ಕುಗ್ಗಿದ ದೇಹ ಹಿಗ್ಗಿದ ಸಾಧನೆ

7

ಕುಗ್ಗಿದ ದೇಹ ಹಿಗ್ಗಿದ ಸಾಧನೆ

Published:
Updated:

ಮೆರಿಕದ ಮಿಚಿಗನ್ ನಲ್ಲಿ ಇತ್ತೀಚೆಗೆ ನಡೆದ ಆರನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾರತದ ಗರಿಮೆಯನ್ನು ಎತ್ತರಕ್ಕೇರಿಸಿದವರು ಕರ್ನಾಟಕದ ರಾಜಣ್ಣ, ರೇಣುಕುಮಾರ್ ಮತ್ತು ಪ್ರಕಾಶ್. 21 ರಾಷ್ಟ್ರಗಳ ಕುಬ್ಜ ಕ್ರೀಡಾಪಟುಗಳು ಸೇರಿದ್ದ  ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆಟಗಾರರು 12 ಮಂದಿ.

  ಅದರಲ್ಲಿ ರಾಜಣ್ಣ, ರೇಣುಕುಮಾರ್, ಪ್ರಕಾಶ್, ನಾಗೇಶ್, ಸಿದ್ಧಲಿಂಗ, ಶಾಂತಕುಮಾರ್, ದೇವಪ್ಪ ಮೊರೆ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಒಟ್ಟು 13 ಪದಕಗಳನ್ನು ಪಡೆದು ಭಾರತದ ತಿರಂಗದ ರಂಗನ್ನು ಇಮ್ಮಡಿಸಿದ ಈ ಮೂವರು ಕ್ರೀಡಾಪಟುಗಳ ಬದುಕು ಮಾತ್ರ ಬಣ್ಣ ಕಳೆದುಕೊಂಡ ಬಟ್ಟೆಯಂತೆ. ಮಿಚಿಗನ್ ಕ್ರೀಡಾಕೂಟದ ದಿನಾಂಕ ಘೋಷಣೆಯಾಗುತ್ತಲೇ ಅಭ್ಯಾಸದ ಜೊತೆ ಜೊತೆಯಲ್ಲಿ ಕುಟುಂಬಕ್ಕೆ ದುಡಿಯುವ ಜವಾಬ್ದಾರಿ. ಸಾಲ ಕೊಡುವ ಮಂದಿಯ ಮುಂದೆ ‘ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದೇನೆ’ ಎನ್ನುವ ಮಾನದಂಡದಿಂದಲೇ ಉದ್ಧರಿ ಪಡೆದವರು ಇವರು. ಬಾಲ್ಯದಿಂದಲೇ ಸಾಧಿಸುವ ಕನಸು ಹೊತ್ತು ಕ್ರೀಡಾ ಅಂಗಳಕ್ಕಿಳಿದ ಈ ಮೂವರನ್ನು ಬಾಧಿಸಿದ್ದು ಹಣಕಾಸಿನ ಸಮಸ್ಯೆ.

ಆದರೆ ಕೊರತೆಗಳನ್ನು ಕುಗ್ಗಿಸಿ ಸಾಧನೆಯತ್ತ ಉದ್ದೀಪಿಸಿದ್ದು ಆಟಗಾರರ ಕುಟುಂಬ. ಬಂಧು ಬಳಗದ ನೈತಿಕ ಶಕ್ತಿಯಿಂದ ಸಾಧಿಸಿದ್ದು ಅಪಾರ. ಕ್ರೀಡಾಕೂಟಗಳಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯ ತಂಡದ ತರಬೇತುದಾರರು ಕರ್ನಾಟಕದ ಸಾಧಕರ ಕಸರತ್ತಿಗೆ ಬೆನ್ನುತಟ್ಟಿದ್ದಾರೆ. ಅರ್ಜುನ ಪ್ರಶಸ್ತಿ ಪುರಸ್ಕೃತ ರಮೇಶ್ ಟಿಕಾರಾಂ ಅವರ ಗರಡಿಯಲ್ಲಿ ಕರ್ನಾಟಕದ ಕ್ರೀಡಾಪಟುಗಳು ಸಾಮು ನಡೆಸಿದ್ದರು.  ಪದಕಗಳ ರಾಜಣ್ಣ

ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಪದಕ ಪಡೆದವರು ರಾಜಣ್ಣ. ಆರು ಪದಕದ ಸಾಧ­ನೆ ಇವರ ಮಡಿಲಿಗಿದೆ. 200 ಮೀ ಓಟದಲ್ಲಿ ಚಿನ್ನ, ಸಿಂಗಲ್ಸ್, ಡಬ್ಬಲ್ಸ್ ಮತ್ತು ಮಿಕ್ಸಡ್ ಡಬ್ಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಮೂರು ಚಿನ್ನ. 100 ಮೀ. ಓಟದಲ್ಲಿ ಬೆಳ್ಳಿ, ಶಾರ್ಟ್ ಪುಟ್ ನಲ್ಲಿ ಕಂಚು. ರಾಜಣ್ಣ ಅವರ ಓಟದ ವೇಗಕ್ಕೆ ಅಮೆರಿಕ ಮತ್ತು ಆಸ್ಟ್ರೇಲಿಯಾದ ತಂಡಗಳ ತರಬೇತುದಾರರು ಬೆನ್ನು ತಟ್ಟಿದ್ದಾರೆ.

‘ಸ್ಪೀಡ್ ಮಾ್ಯನ್’ ಎಂದು ಹೊಗಳಿದ್ದಾರೆ. ರಾಜಣ್ಣನ ಕ್ರೀಡಾ ಸಾಧನೆಗೆ 2012ರಲ್ಲಿ ಏಕಲವ್ಯ ಮತ್ತು ಕೆಂಪೇಗೌಡ ಪ್ರಶಸ್ತಿಗೆ ದೊರೆತಿದೆ. ಮೂವತ್ತಾರು ವರ್ಷದ ಬಿ.ಎ. ಪದವೀಧರ ರಾಜಣ್ಣ ಕೋಲಾರದವರು. ಶಾಲಾದಿನಗಳಲ್ಲಿಯೇ ಕ್ರೀಡೆಯಲ್ಲಿ ತೊಡಗಿಕೊಂಡವರು. ಸಾಮಾನ್ಯ ಕ್ರೀಡಾಪಟುಗಳ ಜೊತೆ ಸ್ಪರ್ಧೆ ನಡೆಸಿ ಸಾಮರ್ಥ್ಯ ಇಮ್ಮಡಿಸಿಕೊಂಡವರು.

2002ರಲ್ಲಿ ರಾಷ್ಟ್ರೀಯ ಪ್ಯಾರಾಲಿಂಪಿಕ್ ಕ್ರೀಡಾಕೂಟದಿಂದ ಕ್ರೀಡಾ ಮುಖ್ಯವಾಹಿನಿ ಸೇರ್ಪಡೆ. ಎರಡು ವರ್ಷಗಳ ತರುವಾಯ ರಾಷ್ಟ್ರೀಯ ಕುಬ್ಬರ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ. ಅಂದಿನಿಂದ ರಾಜಣ್ಣ ಪದಕಗಳನ್ನು ವೇಗವಾಗಿಯೇ ಒಲಿಸಿಕೊಂಡಿದ್ದಾರೆ.

ಅಥ್ಲೆಟಿಕ್ಸ್ ಗಳಿಗೆ ಪ್ರಮುಖವಾಗಿ ಗಮನವಹಿಸಿರುವ ಅವರು 24 ಚಿನ್ನ, 22 ಬೆಳ್ಳಿ, 18 ಕಂಚಿನ ಪದಕ ಪಡೆದ ಕ್ರೀಡಾಪಟು. ರಾಜಸ್ತಾನ, ಒಡಿಶಾ ಸೇರಿದಂತೆ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದವರು. ರನ್ನಿಂಗ್‌ ಬಗ್ಗೆ ಆಸಕ್ತರಾಗಿರುವ ರಾಜಣ್ಣ ಅವರ ಕಾಲುಗಳ ಓಟ ವೇಗವನ್ನು ಪಡೆಯುತ್ತಲೇ, ಸಾಧನೆಯ ಹಾದಿಯೂ ಹಿರಿದಾಗಿದೆ. ಸದ್ಯ ಅಣ್ಣನ ಜೊತೆ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದಾರೆ. ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ಪ್ರತಿನಿಧಿಸಿರುವ ರಾಜಣ್ಣ ಹನ್ನೆರಡು ಪದಕ ಪಡೆದು ಭಾರತಕ್ಕೆ ವಿಶ್ವಮಟ್ಟದಲ್ಲಿ ಮೆರುಗು ನೀಡಿದವರು. 2009ರಲ್ಲಿ ಐರ್ಲೆಂಡ್ ನಲ್ಲಿ ನಡೆದ ಐದನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿಯೂ ಅವರ ಸಾಧನೆ ಅಮೋಘ. ಐರ್ಲೆಂಡ್ ಕ್ರೀಡಾಕೂಟದಲ್ಲಿ ಗಮನ ಸೆಳೆದಿದ್ದು ಅವರ ಸಾಧನೆಗಿಂದ ಇಚ್ಛಾಶಕ್ತಿ.

ಎರಡು ದಿನ ಮುನ್ನವೇ ಕ್ರೀಡಾಕೂಟದ ತಾಲೀಮು ನಡೆಸಬೇಕಾದ ತಂಡ ಹಣದ ಕೊರತೆಯಿಂದ ಕ್ರೀಡಾಕೂಟಗಳು ಆರಂಭವಾದ ದಿನವೇ ಐರ್ಲೆಂಡ್‌ ತಲುಪಿತು. ಕೆಲ ತಾಸುಗಳಲ್ಲಿಯೇ 200 ಮೀಟರ್ ಓಟದ ಸ್ಪರ್ಧೆಯ ಕರೆ ಬಂತತು. ರಾಜಣ್ಣ ತಕ್ಷಣವೇ ಅಂಗಳಕ್ಕಿಳಿದು ಚಕಚಕನೆ ಕಾಲು ಬೀಸಿ ಕಂಚಿನ ಪದಕ ಪಡೆದರು. ‘ಎರಡು ದಿನದ ಮುಂಚೆ ಐರ್ಲೆಂಡ್‌ ಗೆ ತೆರಳಿದ್ದರೆ ಹೆಚ್ಚಿನ ಸಾಧನೆ ಮಾಡಬಹುದಿತ್ತು’ ಎಂದು ಆ ಗಳಿಗೆಗಳನ್ನು ಮೆಲುಕು ಹಾಕುತ್ತಾರೆ ಅವರು.

ವೇಗದ ಲಯವನ್ನು ಕಾಯ್ದುಕೊಳ್ಳಲು ನಿತ್ಯ ಕಸರತ್ತು ನಡೆಸುತ್ತಾರೆ. ಬೆಳಿಗ್ಗೆ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರೆ ಸಂಜೆ ಜಿಮ್ಮಿನಲ್ಲಿ ದೇಹದಂಡನೆ. ಅಮೆರಿಕದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಒಬ್ಬ ಕ್ರೀಡಾಪಟುವಿಗೆ ಎರಡು ಲಕ್ಷ ರೂಪಾಯಿ ವೆಚ್ಚವಾಗಿದೆ. 1.55 ಲಕ್ಷ ಏರ್‌ ಟಿಕೆಟ್, 45 ಸಾವಿರ ಪ್ರವೇಶ ಧನ.  ಸರ್ಕಾರದ ಹಣವನ್ನು ಹೊರತುಪಡಿಸಿದರೂ 50 ಸಾವಿರ ರೂಪಾಯಿ ಪ್ರತಿ ಕ್ರೀಡಾಪಟುವಿಗೆ ವೆಚ್ಚವಾಗುತ್ತದೆ.

ಸಾಮಾನ್ಯ ಕ್ರೀಡಾಪಟುಗಳು ಪದಕ ಗೆದ್ದರೆ ಅವರಿಗೆ ಹಣದ ರೂಪದ ಬಹುಮಾನ ನೀಡಲಾಗುತ್ತದೆ. ಆ ರೀತಿ ಬಹುಮಾನವನ್ನು  ನಮಗೂ ಕೊಡಬಹುದು. ಆದರೆ ಅಂತಹ ಪ್ರಯತ್ನಗಳೇ ನಡೆಯುವುದಿಲ್ಲ. ಬಹುಮಾನವಿರಲಿ, ಗುರುತಿಸುವುದೇ ಕಷ್ಟ ಎಂದು ಕುಬ್ಜ ಕ್ರೀಡಾಕೂಟದ ಬಗ್ಗೆ ಸರ್ಕಾರಗಳು ಮತ್ತು ಅಧಿಕಾರಿಗಳು ತೋರುವ ಸಣ್ಣತನದ ಬಗ್ಗೆ ಬೇಸರಿಸುತ್ತಾರೆ. ಮುಂದಿನ ಅಕ್ಟೋಬರ್ ನಲ್ಲಿ ಮಲೇಷ್ಯಾದಲ್ಲಿ ಮತ್ತು ಜಪಾನ್ ನಲ್ಲಿ ನಡೆಯಲಿರುವ ವಿಶ್ವ ಗೇಮ್ಸ್‌ ನಲ್ಲಿ ಹೆಚ್ಚಿನ ಸಾಧನೆ ಮಾಡುವ ಉತ್ಸಾಹದಲ್ಲಿದ್ದಾರೆ.

ಪತ್ನಿಯೇ ಶಕ್ತಿ

ಮಿಚಿಗನ್ ಕ್ರೀಡಾಕೂಟದಲ್ಲಿ ಜಾವೆಲಿನ್‌ ಎಸೆತದಲ್ಲಿ ಮೂರು ಚಿನ್ನ, ಡಿಸ್ಕಸ್ ಎಸೆತದಲ್ಲಿ ಒಂದು ಬೆಳ್ಳಿ, ಶಾರ್ಟ್ ಪುಟ್ ನಲ್ಲಿ ಒಂದು ಕಂಚಿನ ಪದಕ ಪಡೆದ ರೇಣುಕುಮಾರ್ ಕಡು ಬಡತನದಲ್ಲಿ ಅರಳಿದ ಸಿರಿವಂತ ಪ್ರತಿಭೆ. ಏಕ ಕಾಲದಲ್ಲಿ ಮೂರು ಕ್ರೀಡೆಗಳಲ್ಲಿ ಯಶಸ್ಸು ಪಡೆದ ಸಾಧಕ. ಕ್ರೀಡೆ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಅವರು ಹೇಳಿಕೊಂಡಿರುವುದು ಹೀಗೆ... ‘ಬದುಕಿನ ಹಾದಿಯಲ್ಲಿ ಸಾಲು ಸಾಲು ಸಂಕಷ್ಟಗಳನ್ನು ಕಾಣುತ್ತಲೇ ಬೆಳೆದವನು ನಾನು. ಬಿಡದಿ ಬಳಿಯ ಕೇತಿಗಾನಹಳ್ಳಿ ನಮ್ಮೂರು. ಬದಕು ಅರಸಿ ಅಪ್ಪ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದರಿಂದ ನಾನು ಬೆಳೆದಿದ್ದು ಬೆಂಗಳೂರಿನಲ್ಲಿ.

ಬಾಲ್ಯದಲ್ಲಿಯೇ ಕ್ರೀಡಾಪಟುವಾಗುವ ಕನಸು. ಆದರೆ ಪ್ರೋತ್ಸಾಹ, ನೆರವು ಇಲ್ಲದೆ ನನ್ನ ಬದುಕಿನಲ್ಲಿ ಕ್ರೀಡಾ ಕ್ಷೇತ್ರ ಮರೀಚಿಕೆಯಾಗಿತ್ತು. ಆದರೆ ಬದುಕಿಗೆ ಹೊಸ ದಿಕ್ಕು ಪ್ರಾಪ್ತ­ವಾಗಿದ್ದು ಮದುವೆ ನಂತರ. ಪತ್ನಿ ಸುನೀತಾ ಮತ್ತು ಮಾವ ನನ್ನ ಕ್ರೀಡಾತುಡಿತಕ್ಕೆ ಬಲ ತುಂಬಿದರು. ಪತ್ನಿಯ ವಿಶ್ವಾಸದ ಮಾತು ಮತ್ತೆ ಕ್ರೀಡಾಂಗಣಕ್ಕೆ ಇಳಿಯುವಂತೆ ಮಾಡಿತು.ಓದಿದ್ದು ಎಸ್ಸೆಸ್ಸೆಲ್ಸಿ. ಬದುಕಿಗಾಗಿ ರಿಯಲ್ ಎಸ್ಟೇಟ್ ವೃತ್ತಿ ಮಾಡುತ್ತಿರುವೆ. ನನ್ನ ರಿಯಲ್ ಎಸ್ಟೇಟ್ ಎಂದರೆ ಮನೆ ಬಾಡಿಗೆಗೆ ಕೊಡಿಸುವುದು ಅಷ್ಟೇ.  ದೊಮ್ಮಲೂರು ನನ್ನ ರಿಯಲ್ ಎಸ್ಟೇಟ್ ಕಾರ್ಯ ಕ್ಷೇತ್ರ. ನನ್ನ ಪತ್ನಿ ಬೇರೆಯವರ ಮನೆಗಳಲ್ಲಿ ಕೆಲಸ ಮಾಡುತ್ತಾಳೆ. ನನ್ನ ಮತ್ತು ಅವಳ ಗಳಿಕೆಯೇ ನಮ್ಮ ಕುಟುಂಬದ ಆದಾಯ. ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಐರ್ಲೆಂಡ್ ಕ್ರೀಡಾಕೂಟದಲ್ಲಿ ನನಗೂ ಅವಕಾಶ ಸಿಕ್ಕಿತ್ತು.

ಆದರೆ ಹಣಕಾಸಿನ ಸಮಸ್ಯೆಯಿಂದ ಹೋಗಲು ಸಾಧ್ಯವಾಗಲಿಲ್ಲ. ಅಷ್ಟೊಂದು ದುಡ್ಡು ನಮ್ಮಿಂದ ಹೊಂದಿಸಲು ಸಾಧ್ಯವೇ ಇಲ್ಲ. ಈ ಬಾರಿ ಪಾಲ್ಗೊಂಡ ಸ್ಪರ್ಧೆಯೇ ನಾನು ಭಾಗವಹಿಸಿದ ಮೊದಲ ಅಂತರರಾಷ್ಟ್ರೀಯ ಕ್ರೀಡಾಕೂಟ. ಬೆಂಗಳೂರು, ಚೆನ್ನೈ, ಮಧುರೆ ಹೀಗೆ ದೇಶದ ವಿವಿಧ ಭಾಗಗಳಲ್ಲಿ ನಡೆದ ರಾಷ್ಟ್ರೀಯ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ.

ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಆರು ಚಿನ್ನದ ಪದಕ ಬಂದಿದೆ. ನಿತ್ಯ ಕಸರತ್ತು ಮಾಡುವುದು ಸ್ವಲ್ಪ ಕಷ್ಟ. ನಮ್ಮ ಬದುಕನ್ನೂ ನೋಡಿಕೊಳ್ಳಬೇಕಲ್ಲ. ಕ್ರೀಡೆಯ ರೀತಿ ನೀತಿಗಳು ಗೊತ್ತಿಲ್ಲದೆಯೇ ನಾವು ಈ ಕ್ಷೇತ್ರ ಪ್ರವೇಶಿಸಿದವರು. ಇಲ್ಲಿಯವರೆಗಿನ ನನ್ನ ಒಟ್ಟಾರೆ ಸಾಧನೆ ಆರು ಚಿನ್ನ, ಆರು ಬೆಳ್ಳಿ, 12 ಕಂಚು. ವಿಶ್ವ ಕ್ರೀಡಾಕೂಟಲ್ಲಿ ಪಾಲ್ಗೊಂಡಿದ್ದರಿಂದ ಪದಕಗಳ ಜೊತೆಗೆ ಸಾಲವೂ ಸೇರಿಕೊಂಡಿದೆ.

ಮಕ್ಕಳನ್ನು ಓದಿಸಿ, ಅವರ ಬದುಕು ರೂಪಿಸುವ ಜವಾಬ್ದಾರಿ ಇದೆ. ಇದರ ನಡುವೆಯೇ ನನ್ನ ಸಾಧನೆ. ಆಟದಲ್ಲಿ ಸೋಲು ಗೆಲುವು ಸಹಜ. ಆದರೆ ನಮಗೆ ಪದಕ ಬಂದರೂ ನಮ್ಮನ್ನು ಗುರುತಿಸುತ್ತಿಲ್ಲವಲ್ಲ ಅನ್ನುವುದೇ ಬೇಸರ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ತಿಂಗಳುಗಟ್ಟಲೆ ಅಭ್ಯಾಸದಲ್ಲಿ ತೊಡಗಿಕೊಂಡೆ. ಆಗ ಸಂಸಾರದ ಜಬಾವ್ದಾರಿ ನಿರ್ವಹಿಸಿದ್ದು ಸುನೀತಾ.

ಪ್ರೋತ್ಸಾಹಿಸಿದ್ದು ಕನ್ನಡ ನೆಲ

ತಮಿಳುನಾಡಿನಲ್ಲಿ ತಮ್ಮ ಕ್ರೀಡಾ ಸಾಧನೆಗೆ ಪೂರಕ ವಾತಾವರಣ ಇಲ್ಲ ಎಂದಾಗ ಕರ್ನಾಟಕಕ್ಕೆ ಬಂದವರು ಪ್ರಕಾಶ್. ಕಠಿಣ ಅಭ್ಯಾಸದಿಂದ ಮಾತ್ರ ಗುರಿ ಸಾಧ್ಯ ಎನ್ನುವ ಕ್ರೀಡಾ ನೀತಿಯನ್ನು ರೂಢಿಸಿಕೊಂಡವರು. ಮಿಚಿಗನ್ ಕ್ರೀಡಾಕೂಟದಲ್ಲಿ ಸಾಧಿಸುವ ಛಲದಿಂದಲೇ ಎರಡು ವರ್ಷದಿಂದ ಉದ್ಯೋಗ ಬಿಟ್ಟು ಅಭ್ಯಾಸದಲ್ಲಿ ತೊಡಗಿದವರು.2009ರ ಐರ್ಲೆಂಡ್ ವಿಶ್ವ ಕ್ರೀಡಾಕೂಟದಲ್ಲಿ ಕೇವಲ ಒಂದು ಕಂಚು ಗೆದ್ದಾಗ, ಮುಂದಿನ ವಿಶ್ವಕ್ರೀಡಾ ಕೂಟದಲ್ಲಿ ಹೆಚ್ಚಿನದನ್ನು ಸಾಧಿಸುವ ಆಸೆ ಮನದಲ್ಲಿ ಮೂಡಿತು. ಆ ಬಯಕೆ ಮಿಚಿಗನ್ ಕ್ರೀಡಾಕೂಟದಲ್ಲಿ 2 ಬೆಳ್ಳಿ ಗಳಿಸುವಂತೆ ಮಾಡಿತು. ಪವರ್ ಲಿಫ್ಟಿಂಗ್ ಬಗ್ಗೆ ಶ್ರದ್ಧೆವಹಿಸಿರುವ ಅವರು ಶಾರ್ಟ್‌ ಪುಟ್ ಮತ್ತು ಡಿಸ್ಕಸ್ ಥ್ರೋನ ಸಾಧಕ ಕೂಡ.ರಾಷ್ಟ್ರಮಟ್ಟದಲ್ಲಿ ೨೦ ಮತ್ತು ಅಂತರರಾಷ್ಟ್ರೀಯ ಮಟ್ಟದ ೫ ಪದಕಗಳು ಪ್ರಕಾಶ್ ಕೊರಳು ಸೇರಿವೆ. ಪ್ರಕಾಶ್ ಅವರ ತಂದೆಯೂ ಅಂಗವಿಕಲರು. ದಿನಗೂಲಿಯಲ್ಲಿ ಬದುಕು ನಡೆಸಿ ಮೂರು ಹೆಣ್ಣು ಮಕ್ಕಳ ಮದುವೆ ಮಾಡಿ ಮಗನ ಸಾಧನೆಯನ್ನು ಕಾಣುವ ಸಮಯಕ್ಕೆ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದಾರೆ. ‘ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಜ್ಯ ಸರ್ಕಾರ ಏರ್ ಟಿಕೆಟ್ ಒದಗಿಸಿದೆ. ಉಳಿದ ಖರ್ಚುವೆಚ್ಚ ಸೇರಿದಂತೆ ಕ್ರೀಡೆಗಾಗಿಯೇ ೧ ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ.

ಕೇಂದ್ರ ಸರ್ಕಾರದಿಂದ ಸ್ವಲ್ಪವೂ ನೆರವು ಸಿಕ್ಕಿಲ್ಲ. ಪ್ರಶಸ್ತಿ ಪತ್ರಗಳನ್ನು ಹಿಡಿದು ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಸರ್ಕಾರಿ ಕೆಲಸಕ್ಕಾಗಿ ಕೋರಿದರೂ ಯಾರೂ ಗಮನಹರಿಸಲಿಲ್ಲ. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಮಾನ್ಯ ಕ್ರೀಡಾಪಟುಗಳು ಗೆದ್ದರೆ ದೇಶವೇ ಎದೆಯುಬ್ಬಿಸಿ ಬೀಗುತ್ತದೆ.

ಸರ್ಕಾರಗಳು ಉದ್ಯೋಗ, ಹಣವನ್ನು ನೀಡುತ್ತವೆ. ದೇಶದ ಗೌರವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿನುಗಿಸಿದವ ಎನ್ನುವ ಗರಿಮೆಯನ್ನು ಕ್ರೀಡಾಪಟುಗಳಿಗೆ ನೀಡುತ್ತಾರೆ, ಆದರೆ ನಮಗೆ ಕನಿಷ್ಠ ಗೌರವವು ಇಲ್ಲವೆ?’ ಸರ್ಕಾರದ ಕುಬ್ಜ ನಿಲುವುಗಳ ಬಗ್ಗೆ ಅಸಮಾಧಾನ ಹೊರಹಾಕುತ್ತಲೇ ಗದ್ಗದಿತರಾಗುತ್ತಾರೆ ಪ್ರಕಾಶ್. ಸದ್ಯ ಅಕ್ಕನ ಮನೆಯೇ ಅವರಿಗೆ ಆಶ್ರಯ.

–ಡಿ.ಎಂ. ಕುರ್ಕೆ ಪ್ರಶಾಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry