ಗುರುವಾರ , ಜನವರಿ 23, 2020
23 °C
ಮಾಧ್ಯಮದವರ ಉಪಸ್ಥಿತಿಗೆ ವಿರೋಧ, 1 ಗಂಟೆ ವಿಳಂಬ

ಕುಕ್ಕೆ: ಮುಂದುವರಿದ ಮಡೆ ಮಡೆಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಮಡೆ ಮಡೆಸ್ನಾನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದವರ ಉಪಸ್ಥಿತಿಯಲ್ಲಿ ಈ ಆಚರಣೆ ಬೇಡ ಎಂದು ಕೆಲವರು ನಿರ್ಧರಿಸಿದ್ದರಿಂದ ಶನಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಂದು ಗಂಟೆ ವಿಳಂಬವಾಗಿ ಮಡೆ ಮಡೆಸ್ನಾನ ನಡೆಯಿತು. ಆದರೆ ಶುಕ್ರವಾರಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತರು ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಉರುಳಾಡಿದರು.ಚಂಪಾ ಷಷ್ಠಿ ಜಾತ್ರೋತ್ಸವದ ಸ್ಕಂದ ಪಂಚಮಿಯ ಅಂಗವಾಗಿ ಮಡೆ ಮಡೆಸ್ನಾನ ಮಧ್ಯಾಹ್ನ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಊಟದ ಬಳಿಕ ನಡೆಯಬೇಕಿತ್ತು. ಮಹಾಪೂಜೆ 12.30ಕ್ಕೆ ಕೊನೆಗೊಂಡಿತು. ಬಳಿಕ ಹೊರಾಂಗಣದಲ್ಲಿ ಬ್ರಾಹ್ಮಣರಿಗೆ ಊಟಕ್ಕೆ ಬಡಿಸಬೇಕಿತ್ತು. ಆದರೆ ಮಡೆ ಮಡೆಸ್ನಾನದ ವರದಿ ಮಾಡಲು ಪತ್ರಕರ್ತರು, ದೃಶ್ಯ ಮಾಧ್ಯಮದವರು ಹೊರಾಂಗಣದ ಬದಿಯಲ್ಲಿ ಕಾಯುತ್ತಿದ್ದುದರಿಂದ ವಿಚಲಿತರಾದ ಕೆಲವರು, ಊಟ ಬಡಿಸಲು ಹಿಂದೇಟು ಹಾಕಿದರು. ದರ್ಪಣ ತೀರ್ಥದಲ್ಲಿ ಸ್ನಾನ ಮಾಡಿ ಮಡೆ ಮಡೆಸ್ನಾನಕ್ಕಾಗಿ ಕಾಯುತ್ತಿದ್ದ ಭಕ್ತರು ಎರಡು ಗಂಟೆಗೂ ಅಧಿಕ ಸಮಯ ಕಾಯಬೇಕಾಯಿತು.ಮಧ್ಯಾಹ್ನ 2ರ ಸುಮಾರಿಗೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಪ್ರಸಾದ್‌ ಮಡ್ತಿಲ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಹೊರಾಂಗಣದಲ್ಲಿ ಚಿತ್ರೀಕರಣ ನಡೆಸದೆ, ಪಕ್ಕದಲ್ಲಿರುವ ದ್ವಾದಶಿ ಮಂಟಪದಲ್ಲಿ ನಿಲ್ಲುವಂತೆ ವಿನಂತಿಸಿದರು. ಮಾಧ್ಯಮದವರಿಗೆ ದ್ವಾದಶಿ ಮಂಟಪದಲ್ಲಿ ಗ್ಯಾಲರಿಯ ವ್ಯವಸ್ಥೆ ಮಾಡಿದ ನಂತರವಷ್ಟೇ ಅನ್ನ ಸಂತರ್ಪಣೆ ನಡೆಯಿತು. ಬಳಿಕ ಮಡೆ ಮಡೆಸ್ನಾನ ಸುಸೂತ್ರವಾಗಿ ನೆರವೇರಿತು.ಭಕ್ತರಿಗೆ ಸಂಕಟ: ಮಧ್ಯಾಹ್ನ ಪ್ರಸಾದ ಭೋಜನ ಬಡಿಸುವ ವಿಚಾರದಲ್ಲಿನ ಗೊಂದಲದಿಂದಾಗಿ ಮಡೆ ಮಡೆಸ್ನಾನಕ್ಕಾಗಿ ಕಾಯುತ್ತಿದ್ದ ಭಕ್ತರು ತೀವ್ರ ತೊಂದರೆಗೆ ಸಿಲುಕಿದರು. ಪರವೂರಿನಿಂದ ಬಂದ ಭಕ್ತರಲ್ಲಿ ವಯಸ್ಕರು, ಮಕ್ಕಳು, ಮಹಿಳೆ­ಯರು ಬೆಳಿಗ್ಗಿನಿಂದಲೇ ವೃತದಿಂದಿದ್ದು ಅದರ­ಲ್ಲೂ ಕೆಲವರು ಉಪಾಹಾರವನ್ನೂ ಸೇವಿಸದೆ ಮಡೆ ಮಡೆಸ್ನಾನ ಸೇವೆಗಾಗಿ ಕಾದಿದ್ದರು. ಅವರೆ­ಲ್ಲ ಬಳಲಿ ಬೆಂಡಾದರು. ಅಂತಿಮ ಕ್ಷಣದಲ್ಲಿ ಈ ರೀತಿ ಗೊಂದಲ ಆಗದಂತೆ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಸ್ಥಳೀಯ ಗ್ರಾ.ಪಂ ಉಪಾಧ್ಯಕ್ಷ ಶಿವರಾಮ್ ರೈ ದೇವರಗದ್ದೆ ಹೇಳಿದರು.ಮಡೆ ಮಡೆಸ್ನಾನ ಸೇವೆ ಗೋಪ್ಯವಾಗಿ ನಡೆಯುವಂತದ್ದಲ್ಲ, ಸಾರ್ವಜನಿಕವಾಗಿ ನಡೆಯುವ ಕಾರಣ ದೃಶ್ಯ ಮಾಧ್ಯಮದವರಿಗೆ ಮುಕ್ತ ಅವಕಾಶ ಮಾಡಿಕೊಡಬೇಕಾದದ್ದು ಆಡಳಿತ ಮಂಡಳಿಯ ಕರ್ತವ್ಯ ಎಂದು ಅವರು ಹೇಳಿದರು. ಮಡೆಸ್ನಾನದ ಸಂದರ್ಭದಲ್ಲಿ ಉಂಟಾದ ಗೊಂದಲಕ್ಕೆ ಸಾರ್ವಜನಿಕರು ಕೂಡ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಬೀದಿ ಮಡೆಸ್ನಾನ

ಮುಂಜಾನೆಯಿಂದಲೇ ಕುಮಾರಧಾರ ತೀರ್ಥಸ್ನಾನದಿಂದ ದೇವಳದ ತನಕ ಸುಮಾರು 2 ಕೀ.ಮೀ ದೂರದವರೆಗೆ ಉರುಳುತ್ತಾ 150ಕ್ಕೂ ಮಿಕ್ಕಿದ ಭಕ್ತರು ಬೀದಿ ಮಡೆಸ್ನಾನ ಸೇವೆ ಸಲ್ಲಿಸಿದರು. ಅದೇ ರೀತಿ ದೇವಳದ ಹೋರಾಂಗಣದ ಮೂಲೆಗಳಲ್ಲಿಯೂ ನೂರಾರು ಮಂದಿ ಮೂಲೆ ಮಡೆಸ್ನಾನ ಸೇವೆ ನೆರವೇರಿಸಿದರು.ಬ್ರಹ್ಮರಥೋತ್ಸವ:

ಚಂಪಾ ಷಷ್ಠಿಯ ದಿನವಾದ ಭಾನುವಾರ ಬೆಳಿಗ್ಗೆ 8:12ರ ಧನುರ್‌ಲಗ್ನದಲ್ಲಿ ಬ್ರಹ್ಮರಥವನ್ನು ಎಳೆಯಲಾಗುತ್ತದೆ. ಭಕ್ತರು ಭಾರಿ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುತ್ತಿದ್ದಾರೆ.

ಪ್ರತಿಕ್ರಿಯಿಸಿ (+)