ ಡಾ. ಮುಲ್ಲಾ.`ಸ್ವರ್ಣಧಾರ~ ಕೋಳಿಗೆ ನಾಟಿ ಕೋಳಿಯಂತೆ ತಾಯ್ತನದ ಗುಣ ಇಲ್ಲ. ಮೊಟ್ಟೆಗೆ ಕಾವು ನೀಡುವ ತಾಯ್ತನದ ಗುಣವನ್ನು ಅದನ್ನು ರೂಪಿಸಿದ ವಿಜ್ಞಾನಿಗಳಿ ಕಿತ್ತು ಹಾಕಿದ್ದಾರೆ! ಏಕೆಂದರೆ ಕೋಳಿ ಕಾವಿಗೆ ಕುಳಿತರೆ ಅಷ್ಟು ದಿನ ಅದು ಮೊಟ್ಟೆ ಇಡುವುದಿಲ್ಲವಲ್ಲ ಅದಕ್ಕೆ. ಇದರ ಮೊಟ್ಟೆಗಳು ಫಲಭರಿತವಾಗಿವೆ. ಅವುಗಳ ಮೊಟ್ಟೆಗಳಿಗೆ ನಾಟಿಕೋಳಿಗಳು ಕಾವು ನೀಡಿದರೆ ಮೊಟ್ಟೆಯೊಡೆದು ಮರಿಯಾಗುತ್ತವೆ. ಹೀಗೆ 2ರಿಂದ 3 ತಲೆಮಾರಿನವರೆಗೆ ಮುಂದುವರೆಸಬಹುದು ಎನ್ನುತ್ತಾರೆ ಡಾ. ಮುಲ್ಲಾ.`ಸ್ವರ್ಣಧಾರ~ ತಳಿಯನ್ನು ನಾಟಿಕೋಳಿ ಮೂಲದಿಂದ `ಕ್ರಾಸ್ ಬ್ರೀಡ್~ ಮಾಡಿರುವುದರಿಂದ ಅವುಗಳ ರೋಗ ನಿರೋಧಕ ಗುಣವೂ ಚೆನ್ನಾಗಿದೆ. ಈ ಕೋಳಿ ಮೊಟ್ಟೆಯೊಡೆದು ಬಂದು 22ರಿಂದ 24ನೇ ವಾರಕ್ಕೆ ಮೊಟ್ಟೆ ಇಡಲು ಶುರು ಮಾಡುತ್ತವೆ. ಒಂದು ವರ್ಷಕ್ಕೆ ಹೆಣ್ಣುಕೋಳಿ 3ರಿಂದ 3.5 ಕೆ.ಜಿ ತೂಗಿದರೆ ಗಂಡು ಕೋಳಿ 5ರಿಂದ 6 ಕೆ.ಜಿ ತೂಗುತ್ತವೆ. ಇದಕ್ಕೆ ಜವಾರಿಯ ಮೈಬಣ್ಣ, ಲುಕ್ ಇರುವುದರಿಂದ ಒಳ್ಳೆಯ ಬೆಲೆ ಕೂಡ ಸಿಗುವುದು.`ಸ್ವರ್ಣಧಾರ~ ಕೋಳಿ ತಳಿಯನ್ನು ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ ಹಾಗೂ ಪ್ರಾಂತೀಯ ಕೃಷಿ ಉತ್ಸವದಲ್ಲಿ ನೋಡಬಹುದು. ಹೆಚ್ಚಿನ ಮಾಹಿತಿಯನ್ನು ಡಾ. ಜಾವೇದ್ ಇಕ್ಬಾಲ್ ಮುಲ್ಲಾ ನೀಡುತ್ತಿದ್ದಾರೆ. ಅವರ ಮೊಬೈಲ್ ದೂರವಾಣಿ ಸಂಖ್ಯೆ ಇಲ್ಲಿದೆ - 94488 -61650.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.