ಕುಟುಂಬಕ್ಕೆ ಪರಿಹಾರ: ಗ್ರಾಮಸ್ಥರಿಗೆ ತಿಳಿವಳಿಕೆ

7

ಕುಟುಂಬಕ್ಕೆ ಪರಿಹಾರ: ಗ್ರಾಮಸ್ಥರಿಗೆ ತಿಳಿವಳಿಕೆ

Published:
Updated:

ಯಾದಗಿರಿ: ಶಂಕಿತ ಡೆಂಗೆದಿಂದ ತಾಲ್ಲೂಕಿನ ಯಡ್ಡಳ್ಳಿಯ ಇಬ್ಬರು ಬಾಲಕಿಯರು ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ವಿಜ್ಞಾನ ಶಿಕ್ಷಕರು, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಜೊತೆಗೆ ಸೊಳ್ಳೆಯ ನಿಯಂತ್ರಣ, ಡೆಂಗೆ ನಿರ್ಮೂಲನೆಯ ಕುರಿತು ಗ್ರಾಮಸ್ಥರಿಗೆ ತಿಳಿವಳಿಕೆ ನೀಡಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರಾದ ವೆಂಕೋಬ ಹಾಗೂ ವಿಷ್ಣುಪ್ರಸಾದ ಅವರೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಆಶಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಯಂಕಪ್ಪ ದೊಡಮನಿ, ವಿ.ಎಸ್. ಹಿರೇಮಠ, ಸೂರ್ಯಪ್ರಕಾಶ ಘನಾತೆ, ಸಿದ್ರಾಮರಡ್ಡಿ ದುಪ್ಪಲ್ಲಿ, ಸಿದ್ಧು ಕೋರೆ, ಸಿದ್ಧಣ್ಣ ಸಾಹುಕಾರ, ಭೀಮರಾಯ ತಳೇವಾಡಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಶಿಕ್ಷಕರು ಗ್ರಾಮಕ್ಕೆ ಭೇಟಿ ನೀಡಿದರು.ಕುಟುಂಬದವರಿಗೆ ಸಾಂತ್ವನ ಹೇಳಿ, ಸುತ್ತಲಿನ ಪರಿಸರ ವೀಕ್ಷಿಸಿದ ಶಿಕ್ಷಕರು, ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಭಾಗಪ್ಪ ಹಾಗೂ ಸುಶೀಲಾ ಅವರನ್ನು ಸಂಪರ್ಕಿಸಿದರು. ಡೆಂಗೆ ಜ್ವರಕ್ಕೆ ಕಾರಣವಾದ ಸೊಳ್ಳೆ ಹಾಗೂ ಅದರ ಜೀವನಚಕ್ರಗಳ ಕುರಿತು ಚರ್ಚಿಸಿದರು.ಹಗಲಿನಲ್ಲಿ ಕಚ್ಚುವ ಈ ಸೊಳ್ಳೆಯಿಂದ ಡೆಂಗೆ ಜ್ವರ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಬೇಕು. ನಿಂತ ನೀರನ್ನು ಶುಚಿಗೊಳಿಸಬೇಕು. ಆ ನೀರಿನಲ್ಲಿರುವ ಸೊಳ್ಳೆಯ ಲಾರ್ವಾಗಳನ್ನು ನಾಶಪಡಿಸಲು ಬಟ್ಟೆ ಒಗೆಯುವ ಸಾಬೂನಿನ ನೀರು ಹಾಗೂ ಸೀಮೆ ಎಣ್ಣೆಯನ್ನು ಮಿಶ್ರಣ ಮಾಡಿ ಆ ನೀರಿಗೆ ಹಾಕಬೇಕು ಎಂಬುದರ ಪ್ರಾತ್ಯಕ್ಷಿಕೆಯನ್ನು ಶಿಕ್ಷ ವಿ.ಎಸ್. ಹಿರೇಮಠ ಗ್ರಾಮಸ್ಥರಿಗೆ ತಿಳಿಸಿದರು.ಅಲ್ಲದೇ ಬೇವಿನ ಸೊಪ್ಪಿನ ಹೊಗೆ ಹಾಕುವುದರಿಂದ ಸೊಳ್ಳೆಗಳನ್ನು ನಿರ್ಮೂಲನೆ ಮಾಡಬಹುದು. ಪಪ್ಪಾಯಿ ಗಿಡದ ಎಲೆಯನ್ನು ಕುಟ್ಟಿ ಸಕ್ಕರೆ ಜೊತೆ ರಸ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ಶಿಕ್ಷಕ ಸೂರ್ಯಪ್ರಕಾಶ ಘನಾತೆ ತಿಳಿಸಿದರು.ನಂತರ ಗ್ರಾಮ ಪ್ರಮುಖ ಬೀದಿಯಲ್ಲಿ ತಿರುಗಾಡಿದ ಶಿಕ್ಷಕರು, ಪ್ರತಿಯೊಬ್ಬರಿಗೂ ಡೆಂಗೆ ಜ್ವರದ ಬಗ್ಗೆ ತಿಳಿವಳಿಕೆ ನೀಡಿದರು. ಡೆಂಗೆ ಮಾರಕ ರೋಗವಾಗಿದ್ದು, ಇದನ್ನು ನಿವಾರಿಸಲು ಎಲ್ಲರೂ ಶ್ರಮಿಸಬೇಕು. ಮನೆಯ ಸುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಆರೋಗ್ಯ ಇಲಾಖೆ ವತಿಯಿಂದಲೂ ಕಾಲಕಾಲಕ್ಕೆ ಜನರಿಗೆ ಸೂಕ್ತ ತಿಳಿವಳಿಕೆ ನೀಡುವಂತೆ ತಿಳಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry