ಕುಖ್ಯಾತ ರೌಡಿ ಯೂಸುಫ್ ಸಹೋದರನ ಬಂಧನ

7

ಕುಖ್ಯಾತ ರೌಡಿ ಯೂಸುಫ್ ಸಹೋದರನ ಬಂಧನ

Published:
Updated:

ಬೆಂಗಳೂರು: ಕುಖ್ಯಾತ ರೌಡಿ ಯೂಸುಫ್ ಖಾನ್ ಅಲಿಯಾಸ್ ಬಚ್ಕಾನನ ತಮ್ಮ ಮರ್ದಾನ್ ಸುಲೈಮಾನ್ ಖಾನ್ (26) ಮತ್ತು ಸಹಚರರನ್ನು ಬಂಧಿಸಿರುವ ನಗರದ ಪೂರ್ವ ವಿಭಾಗದ ರೌಡಿ ನಿಗ್ರಹ ದಳ ಪೊಲೀಸರು ಎರಡು ಪಿಸ್ತೂಲ್, 11 ಬುಲೆಟ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.ಆರ್.ಟಿ.ನಗರದ ಸೈಯದ್ ಫಾರೂಕ್ ಅಹಮ್ಮದ್ (42), ಕಾಡುಗೊಂಡನಹಳ್ಳಿಯ ಮುಜೀಬುರ್ ರೆಹಮಾನ್ (29) ಮತ್ತು ಜಮೀರ್ (26) ಇತರೆ ಬಂಧಿತ ಆರೋಪಿಗಳು. ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬಿಲ್ಡರ್ ಸುಬ್ಬರಾಜು ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬೆಳಗಾವಿ ಜೈಲಿನಲ್ಲಿರುವ ಯೂಸುಫ್, ಭೂಗತ ಪಾತಕಿ ಛೋಟಾ ರಾಜನ್‌ನ ಸಹಚರ.ಯೂಸುಫ್ ಜೈಲಿನಿಂದಲೇ ವಿಜಾಪುರದ ವಾಹಬ್ ಎಂಬಾತನನ್ನು ಸಂಪರ್ಕಿಸಿ, ಮರ್ದಾನ್ ಸಹಚರರಿಗೆ ಪಿಸ್ತೂಲ್ ಹಾಗೂ ಬುಲೆಟ್ ಸರಬರಾಜು ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಎದುರಾಳಿ ಗುಂಪಿನ ಸದಸ್ಯರನ್ನು ಕೊಲೆ ಮಾಡಿ ಹಣ ಹಾಗೂ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದರು.ಅವರ ಸಹಚರ ಅಕ್ರಮ್ ಪಾಷಾ ಎಂಬಾತ ಮತ್ತೊಂದು ಪಿಸ್ತೂಲ್ ಹಾಗೂ ಬುಲೆಟ್‌ಗಳೊಂದಿಗೆ ಪರಾರಿಯಾಗಿದ್ದಾನೆ. ವಾಹಬ್ ಹಾಗೂ ಅಕ್ರಮ್‌ನ ಪತ್ತೆ ಕಾರ್ಯ ಮುಂದುವರಿದಿದೆ. ಬಂಧಿತರ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ, ಡಕಾಯಿತಿ ಸಂಚಿನ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.ಮರ್ದಾನ್ 2011ರಲ್ಲಿ ಇದೇ ರೀತಿ ಯೂಸುಫ್ ಮೂಲಕ 2 ಪಿಸ್ತೂಲ್ ಮತ್ತು ಬುಲೆಟ್‌ಗಳನ್ನು ತರಿಸಿಕೊಂಡು ಕುಖ್ಯಾತ ರೌಡಿ ಇಸ್ಮಾಯಿಲ್ ಷರೀಫ್‌ಗೆ ಮಾರುವ ಯತ್ನದಲ್ಲಿದ್ದಾಗ ಕಾಡುಗೊಂಡನಹಳ್ಳಿ ಪೊಲೀಸರು ಆತನನ್ನು ಬಂಧಿಸಿದ್ದರು. ಜೈಲಿನಲ್ಲಿದ್ದ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.ಆರೋಪಿ ಮುಜೀಬುರ್ ವಿರುದ್ಧ ಬಾಣಸವಾಡಿ, ಕಾಡುಗೊಂಡನಹಳ್ಳಿ, ಕಮರ್ಷಿಯಲ್‌ಸ್ಟ್ರೀಟ್ ಠಾಣೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಪೂರ್ವ ವಿಭಾಗದ ಡಿಸಿಪಿ ಟಿ.ಜಿ.ಕೃಷ್ಣಭಟ್, ಕೆ.ಆರ್.ಪುರ ಉಪ ವಿಭಾಗದ ಎಸಿಪಿ ಡಾ.ಡಿ.ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಬಾಣಸವಾಡಿ ಇನ್‌ಸ್ಪೆಕ್ಟರ್ ಟಿ.ರಂಗಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಕೊಲೆ ಆರೋಪಿಗಳ ಬಂಧನ: ಕಗ್ಗದಾಸಪುರ ಸಮೀಪದ ಕೊಂಡಪ್ಪರೆಡ್ಡಿ ಲೇಔಟ್‌ನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದಿದ್ದ ಸೆಕ್ಯುರಿಟಿ ಗಾರ್ಡ್ ಲಾಲ್ ಬಹದ್ದೂರ್ (36) ಕೊಲೆ ಪ್ರಕರಣದ ಆರೋಪಿಗಳನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.ವಿಜಿನಾಪುರದ ಶ್ರೀಧರ (21), ಮನೋಜ್ (19), ಇಮ್ರಾನ್‌ಖಾನ್ (21) ಮತ್ತು ಕಾರ್ತಿಕ್ (20) ಬಂಧಿತರು. ಆರೋಪಿಗಳು ನ.18ರಂದು ರಾತ್ರಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ನುಗ್ಗಿ ಲಾಲ್ ಬಹದ್ದೂರ್ ಅವರನ್ನು ಕೊಲೆ ಮಾಡಿ ಹುಂಡಿಯಲ್ಲಿದ್ದ ಹಣ ತೆಗೆದುಕೊಂಡು ಪರಾರಿಯಾಗಿದ್ದರು.ಆರೋಪಿಗಳ ವಿರುದ್ಧ ನಗರದ ಬಯ್ಯಪ್ಪನಹಳ್ಳಿ, ರಾಮಮೂರ್ತಿನಗರ ಹಾಗೂ ತಮಿಳುನಾಡಿನ ಹಲವು ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿದ್ದವು. ಇಮ್ರಾನ್‌ಖಾನ್‌ನನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಕೆ.ಎಸ್.ನಾಗರಾಜ್, ಎಸ್‌ಐಗಳಾದ ಮಂಜುನಾಥ್, ಹರಿಯಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry